ETV Bharat / state

ರಾಯಲ್ ಎನ್​ಫೀಲ್ಡ್​ ಬೈಕ್ ಕಳ್ಳರ ಹೆಡೆಮುರಿ ಕಟ್ಟಿದ ಅರಸೀಕೆರೆ ಪೊಲೀಸರು

author img

By

Published : Dec 24, 2020, 10:53 PM IST

royal-n-field-bike-theft-accused-arrest-by-hassan-police
ರಾಯಲ್ ಎನ್​ಫೀಲ್ಡ್​ ಬೈಕ್ ಖದೀಮರ ಹೆಡೆಮುರಿ ಕಟ್ಟಿದ ಅರಸೀಕೆರೆ ಪೊಲೀಸರು

ಆರು ರಾಯಲ್ ಎನ್​ಫೀಲ್ಡ್​ ಬೈಕ್ ಸೇರಿದಂತೆ 18 ಲಕ್ಷ ರೂ. ಮೌಲ್ಯದ 15 ಬೈಕ್​ಗಳನ್ನು ಕದ್ದಿದ್ದ ಆರೋಪಿಗಳನ್ನು ಅರಸೀಕೆರೆ ಪೊಲೀಸರು ಬಂಧಿಸಿದ್ದಾರೆ.

ಹಾಸನ/ಅರಸೀಕೆರೆ: ಕಳ್ಳತನವಾಗಿದ್ದ ಆರು ರಾಯಲ್ ಎನ್​ಫೀಲ್ಡ್​ ಬೈಕ್ ಸೇರಿದಂತೆ 18 ಲಕ್ಷ ರೂ. ಮೌಲ್ಯದ 15 ಬೈಕ್​ಗಳನ್ನು ವಶಕ್ಕೆ ಪಡೆದು, ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಅರಸೀಕೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ರಂಗನಾಥ ಅಲಿಯಾಸ್​ ಬ್ರೂಸ್ಲಿ ರಂಗ (28) ಹಾಗೂ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ರಾಜಪುರ ಗ್ರಾಮದ ಮಂಜ ಅಲಿಯಾಸ್​ ಮಟ್ಟನವಿಲೆ ಮಂಜ ಆರೋಪಿಗಳಾಗಿದ್ದು, ರಂಗನಾಥ್​ನನ್ನು ಬಂಧಿಸಲಾಗಿದ್ದರೆ, ಮಟ್ಟನವಿಲೆ ಮಂಜ ಪರಾರಿಯಾಗಿದ್ದಾನೆ.

ಎಸ್ಪಿ ಆರ್.ಶ್ರೀನಿವಾಸಗೌಡ

ಇನ್ನು ಆರೋಪಿ ಬ್ರೂಸ್ಲಿ ರಂಗ, ಪರಾರಿಯಾದ ಮಂಜ, ರಾಮನಗರ ಜಿಲ್ಲೆಯ ಬಿಡದಿಯ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 3 ಬೈಕ್ ಕಳವು ಪ್ರಕರಣ, ಸೋಲೂರು ಪೊಲೀಸ್ ಠಾಣೆಯ ಸರಹದ್ದಿನಲ್ಲಿ 1, ಬೆಂಗಳೂರು ನಗರದ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ 4, ಪೀಣ್ಯ ಪೊಲೀಸ್ ಠಾಣೆಯಲ್ಲಿ 3, ನೆಲಮಂಗಲ ಪೊಲೀಸ್ ಠಾಣೆಯಲ್ಲಿ 1 ಹಾಗೂ ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ 3 ಬೈಕ್​​ಗಳ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು, 6 ರಾಯಲ್ ಎನ್​​​ಫೀಲ್ಡ್, 2 ಬಜಾಜ್ ಡ್ಯೂಕ್ ಕೆಟಿಎಂ, 2 ಬಜಾಜ್ ಪಲ್ಸರ್, 2 ಹೋಂಡಾ ಡಿಯೋ ಬೈಕ್ ಹಾಗೂ 1 ಅಪಾಚೆ ಬೈಕ್ ಸೇರಿ 15 ಬೈಕ್​​ಗಳನ್ನ ಕಳ್ಳತನ ಮಾಡಿ ಮಾರಾಟ ಮಾಡಿದ್ರು.

ಓದಿ: ಮನೆಗೆ ಬೀಗ ಹಾಕುವ ಮುನ್ನ ಯೋಚಿಸಿ... ಈ ನಿಯಮ ಪಾಲಿಸಿ

ಡಿ. 20ರಂದು ಅರಸೀಕೆರೆ ರೈಲ್ವೆ ಸ್ಟೇಷನ್ ಬಳಿಯಿರುವ ಪಾಳು ಬಿದ್ದ ಜಾಗದಲ್ಲಿ ಇಬ್ಬರು ಆರೋಪಿಗಳು ಕಳ್ಳತನ ಮಾಡಿದ್ದ ಮೋಟಾರ್ ಬೈಕ್​​ಗಳ ನಂಬರ್ ಪ್ಲೇಟ್ ಬದಲಾವಣೆ ಮಾಡಿ, ಇಂಜಿನ್ ಮತ್ತು ನಂಬರ್ ಕಾಣದಂತೆ ಕಲ್ಲಿನಿಂದ ಉಜ್ಜಿ ಬೈಕ್​ಗಳನ್ನ ತೆಗೆದುಕೊಂಡು ಹೋಗಲು ಪ್ರಯತ್ನಿಸಿದಾಗ ಸ್ಥಳೀಯರ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಅವರನ್ನ ಹಿಡಿಯಲು ಪ್ರಯತ್ನಿಸಿದ್ದಾರೆ. ಆಗ ರಂಗ ಅಲಿಯಾಸ್​ ಬ್ರೂಸ್ಲಿ ಸಿಕ್ಕಿಬಿದ್ದಿದ್ದು, ಮತ್ತೊಬ್ಬ ಆರೋಪಿ ಮಟ್ಟನವಿಲೆ ಮಂಜ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದಾನೆ.

ಬಂಧಿತ ಆರೋಪಿಯಿಂದ 18 ಲಕ್ಷ ರೂ. ಬೆಲೆ ಬಾಳುವ 15 ದ್ವಿಚಕ್ರ ವಾಹನಗಳನ್ನ ವಶಪಡಿಸಿಕೊಂಡಿದ್ದು, ಬ್ರೂಸ್ಲಿ ರಂಗನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತೊಬ್ಬ ಆರೋಪಿಯಾದ ಮಟ್ಟನವಿಲೆ ಮಂಜನಿಗಾಗಿ ಬಲೆ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.