ETV Bharat / state

ತಾಯಿ ಬಿಟ್ಟೋಗಿದ್ದ ವೇಳೆ ಚಿಕಿತ್ಸೆ, ಆರೈಕೆ.. ಡಾಬಾ ಮಾಲೀಕನಿಗೆ ಅದೃಷ್ಟ ಲಕ್ಷ್ಮಿಯಾದ ಕೋತಿ ಮರಿ

author img

By

Published : Dec 7, 2022, 9:13 AM IST

Updated : Dec 7, 2022, 12:36 PM IST

baby monkey
ಕೋತಿ ಮರಿ

ಕಳೆದ 15 ದಿನಗಳ ಹಿಂದೆ ಸಿಕ್ಕ ಕೋತಿ ಮರಿಯನ್ನು ಹಾವೇರಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 48 ರ ಪಕ್ಕದ ಗೋರಬಂದ ರಾಜಸ್ಥಾನಿ ಡಾಬಾದ ಮಾಲೀಕ ವಿಕಾಸ್‌ ಅತ್ಯಂತ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದಾರೆ.

ಹಾವೇರಿ: ನಂಬಿಕೆ ಮತ್ತು ನಿಯತ್ತಿನಲ್ಲಿ ಮನುಷ್ಯರಿಗಿಂತ ಪ್ರಾಣಿಗಳೇ ಮೇಲು ಅನ್ನೋದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ. ಜಿಲ್ಲೆಯಲ್ಲೂ ಅಂತಹದ್ದೇ ಘಟನೆಯೊಂದು ಪ್ರಾಣಿಗಳ ನಂಬಿಕೆ ಹೇಗಿರುತ್ತೆ ಅನ್ನೋದಕ್ಕೆ ಸಾಕ್ಷಿಯಂತಿದೆ.

ಹೌದು, ಇಲ್ಲಿನ ರಾಷ್ಟ್ರೀಯ ಹೆದ್ದಾರಿ 48ರ ಬಳಿಯ ಗೋರಬಂದ ರಾಜಾಸ್ಥಾನಿ ಡಾಬಾದಲ್ಲೀಗ ಲಕ್ಷ್ಮಿಯದ್ದೇ ಮಾತು. ಅರೇ ಈ ಲಕ್ಷ್ಮೀ ಯಾರು ಅಂತಾ ಆಲೋಚಿಸುತ್ತಿದ್ದೀರಾ.. ಕಳೆದ 15 ದಿನಗಳಿಂದ ಡಾಬಾದ ಅತಿಥಿಯಾಗಿರುವ ಲಕ್ಷ್ಮಿಯು ಮಾಲೀಕ ಮತ್ತು ಕೆಲಸಗಾರರ ಅಚ್ಚುಮೆಚ್ಚಿನ ಕೋತಿ ಮರಿ.

ಕೋತಿ ಮರಿ ರಕ್ಷಣೆ ಮಾಡಿದ ಡಾಬಾ ಮಾಲೀಕ

ತಾಯಿ ಬಿಟ್ಟೋಗಿದ್ದ ಮರಿಗೆ ಸಿಕ್ಕಿತು ಮರುಜೀವ.. 15 ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ತಾಯಿ ಕೋತಿ ಬಿಟ್ಟು ಹೋದ ಮರಿಯೊಂದು ಚೀರಾಡುತ್ತಿತ್ತು. ಆ ಶಬ್ದ ಕೇಳಿದ ಗೋರಬಂದ ರಾಜಸ್ಥಾನಿ ಡಾಬಾದ ಮಾಲೀಕ ವಿಕಾಸ್‌ ಅವರು ಅಕ್ಕಪಕ್ಕದಲ್ಲಿ ತಾಯಿ ಇದೆಯಾ ಎಂದು ನೋಡಿದ್ದಾರೆ. ಬಳಿಕ ತಾಯಿ ಕೋತಿ ಕಾಣದಿರುವುದನ್ನು ಗಮನಿಸಿ, ಮರಿ ಕೋತಿಗೆ ಸಣ್ಣಪುಟ್ಟ ಗಾಯಗಳಾಗಿದ್ದರಿಂದ ಪಶು ಆಸ್ಪತ್ರೆಗೆ ತೋರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಮಂಗನ ಮರಿಯನ್ನು ವಿಕಾಸ ಡಾಬಾದಲ್ಲಿಯೇ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಕೋತಿ ಮರಿಗೂ ಫೋನ್ ಗೀಳು.. ಮೊಬೈಲ್​ಗಾಗಿ ಹಾತೊರೆಯುವ ಪರಿ ನೋಡಿ

ನಾಮಕರಣ.. ಕೋತಿ ಮರಿಗೆ ಲಕ್ಷ್ಮಿ ಎಂದು ನಾಮಕರಣ ಮಾಡಿ ಡಾಬಾದಲ್ಲಿನ ಸ್ವಲ್ಪ ಜಾಗದಲ್ಲಿಯೇ ಪೋಷಣೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಅಕ್ಕಪಕ್ಕದ ಜಮೀನಿನ ರೈತರು ಸಹ ಲಕ್ಷ್ಮಿ ಆರೈಕೆಗೆ ಕೈ ಜೋಡಿಸಿದ್ದಾರೆ. ಪ್ರತಿದಿನ ಗಂಟೆಗೊಮ್ಮೆ ವಿಕಾಸ ಬಿಸಿಹಾಲನ್ನು ಬಾಟಲ್​ಗೆ ಹಾಕಿ ಕುಡಿಸುತ್ತಾರೆ. ಮಾಲೀಕನನ್ನು ಅತಿಯಾಗಿ ಹಚ್ಚಿಕೊಂಡಿರುವ ಲಕ್ಷ್ಮಿ, ಅವರ ಮೈ ಮತ್ತು ಕೈ ಏರಿ ಕುಳಿತುಕೊಳ್ಳುತ್ತದೆ.

ಇದನ್ನೂ ಓದಿ: ಜಿಂಕೆ ಮೇಲೆ ಸವಾರಿ ಮಾಡಿದ ಕೋತಿ: ಕುವೆಂಪು ವಿವಿ ಆವರಣದಲ್ಲಿ ದೃಶ್ಯ ಸೆರೆ, ವೈರಲ್​ ವಿಡಿಯೋ

ಇನ್ನು, ಈ ಲಕ್ಷ್ಮಿ ಆಗಮನದಿಂದ ಡಾಬಾದ ಆದಾಯ ಹೆಚ್ಚಳವಾಗಿದೆಯಂತೆ. ಈಗಾಗಿ, ಲಕ್ಷ್ಮಿ ನಮಗೆ ಅದೃಷ್ಟ ಲಕ್ಷ್ಮಿಯಾಗಿದ್ದಾಳೆ. ಜೊತೆಗೆ ಡಾಬಾಕ್ಕೆ ಬರುವ ಅತಿಥಿಗಳಿಗೆ ಆಕರ್ಷಣೀಯವಾಗಿದ್ದಾಳೆ ಎನ್ನುತ್ತಾರೆ ವಿಕಾಸ್.

ಕೋತಿ ಮರಿಗಾಗಿ ಪ್ಲಾಸ್ಟಿಕ್‌ ಬಾಕ್ಸ್‌ನಲ್ಲಿ ಒಂದು ಮೆತ್ತನೆಯ ಹಾಸಿಗೆ ಮಾಡಲಾಗಿದೆ. ಲಕ್ಷ್ಮಿ ಬೆಳೆದು ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳುವವರೆಗೂ ಡಾಬಾದಲ್ಲಿ ಇಟ್ಟುಕೊಳ್ಳಲಾಗುವುದು. ಒಂದು ವೇಳೆ ಅರಣ್ಯ ಇಲಾಖೆಯವರು ಜೋಪಾನ ಮಾಡುವುದಾಗಿ ತಿಳಿಸಿದರೆ ಅವರಿಗೆ ಸಹ ನೀಡುವುದಾಗಿ ವಿಕಾಸ್ ಹೇಳಿದ್ದಾರೆ.

Last Updated :Dec 7, 2022, 12:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.