ETV Bharat / state

ಹಾವೇರಿ: ಗಣಪನ ಕೊರಳೇರಲು ಸಿದ್ಧಗೊಳ್ತಿವೆ ಬಗೆಬಗೆ ಏಲಕ್ಕಿ ಮಾಲೆ

author img

By ETV Bharat Karnataka Team

Published : Sep 18, 2023, 7:11 AM IST

Updated : Sep 18, 2023, 8:29 PM IST

ಏಲಕ್ಕೆ ಮಾಲೆ
ಏಲಕ್ಕೆ ಮಾಲೆ

ಹಾವೇರಿಯಲ್ಲಿ ಗಣೇಶ ಚತುರ್ಥಿ ಕಳೆಗಟ್ಟುತ್ತಿದೆ. ಉತ್ಸವಕ್ಕೆ ವಿವಿಧ ರೀತಿಯ ಆಕರ್ಷಕ ಏಲಕ್ಕಿ ಮಾಲೆಗಳನ್ನು ತಯಾರಿಸಲಾಗುತ್ತಿದೆ.

ಗಣಪನ ಕೊರಳೇರಲು ಸಿದ್ಧಗೊಳ್ತಿವೆ ಬಗೆಬಗೆ ಏಲಕ್ಕಿ ಮಾಲೆ

ಹಾವೇರಿ: ಗಣೇಶೋತ್ಸವಕ್ಕೆ ಇಲ್ಲಿಯ ಉಸ್ಮಾನಸಾಬ್​ ಎಂಬವರು ವಿವಿಧ ಬಗೆಯ ಏಲಕ್ಕಿ ಮಾಲೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಒಂದೆಳೆಯ ಮಾಲೆಗಳಿಂದ ಹಿಡಿದು 25 ಎಳೆಗಳಿರುವ ಮಾಲೆಗಳನ್ನು ಇವರು ತಯಾರಿಸುತ್ತಾರೆ. ಕಳೆದ ಹಲವು ವರ್ಷಗಳಿಂದ ಈ ಕೆಲಸದಲ್ಲಿ ತೊಡಗಿದ್ದಾರೆ. ತಾಯಿಯಿಂದ ಬಂದ ಕಲೆಯನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿದ್ದಾರೆ. ವಿಶಿಷ್ಠ ಏಲಕ್ಕಿ ಮಾಲೆ ತಯಾರಿಕೆಗಾಗಿ ಇವರ ತಾಯಿಗೆ 'ಕರ್ನಾಟಕ ರಾಜ್ಯೋತ್ಸವ' ಪ್ರಶಸ್ತಿ ಲಭಿಸಿತ್ತು.

ಉಸ್ಮಾನಸಾಬ್ ಮಾತನಾಡಿ​, "ಸಾರ್ವಜನಿಕ ಗಣೇಶೋತ್ಸವಗಳಿಗಾಗಿ ಮುಂಚಿತವಾಗಿ ಆರ್ಡರ್‌ಗಳು ಬಂದಿವೆ. ಈಗಾಗಲೇ ದೊಡ್ಡ ದೊಡ್ಡ ಮಾಲೆಗಳು ಸಿದ್ಧವಾಗಿವೆ. ಪ್ರತಿವರ್ಷ ಗಣೇಶ ಚತುರ್ಥಿ ಹತ್ತಿರವಾಗುತ್ತಿದ್ದಂತೆ ನಮಗೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಾರದಷ್ಟು ಒತ್ತಡವಿರುತ್ತದೆ. ಈ ವರ್ಷಾರಂಭದಲ್ಲಿ ಹಾವೇರಿ ನಗರದಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಅಲ್ಲಿಯೂ ಸಹ ಏಲಕ್ಕಿ ಮಾಲೆಗಳ ಕಂಪು ಹರಡಿತ್ತು. ಸಮ್ಮೇಳನಕ್ಕಿಂತಲೂ ಅಧಿಕ ವ್ಯಾಪಾರವನ್ನು ಗಣೇಶನ ಹಬ್ಬ ಮಾಡುತ್ತಿದೆ" ಎಂದು ಸಂತಸ ವ್ಯಕ್ತಪಡಿಸಿದರು.

ಗ್ರಾಹಕ ಗುರುರಾಜ್​ ಮಾತನಾಡಿ, "ಉಸ್ಮಾನಸಾಬ್ ಏಲಕ್ಕಿ ಮಾಲೆಯ ಜತೆಗೆ ರುದ್ರಾಕ್ಷಿಮಾಲೆಗಳನ್ನೂ ಸಹ ಮಾರುತ್ತಾರೆ. ಒಂದು ಸಾರಿ ಜನರು ಇವರ ಅಂಗಡಿಗೆ ಬಂದರೆ ಸಾಕು ಖಾಯಂ ಆಗಿ ಗ್ರಾಹಕರಾಗುತ್ತಾರೆ. ಕಳೆದ ಹಲವು ವರ್ಷಗಳಿಂದ ಉಸ್ಮಾನಸಾಬ್ ಬಳಿ ಮಾಲೆಗಳನ್ನು ಖರೀದಿಸುತ್ತಿದ್ದೇನೆ. ಈ ಮಾಲೆಗಳ ಸೌಂದರ್ಯಕ್ಕೆ ಮನಸೋತಿದ್ದೇವೆ" ಎಂದು ತಿಳಿಸಿದರು.

ಕೋರಿಯರ್ ಮೂಲಕ ಏಲಕ್ಕಿ ಮಾಲೆಗಳು ಹೊರರಾಜ್ಯಗಳಿಗೂ ಮಾರಾಟವಾಗುತ್ತಿವೆ. ಕಾಸರಗೋಡು, ಕೇರಳದಿಂದ ಏಲಕ್ಕಿ ತರಿಸಲಾಗುತ್ತದೆ. ಉಳಿದ ಅಲಂಕಾರಿಕ ವಸ್ತುಗಳನ್ನು ಮುಂಬೈ ಪುಣೆಗಳಿಂದ ತರಿಸಲಾಗುತ್ತದೆ. ಈ ರೀತಿ ತಂದ ವಸ್ತುಗಳು ಮತ್ತು ಏಲಕ್ಕಿಗಳಿಂದ ಮಾಲೆ ತಯಾರಿಸಲಾಗುತ್ತದೆ.

ಈ ಹಿಂದೆ ಹಾವೇರಿಯಲ್ಲಿ ವ್ಯಾಪಾರಿಗಳು ಏಲಕ್ಕಿಯನ್ನು ಸಂಸ್ಕರಿಸಿ ಒಣಗಿಸಲು ಹಾಕುತ್ತಿದ್ದರು. ಅಂದಿನಿಂದ ಹಾವೇರಿಗೆ ಏಲಕ್ಕಿ ಕಂಪನಿ ನಗರಿ ಎಂಬ ಹೆಸರು ಬಂದಿದೆ. ಈಗ ವ್ಯಾಪಾರಿಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಏಲಕ್ಕಿ ಮಾಲೆಗಳ ತಯಾರಕ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಇಲ್ಲಿಯ ಸಾಂಪ್ರದಾಯಿಕ ಏಲಕ್ಕಿ ಮಾಲೆಗಳು ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಅನೇಕ ಭಾರತೀಯ ಮತ್ತು ವಿದೇಶಿ ಗಣ್ಯರ ಕೊರಳೇರಿವೆ. ಅಮೆರಿಕ ಅಧ್ಯಕ್ಷ ಹಾಗೂ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಕೊರಳು ಅಲಂಕರಿಸಿರುವ ಖ್ಯಾತಿ ಕೂಡ ಹಾವೇರಿ ಏಲಕ್ಕಿ ಮಾಲೆಗಿದೆ. ಹಾವೇರಿಗೆ ಯಾರೇ ಜನಪ್ರತಿನಿಧಿಗಳು ಅಥವಾ ಗಣ್ಯರೂ ಬಂದರೂ ಅವರಿಗೆ ಏಲಕ್ಕಿ ಮಾಲೆ ಹಾಕಿಯೇ ಸ್ವಾಗತಿಸುವ ಸಂಪ್ರದಾಯ ಬೆಳೆದಿದೆ. ಹಾಗಾಗಿ ಈ ಮಾಲೆಗಳ ಬೇಡಿಕೆ ದಿನೇ ದಿನೇ ಹೆಚ್ಚಾಗತೊಡಗಿದೆ.

ಇದನ್ನೂ ಓದಿ: ಗದಗ ಜಿಲ್ಲೆಯಲ್ಲಿ ಜೋರಾಯ್ತು ಪರಿಸರ ಸ್ನೇಹಿ ಗಣೇಶ ವಿಗ್ರಹ ಖರೀದಿ..

Last Updated :Sep 18, 2023, 8:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.