ETV Bharat / state

ರಾಜ್ಯದಲ್ಲಿ ನನಗೆ ಅಧಿಕಾರ ಸಿಕ್ಕರೆ ಎರಡನೇ ಆದಿತ್ಯನಾಥನಾಗುವೆ: ಪ್ರಮೋದ್ ಮುತಾಲಿಕ್​

author img

By

Published : Jul 28, 2022, 2:13 PM IST

Updated : Jul 28, 2022, 2:31 PM IST

Shri Rama Sena chief Pramod Muthalik
ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್

ಸುಳ್ಯದ ಹಿಂದೂ ಕಾರ್ಯಕರ್ತನ ಹತ್ಯೆಗೆ ಮುತಾಲಿಕ್​ ಆಕ್ರೋಶ- ರಾಜ್ಯದಲ್ಲಿ ಪರ್ಯಾಯ ರಾಜಕಾರಣದ ಕುರಿತು ಮಾತು- ಸಿಎಂ ಯೋಗಿ ಆದಿತ್ಯನಾಥ್​ ಮಾಡೆಲ್​ಗೆ ಜೈ ಎಂದ ಶ್ರೀರಾಮಸೇನೆ ಮುಖ್ಯಸ್ಥ

ಹುಬ್ಬಳ್ಳಿ (ಧಾರವಾಡ): ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್​ ನೆಟ್ಟಾರು ಹತ್ಯೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹಿಂದೂಗಳ‌ ರಕ್ಷಣೆಗಾಗಿ ಪರ್ಯಾಯ ರಾಜಕೀಯ ಶಕ್ತಿ ಬೇಕಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್

ಎರಡನೇ ಆದಿತ್ಯನಾಥನಾಗಿ ಕೆಲಸ ಮಾಡುವೆ: ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸುಳ್ಯದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆಯಾಗಿದ್ದು ಖಂಡನೀಯ. ರಾಜ್ಯದಲ್ಲಿ ಜನರ ರಕ್ಷಣೆ ದೃಷ್ಟಿಯಿಂದ ಪರ್ಯಾಯ ರಾಜಕಾರಣದ ಅವಶ್ಯಕತೆ ಇದೆ. ಹೀಗಾಗಿ ಎಲ್ಲ ಸ್ವಾಮೀಜಿಗಳೊಂದಿಗೆ ಚರ್ಚೆ ನಡೆದಿದೆ. ನನಗೆ ಏನಾದರೂ ಅಧಿಕಾರ ಸಿಕ್ಕರೆ ರಾಜ್ಯದಲ್ಲಿ ಎರಡನೇ ಆದಿತ್ಯನಾಥ ಆಗಿ ಕೆಲಸ ಮಾಡುವೆ ಎಂದು ಹೇಳಿದರು.

ಭ್ರಷ್ಟಾಚಾರದಲ್ಲಿ ತಲ್ಲೀನರಾಗಿದ್ದಾರೆ: ಅಧಿಕಾರಕ್ಕೆ ಬರಲು ಹಿಂದೂಗಳು ಬೇಕು, ಆದರೆ ಅವರಿಗೆ ರಕ್ಷಣೆ ಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದೀರಿ.‌ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಎಲ್ಲಿದೆ? ಎಂದು ಮುತಾಲಿಕ್​ ಪ್ರಶ್ನಿಸಿದರು. ಪ್ರವೀಣ್ ಹತ್ಯೆಯಿಂದ ನೊಂದ ಬಿಜೆಪಿಯ ಹಲವಾರು ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಕೇವಲ ಅಧಿಕಾರಕ್ಕೆ ಒಡ್ಡಿಕೊಳ್ಳದೇ ಹಿಂದೂ ಧರ್ಮಕ್ಕೆ ಗೌರವ ಕೊಟ್ಟಿದ್ದು ಅಭಿನಂದನಾರ್ಹ. ಆದರೆ ಸರ್ಕಾರದ ಪ್ರತಿನಿಧಿಗಳು ಹತ್ಯೆ ಕುರಿತು ಮಾತನಾಡಬೇಕಿತ್ತು, ಅವರು ರಾಜೀನಾಮೆ ನೀಡಬೇಕಿತ್ತು. ಆದರೆ ಅವರು ಭ್ರಷ್ಟಾಚಾರದಲ್ಲಿ ತಲ್ಲೀನರಾಗಿದ್ದಾರೆಂದು ಆರೋಪಿಸಿ ಕೆಂಡಾಮಂಡಲರಾದರು.

ರಾಜೀನಾಮೆ ನೀಡಲಿ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್​ ಕಟೀಲ್ ಈ ಹಿಂದೆ ತಮ್ಮ ಭಾಷಣದಲ್ಲಿ 'ಒಬ್ಬ ಬಿಜೆಪಿ ಕಾರ್ಯಕರ್ತನನ್ನು ಮುಟ್ಟಿ ನೋಡಲಿ' ಎಂದು ಹೇಳಿದ್ದರು. ಆದರೆ ಇಂದು ಅವರು ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ಹತ್ಯೆಯಾಗಿದೆ. ಅವರು ತಕ್ಷಣ ರಾಜೀನಾಮೆ ನೀಡಬೇಕೆಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್​ ಒತ್ತಾಯಿಸಿದರು.

ಕೂಡಲೇ ಕ್ರಮ ತೆಗೆದುಕೊಳ್ಳಲಿ: ರಾಜ್ಯದ ಮುಖ್ಯಮಂತ್ರಿಗಳು, ಗೃಹ ಸಚಿವರು ಯಾವುದೇ ಕೊಲೆಯಾದರೂ ಕಠಿಣ ಕ್ರಮ, ಉಗ್ರ ಕ್ರಮ, ಹೆಡೆಮುರಿ ಕಟ್ಟಲಾಗುವುದು ಎಂದು ಹೇಳಿಕೆ ಕೊಡುತ್ತಾರೆ. ಆದರೆ ಈವರೆಗೆ ಯಾವೊಬ್ಬ ವ್ಯಕ್ತಿಗೂ ಶಿಕ್ಷೆ ಆಗಿಲ್ಲ. ಎಲ್ಲರೂ ಬೇಲ್ ಮೂಲಕ ಹೊರಗೆ ಬಂದು ಜೀವನ ನಡೆಸುತ್ತಿದ್ದಾರೆ. ಸರ್ಕಾರ ಟೇಪ್ ರೆಕಾರ್ಡ್ ಹಾಕುವುದನ್ನು ಬಿಟ್ಟು ಕೂಡಲೇ ಕ್ರಮ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಜನೋತ್ಸವ ರದ್ದು ಮಾಡಿ ತನ್ನ ಮಾನ ಉಳಿಸಿಕೊಂಡಿದೆ. ಅದು ಜನೋತ್ಸವ ಅಲ್ಲಾ, ಮರಣೋತ್ಸವ. ಆ ಕಾರ್ಯಕ್ರಮ ನಡೆದಿದ್ದರೆ ಜನರು ಛೀಮಾರಿ ಹಾಕುತ್ತಿದ್ದರು. ಕೂಡಲೇ ಸರ್ಕಾರದ ಜನಪ್ರತಿನಿಧಿಗಳು ಸುಳ್ಯದ ಮೃತ ಪ್ರವೀಣ್​ ಮನೆಗೆ ತೆರಳಿ ಸಾಂತ್ವನ ಹೇಳುವ ಕೆಲಸ‌ ಮಾಡಲಿ. ಅವರ ಹೆಂಡತಿಗೆ ಸರ್ಕಾರಿ ನೌಕರಿ ಕೊಟ್ಟು ಸ್ಪಲ್ಪ ಆದರೂ ನೆರವಾಗಲಿ ಎಂದರು.

ಇದನ್ನೂ ಓದಿ: Praveen Murder: ಹತ್ಯೆ ಖಂಡಿಸಿದ ಡಿಕೆಶಿ.. ಅವರವರ ಧರ್ಮ ಅವರೇ ರಕ್ಷಿಸಿಕೊಳ್ತಾರೆ ಎಂದ ಕೆಪಿಸಿಸಿ ಅಧ್ಯಕ್ಷ

ಅಗಸ್ಟ್ 5ರಂದು ಪಿಎಫ್​ಐ, ಎಸ್​ಡಿಪಿಐ ಸಂಘಟನೆಗಳನ್ನು ಬ್ಯಾನ್ ಮಾಡಬೇಕೆಂದು ರಾಜ್ಯದ ಎಲ್ಲ ಹಿಂದೂ ಸಂಘಟನೆಗಳು ಸೇರಿಕೊಂಡು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಸರ್ಕಾರ ಕೂಡಲೇ ಕೇಂದ್ರದ ಗೃಹ ಸಚಿವರಿಗೆ ಒತ್ತಾಯಿಸಿ ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸುವಂತೆ ಮಾಡಬೇಕು ಎಂದು ಮುತಾಲಿಕ್ ಒತ್ತಾಯಿಸಿದರು.

Last Updated :Jul 28, 2022, 2:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.