ETV Bharat / state

ಕುಡಿದ ಮತ್ತಿನಲ್ಲಿ ಪೊಲೀಸರ‌ ಮೇಲೆ ಹಲ್ಲೆ ಆರೋಪ: ಕಲಬುರಗಿಯಲ್ಲಿ ಇಬ್ಬರು ಆರೋಪಿಗಳ ಬಂಧನ

author img

By

Published : May 27, 2023, 2:09 PM IST

Two accused arrested in Kalaburagi
ಪೊಲೀಸರ‌ ಮೇಲೆ ಹಲ್ಲೆ: ಕಲಬುರಗಿಯಲ್ಲಿ ಇಬ್ಬರು ಆರೋಪಿಗಳ ಬಂಧನ

ಕಂಠಪೂರ್ತಿ ಕುಡಿದ ಇಬ್ಬರು ಯುವಕರು ಪೊಲೀಸ್ ಕಾನ್ಸ್​ಟೇಬಲ್​ ಮೇಲೆ ಹಲ್ಲೆ ಮಾಡಿದ್ದಾರೆಂಬ ಆರೋಪ‌ ಕೇಳಿ ಬಂದಿದೆ.

ಕಲಬುರಗಿ: ಕುಡಿದ ಮತ್ತಿನಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ‌ಮಾಡಿರುವ ಆರೋಪ ಕಲಬುರಗಿಯಲ್ಲಿ ಕೇಳಿಬಂದಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮಲ್ಲಿಕಾರ್ಜುನ ಹಾಗೂ ವಿಜಯ ಬಂಧಿತ ಆರೋಪಿಗಳು.

ಪ್ರಕರಣದ ವಿವರ: ನಗರದ ಸ್ಟೇಷನ್ ಬಜಾರ್ ಠಾಣೆಯ ಕಾನ್ಸ್​​ಟೇಬಲ್‌ ಶಾಂತಲಿಂಗ ಮತ್ತು ದೇವೆಂದ್ರ ಎಂಬುವವರು ರಾತ್ರಿ ಬೀಟ್ ನಡೆಸುತ್ತಿದ್ದಾಗ ಇಲ್ಲಿನ ರಾಮಮಂದಿರ ಹತ್ತಿರದ ಯರಗೋಳ ಕಲ್ಯಾಣ‌‌ ಮಂಟಪ ಪಕ್ಕದ ಕಟ್ಟಡವೊಂದರಲ್ಲಿ ಕುಡಿದು ಕಿರಚಾಡುವ ಶಬ್ದ ಕೇಳಿಸಿದೆ. ಇಬ್ಬರು ಪೊಲೀಸ್​​ ಸಿಬ್ಬಂದಿ ಘಟನಾ ಸ್ಥಳಕ್ಕೆ ಹೋಗಿ ವಿಚಾರಿಸಿದ್ದಾರೆ. ಆಗ ಕಂಠ ಪೂರ್ತಿ‌ ಕುಡಿದು ನಶೆಯಲ್ಲಿದ್ದ ಮಲ್ಲಿಕಾರ್ಜುನ ಮತ್ತು ವಿಜಯ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ ಕಾನ್ಸ್​ಟೇಬಲ್​ ಶಾಂತಲಿಂಗ ಅವರ ಶರ್ಟ್ ಹಿಡಿದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸ್ಟೇಷನ್​​ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.

ಟಿಕೆಟ್ ರಹಿತ ಪ್ರಯಾಣಿಕರಿಂದ ದಂಡ ವಸೂಲಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ 2023ರ ಜನವರಿಯಿಂದ ಎಪ್ರಿಲ್-2023 ರ ಅವಧಿಯಲ್ಲಿ ತನ್ನ ತನಿಖಾ ತಂಡಗಳಿಂದ ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿದೆ. ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ 62,132 ವಾಹನಗಳನ್ನು ತನಿಖೆ ಗೊಳಪಡಿಸಿ 3,699 ಪ್ರಕರಣಗಳನ್ನು ಪತ್ತೆ ಹಚ್ಚಿದೆ. 5,772 ಟಿಕೆಟ್ ರಹಿತ ಪ್ರಯಾಣಿಕರಿಂದ 7,52,152 ರೂ. ಗಳನ್ನು ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಕಲಬುರಗಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ. ಅದೇ ರೀತಿ ತನಿಖಾಧಿಕಾರಿಗಳು ನಿಗಮದ ಆದಾಯದಲ್ಲಿ ಸೋರಿಕೆ ಆಗುತ್ತಿದ್ದ 1,25,102 ರೂ.ಗಳನ್ನು ಪತ್ತೆ ಹೆಚ್ಚಿದ್ದಾರೆ. ಪ್ರಯಾಣಿಕರು ಬಸ್ಸಿನಲ್ಲಿ ಪ್ರಯಾಣಿಸುವಾಗ ತಪ್ಪದೇ ಟಿಕೆಟ್/ಪಾಸ್ ಪಡೆದು ಪ್ರಯಾಣಿಸಬೇಕೆಂದು ಅವರು ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ವಿಷ ನಿರೋಧಕ ಲಸಿಕೆ: ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಅಧೀನದಲ್ಲಿ ಬರುವ ಎಲ್ಲಾ ಸ.ಸಾ.ಆಸ್ಪತ್ರೆ/ ಸ.ಆ.ಕೇಂದ್ರ/ಪ್ರಾ.ಆ.ಕೇಂದ್ರಗಳಲ್ಲಿ ಉಚಿತವಾಗಿ ಹಾವು ವಿಷ ನಿರೋಧಕ ಲಸಿಕೆ(ಎ.ಎಸ್.ವಿ.) (ASV) ಲಭ್ಯವಿರುತ್ತದೆ ಎಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ ವಿಷಪೂರಿತ ಹಾವುಗಳು ಮನೆಗಳಿಗೆ ನುಗ್ಗಿ ಹಾವು ಕಡಿತದ ಪ್ರಕರಣಗಳು ಹೆಚ್ಚಾಗುವ ಸಂಭವ ಇರುತ್ತದೆ. ಆದ್ದರಿಂದ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಈ ಕುರಿತು ಭಯ ಪಡದೆ ಹಾವು ಕಡಿತ ಸಂದರ್ಭದಲ್ಲಿ ತಮ್ಮ ಹತ್ತಿರದ ಆರೋಗ್ಯ ಸಂಸ್ಥೆಗೆ ಭೇಟಿ ನೀಡಿ ಉಚಿತ ಹಾವು ವಿಷ ನಿರೋಧಕ ಲಸಿಕೆ(ASV) ಯನ್ನು ಪಡೆಯಬಹುದಾಗಿದೆ. ಜಿಲ್ಲೆಯ ಎಲ್ಲಾ ಸಾರ್ವಜನಿಕರು ಈ ಲಸಿಕೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮುತ್ತಪ್ಪ ರೈ ಪುತ್ರನಿಂದ ಉದ್ಯಮಿ ಮೇಲೆ ಹಲ್ಲೆ ಆರೋಪ: ಒಂದು ಕಾಲದ ಮಿತ್ರರ ನಡುವೆ ಮತ್ತೆ ವಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.