ETV Bharat / state

ದೇಶದ ಸಮಗ್ರ ಅಭಿವೃದ್ಧಿಗೆ ಯುವಜನರು ಕೊಡುಗೆಗಳನ್ನು ನೀಡಲಿ: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

author img

By

Published : Jan 16, 2023, 4:24 PM IST

26ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದ ಸಮರೋಪ ಸಮಾರಂಭ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಪಾಲ್ಗೊಳ್ಳುವ ಮೂಲಕ ಯುವಜನೋತ್ಸವಕ್ಕೆ ತೆರೆ ಎಳೆದಿದ್ದಾರೆ.

national-youth-festival
ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ

ಧಾರವಾಡ: ಭಾರತವು ಯುವ ಜನರ ದೇಶವಾಗಿದೆ. ದೇಶದ ಸಮಗ್ರ ವಿಕಾಸಕ್ಕೆ ಯುವಕರು ತಮ್ಮ ಕೊಡುಗೆಗಳನ್ನು ನೀಡುವ ಮೂಲಕ ಭಾರತ ಮಾತೆಯ ಕೀರ್ತಿ ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹೇಳಿದರು. ಭಾರತ ಸರ್ಕಾರದ ಯುವ ವ್ಯವಹಾರಗಳ ಹಾಗೂ ಕ್ರೀಡಾ ಮಂತ್ರಾಲಯ, ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಆಯೋಜಿಸಿದ್ದ 26ನೇ ರಾಷ್ಟ್ರೀಯ ಯುವಜನೋತ್ಸವ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.

national youth fest
ಕ್ರೀಡಾ ಪಟುಗಳಿಗೆ ಪ್ರಶಸ್ತಿ ವಿತರಣೆ

ದೇಶದ ವಿಕಾಸಕ್ಕೆ ಯುವಜನರು ತಮ್ಮ ಕೊಡುಗೆಗಳನ್ನು ನೀಡಬೇಕು: ಉತ್ಸಾಹ ಮತ್ತು ಕ್ರಿಯಾ ಶೀಲತೆಯಿಂದ ಭಾಗವಹಿಸಿದ ಯುವಜನತೆ ಭಾರತದ ಏಕತೆಯನ್ನು ಪ್ರತಿಬಿಂಬಿಸಿದೆ. ಭಾರತದ ಸಂಸ್ಕೃತಿಗೆ ಪ್ರಾಚೀನತೆಯಿದೆ. ವಸುಧೈವ ಕುಟುಂಬಕಂ‌ ಧ್ಯೇಯದೊಂದಿಗೆ ದೇಶ ಮುನ್ನಡೆಯುತ್ತಿದೆ. ಶಿಕ್ಷಣ ಮತ್ತು ಕೌಶಲ್ಯಕ್ಕೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಆದ್ಯತೆ ನೀಡಿದೆ. ಮಾತೃಭಾಷೆಯ ಕಲಿಕೆಯೊಂದಿದೆ ಐಚ್ಛಿಕ ಭಾಷೆಗಳ ಕಲಿಕೆಗೂ ನೀತಿ ಅವಕಾಶ ನೀಡಿದೆ.

ದೇಶದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ಯೋಗ ಮತ್ತು ಕ್ರೀಡೆ ಶಿಕ್ಷಣದ ಅವಿಭಾಜ್ಯ ಅಂಗವಾಗಿವೆ. ಮನುಷ್ಯ ಜೀವನದ ಅವಕಾಶ ದೊರೆತಿದೆ. ಇದು ಶ್ರೇಷ್ಟ ಅವಕಾಶ ಇದರ ಸದ್ಬಳಕೆ ಸಮರ್ಪಣಾ ಭಾವದೊಂದಿಗೆ ಪೂರ್ಣವಾಗಬೇಕು. ದೇಶದ ವಿಕಾಸಕ್ಕೆ ಯುವಜನರು ತಮ್ಮ ಕೊಡುಗೆಗಳನ್ನು ನೀಡಬೇಕು ಎಂದರು.

national youth fest
ಸಿಎಂ ಭಾಷಣ

ರಾಷ್ಟ್ರೀಯ ಸಮಗ್ರತೆಗೆ ಇಂತಹ ಉತ್ಸವ ಮುಖ್ಯ: ಇದೇ ವೆಳೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಮಾತನಾಡಿ, ರಾಷ್ಟ್ರೀಯ ಯುವಜನೋತ್ಸವ ಯಾವ ರಾಜ್ಯ ಹಾಗೂ ಜಿಲ್ಲೆಯಲ್ಲಿ ಆಯೋಜಿಸಬೇಕು ಎಂಬ ಚರ್ಚೆ ಕೇಂದ್ರ ಸರ್ಕಾರ ಮಟ್ಟದಲ್ಲಿ ನಡೆದಾಗ, ಯುವ ವ್ಯವಹಾರಗಳ ಸಚಿವರು ಕರ್ನಾಟಕದ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳ ಮೇಲೆ ವಿಶ್ವಾಸ ಇರಿಸಿ ಅವಕಾಶ ನೀಡಲಾಯಿತು. ಕರ್ನಾಟಕದ ಸಾಂಸ್ಕೃತಿಕ ಕೇಂದ್ರವಾಗಿರುವ ಹುಬ್ಬಳ್ಳಿ ಧಾರವಾಡ ಶಹರಗಳಲ್ಲಿ ಈ ಉತ್ಸವ ಅತ್ಯಂತ ಯಶಸ್ವಿಯಾಗಿ ನಡೆದಿದೆ.

ಭಾರತ ಸರ್ಕಾರ, ಕರ್ನಾಟಕ ಸರ್ಕಾರ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ, ಸಿಬ್ಬಂದಿಯ ಅವಿರತ ಶ್ರಮ ಇದರ ಹಿಂದೆ ಇದೆ. ದೇಶದ ರಾಷ್ಟ್ರೀಯ ಸಮಗ್ರತೆಗೆ ಇಂತಹ ಉತ್ಸವ ಮುಖ್ಯ. ಹುಬ್ಬಳ್ಳಿ ಧಾರವಾಡದಲ್ಲಿ ಹಲವಾರು ಹೆಸರಾಂತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದರ ಪರಂಪರೆ ಇದೆ. ಪೇಡಾ ನಗರಿಯಿಂದ ದೇಶಕ್ಕೆ ಸಿಹಿಯಾದ ಸಂದೇಶವನ್ನು ಯುವಜನತೆ ನೀಡಬೇಕು ಹೇಳಿದರು.

ಬಳಿಕ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಮಾತನಾಡಿ, ಕರ್ನಾಟಕದ ರಾಜ್ಯಪಾಲರು, ಮುಖ್ಯಮಂತ್ರಿಗಳು, ಸ್ಥಳೀಯ ಸಂಸದರಾಗಿರುವ ಕೇಂದ್ರ ಸಚಿವರ ಸಹಕಾರದಿಂದ ಕರ್ನಾಟಕದಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವ ಅತ್ಯಂತ ಯಶಸ್ವಿಯಾಗಿ ನಡೆದಿದೆ. ನವಯುಗದ ನವ ಸೃಜನೆ ಯುವಜನತೆಯ ಕೈಯಲ್ಲಿದೆ. ಯುವ ಜನತೆ ಕೇವಲ ತಮ್ಮ ಭವಿಷ್ಯಕ್ಕೆ ಮಾತ್ರವಲ್ಲ ದೇಶವನ್ನು ಸಮಗ್ರವಾಗಿ ಮುನ್ನಡೆಸುವ ಮತ್ತು ಅಭಿವೃದ್ಧಿಪಡಿಸಲು ತಮ್ಮ ಕೊಡುಗೆಗಳನ್ನು ನೀಡಬೇಕು‌ ಎಂದರು.

ದೇಶದಲ್ಲಿ 80 ಸಾವಿರ ಸ್ಟಾರ್ಟ್ ಅಪ್‌: ದೇಶದಲ್ಲಿ 80 ಸಾವಿರ ಸ್ಟಾರ್ಟ್ ಅಪ್‌ಗಳ ಮೂಲಕ ಯುವಜನ ಉದ್ಯಮಶೀಲರಾಗಿದ್ದಾರೆ. ದೇಶದ ಕೋಟ್ಯಂತರ ಬಡಜನರ ಜೀವನ ನಿರ್ವಹಣೆಗೆ ಸರ್ಕಾರ ಹಲವಾರು ಸೌಕರ್ಯಗಳನ್ನು ನೀಡಿದೆ. ಭಾರತದಂತಹ ವೈವಿಧ್ಯತೆಗಳ ರಾಷ್ಟ್ರದಲ್ಲಿ ಕಲಿಯಲು ವಿಪುಲ ಅವಕಾಶಗಳಿವೆ. ರೆಡ್ಯೂಸ್, ರಿ ಯೂಸ್, ರಿ ಸೈಕಲ್ ಈ ಮೂರು ಆರ್‌ಗಳನ್ನು ಜೀವನದಲ್ಲಿ ಪಾಲಿಸಬೇಕು‌. ಉತ್ಸವವನ್ನು ಹಸಿರು ಉತ್ಸವನ್ನಾಗಿ ಮಾಡಿರುವುದು ಹೆಮ್ಮೆಯ ಕಾರ್ಯವಾಗಿದೆ ಎಂದು ಹೇಳಿದರು.

ಯೋಗಥಾನ್ ದಾಖಲೆ: ಕರ್ನಾಟಕದಲ್ಲಿ ಜನವರಿ 15 ರಂದು ನಡೆದ ಯೋಗಥಾನ್‌ನಲ್ಲಿ ಇದುವರೆಗೆ ನಡೆದ ಎಲ್ಲಾ ಯೋಗಾಥಾನ್ ಕಾರ್ಯಕ್ರಮಗಳಲ್ಲಿ ಅತ್ಯಧಿಕ ಸಂಖ್ಯೆಯ ಭಾಗವಹಿಸುವಿಕೆಯಿಂದ ಹೊಸ ದಾಖಲೆ ಸೃಷ್ಟಿಸಿದೆ. ಬೆಳಗಾವಿ, ಮೈಸೂರಿನಲ್ಲಿ ಹೆಚ್ಚು ಜನರು ಭಾಗವಹಿಸಿದ್ದರು ಎಂದು ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ ಘೋಷಿಸಿದರು. ಬಳಿಕ ವಿವಿಧ ರಂಗಗಳಲ್ಲಿ ಸಾಧನೆಗೈದ ಯುವಕರಿಗೆ ಸನ್ಮಾನ ಹಾಗೂ ರಾಷ್ಟ್ರೀಯ ಯುವಜನೋತ್ಸವದ ಪ್ರಶಸ್ತಿ ವಿಜೇತ ತಂಡಗಳಿಗೆ ಬಹುಮಾನಗಳನ್ನು ಹಸ್ತಾಂತರಿಸಲಾಯಿತು.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಯುವ ಜನೋತ್ಸವ ಉದ್ಘಾಟನೆ: ಯುವ ಶಕ್ತಿ ಬಗ್ಗೆ ಪ್ರಧಾನಿ ಮೋದಿ ಗುಣಗಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.