ETV Bharat / state

ಕಾಂಗ್ರೆಸ್​ನಲ್ಲಿ ಮೂರು ಗುಂಪುಗಳಾಗಿವೆ, ಒಬ್ಬೊಬ್ಬರದು ಒಂದೊಂದು ಗುಂಪು : ಗೋವಿಂದ ಕಾರಜೋಳ

author img

By ETV Bharat Karnataka Team

Published : Nov 5, 2023, 7:20 PM IST

ಮಾಜಿ ಸಚಿವ ಗೋವಿಂದ ಕಾರಜೋಳ
ಮಾಜಿ ಸಚಿವ ಗೋವಿಂದ ಕಾರಜೋಳ

ಐದು ಗ್ಯಾರಂಟಿಗಳು ನಿಮ್ಮ ಪ್ರಣಾಳಿಕೆಯಂತೆ ನಡೆಯಲಿ. ಇಲ್ಲವಾದರೆ ಜನರನ್ನು ಧಂಗೆ ಏಳುವಂತೆ ಮಾಡುತ್ತೇವೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ.

ಮಾಜಿ ಸಚಿವ ಗೋವಿಂದ ಕಾರಜೋಳ

ಧಾರವಾಡ : ಕಾಂಗ್ರೆಸ್​ನಲ್ಲಿ ಮೂರು ಗುಂಪುಗಳಾಗಿವೆ. ಒಬ್ಬೊಬ್ಬರದು ಒಂದೊಂದು ಗುಂಪು. ಪರಮೇಶ್ವರದ್ದು ದಲಿತರ ಗುಂಪು. ಸಿದ್ದರಾಮಯ್ಯನವರದು ಹಿಂದುಳಿದವರ ಗುಂಪು. ಡಿಕೆಶಿಯದ್ದು ಗೌಡರ ಗುಂಪಾಗಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪರಮೇಶ್ವರ್ ಮನೆಯಲ್ಲಿ ದಲಿತರ ಸಭೆ ಮಾಡುತ್ತಾರೆ‌. ಸಿದ್ದರಾಮಯ್ಯ ಪರವಾಗಿ ಹಿಂದುಳಿದವರ ಸಭೆ ಆಯ್ತು. ಸಿದ್ದರಾಮಯ್ಯ ಪರವಾಗಿ ಡಿನ್ನರ್ ಸಭೆ ಆಗಿತ್ತು. ಆದರೆ ಯಾರೂ ಎಚ್‌.ಕೆ.‌ ಪಾಟೀಲರನ್ನು ಕರೆದಿರಲಿಲ್ಲ. ಅವರೊಬ್ಬ ಪ್ರತಿಷ್ಠಿತ ರಾಜಕಾರಣಿ. ಸಿಎಂ ಆಗಲಿಕ್ಕೆ ಡಿಕೆಶಿ ಎಲ್ಲ ಕಡೆ ಓಡಾಡುತ್ತಿದ್ದಾರೆ. ಕುಮಾರಸ್ವಾಮಿ ಕಡೆ ಕೂಡ ಹೋಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಬಿಜೆಪಿ ಕಣ್ಣೀರು ಹಾಕಿಸಿದೆ ಅಂತಾ ಆರೋಪಿಸಿದ್ದರು. ಆದರೆ ಕಾಂಗ್ರೆಸ್‌ನಲ್ಲಿ ಲಿಂಗಾಯತರ ಪರಿಸ್ಥಿತಿ ಈಗ ಎರಡನೇ ದರ್ಜೆ ಪ್ರಜೆ ಆಗಿದೆ. ಲಿಂಗಾಯತರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

7 ಜನ ಮಂತ್ರಿಗಳು ಗೌಡರ ಲೆಕ್ಕದಲ್ಲಿ ಇಲ್ಲ, ಕುಲಕರ್ಣಿ ಬುಕ್‌ನಲ್ಲಿಯೂ ಇಲ್ಲ. ಲಿಂಗಾಯತರ ಸ್ಥಿತಿ ಅಲೆಮಾರಿಗಳ ಪರಿಸ್ಥಿತಿ ಆದಂಗೆ ಆಗಿದೆ. ಅಪಪ್ರಚಾರ ಮಾಡಿ ವೋಟು ಹಾಕಿಸಿಕೊಂಡರು. ಕಾಂಗ್ರೆಸ್ ಮೊದಲಿನಿಂದಲೂ ಲಿಂಗಾಯತರಿಗೆ ಮರ್ಯಾದೆ ಕೊಡಲಿಲ್ಲ. ಎಸ್​ ನಿಜಲಿಂಗಪ್ಪ ಅವರು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಆಗಿದ್ರು. ಕಾಂಗ್ರೆಸ್ ಇಬ್ಭಾಗ ಮಾಡಿ ಅವರನ್ನ ಹೊರಗೆ ದಬ್ಬಿದ್ರು. ವಿರೇಂದ್ರ ಪಾಟೀಲ್ ಅವರನ್ನ ಸಿಎಂ ಹುದ್ದೆಯಿಂದ ಡಿಸ್​ಮಿಸ್​ ಮಾಡಿದ್ರು. ರಾಜಶೇಖರಮೂರ್ತಿಯವರನ್ನು ಕಾಂಗ್ರೆಸ್​ನಿಂದ ವಜಾ ಮಾಡಿದ್ರು. ಇದು ಕಾಂಗ್ರೆಸ್ ನೀತಿ. ಶಾಮನೂರ ಶಿವಶಂಕರಪ್ಪ ಕಾಂಗ್ರೆಸ್ ಖಜಾಂಚಿಯಾಗಿದ್ದವರು. ಈಗ ಪರಿಸ್ಥಿತಿ ಏನಾಗಿದೆ ನೋಡಿ ಅಂತಾ ಕಾರಜೋಳ ಹೇಳಿದ್ರು.

ರಾಜ್ಯ ಸರ್ಕಾರ ಆದಷ್ಟು ಬೇಗ ಬರ ಪರಿಹಾರ ಕಾರ್ಯ ಆರಂಭಿಸಬೇಕು. ಇಲ್ಲದೆ ಹೋದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಸರ್ಕಾರದ ವಿರುದ್ಧ ಜನ ಧಂಗೆ ಏಳುವಂತೆ ಮಾಡುತ್ತೇವೆ. ಸಿಎಂ ಹಾಗೂ ಅವರ ಪಾರ್ಟನರ್ ಡಿಕೆಶಿಗೆ ನಾವು ಒತ್ತಾಯ ಮಾಡುತ್ತೇವೆ. ಬರ ಪರಿಹಾರ ಕೆಲಸ ಆರಂಭಿಸಿ ಎಂದು ಹೇಳುತ್ತೇವೆ. ಬಡವರ ಜೀವನ ಮೋದಿ ಅಕ್ಕಿ ಮೇಲೆ ನಡೆದಿದೆ ಎಂದರು.

5 ಗ್ಯಾರಂಟಿಗಳು ನಿಮ್ಮ ಪ್ರಣಾಳಿಕೆಯಂತೆ ನಡೆಯಲಿ. ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳ ಆರಂಭ ಮಾಡಬೇಕು. ಕೃಷ್ಣ ನದಿಯ ಯೋಜನೆ ಆರಂಭಿಸಬೇಕು. ರೈತರಿಗೆ ಪರಿಹಾರ‌ ಕೊಡಬೇಕು. ಮಹದಾಯಿಗಾಗಿ ಯಡಿಯೂರಪ್ಪ ಸ್ಪೆಷಲ್ ಗೆಜೆಟ್ ಮಂಡಿಸಿದ್ದರು. 995 ಕೋಟಿ ರೂ. ಟೆಂಡರ್ ಕೊಡಲಾಗಿದೆ. ಕುಡಿಯುವ ನೀರಿನ ಯೋಜನೆ ಎಂದು ಎಲ್ಲ ಕ್ಲಿಯರ್ ಮಾಡಿಸಿಕೊಡಲಾಗಿದೆ. ಅದು ಈಗ ಆಗುತ್ತಿಲ್ಲ. ಸಿದ್ದರಾಮಯ್ಯ ಸಾವಿರ ಕೋಟಿ‌ ಬಜೆಟ್ ತೆಗೆದು ಹಾಕಿದ್ರು. 75 ವರ್ಷದ ಇತಿಹಾಸದಲ್ಲಿ ಇಷ್ಟು ನೌಕರರ ವರ್ಗಾವಣೆ ಆಗಿಲ್ಲ. 5 ಸಾವಿರ ಕೋಟಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಮಾಜಿ ಸಚಿವ ಕಾರಜೋಳ ಕುಟುಕಿದರು.

ಬರಗಾಲದಲ್ಲಿಯೂ ತೆಲಂಗಾಣಕ್ಕೆ ಕಾಂಗ್ರೆಸ್ ಉಸ್ತುವಾರಿ ನೇಮಕ ವಿಚಾರಕ್ಕೆ ಮಾತನಾಡಿ, ಸಿದ್ದರಾಮಯ್ಯರಿಗೆ ಯಾವ ಪರಿಸ್ಥಿತಿ ಬಂದಿದೆ ಗೊತ್ತಾ? ಮಂತ್ರಿಗಳಿಗೆ ದುಂಬಾಲು ಬಿದ್ದು ಬರ ವೀಕ್ಷಣೆಗೆ ಕಳುಹಿಸಬೇಕಾಗಿದೆ. ಮಂತ್ರಿಗಳಿಗೆ ಊಟ, ತಿಂಡಿ ಕೊಟ್ಟು ಗದ್ದ-ತುಟಿ ಹಿಡಿದು ಕೇಳಿಕೊಳ್ಳಬೇಕಾಗಿದೆ. ಬರ ಪರಿಶೀಲನೆಗೆ ಹೋಗಿ ಅಂತಾ ವಿನಂತಿ ಮಾಡಿಕೊಳ್ಳೋ ಕೆಟ್ಟ ಪರಿಸ್ಥಿತಿ ಬಂದಿದೆ. ಯಾರಿಗೂ ಕಳಕಳಿ, ಕಾಳಜಿ ಇಲ್ಲ ಎಂದು ಕಾರಜೋಳ ಆರೋಪಿಸಿದರು.

ರಾಜ್ಯದಲ್ಲಿ ಸುಳ್ಳು ಭರವಸೆ ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬಂದು 5 ತಿಂಗಳಾಯ್ತು. ಸರ್ಕಾರದ ಆಡಳಿತ ಕುಸಿದಿದೆ. 50 ವರ್ಷದ ನಂತರ ಭೀಕರ ಬರ ತಾಂಡವವಾಡುತ್ತಿದೆ. ಮುಂಗಾರು ಮತ್ತು ಹಿಂಗಾರು ಮಳೆ ಆಗದೇ ಸಂಕಷ್ಟ ಉಂಟಾಗಿದೆ. ಅಲ್ಪ ಸ್ವಲ್ಪ ಬೆಳೆದ ಬೆಳೆ ಉಳಿಸಿಕೊಳ್ಳಲು ವಿದ್ಯುತ್ ಕೊಡಬೇಕಿತ್ತು. ಆದರೆ ಸರ್ಕಾರ ವಿದ್ಯುತ್ ಕೊಡಲಿಲ್ಲ. ಸರಿಯಾಗಿ ಎರಡು ಗಂಟೆ ಬರುತ್ತಿಲ್ಲ. ಲೋಡ್ ಶೆಡ್ಡಿಂಗ್ ನಡೆದಿದೆ. ಇದ್ದ ನೀರು ಬಳಕೆ ಮಾಡಲು‌ ವಿದ್ಯುತ್ ಇಲ್ಲ. ಮಕ್ಕಳಿಗೆ ನಿರಂತರ ಜ್ಯೋತಿ ಅಡಿ ಅಭ್ಯಾಸಕ್ಕೆ ವಿದ್ಯುತ್ ಕೊಡಬೇಕು. ವೀರಾವೇಶದಿಂದ ಅಭಿವೃದ್ಧಿ ಮಾಡುವ ಮಾತನ್ನು ಹೇಳಿದ್ದರು.‌ ಶೇ. 90ರಷ್ಟು ಇದ್ದ ಆದಾಯ ಶೇ.10 ರಷ್ಟು ಜನ ಮಾತ್ರ ತಿಂತಾರೆ ಅಂತಿದ್ರು. ಸರ್ವರಿಗೂ ಸಮಪಾಲು ಸಾಮಾಜಿಕ ನ್ಯಾಯ ಎಂದಿದ್ದರು. ಅದು ಈಗ ಎಲ್ಲಿದೆ. ಸಿದ್ದರಾಮಯ್ಯ ಗಿಮಿಕ್ ಮಾಡುತ್ತ ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು.

ಬರ ಘೋಷಣೆ ಮಾಡಿದ್ದಾರೆ. 10 ಕೋಟಿ ರೂ. ಪ್ರತಿ ತಾಲೂಕಿಗೆ ಬರ ಪರಿಹಾರ ಕಾರ್ಯಕ್ಕೆ ನೀಡಬೇಕು. ಧಾರವಾಡ ಜಿಲ್ಲೆಯಲ್ಲಿಯೂ ಜನ ಗೂಳೆ ಹೊರಟಿದ್ದಾರೆ. ಅದನ್ನು ತಡೆಯುವ ಕಾರ್ಯ ಆಗಬೇಕು. ರೈತರ ಜಾನುವಾರುಗಳಿಗೆ ಮೇವು ಬ್ಯಾಂಕ್ ಕೊಡಬೇಕು. ಕುಡಿಯುವ‌ ನೀರಿನ ಸಮಸ್ಯೆ ಬಗೆಹರಿಸಬೇಕು. ಧಾರವಾಡ ಜಿಲ್ಲೆಗೆ 68 ಕೆರೆಗಳನ್ನು ಮಲಪ್ರಭಾ ಬಲ ದಂಡೆಯಿಂದ ತುಂಬಿಸ್ತಾರೆ. ಕೆರೆ ಕಟ್ಟೆ ತುಂಬಿಸಿ‌ಕೊಡಬೇಕು ಎಂದು ಕಾರಜೋಳ ಆಗ್ರಹಿಸಿದರು.

ಇದನ್ನೂ ಓದಿ: ದೌರ್ಜನ್ಯಕ್ಕೊಳಗಾದ ದಲಿತ ಮಹಿಳೆ ನಿವಾಸಕ್ಕೆ ಬಿಜೆಪಿ ನಿಯೋಗ ಭೇಟಿ: ಸಚಿವ ಸ್ಥಾನದಿಂದ ಸುಧಾಕರ್ ಕೈಬಿಡುವಂತೆ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.