ETV Bharat / state

ಭಜನೆ, ಮನವಿ ಇನ್ಮೇಲೆ ಮಾಡಲ್ಲ, ಇನ್ನೇನಿದ್ರು ನೇರವಾಗಿ ನುಗ್ಗೋದೆ: ಮುತಾಲಿಕ್​ ಆಕ್ರೋಶ

author img

By

Published : Aug 23, 2022, 5:21 PM IST

Pramod Muthalik
ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್​ ಮುತಾಲಿಕ್

ಪೊಲೀಸ್ ಇಲಾಖೆ ಗಣೇಶ ಮಂಡಳಿಯವರಿಗೆ ಡಿಜೆ ನಿಷೇಧಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ ಅವರು ಸುಪ್ರೀಂ ಕೋರ್ಟ್ ಆದೇಶ ತೋರಿಸುತ್ತಾರೆ. ಅದೇ ಆದೇಶ ಪ್ರಾರ್ಥನಾ ಮಂದಿರಗಳ ಮೈಕ್ ಬಗ್ಗೆಯೂ ಹೇಳಿದೆಯಲ್ಲವೇ? ಹಾಗಾದರೆ ಅದನ್ನೇಕೆ ಪಾಲಿಸುತ್ತಿಲ್ಲ ಎಂದು ಪ್ರಮೋದ್​ ಮುತಾಲಿಕ್ ಪ್ರಶ್ನಿಸಿದ್ದಾರೆ.

ಧಾರವಾಡ: ಹಲವಾರು ವರ್ಷಗಳಿಂದ ನಾವು ಹೋರಾಟ ಮಾಡುತ್ತಾ ಬಂದಿದ್ದೇವೆ. ಸುಪ್ರೀಂ ಕೋರ್ಟ್ ಸಹ 15 ವರ್ಷದ ಹಿಂದೆಯೇ ಶಬ್ದ ಮಾಲಿನ್ಯ ಮಾಡಬಾರದು ಎಂದು ಆದೇಶ ನೀಡಿದೆ. ಆದ್ರೆ ಇಲ್ಲಿಯವರೆಗೆ ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆದೇಶ ಮಾತ್ರ ಜಾರಿ ಮಾಡಿಲ್ಲ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್​ ಮುತಾಲಿಕ್ ಹೇಳಿದ್ದಾರೆ.

ಈ ಸಂಬಂಧ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಮನವಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಾರ್ಥನಾ ಮಂದಿರಗಳು ಯಾವುದೇ ಧರ್ಮಕ್ಕೆ ಸೇರಿರಲಿ, ಅವುಗಳಿಂದ ಉಂಟಾಗುವ ಶಬ್ದದ ಪರಿಣಾಮದಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಕೋರ್ಟ್ ಈ ಬಗ್ಗೆ ಕೇಳಿದಾಗ ನೋಟಿಸ್ ಕಳಿಸಿರೋದಾಗಿ ಸರ್ಕಾರ ಹೇಳುತ್ತದೆ. ಈ ವಿಷಯವಾಗಿ ನಾವು ನಿರಂತರವಾಗಿ ಹೋರಾಡುತ್ತಿದ್ದೇವೆ. ಆದ್ರೆ ಸರ್ಕಾರ ಮಾತ್ರ ಕಾನೂನು ಜಾರಿ ಮಾಡಿಲ್ಲ ಎಂದು ಕಿಡಿಕಾರಿದರು.

ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್​ ಮುತಾಲಿಕ್

ಕೋರ್ಟ್ ಆದೇಶ ಜಾರಿಗೆ ಬರಲಿ: ಇದೇ ಕಾರಣಕ್ಕೆ ನಾವು ಕಾನೂನನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಬೆಳಗ್ಗೆ 5 ಗಂಟೆಯಿಂದ ಮೈಕ್​ಗಳು ಕೂಗುತ್ತಿವೆ. ಇದು ಇನ್ನೂ ನಿಂತಿಲ್ಲ, ನಮ್ಮನ್ಯಾರೂ ಕೇಳೋದಿಲ್ಲ ಅನ್ನೋ ಮನಸ್ಥಿತಿ ದೊಡ್ಡ ಮುಳ್ಳಾಗಿ ಪರಿಣಮಿಸಲಿದೆ. ಸರ್ಕಾರಕ್ಕೆ ಇದು ಗೊತ್ತಾಗುತ್ತಿಲ್ಲ. ಸರ್ಕಾರಕ್ಕೆ ಮಾನ-ಮರ್ಯಾದೆ ಇದೆಯಾ? ಎಷ್ಟು ಬಾರಿ ಕೋರ್ಟ್ ಛೀಮಾರಿ ಹಾಕಿದೆ. ಆದರೂ ಸರ್ಕಾರ ಕೋರ್ಟ್ ಆದೇಶ ಜಾರಿಗೆ ತರುತ್ತಿಲ್ಲ ಎಂದು ಹರಿಹಾಯ್ದರು.

ಡಿಜೆಗೆ ನಿಷೇಧ: ಮುಂದಿನ ದಿನಗಳಲ್ಲಿ ನಾವು ಮುಂದಿನ ಹೆಜ್ಜೆ ಇಡಬೇಕಾಗುತ್ತದೆ. ಇನ್ಮುಂದೆ ಭಜನೆ, ಮನವಿ ಇಲ್ಲ. ಇನ್ನೇನಿದ್ರು ನೇರವಾಗಿ ನುಗ್ಗೋದೆ. ಮುಂದೆ ಹೇಗೆ, ಏನು ಅನ್ನೋದನ್ನು ಮುಂದಿನ ಹೋರಾಟದಲ್ಲಿಯೇ ನಿರ್ಧಾರ ಮಾಡುತ್ತೇವೆ. ಪೊಲೀಸ್ ಇಲಾಖೆ ಗಣೇಶ ಮಂಡಳಿಯವರಿಗೆ ಡಿಜೆ ನಿಷೇಧಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ ಅವರು ಸುಪ್ರೀಂ ಕೋರ್ಟ್ ಆದೇಶ ತೋರಿಸುತ್ತಾರೆ. ಅದೇ ಆದೇಶ ಪ್ರಾರ್ಥನಾ ಮಂದಿರಗಳ ಮೈಕ್ ಬಗ್ಗೆಯೂ ಹೇಳಿದೆಯಲ್ಲವೇ? ಹಾಗಾದರೆ ಅದನ್ನೇಕೆ ಪಾಲಿಸುತ್ತಿಲ್ಲ ಎಂದು ಮುತಾಲಿಕ್ ಪ್ರಶ್ನಿಸಿದರು.

ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿಗೆ ಅವಕಾಶ ಕೋರಿ ಪ್ರತಿಭಟನೆ

5 ಬಾರಿ ಮೈಕ್ ಕೂಗೋದನ್ನು ನಿಲ್ಲಿಸಿ: ವರ್ಷಕ್ಕೆ ಒಂದೇ ಬಾರಿ ಡಿಜೆ ಹಚ್ಚಿದರೆ ನಿಮ್ಮ ಕಣ್ಣಿಗೆ ಬೀಳುತ್ತೆ, ಪ್ರತಿ ದಿನ ಐದು ಬಾರಿ ಮೈಕ್ ಹಚ್ಚೋದು ಕಾಣೋದಿಲ್ಲವೇ?. ಅದನ್ನೇಕೆ ನೀವು ಕೇಳುತ್ತಿಲ್ಲ? ಎಂದು ಪೊಲೀಸರನ್ನು ಪ್ರಶ್ನಿಸಿದರು. ಕೇವಲ ನೀವು ಗಣೇಶೋತ್ಸವಕ್ಕಷ್ಟೇ ಏಕೆ ಕೇಳುತ್ತಿದ್ದೀರಿ? ನೀವು ಡಿಜೆ ಸೀಜ್ ಮಾಡಿ ನಾವು ಇದನ್ನು ಸವಾಲಾಗಿ ಸ್ವೀಕರಿಸಿದ್ದೇವೆ‌. ಮೂರು ವರ್ಷದಿಂದ ಕೊರೊನಾದಿಂದಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ವೇಳೆಯಲ್ಲಿ ಎಲ್ಲದಕ್ಕೂ ನಿರ್ಬಂಧ ಏಕೆ? 5 ಬಾರಿ ಮೈಕ್ ಕೂಗೋದನ್ನು ನಿಲ್ಲಿಸಿ, ನಾನೇ ಡಿಜೆಯನ್ನು ನಿಲ್ಲಿಸುತ್ತೇನೆ.‌ ಒಂದೇ ಒಂದು ಡಿಜೆ ಹೊರಗೆ ಬಾರದಂತೆ ನಾನೇ ನಿಲ್ಲಿಸುತ್ತೇನೆ. ವಿನಾಕಾರಣ ಗಣೇಶೋತ್ಸವಕ್ಕೆ ಕಿರಿಕಿರಿ ಮಾಡಬೇಡಿ ಎಂದು ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.