ETV Bharat / state

ಚಂದ್ರಯಾನ 3: ಹುಕ್ಕೇರಿ, ಸಿದ್ಧಾರೂಢ ಮಠದಲ್ಲಿ ವಿಶೇಷ ಪೂಜೆ

author img

By ETV Bharat Karnataka Team

Published : Aug 23, 2023, 12:20 PM IST

Updated : Aug 23, 2023, 12:41 PM IST

pooja for the success of Chandrayaan 3
ಚಂದ್ರಯಾನ 3 ಯಶಸ್ಸಿಗೆ ಪೂಜೆ

Chandrayaan 3 mission: ಇಸ್ರೋದ ಮಹತ್ವಾಕಾಂಕ್ಷೆ ಸಾಧನೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಎಲ್ಲೆಡೆ ವಿಶೇಷ ಪೂಜೆ ನಡೆಯುತ್ತಿದೆ.

ಚಂದ್ರಯಾನ 3 ಯಶಸ್ಸಿಗೆ ಪೂಜೆ

ಚಿಕ್ಕೋಡಿ, ಹುಬ್ಬಳ್ಳಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ತರ ಸಾಧನೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಇಸ್ರೋ ಕೈಗೊಂಡಿರುವ ಅತ್ಯಂತ ಮಹತ್ವಾಕಾಂಕ್ಷೆಯ ಚಂದ್ರಯಾನ 3 ಯಶಸ್ಸಿಗೆ ಎಲ್ಲೆಡೆಯಿಂದ ಶುಭ ಹಾರೈಕೆಗಳು ಹರಿದು ಬರುತ್ತಿದೆ. ದೇಶ ಮಾತ್ರವಲ್ಲದೇ ಜಗತ್ತಿನಾದ್ಯಂತ ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್‌ ಆಗಲೆಂದು ದೇಶಾದ್ಯಂತ ಧಾರ್ಮಿಕ ಕೇಂದ್ರಗಳಲ್ಲಿ ಹೋಮ, ಹವನ, ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಕೆ ಮಾಡಲಾಗುತ್ತಿದೆ.

ಚಿಕ್ಕೋಡಿ: ಹುಕ್ಕೇರಿ ಹಿರೇಮಠದಲ್ಲಿ 108 ವೇದಪಟುಗಳು ರುದ್ರ ಹಾಗೂ ಗಣ ಹೋಮ, ಪೂಜೆ ಸಲ್ಲಿಸಿ ಚಂದ್ರಯಾನ 3ರ ಯಶಸ್ವಿಗೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಯಾಗ ಶಾಲೆಯಲ್ಲಿ ಹೋಮ ಆಯೋಜನೆ ಮಾಡಲಾಗಿತ್ತು. ವೇದ ಗುರುಗಳಾದ ಉದಯ ಶಾಸ್ತ್ರಿಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಹೋಮ ಹವನದ ಎದುರು ಭಾರತ ರಾಷ್ಟ್ರ ಧ್ವಜವನ್ನು ಹಿಡಿದು ಮಂತ್ರ ಘೋಷಗಳೊಂದಿಗೆ ದೇಶಕ್ಕೆ ಒಳಿತಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ಇದೇ ವೇಳೆ, ಹುಕ್ಕೇರಿ ಶ್ರೀಗಳಾದ ಚಂದ್ರಶೇಖರ್ ಶಿವಾಚಾರ್ಯಗಳು ಮಾತನಾಡಿ, ’’ಭಾರತದ ಹೆಮ್ಮೆಯ ಚಂದ್ರಯಾನ 3ರ ಯಶಸ್ಸಿಗೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ. ಇಷ್ಟಲಿಂಗಕ್ಕೆ ರುದ್ರಾಭಿಷೇಕ ಸಲ್ಲಿಸಲಾಯಿತು. ಇಸ್ರೋ ವಿಜ್ಞಾನಿಗಳ ಸತತ ಪರಿಶ್ರಮಕ್ಕೆ ಯಶಸ್ವಿ ಸಿಗಲೆಂದು ದೇವರಲ್ಲಿ ಪ್ರಾರ್ಥನೆ ಕೂಡ ಸಲ್ಲಿಸಲಾಗಿದೆ. ಶ್ರೀಮಠದಲ್ಲಿ 108 ವೇದಪಟುಗಳಿಂದ ರುದ್ರಯಾಗವನ್ನು ನೆರವೇರಿಸಲಾಗಿದೆ. ಇದು ಭಾರತದ ಹೆಮ್ಮೆಯ ಚಂದ್ರಯಾನವಾಗಿದ್ದು, ಯಶಸ್ವಿಯಾಗಲಿ ಎಂದು ನಾವು ಶುಭ ಹಾರೈಸುತ್ತೇವೆ’’ ಎಂದು ತಿಳಿಸಿದರು.

ಹುಬ್ಬಳ್ಳಿ: ಚಂದ್ರಯಾನ 3 ಯೋಜನೆ ಯಶಸ್ವಿಯಾಗಲಿ ಎಂದು ಹುಬ್ಬಳ್ಳಿ ನಗರದ ಸಿದ್ಧಾರೂಢ ಮೂರ್ತಿಗೆ ರುದ್ರಾಭಿಷೇಕ ಮತ್ತು ವಿಶೇಷ ಪೂಜೆ ಸಲ್ಲಿಸಲಾಯಿತು. ಸಿದ್ಧಾರೂಢ ಮಠದಲ್ಲಿ ಚಂದ್ರಯಾನ ರಾಕೆಟ್ ಭಾವಚಿತ್ರ ಮತ್ತು ಧ್ವಜ ಹಿಡಿದು ವಿಶೇಷ ಪೂಜೆ ಸಲ್ಲಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಭಕ್ತರು ಪೂಜೆ ಸಲ್ಲಿಸಿ, ಭಾರತೀಯರ ಕನಸು ನನಸಾಗಲು ಮತ್ತು ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ಮೇಲೆ ಇಳಿಯಲೆಂದು ಪ್ರಾರ್ಥನೆ ಸಲ್ಲಿಸಿದರು.

ಇದನ್ನೂ ಓದಿ: ಚಂದ್ರಯಾನ 3 ಯಶಸ್ವಿಯಾಗಲೆಂದು ದೇಶ, ವಿದೇಶಗಳಲ್ಲಿ ಪ್ರಾರ್ಥನೆ: ಹೋಮ, ಹವನ, ಪೂಜೆ ನಡೆಸುತ್ತಿರುವ ಭಕ್ತರು

ಚಂದ್ರನ ಮೇಲೆ ವಿಕ್ರಮ್​ ಲ್ಯಾಂಡರ್​ ಮೊದಲೇ ನಿಗದಿ ಮಾಡಿದ ಸಮಯದಲ್ಲಿ ಲ್ಯಾಂಡ್​ ಆಗಲಿದೆ. ಯೋಜನೆ ಪ್ರಕಾರ ಎಲ್ಲವೂ ನಡೆಯಲಿದೆ. ಸುರಕ್ಷಿತ ಲ್ಯಾಂಡ್​ಗೆ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಇಸ್ರೋ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಇಂದು ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರಯಾನ 3 ಲ್ಯಾಂಡ್​ ಆಗಲಿದೆ.

ಇದನ್ನೂ ಓದಿ: ಚಂದ್ರಯಾನ ಯೋಜನೆಯೇ ಒಂದು ದೊಡ್ಡ ಯಶಸ್ಸು: ನಾಸಾ ಮಾಜಿ ಅಧಿಕಾರಿ ಮೈಕ್​ ಗೋಲ್ಡ್​​

Last Updated :Aug 23, 2023, 12:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.