ETV Bharat / state

ಐದು ಗ್ಯಾರಂಟಿಗಳನ್ನು ಸರ್ಕಾರ ಕೊಡದೆ ಹೋದರೆ ಜೆಡಿಎಸ್​ನಿಂದ ಹೋರಾಟ: ಸಂಸದ ಪ್ರಜ್ವಲ್ ರೇವಣ್ಣ

author img

By

Published : Jul 4, 2023, 5:00 PM IST

Updated : Jul 4, 2023, 7:55 PM IST

jds-will-protest-if-government-does-not-give-five-guarantees-says-prajwal-revanna
ಐದು ಗ್ಯಾರಂಟಿಗಳನ್ನು ಸರ್ಕಾರ ಕೊಡದೆ ಹೋದರೆ ಜೆಡಿಎಸ್ ಹೋರಾಟ ಮಾಡುತ್ತದೆ: ಪ್ರಜ್ವಲ್ ರೇವಣ್ಣ

ಕಾಂಗ್ರೆಸ್ ಸರ್ಕಾರದ ಬಂಡವಾಳ ಜುಲೈ 7ರ ಬಜೆಟ್​ನಲ್ಲಿ ಬಯಲಾಗಲಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

ಸಂಸದ ಪ್ರಜ್ವಲ್ ರೇವಣ್ಣ

ಹಾಸನ: ಕಾಂಗ್ರೆಸ್​ ಬಂದ 24ಗಂಟೆಯಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದಿದ್ದರು. ಈಗ ಜುಲೈ ಮತ್ತು ಆಗಸ್ಟ್​ನಲ್ಲಿ ಪ್ರಾರಂಭ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಯಾವಾಗ ಪ್ರಾರಂಭವಾಗುತ್ತವೆ ಈ ಐದು ಯೋಜನೆಗಳು ಎಂದು ಸಂಸದ ಪ್ರಜ್ವಲ್ ರೇವಣ್ಣ ಪ್ರಶ್ನಿಸಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳಿಗಾಗಿ ಅರ್ಜಿ ಹಾಕಲು ಹೋದರೆ ಸೇವಾ ಸಿಂಧು ಸರ್ವರ್​ ಡೌನ್​ ಎಂದು ಬರುತ್ತಿದೆ. ಎಷ್ಟೋ ಕಡೆ ಸಮಸ್ಯೆಯಾಗಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈಗಾಗಲೇ ರಾಜ್ಯ ಸರ್ಕಾರ ಆಯಾ ಸಚಿವರಿಗೆ ಮುಂದಿನ ಒಂದೂವರೆ ವರ್ಷ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಸಿಗುವುದಿಲ್ಲ ಎಂದು ತಾಕೀತು ಮಾಡಿದ್ದಾರೆ. ಅಂದಮೇಲೆ ಮುಂದಿನ ರಾಜ್ಯ ಬಜೆಟ್ ಯಾವ ರೀತಿ ಇರಲಿದೆ ಎನ್ನುವುದನ್ನು ನೀವು ಊಹಿಸಬಹುದು. ಮುಂದಿನ ಬಜೆಟ್ ನಲ್ಲಿ ಬೆಲೆ ಏರಿಕೆ ಸೇರಿದಂತೆ ರಾಜ್ಯಕ್ಕೆ ಯಾವುದೇ ಹೊಸ ಯೋಜನೆಗಳು ಜಾರಿಯಾಗುವ ನಿರೀಕ್ಷೆ ಸಾಧ್ಯವಿಲ್ಲ. ಚುನಾವಣಾ ಪೂರ್ವ ಕಾಂಗ್ರೆಸ್​ ಪಕ್ಷದವರು ರಾಜ್ಯದ ಜನರಿಗೆ ನೀಡಿದ ಆಶ್ವಾಸನೆಯ 5 ಗ್ಯಾರಂಟಿಗಳನ್ನು ಈಡೇರಿಸಲು ಹೆಣಗಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಬಂಡವಾಳ ಜುಲೈ 7ರ ಬಜೆಟ್​ನಲ್ಲಿ ಬಯಲಾಗಲಿದೆ ಎಂದರು.

ಗ್ಯಾರಂಟಿ ಯೋಜನೆಗಳ ಭರವಸೆಯನ್ನು ಯಾರು ಕೊಟ್ಟಿದ್ದಾರೋ ಅವರೇ ಈಡೇರಿಸಬೇಕು. ಭರವಸೆ ಕಾಂಗ್ರೆಸ್ ಪಕ್ಷ ಕೊಟ್ಟು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಬಾರದು. ಈಗಾಗಲೇ ಕೇಂದ್ರ ಸರ್ಕಾರವು 5 ಕೆಜಿ ಅಕ್ಕಿ ಕೊಡುತ್ತಿದೆ. ಕಾಂಗ್ರೆಸ್ ಪಕ್ಷ ಕೊಟ್ಟಂತ ಭರವಸೆ ಪ್ರಕಾರ 10 ಕೆಜಿ ಅಕ್ಕಿ ಕೊಡಬೇಕು. ಐದು ಗ್ಯಾರಂಟಿಗಳನ್ನು ಕೊಡದೆ ಹೋದರೆ ಸರ್ಕಾರದ ವಿರುದ್ಧ ಜೆಡಿಎಸ್ ಹೋರಾಟ ಮಾಡುತ್ತದೆ ಎಂದು ಎಚ್ಚರಿಕೆ ರವಾನಿಸಿದರು.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡುವುದಿಲ್ಲ ಎಂದು ಜೆಡಿಎಸ್​ನ ಯಾವುದೇ ನಾಯಕರು ಬಹಿರಂಗವಾಗಿ ಹೇಳಿಕೆ ನೀಡಿಲ್ಲ ಹಾಗೂ ಚರ್ಚೆ ನಡೆಸಿಲ್ಲ. ಯಾವುದೇ ಊಹಾಪೂಹದ ಸುದ್ದಿಗಳಿಗೆ ನಾನು ಉತ್ತರ ಕೊಡುವುದಿಲ್ಲ. ಮಾಧ್ಯಮದಲ್ಲಿ ಬಂದಂತಹ ವರದಿಗೆ ಮಾತ್ರ ಹೆಚ್​ ಡಿ ರೇವಣ್ಣ ಅವರು ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಲೋಕಸಭಾ ಸದಸ್ಯನಾಗಿ ನನಗೆ ಮನಶಾಂತಿ ಇದೆ. ಸಿಕ್ಕಂತ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದೇನೆ. ಯಾವುದೇ ಸಂದರ್ಭದಲ್ಲಿ ಜನರ ಜೊತೆ ಇದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಸರ್ಕಾರ ಹಾಗೂ ನನ್ನ ವ್ಯಾಪ್ತಿಯಲ್ಲಿ ಆಗಬೇಕಾದ ಕೆಲಸವನ್ನು ಜನರಿಗೆ ಮಾಡಿಕೊಟ್ಟಿದ್ದು, ಪ್ರತಿ ವಾರ ಮೂರು ಪಂಚಾಯಿತಿಗಳಿಗೆ ಭೇಟಿ ನೀಡಿ ಅಧಿಕಾರಿಗಳ ಸಮ್ಮುಖದಲ್ಲಿ ಜನರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ. ಮುಂದಿನ ಎಂಟು ತಿಂಗಳು ಸಹ ಇದೇ ಕಾರ್ಯ ಚಟುವಟಿಕೆ ಮುಂದುವರೆಯಲಿದೆ ಎಂದು ಹೇಳಿದರು.

ಇದನ್ನೂ ಓದಿ: ದಾಖಲೆ ಬಿಡುಗಡೆ ಮಾಡುತ್ತೇನೆ, ಆ ಮಂತ್ರಿಯನ್ನು ವಜಾ ಮಾಡುತ್ತೀರಾ?: ಸರ್ಕಾರಕ್ಕೆ ಹೆಚ್​ಡಿಕೆ ಸವಾಲ್​

Last Updated :Jul 4, 2023, 7:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.