ETV Bharat / state

ಲೂಟಿ ಹೊಡೆಯುತ್ತಿರುವ ಅಧಿಕಾರಿಗಳೆಲ್ಲ ಜೈಲಿಗೆ ಹೋಗಲಿದ್ದೀರಿ: ಬರೆದಿಟ್ಟುಕೊಳ್ಳುವಂತೆ ರೇವಣ್ಣ ಕಿಡಿ

author img

By

Published : Nov 19, 2020, 9:00 PM IST

HD Revanna angry on corrupt officials
ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆ

ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ)ಯ ಸಭೆ ನಡೆಸಲಾಯಿತು. ಸಭೆಯಲ್ಲಿ ಎತ್ತಿನಹೊಳೆ ವಿಷಯ ಸೇರಿದಂತೆ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ಚರ್ಚೆ ಮಾಡಲಾಯಿತು.

ಹಾಸನ: ಸಕಲೇಶಪುರದ ಎತ್ತಿನಹೊಳೆ ಯೋಜನೆ ಕಾಮಗಾರಿಗಯಲ್ಲಿ ಅಧಿಕಾರಿಗಳು ಲೂಟಿ‌ ಹೊಡೆಯುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಒಂದಲ್ಲಾ ಒಂದು ದಿನ ನೀವೆಲ್ಲ ಜೈಲಿಗೆ ಹೋಗಲಿದ್ದೀರಿ. ಇದನ್ನು ಬರೆದಿಟ್ಟುಕೊಳ್ಳಿ ಎಂದು ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಕಿಡಿಕಾರಿದರು.

ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ‘ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ)ಯ ಎರಡನೇ ದಿನವಾದ ಗುರುವಾರದ ಸಭೆಯಲ್ಲಿ ಎತ್ತಿನಹೊಳೆ ವಿಷಯ ಚರ್ಚೆಗೆ ಬಂತು. ಈ ವೇಳೆ ಮಾತನಾಡಿದ ಅವರು, ಎತ್ತಿನಹೊಳೆ ಎಂಜಿನಿಯರ್​ ಶಾಸಕರು ಕರೆದರೂ ಬರುವುದಿಲ್ಲ. ಇತ್ತ ಕೆಲಸ ಮಾಡಲೂ ಸಹ ಬಿಡುತ್ತಿಲ್ಲ. ನಾಲಾ ವಿಭಾಗದ ಎಂಜಿನಿಯರ್ ಬಂದಿದ್ದಾರೆ. ಕೂಡಲೇ ಸಭೆಗೆ ಎಂಜಿನಿಯರ್ ಕರೆಸಿ ಎಂದು ಜಿಲ್ಲಾಧಿಕಾರಿಗೆ ಒತ್ತಡ ತಂದರು.

ಜಿಲ್ಲೆಗೆ ಮಂತ್ರಿಗಳು ಬಂದಾಗಲೂ ಸರಿಯಾಗಿ ಶಿಷ್ಟಾಚಾರ ಪಾಲನೆ ಮಾಡುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರಲ್ಲದೇ ಕೇಳಿದ ಯಾವುದೇ ವರದಿ ನೀಡುತ್ತಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೇಲೂರು ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ತಾಲೂಕಿನಲ್ಲಿ 37 ಕಿ.ಮೀ. ಎತ್ತಿನಹೊಳೆ ಯೋಜನೆ ಹಾದು ಹೋಗಲಿದೆ. ಸಾಕಷ್ಟು ಜಮೀನು ಕಳೆದುಕೊಂಡಿದ್ದೇವೆ. ತಾಲೂಕಿಗೆ ಇತ್ತ ಎತ್ತಿನಹೊಳೆ ನೀರೂ ಇಲ್ಲ, ಪರಿಹಾರದ ಹಣ ಕೂಡ ಬಿಡುಗಡೆಯಾಗಿಲ್ಲ ಎಂದು ಅಳಲು ತೋಡಿಕೊಂಡರು.

ಇನ್ನು ಭಾರಿ ವಾಹನಗಳು ರಸ್ತೆಯಲ್ಲಿ ಒಡಾಡುತ್ತಿದ್ದರು ಗಣಿ ಮತ್ತು ಭೂ ವಿಜ್ಞಾನ ಸಾರಿಗೆ ಇಲಾಖೆ ಏನು ಮಾಡುತ್ತಿದೆ ಎಂದು ಶಾಸಕ ಹೆಚ್.ಕೆ.ಕುಮಾರಸ್ವಾಮಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರು.

ವಾಹನದಲ್ಲಿ 18 ಟನ್​ಗಿಂತ ಹೆಚ್ಚು ತುಂಬುವಂತಿಲ್ಲ. ಆದರೆ ಎಷ್ಟೋ ವಾಹನಗಳು ಕಾನೂನು ಮೀರಿ ಓಡಾಡುತ್ತಿವೆ. ವಾಹನಗಳನ್ನು ಸೀಜ್ ಮಾಡಿದಾಗಲೂ ಪೊಲೀಸರು ಹಣ ಪಡೆದು ವಾಹನ ಬಿಡುತ್ತಿದ್ದಾರೆ ಎಂದು ಸರ್ಕಲ್ ಇನ್ಸ್​ಪೆಕ್ಟರ್​ ಒಬ್ಬರ ಮೇಲೆ ಪ್ರಜ್ವಲ್ ರೇವಣ್ಣ ಆರೋಪ ಮಾಡಿದರು. ಅಲ್ಲದೇ ಈ ಬಗ್ಗೆ ಮಫ್ತಿಯಲ್ಲಿ ಹೋಗಿ ತಪಾಸಣೆ ಮಾಡಿದರೆ ಎಲ್ಲವೂ ಬಯಲಿಗೆ ಬರಲಿದೆ ಎಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆ

ಮರಳು ಗಣಿಗಾರಿಕೆ ಬಗ್ಗೆ ಮಾತಿಗಿಳಿದ ಸಂಸದರು, ಎಷ್ಟು ಪ್ರಕರಣ ದಾಖಲು ಮಾಡಿದ್ದೀರಿ ಎಂದು ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಪದ್ಮಜಾ ಅವರಿಗೆ ಪ್ರಶ್ನಿಸಿದರು. ಬೇಲೂರು ಮತ್ತು ಸಕಲೇಶಪುರದಲ್ಲಿ ಎಷ್ಟು ಕೇಸ್ ದಾಖಲಿಸಿದ್ದೀರಿ? ಜಿಲ್ಲೆಯಲ್ಲಿ ಆಕ್ರಮ ಗಣಿಗಾರಿಕೆ ಹೆಚ್ಚಿದ್ದು ದಾಳಿ ನಡೆಸಿ ಈ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಮಾತನಾಡಿ, 23 ಲೀಗಲ್ ರಾಂಪು ಇದ್ದು, 5 ಪ್ರಕರಣ ದಾಖಲು ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಶಾಸಕರ ಎಚ್ಚರಿಕೆ:

ಶಾಸಕ ಶಿವಲಿಂಗೇಗೌಡ ಮಾತನಾಡಿ, ತುಮಕೂರು ಮತ್ತು ಶಿವಮೊಗ್ಗ ರಾಷ್ತ್ರೀಯ ಹೆದ್ದಾರಿಯ ಕಳಪೆ ಕಾಮಗಾರಿ ನಡೆಯುತ್ತಿದೆ. ಆಗಿಲ್ಲ ಎನ್ನುವುದಾದರೆ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಅರಸೀಕೆರೆ ರಿಂಗ್ ರಸ್ತೆಯಲ್ಲಿ ಗಿಡಗಳು ಬೆಳೆದು ನಿಂತಿವೆ. ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಮೃತದೇಹದೊಂದಿಗೆ ಸ್ಥಳೀಯರು ನಮ್ಮಗಳ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಜನರಿಗೆ ನಾನು ಹೇಗೆ ಉತ್ತರ ನೀಡಲಿ ಎಂದು ಆತಂಕ ವ್ಯಕ್ತಪಡಿಸಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.