ETV Bharat / state

ಕಾಂಗ್ರೆಸ್ ಸರ್ಕಾರ ಗೊಂದಲದ ಗೂಡು, ಸಚಿವ ಸಂಪುಟದಲ್ಲಿ ಒಗ್ಗಟ್ಟಿಲ್ಲ: ಬೊಮ್ಮಾಯಿ

author img

By ETV Bharat Karnataka Team

Published : Oct 1, 2023, 4:23 PM IST

Former CM Basavaraja Bommai
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಕಾಂಗ್ರೆಸ್​ ಸಂಪೂರ್ಣ ಗೊಂದಲದ ಗೂಡಾಗಿದೆ. ಸಚಿವ ಸಂಪುಟದಲ್ಲಿ ಒಗ್ಗಟ್ಟಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದರು.

ಕಾಂಗ್ರೆಸ್ ಸರ್ಕಾರದ ವಿರುದ್ದ ಬಸವರಾಜ ಬೊಮ್ಮಾಯಿ ವಾಗ್ದಾಳಿ

ಹಾವೇರಿ : ಪ್ರತಿದಿನ ಸರ್ಕಾರದ ಸಚಿವರು ಒಂದಿಲ್ಲೊಂದು ಗೊಂದಲದ ಹೇಳಿಕೆ ಕೊಡುವುದನ್ನು ನೋಡಿದರೆ ಒಳಗಡೆ ಯಾವುದೂ ಸರಿ ಇಲ್ಲ ಎನಿಸುತ್ತಿದೆ. ನಾಲ್ಕು ತಿಂಗಳಲ್ಲಿ ಜನಸಾಮಾನ್ಯರ ಪ್ರೀತಿಯನ್ನೂ ಕಳೆದುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿ ಜಿಲ್ಲೆಯ ಸವಣೂರು ತಾಲೂಕು ಹುರಳಿಕೊಪ್ಪಿ ಗ್ರಾಮದಲ್ಲಿಂದು, ಸಚಿವ ಕೆ.ಹೆಚ್.ಮುನಿ​ಯಪ್ಪನವರ ದಲಿತ ಸಿಎಂ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಗೊಂದಲದ ಗೂಡಾಗಿದ್ದು, ಒಬ್ಬರಿಗೊಬ್ಬರ ಸಹಕಾರವಿಲ್ಲ. ಕ್ಯಾಬಿನೆಟ್​ನಲ್ಲಿ ಒಗ್ಗಟ್ಟಿಲ್ಲ. ಶಾಸಕರಲ್ಲಿ ಆಕ್ರೋಶವಿದೆ. ಸಂಪೂರ್ಣವಾಗಿ ನಾಲ್ಕು ತಿಂಗಳಲ್ಲಿ ಜನರ ಪ್ರೀತಿಯನ್ನು ಸರ್ಕಾರ ಕಳೆದುಕೊಂಡಿದೆ. ಹೀಗಾಗಿ ಜನರಿಗೆ ಈ ಸರ್ಕಾರದ ಇದೆ ಎಂಬ ಭಾವನೆ ಇಲ್ಲ. ಬರ ಬಂದು ರೈತರು ಆತ್ಯಹತ್ಯೆ ಮಾಡಿಕೊಂಡರೂ ಸರ್ಕಾರ ನೆರವಾಗುತ್ತಿಲ್ಲ. ಯಾವುದೇ ಅಭಿವೃದ್ದಿ ಕೆಲಸಗಳೂ ನಡೆಯುತ್ತಿಲ್ಲ. ಈ ರೀತಿಯ ಗೊಂದಲದ ಹೇಳಿಕೆಗಳಿಂದ ಮುಖ್ಯಮತ್ರಿ ಸಿದ್ದರಾಮಯ್ಯನವರಿಗೆ ತಮ್ಮ ಸಚಿವ ಸಂಪುಟ ಸದಸ್ಯರ ಮೇಲೆ ಯಾವುದೇ ನಿಯಂತ್ರಣವಿಲ್ಲ ಎಂಬುದು ಸ್ಪಷ್ಟ ಎಂದರು.

ಕಾವೇರಿ ವಿಚಾರಕ್ಕೆ ಸಿದ್ದರಾಮಯ್ಯನವರು ಶನಿವಾರ ನ್ಯಾಯಮೂರ್ತಿಗಳೊಂದಿಗೆ ನಡೆಸಿದ ಸಭೆಯಲ್ಲಿ ನಾವು ಅಪೀಲ್ ಹೋಗುತ್ತೇವೆ, ನೀರು ನಿಲ್ಲಿಸುತ್ತೇವೆ ಎಂದು ಹೇಳುತ್ತಾರೆ. ಇದೇ ವೇಳೆ ಹೊರಗಡೆ ಬಂದು ಅಪೀಲ್ ಹೋಗುತ್ತೇವೆ, ಆದ್ರೆ ನೀರು ನಿಲ್ಲಿಸೋಕೆ ಆಗಲ್ಲ ಅಂತಾರೆ. ಯಾಕೆ ನೀರು ನಿಲ್ಲಿಸೋಕೆ ಆಗಲ್ಲ ಎಂದು ಬೊಮ್ಮಾಯಿ ಪ್ರಶ್ನಿಸಿದರು.

ಕಾಂಗ್ರೆಸ್‌ನವರು​ ತಮಿಳುನಾಡಿಗೆ ಬಿಡುತ್ತಿರುವ ಕಾವೇರಿ ನೀರು ನಿಲ್ಲಿಸಿದರೆ ನ್ಯಾಯಾಂಗ ನಿಂದನೆ ಆಗುತ್ತದೆ. ಸರ್ಕಾರ ವಜಾ ಆಗುತ್ತದೆ. ಡ್ಯಾಂ ವಶಪಡಿಸಿಕೊಳ್ಳುತ್ತಾರೆ ಎನ್ನುತ್ತಾರೆ. ನೀವು ಇನ್ನೂ ಸುಪ್ರಿಂ ಕೋರ್ಟ್​ಗೆ ಹೋಗುವುದು ಇದೆ. ಕೋರ್ಟ್‌ಗೆ ಹೋಗುವ ಮುನ್ನ ಹೆದರಿಕೊಂಡು ಈ ರೀತಿ ಹೇಳಿಕೆ ಕೊಟ್ಟರೆ ನೀರು ಬಿಡುವಂತೆ ಕೋರ್ಟ್ ಹೇಳುತ್ತದೆ. ಮುಖ್ಯಮಂತ್ರಿಗಳಿಗೆ ಅಷ್ಟಾದರೂ ವ್ಯವದಾನ ಬೇಕಲ್ವಾ? ಈ ತರಾ ದ್ವಂದ್ವ ನೀತಿ ನಡೆದುಕೊಂಡು ಬಂದಿದೆ. ರಾಜ್ಯದ ನೆಲ, ಜಲ ಉಳಿಸಲು ಈ ಸರ್ಕಾರದಿಂದ ಸಾಧ್ಯ ಇಲ್ಲ ಅನ್ನೋದು ಜನರಿಗೆ ಗೊತ್ತಾಗಿದೆ ಎಂದು ಬೊಮ್ಮಾಯಿ ಟೀಕಿಸಿದರು.

ಶಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರ: ಸರ್ಕಾರದಲ್ಲಿ ವೀರಶೈವ ಲಿಂಗಾಯತ ಅಧಿಕಾರಿಗಳನ್ನು ಮೂಲೆ‌ಗುಂಪು ಮಾಡುತ್ತಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಬೊಮ್ಮಾಯಿ, ಶಾಮನೂರು ಶಿವಶಂಕರಪ್ಪನವರು ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರು. ಅವರ ಹೇಳಿಕೆಯನ್ನು ಜನ ಗಂಭೀರವಾಗಿ ಪರಿಗಣನೆ ಮಾಡುತ್ತಾರೆ. ಮುಖ್ಯಮಂತ್ರಿಗಳು ಅವರಿಗೆ ಸ್ಪಷ್ಟವಾದ ಉತ್ತರ ಕೊಡಬೇಕು. ಮುಖ್ಯಮಂತ್ರಿಗಳ ಹೇಳಿಕೆ ಬಳಿಕವೂ ನಮ್ಮ ಹೇಳಿಕೆಗೆ ನಾವು ಬದ್ದ ಎನ್ನುವುದನ್ನು ನೋಡಿದ್ರೆ, ಅವರ ಹೇಳಿಕೆ ಬಹಳ ಗಂಭೀರವಾಗಿದೆ ಎಂದರು.

ಇದನ್ನೂ ಓದಿ: "ಜಗದೀಶ್ ಶೆಟ್ಟರ್​ಗೆ ಡಿಸಿಎಂ ಸ್ಥಾನ ನೀಡಬೇಕು": ವೀರಶೈವ ಮಹಾಸಭಾದಿಂದ ಸಿಎಂ ಸಿದ್ದರಾಮಯ್ಯಗೆ ಪತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.