ETV Bharat / state

ಹಾವೇರಿಗೆ ಆಗಮಿಸಿದ ವಂದೇ ಭಾರತ್ ರೈಲು ನೋಡಲು ಮುಗಿಬಿದ್ದ ಜನ: ಇಲ್ಲಿಯೂ ನಿಲುಗಡೆ ಮಾಡಬೇಕೆಂದು ಸ್ಥಳೀಯರ ಒತ್ತಾಯ

author img

By

Published : Jun 27, 2023, 4:03 PM IST

Updated : Jun 27, 2023, 4:55 PM IST

locals-demand-for-stop-vande-bharat-train-in-havari
ಹಾವೇರಿಗೆ ಆಗಮಿಸಿದ ವಂದೇ ಭಾರತ್ ರೈಲು ನೋಡಲು ಮುಗಿಬಿದ್ದಿ ಜನ: ಇಲ್ಲಿಯೂ ನಿಲುಗಡೆಗೆ ಮಾಡಬೇಕೆಂದು ಸ್ಥಳೀಯರ ಒತ್ತಾಯ

ಇಂದು ಚಾಲನೆಗೊಂಡ ವಂದೇ ಭಾರತ್ ರೈಲು ಹಾವೇರಿಗೆ ಆಗಮಿಸಿದ್ದ ವೇಳೆ ಜನರು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದರು.

ಹಾವೇರಿಗೆ ಆಗಮಿಸಿದ ವಂದೇ ಭಾರತ್ ರೈಲು ನೋಡಲು ಮುಗಿಬಿದ್ದ ಜನ

ಹಾವೇರಿ: ಬಹು ನಿರೀಕ್ಷಿತ ಧಾರವಾಡ - ಬೆಂಗಳೂರು ನಡುವಿನ ವಂದೇ ಭಾರತ್​ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಚಾಲನೆ ನೀಡಿದ್ದಾರೆ. ಇಂದು ಧಾರವಾಡದಿಂದ ಬೆಂಗಳೂರಿಗೆ ಪ್ರಯಾಣ ಆರಂಭಿಸಿರುವ ವಂದೇ ಭಾರತ್​ ರೈಲು ಹಾವೇರಿ ನಿಲ್ದಾಣಕ್ಕೆ ಆಗಮಿಸಿತು. ಈ ವೇಳೆ ಜನರು ವಂದೇ ಭಾರತ್​ ರೈಲು ನೋಡಲು ಮುಗಿಬಿದ್ದಿದ್ದರು. ಹಾವೇರಿಗೆ ಆಗಮಿಸಿದ ವಂದೇ ಭಾರತ್​ ರೈಲಿಗೆ ಜನರು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಲಾಯಿತು.

ಮೊದಲ ದಿನವಾದ ಇಂದು ದಿನನಿತ್ಯದ ನಾಲ್ಕು ನಿಲುಗಡೆ ಹೊರತುಪಡಿಸಿ ಧಾರವಾಡ - ಬೆಂಗಳೂರು ಮಾರ್ಗದ 12 ನಿಲ್ದಾಣಗಳಲ್ಲಿ ವಂದೇ ಭಾರತ್​​ ರೈಲು ನಿಲುಗಡೆಯಾಗಲಿದೆ. ದಿನನಿತ್ಯ ನಿಲುಗಡೆಯಾಗುವ ‌ರೈಲು ನಿಲ್ದಾಣಗಳಲ್ಲಿ ಹಾವೇರಿ ರೈಲು ನಿಲ್ದಾಣವಿಲ್ಲ. ಹಾವೇರಿ ರೈಲ್ವೆ ಅಧಿಕಾರಿಗಳು ಹಸಿರು ನಿಶಾನೆ ತೋರಿಸುವ ಮೂಲಕ ರೈಲು ಮುಂದಿನ ನಿಲ್ದಾಣಕ್ಕೆ ತೆರಳಲು ಅನುಮತಿ ನೀಡಿದರು. ಇದೇ ವೇಳೆ ಹಾವೇರಿ ರೈಲು ನಿಲ್ದಾಣದಲ್ಲಿ ಪ್ರತಿನಿತ್ಯ ವಂದೇ ಭಾರತ ರೈಲು ನಿಲುಗಡೆಯಾಗಬೇಕೆಂಬ ಕೂಗು ಕೇಳಿಬಂತು.

ರೈಲು ಅಧಿಕಾರಿಗಳು ಜನಪ್ರತಿನಿಧಿಗಳು ಈ ಕುರಿತಂತೆ ಕಾರ್ಯಪ್ರವೃತ್ತರಾಗಬೇಕು. ಹಾವೇರಿ ಜಿಲ್ಲೆ ಹಲವು ವೈಶಿಷ್ಟ್ಯಗಳಿರುವ ಜಿಲ್ಲೆ. ಈ ನಿಲ್ದಾಣದಿಂದ ಬೆಂಗಳೂರಿಗೆ ಪ್ರತಿನಿತ್ಯ ನೂರಾರು ಜನರು ಕೆಲಸದ ನಿಮಿತ್ತ ತೆರಳುತ್ತಾರೆ. ಅಲ್ಲದೆ ಶಿರಸಿ ಮತ್ತು ಕುಮಟಾ ಸೇರಿದಂತೆ ಹಲವು ಪಟ್ಟಣಗಳಿಗೆ ಹಾವೇರಿ ಹತ್ತಿರವಾಗಿದೆ. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ, ರಾಣೆಬೆನ್ನೂರು ಪ್ರಮುಖ ವ್ಯಾಪಾರ ಕೇಂದ್ರಗಳಾಗಿವೆ. ಈ ಹಿನ್ನೆಲೆಯಲ್ಲಿ ಹಾವೇರಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್​ ನಿಲುಗಡೆ ಮಾಡುವಂತೆ ಸ್ಥಳೀಯರು ಒತ್ತಾಯಿಸಿದರು.

ಸ್ಥಳೀಯರಾದ ವಿಶ್ವನಾಥ್ ಮಾತನಾಡಿ, "ಹಾವೇರಿಯಲ್ಲಿ ವಂದೇ ಭಾರತ್​ ರೈಲು ನಿಂತಿದ್ದು ನೋಡಿ ಜನರು ಸಂತೋಷಪಟ್ಟಿದ್ದಾರೆ. ವಂದೇ ಭಾರತ್​ ರೈಲನ್ನು ಹಾವೇರಿಯಲ್ಲಿ ನಿಲ್ಲಿಸುವಂತೆ ನಮ್ಮ ಸಂಸದರು, ಎಂಎಲ್​ಎಗಳು ಹಾಗೂ ರೈಲ್ವೆ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಹಾವೇರಿಯೂ ಜಿಲ್ಲಾ ಕೇಂದ್ರವಾಗಿರುವುದರಿಂದ ಇಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಇಲ್ಲಿಯೂ ನಿಲುಗಡೆ ಮಾಡಬೇಕು ಎಂದು ವಿನಂತಿಸಿಕೊಳ್ಳುತ್ತೇನೆ" ಎಂದರು.

ಇದನ್ನೂ ಓದಿ: ಕೆಂಪೇಗೌಡ ಜಯಂತಿ ಉತ್ಸವ: ಬೆಂಗಳೂರಿಗೂ ನನಗೂ ಅವಿನಾಭಾವ ಸಂಬಂಧ.. ಡಿಸಿಎಂ ಡಿಕೆಶಿ

ವಂದೇ ಭಾರತ್​ ರೈಲಿನಲ್ಲಿ ಪ್ರಯಾಣಿಸಿದ ಪ್ರಹ್ಲಾದ್ ಜೋಶಿ, ಗೆಹ್ಲೋಟ್: ಕೇಂದ್ರ ಸರ್ಕಾರದ ಮಹತ್ವಪೂರ್ಣ ಯೋಜನೆಗಳಲ್ಲಿ ಒಂದಾಗಿರುವ ವಂದೇ ಭಾರತ್​ ರೈಲು ಸಂಚಾರ ಧಾರವಾಡದಿಂದ ಆರಂಭವಾಗಿದೆ. ಲೋಕಾರ್ಪಣೆಯ ಬಳಿಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ರಾಜ್ಯಪಾಲ ಥಾವರ್ ಚಂದ್​ ಗೆಹ್ಲೋಟ್​ ಧಾರವಾಡದಿಂದ ಹುಬ್ಬಳ್ಳಿಯವರೆಗೆ ರೈಲಿನಲ್ಲಿ ಪ್ರಯಾಣಿಸಿದರು. ವಂದೇ ಭಾರತ್​ ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವರ್ಚುವಲ್ ಆಗಿ ಚಾಲನೆ ನೀಡಿದ್ದು, ಪ್ರಯೋಗಾರ್ಥವಾಗಿ ಪ್ರಯಾಣಿಸುವ ಮೂಲಕ ವಂದೇ ಭಾರತ್​ ರೈಲಿನ ವೈಶಿಷ್ಟ್ಯವನ್ನು ಅನುಭವಿಸಿದರು. ರೈಲು ಸಂಚಾರದ ವೇಳೆಯಲ್ಲಿ ರಾಜ್ಯಪಾಲರು ಹಾಗೂ ಕೇಂದ್ರ ಸಚಿವರು ಉಪಹಾರ ಸೇವಿಸಿದ್ದು ವಿಶೇಷವಾಗಿತ್ತು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, "ಧಾರವಾಡದಿಂದ ವಂದೇ ಭಾರತ್​ ರೈಲು ಆರಂಭವಾಗಬೇಕೆಂಬ ಬೇಡಿಕೆಯಿತ್ತು. ಅದರಂತೆ ಧಾರವಾಡದಿಂದ ವಂದೇ ಭಾರತ್​ ಆರಂಭಿಸಲಾಗಿದೆ. ಹುಬ್ಬಳ್ಳಿಯಲ್ಲಿ ವಂದೇ ಭಾರತ್​ ಟೆಂಡರ್​ ಪ್ರಕ್ರಿಯೆ ನಡೆದಿದೆ. ನಂತರದಲ್ಲಿ ಸಮಯ ಬದಲಾವಣೆ ಮಾಡಲಾಗುತ್ತದೆ" ಎಂದರು.

Last Updated :Jun 27, 2023, 4:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.