ETV Bharat / state

ಸಕ್ಕರೆ ನಾಡಿಗೆ ಸಿಹಿ ಸುದ್ದಿ! 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯ ಆತಿಥ್ಯ

author img

By

Published : Jan 8, 2023, 1:02 PM IST

Updated : Jan 8, 2023, 2:12 PM IST

ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಬೇಕು ಎನ್ನುವುದಕ್ಕೆ ಮನವಿ ಸಲ್ಲಿಸಿದ್ದ ಜಿಲ್ಲೆಗಳ ನಡುವೆ ಮತದಾನ ನಡೆಯಿತು.

Mahesh Joshi talked to Media
ಮಾಧ್ಯಮದ ಜೊತೆ ಮಾತನಾಡಿದ ಮಹೇಶ್​ ಜೋಶಿ

ಮಾಧ್ಯಮದ ಜೊತೆ ಮಾತನಾಡಿದ ಮಹೇಶ್​ ಜೋಶಿ

ಹಾವೇರಿ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ಸಕ್ಕರೆ ನಾಡು ಮಂಡ್ಯಕ್ಕೆ ಒಲಿದಿದೆ. ಈ ಕುರಿತಂತೆ ಕಾರ್ಯಕಾರಿಣಿ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಳಿಕ ಮಾತನಾಡಿದ ಕ.ಸಾ.ಪ ರಾಜ್ಯಾಧ್ಯಕ್ಷ ಮಹೇಶ್​ ಜೋಶಿ, 'ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ' ಎಂದು ಪ್ರಕಟಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂಭತ್ತು ಜಿಲ್ಲೆಯವರು ಸಮ್ಮೇಳನದ ಆತಿಥ್ಯಕ್ಕೆ ಮನವಿ ಸಲ್ಲಿಸಿದ್ದರು. ಬೆಂಗಳೂರು ಗ್ರಾಮಾಂತರ, ಮಂಡ್ಯ, ಚಿಕ್ಕಮಗಳೂರು, ಉತ್ತರಕನ್ನಡ, ರಾಮನಗರ, ಬಳ್ಳಾರಿ ಮತ್ತು ಬೆಳಗಾವಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯವರು ಮನವಿ ಬಂದಿತ್ತು. ಅದರಲ್ಲಿ ಮನವಿಯನ್ನು ಹಿಂತೆಗೆದುಕೊಳ್ಳಲು ಅವಕಾಶ ನೀಡಿದಾಗ ಬೆಂಗಳೂರು ಗ್ರಾಮಾಂತರ, ಬೆಳಗಾವಿ, ರಾಮನಗರ ಕೋಲಾರ ಮತ್ತು ಚಿಕ್ಕಬಳ್ಳಾಪುರದವರು ಮನವಿ ವಾಪಸ್ ಪಡೆದರು. ಕೊನೆಯಲ್ಲಿ ಮಂಡ್ಯ, ಚಿಕ್ಕಮಗಳೂರು, ಉತ್ತಕನ್ನಡ ಮತ್ತು ಬಳ್ಳಾರಿ ನಡುವೆ ಚುನಾವಣೆ ನಡೆಯಿತು. ಒಟ್ಟು 54 ಜನರು ಪಾಲ್ಗೊಳ್ಳಬೇಕಾದ ಸಭೆಯಲ್ಲಿ 46 ಜನ ಪಾಲ್ಗೊಂಡಿದ್ದರು. ನಾಲ್ಕು ಜಿಲ್ಲೆಗಳಿಗೆ ಚುನಾವಣೆ ನಡೆದು ಅಂತಿಮವಾಗಿ 17 ಮತಗಳನ್ನು ಪಡೆಯುವ ಮೂಲಕ ಮಂಡ್ಯ ಜಿಲ್ಲೆಗೆ ಆತಿಥ್ಯ ಒಲಿದಿದೆ ಎಂದರು. 17 ಮತ ಗಳಿಸಿ ಮಂಡ್ಯ ಮೊದಲನೇ ಸ್ಥಾನ ಪಡೆದರೆ, ಬಳ್ಳಾರಿ 14 ಮತ ಗಳಿಸಿ ಎರಡನೇಯ ಸ್ಥಾನ ಹಾಗೂ ಐದು ಮತಗಳನ್ನು ಪಡೆದಿದ್ದ ಚಿಕ್ಕಮಗಳೂರು ಮೂರನೇಯ ಸ್ಥಾನ ಗಳಿಸಿತ್ತು. ಉತ್ತರಕನ್ನಡ ಜಿಲ್ಲೆಗೆ ಯಾವುದೇ ಮತ ಸಿಗಲಿಲ್ಲ ಎಂದು ಮಾಹಿತಿ ನೀಡಿದರು.

ಹಾವೇರಿಯಲ್ಲಿ ನಡೆಯುತ್ತಿರುವ ಸಮ್ಮೇಳನ ಅಭೂತಪೂರ್ವ ಯಶಸ್ಸು ಕಂಡಿದೆ. ಈ ರೀತಿಯ ಜನಸಾಗರ ಹರಿದುಬಂದಿದ್ದು ಇದೇ ಪ್ರಥಮ ಎಂದು ಸಂತಸ ವ್ಯಕ್ತಪಡಿಸಿದ ಮಹೇಶ್ ಜೋಶಿ, ಸಮ್ಮೇಳನದಲ್ಲಿ ಕೆಲವು ತೊಂದರೆಗಳಾಗಿವೆ. ತಾಂತ್ರಿಕ ಕಾರಣಗಳಿಂದ ನಾ.ಡಿಸೋಜ ಸೇರಿದಂತೆ ಕೆಲ ಸಾಹಿತಿಗಳಿಗೆ ಹಾಗೂ ಗಣ್ಯರಿಗೆ ತೊಂದರೆಯಾಗಿದೆ. ಅದಕ್ಕಾಗಿ ಕಸಾಪ ಪರವಾಗಿ ನಾನು ಅವರಲ್ಲಿ ಕ್ಷಮೆ ಕೋರುತ್ತೇನೆ. ಮತ್ತು ಈ ರೀತಿಯ ಘಟನೆಗಳು ಮುಂದೆ ಆಗದಂತೆ ನೋಡಿಕೊಳ್ಳುವುದಾಗಿ ಮಹೇಶ್ ಜೋಶಿ ಭರವಸೆ ನೀಡಿದರು.

ಇದೇ ವೇಳೆ ಮಾತನಾಡಿದ ಮಂಡ್ಯ ಕಸಾಪ ಜಿಲ್ಲಾಧ್ಯಕ್ಷ ಸಿ.ಕೆ ರವಿಕುಮಾರ್, ಮಂಡ್ಯಕ್ಕೆ ಅತಿಥ್ಯ ಸಿಕ್ಕಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಮಹೇಶ್ ಜೋಶಿ ಮಾರ್ಗದರ್ಶನದಲ್ಲಿ ಹಾವೇರಿಯ ಸಮ್ಮೇಳನದ ಮಾದರಿಯಲ್ಲಿ ಅದ್ದೂರಿಯಾಗಿ ಸಮ್ಮೇಳನ ನಡೆಸುವ ಇಂಗಿತವನ್ನು ರವಿಕುಮಾರ್ ವ್ಯಕ್ತಪಡಿಸಿದರು. ಮಠಾಧೀಶರು, ಜನಪ್ರತಿನಿಧಿಗಳು, ಅಧಿಕಾರಿಗಳ ಸಹಕಾರದಿಂದ ಮಂಡ್ಯದಲ್ಲಿ ಸಹ ಉತ್ತಮವಾಗಿ ಸಮ್ಮೇಳನ ನಡೆಸುವುದಾಗಿ ತಿಳಿಸಿದರು. ಮಂಡ್ಯ ಜಿಲ್ಲೆಯಲ್ಲಿ ಮುಂದಿನ ಸಾಹಿತ್ಯ ಸಮ್ಮೇಳನ ನಡೆಸುವ ಪರವಾಗಿ ಮತ ಹಾಕಿದ ಎಲ್ಲ ಜಿಲ್ಲೆಗಳಿಗೆ ಅಭಿನಂದನೆ ಸಲ್ಲಿಸಿದರು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂತಿಮ ಘಟ್ಟ ತಲುಪುತ್ತಿದ್ದಂತೆ ನಿನ್ನೆ ರಾತ್ರಿಯೇ ಮುಂದಿನ ಅಂದರೆ 87 ನೇ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಬೇಕು ಎನ್ನುವುದರ ಕುರಿತು ಕಸಾಪ ಕಾರ್ಯಕಾರಿಣಿ ಸಭೆ ನಡೆದಿತ್ತು. ಕಸಾಪ ಅಧ್ಯಕ್ಷ ಮಹೇಶ್​ ಜೋಶಿ ಅವರ ಅರೋಗ್ಯದ ಕಾರಣ ಚರ್ಚೆ ಅರ್ಧದಲ್ಲೇ ಮೊಟಕುಗೊಂಡಿತ್ತು. ಇಂದು ಮುಂಜಾನೆ ಚರ್ಚೆಯನ್ನು ಮತ್ತೆ ಮುಂದುವರಿಸಿದ್ದು, ಈ ಕುರಿತು ನಿರ್ಧಾರ ಕೈಗೊಳ್ಳಲಾಯಿತು.

ಇದನ್ನೂ ಓದಿ: ಅಂತಿಮ ಘಟ್ಟ ತಲುಪಿದ ಕನ್ನಡ ಸಾಹಿತ್ಯ ಸಮ್ಮೇಳನ; ಮುಂದಿನ ನುಡಿಹಬ್ಬ ಎಲ್ಲಿ? ನಡೀತಿದೆ ಚರ್ಚೆ

Last Updated : Jan 8, 2023, 2:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.