ETV Bharat / state

ನಿಗಮ ಮಂಡಳಿಗೆ ಮೊದಲ ಹಂತದಲ್ಲಿ ಶಾಸಕರನ್ನು ಆಯ್ಕೆ ಮಾಡುತ್ತೇವೆ : ಸಿಎಂ ಸಿದ್ದರಾಮಯ್ಯ

author img

By ETV Bharat Karnataka Team

Published : Nov 29, 2023, 3:38 PM IST

Updated : Nov 29, 2023, 4:38 PM IST

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ನಿಗಮ ಮಂಡಳಿ ಆಯ್ಕೆ ವಿಚಾರವಾಗಿ ನಾನು, ರಣದೀಪ್‌ಸಿಂಗ್ ಸುರ್ಜೇವಾಲ, ಡಿ ಕೆ ಶಿವಕುಮಾರ್ ಕುಳಿತು ಚರ್ಚೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ

ಹಾವೇರಿ : ನಿಗಮ ಮಂಡಳಿ ಆಯ್ಕೆ ವಿಚಾರದ ಬಗ್ಗೆ ನಾವೆಲ್ಲಾ ಚರ್ಚೆ ಮಾಡಿ ಮೊದಲ ಹಂತದಲ್ಲಿ ಶಾಸಕರನ್ನು ಆಯ್ಕೆ ಮಾಡುತ್ತೇವೆ. ನಾನು, ನಮ್ಮ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಸುರ್ಜೇವಾಲ, ಡಿಸಿಎಂ ಡಿ ಕೆ ಶಿವಕುಮಾರ್ ಕುಳಿತು ಚರ್ಚೆ ಮಾಡುತ್ತೇವೆ. ಹೈಕಮಾಂಡ್​ನವರು ತೀರ್ಮಾನ ಮಾಡಬೇಕು. ನಾವು ಮಾತಾಡ್ತೇವಿ. ಈಗಾಗಲೇ ಬೆಳಗ್ಗೆ ಮಾತನಾಡಿದ್ದೇನೆ. ಇಂದು ಸಂಜೆ ಬೆಂಗಳೂರಿಗೆ ಬರೋಕೆ ಹೇಳಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕನಕ ಗುರುಪೀಠದಲ್ಲಿ ಕನಕ ಜಯಂತಿ ಆಚರಣೆ ಮಾಡುತ್ತಿದ್ದಾರೆ. ಹೀಗಾಗಿ ಮುಖ್ಯವಾಗಿ ಕನಕಜಯಂತಿ ಆಚರಣೆಗೆ ಬಂದಿದ್ದೇನೆ ಎಂದರು.

ಹೈಕೋರ್ಟ್​ನಲ್ಲಿ ಡಿ ಕೆ ಶಿವಕುಮಾರ್​ಗೆ ರಿಲೀಫ್​ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನಗೆ ಅದು ಗೊತ್ತಿಲ್ಲ. ಸಿಬಿಐ ತನಿಖೆ ಮಾಡಬೇಕು ಅನ್ನೋದನ್ನ ನಾವು ವಾಪಸ್​ ತೆಗೆದುಕೊಂಡಿದ್ದೇವೆ. ಅದು ಕಾನೂನು ಪ್ರಕಾರ ಇಲ್ಲ. ಈ ಹಿಂದಿನ ಸರ್ಕಾರ ಕಾನೂನುಬಾಹಿರವಾಗಿ ಮಾಡಿತ್ತು ಎಂದರು.

ನಾವು ಏನೂ ಮಾಡದೆ ಕುಳಿತಿಲ್ಲ: ಬರಗಾಲದ ಪರಿಹಾರ ವಿಳಂಬ ವಿಚಾರವಾಗಿ ಮಾತನಾಡಿದ ಸಿಎಂ, ಸರ್ವೆ ಮಾಡ್ತಾ ಇದ್ದೇವೆ. ಎನ್​ಡಿಆರ್​ಎಫ್​ ಪ್ರಕಾರ ಪರಿಹಾರ ಕೊಡುತ್ತೇವೆ. ಆದರೆ ಕೇಂದ್ರ ಸರ್ಕಾರ ಒಂದು ನಯಾಪೈಸೆ ಕೊಡ್ತಾ ಇಲ್ಲ. ರೈತರು ಕಷ್ಟದಲ್ಲಿ ಇದ್ದಾರೆ. ಪಾಪ ಪರಿಹಾರ ಕೇಳ್ತಾರೆ. ನಮ್ಮ ದುಡ್ಡು ನಮಗೆ ಕೊಡ್ತಾ ಇಲ್ಲ, ನಮ್ಮ ತೆರಿಗೆ ಹಣ ಕೊಡೋಕೆ ಆಗ್ತಾ ಇಲ್ಲ. ನಾವು ಕುಡಿಯುವ ನೀರಿಗೆ, ಮೇವಿಗೆ ಹಣ ಕೊಟ್ಟಿದ್ದೇವೆ. ಹೀಗಾಗಿ ನಾವು ಏನೂ ಮಾಡದೆ ಕುಳಿತಿಲ್ಲ ಎಂದು ತಿಳಿಸಿದರು.

ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ, ಮಂತ್ರಿಗಳಿಗೆ ಸೂಚನೆ ಕೊಟ್ಟಿದ್ದೇನೆ, ಬರಗಾಲದ ಬಗ್ಗೆ ಮೀಟಿಂಗ್ ಮಾಡಬೇಕು, ಯಾರಿಗೂ ತೊಂದರೆ ಆಗಬಾರದು. ಸಮೀಕ್ಷೆ ಮಾಡಬೇಕು. ಜನಗಳಿಗೆ ಬರಗಾಲದಲ್ಲಿ ನೂರು ದಿನ ಕೆಲಸ ಕೊಡ್ತಾ ಇದ್ದೇವೆ. ಬರಗಾಲ ಬಂದಾಗ 150 ದಿನ ಕೊಡಬೇಕು ಅಂತಾ ನಿಯಮ ಇದೆ. ಆದರೆ ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಬೇಕು. ಕೇಂದ್ರ ಸರ್ಕಾರ ಇವತ್ತಿನವರೆಗೂ ಇದಕ್ಕೆ ಪರ್ಮಿಷನ್ ಕೊಟ್ಟಿಲ್ಲ. ಇಡೀ ದೇಶದಲ್ಲಿ 12 ರಾಜ್ಯಗಳಲ್ಲಿ ಬರಗಾಲ ಇದೆ. ಯಾವ ರಾಜ್ಯಕ್ಕೂ ಪರಿಹಾರ ಹಾಗೂ ಅನುಮತಿ ಕೊಟ್ಟಿಲ್ಲ ಎಂದು ಹೇಳಿದರು.

ಬರಬೇಕಾಗಿರೋದು ಬರಬೇಕಲ್ಲಾ?: ಕೇಂದ್ರದ ತಂಡ ಬರಗಾಲ ಅಧ್ಯಯನ ಮಾಡಿ ವರದಿ ಕೊಟ್ಟಿದೆ. ಆದರೂ ಪರಿಹಾರ ಕೊಟ್ಟಿಲ್ಲ. ಇಲ್ಲಿಯ ಬಿಜೆಪಿಯವರು ಹೇಳ್ತಾರೆ, ಅವರಿಗೆ ಯಾಕೆ ನೋಡ್ತೀರಿ ಅಂತ. ಆದರೆ ನಾವು ಆ ಕಡೆ ನೋಡೊಲ್ಲ. ಆದರೆ ನಮಗೆ ಬರಬೇಕಾಗಿರೋದು ಬರಬೇಕಲ್ಲ ಎಂದು ಸಿಎಂ ಪ್ರಶ್ನಿಸಿದರು.

ಬೆಳಗಾವಿ ಅಧಿವೇಶನದಲ್ಲಿ ಪ್ರಮುಖ ವಿಷಯಗಳ ಬಗೆಗಿನ ವಿಚಾರವಾಗಿ ಮಾತನಾಡಿದ ಅವರು, ವಿರೋಧ ಪಕ್ಷದವರು ಏನು ಪ್ರಸ್ತಾಪ ಮಾಡ್ತಾರೆ, ಅದಕ್ಕೆ ನಾವು ಉತ್ತರ ಕೊಡೊದಕ್ಕೆ ತಯಾರಿದ್ದೇವೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ಮಾಡ್ತೇವಿ ಎಂದು ಹೇಳಿದರು.

ಸಿಎಂ ವಕೀಲರಾಗಿ ಡಿಕೆಶಿ ಕೇಸ್ ವಾಪಸ್​ ಪಡೆದಿದ್ದು ಎಷ್ಟರಮಟ್ಟಿಗೆ ಸರಿ? ಎಂಬ ಹೆಚ್​ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ವಕೀಲರಾಗಿ ಇರೋದಕ್ಕೆ ಆ ನಿರ್ಧಾರ ತೆಗೆದುಕೊಂಡಿರೋದು. ಅವರು ವಕೀಲರು ಅಲ್ಲ ಅಲ್ವಾ?. ಕಾನೂನು ಪ್ರಕಾರ ಇಲ್ಲ ಅಂತಾ ತೆಗೆದುಕೊಂಡಿದ್ದೇವೆ. ವಕೀಲರಾಗಿ ಇರೋದಕ್ಕೆ ತೆಗೆದುಕೊಂಡಿರುವುದು. ಇಲ್ಲ ಎಂದರೆ ಯಡಿಯೂರಪ್ಪನ ಥರ, ಕುಮಾರಸ್ವಾಮಿ ಥರ ನಾನು ಇರ್ತಾ ಇದ್ದೆ ಎಂದು ಹೆಚ್​ಡಿಕೆ ಮಾತಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ : ಸಿಬಿಐಗೆ ತನಿಖೆಗೆ ನೀಡಿದ್ದ ಕ್ರಮವನ್ನು ಪ್ರಶ್ನಿಸಿದ್ದ ಮೇಲ್ಮನವಿ ಹಿಂಪಡೆದ ಡಿಕೆಶಿ; ಅನುಮತಿ ನೀಡಿದ ಹೈಕೋರ್ಟ್​

Last Updated :Nov 29, 2023, 4:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.