ETV Bharat / state

ಹುಬ್ಬಳ್ಳಿಯ ನೆಹರು ಕ್ರೀಡಾಂಗಣದ ಸಿಂಥೆಟಿಕ್ ಗ್ರೌಂಡ್ ಕನಸಿಗೆ ತಣ್ಣೀರು: ಶಾಸಕ ಅರವಿಂದ ‌ಬೆಲ್ಲದ್ ಹೇಳಿದ್ದೇನು?

author img

By ETV Bharat Karnataka Team

Published : Nov 17, 2023, 4:13 PM IST

Updated : Nov 17, 2023, 5:28 PM IST

Etv Bharathubli-nehru-stadium-synthetic-ground-project-stop-due-to-lack-of-fund
ಹುಬ್ಬಳ್ಳಿಯ ನೆಹರು ಕ್ರೀಡಾಂಗಣದ ಸಿಂಥೆಟಿಕ್ ಗ್ರೌಂಡ್ ಕನಸಿಗೆ ತಣ್ಣೀರು: ಶಾಸಕ ಅರವಿಂದ ‌ಬೆಲ್ಲದ್ ಹೇಳಿದ್ದೇನು?

ಅನುದಾನ ಕೊರತೆಯಿಂದ ನೆಹರು ಮೈದಾನದಲ್ಲಿ ಸಿಂಥೆಟಿಕ್ ಗ್ರೌಂಡ್​ ಮಾಡುವ ಕಾಮಗಾರಿ ಸ್ಥಗಿತಗೊಂಡಿದೆ.

ಶಾಸಕ ಅರವಿಂದ ‌ಬೆಲ್ಲದ್ ಪ್ರತಿಕ್ರಿಯೆ

ಹುಬ್ಬಳ್ಳಿ: ನೆಹರು ಕ್ರೀಡಾಂಗಣ ವಾಣಿಜ್ಯ ನಗರಿ ಹುಬ್ಬಳ್ಳಿಯ ಪ್ರಮುಖ ಕ್ರೀಡಾಂಗಣ. ಈ ಕ್ರೀಡಾಂಗಣ ಈಗಾಗಲೇ ಸ್ಮಾರ್ಟ್ ಆಗಬೇಕಿತ್ತು. ನೂರಾರು ಕ್ರೀಡಾಪಟುಗಳ ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಗಬೇಕಿತ್ತು. ಆದರೆ, ಅನುದಾನದ ಕೊರತೆಯಿಂದ ಕಾಮಗಾರಿಗೆ ಬ್ರೇಕ್ ಬಿದ್ದಿದ್ದು, ಅತ್ಯಾಧುನಿಕ ಸೌಲಭ್ಯಗಳಿಂದ ಕ್ರೀಡಾಂಗಣ ಈಗ ವಂಚಿತವಾಗಿದೆ.

ನೆಹರು ಮೈದಾನವನ್ನು ಸಿಂಥೆಟಿಕ್ ಗ್ರೌಂಡ್ ಮಾಡುವುದಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಸಿಂಥೆಟಿಕ್ ಮೈದಾನ ಮಾಡುವ ಬಗ್ಗೆ ಈ ಯೋಜನೆ ಸಿದ್ಧಪಡಿಸಿದ್ದರು. ಈಗ ಹೆಚ್ಚುವರಿ ಹಣವನ್ನು ಹಾಕಲಾಗದೇ ಸಿಂಥೆಟಿಕ್ ಮೈದಾನವಾಗಿ‌ ಮಾರ್ಪಡಿಸುವ ಕನಸನ್ನು ಸ್ಮಾರ್ಟ್ ಸಿಟಿಯವರು ಕೈ ಬಿಟ್ಟಿದ್ದು, ನಗರದ ಕ್ರೀಡಾಪಟುಗಳ ಬಹುದಿನಗಳ ಕನಸಿಗೆ ತಣ್ಣೀರು ಎರಚಿದಂತಾಗಿದೆ. ಕೇಂದ್ರ ಸರ್ಕಾರದ ಸ್ಮಾರ್ಟ್ ಯೋಜನೆಯಡಿ ಕೈಗೆತ್ತಿಕೊಂಡ ಕಾಮಗಾರಿಗೆ ಹುಬ್ಬಳ್ಳಿ - ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕರೇ ಅಸಮಾಧಾನ ಹೊರ ಹಾಕಿದ್ದಾರೆ.

ಸುಮಾರು 21.44 ಕೋಟಿ ವೆಚ್ಚದಲ್ಲಿ ನೆಹರು ಮೈದಾನವನ್ನು ಸ್ಮಾರ್ಟ್ ಮಾಡಿ ಸಿಂಥೆಟಿಕ್ ಗ್ರೌಂಡ್ ಆಗಿ ಮಾರ್ಪಡಿಸುವ ಕುರಿತು ಯೋಜನೆ ರೂಪಿಸಿ 2020ರ ಜೂನ್ ತಿಂಗಳಲ್ಲಿ ವರ್ಕ್ ಆರ್ಡರ್ ನೀಡಲಾಗಿತ್ತು. ವಾಲಿಬಾಲ್, ಫುಟ್ ಬಾಲ್, ಅಥ್ಲೆಟಿಕ್ ಟ್ರ್ಯಾಕ್, ಜಿಮ್, ಬಾಸ್ಕೆಟ್‌ಬಾಲ್, ಕೇರಂ, ಚೆಸ್, ಕ್ರಿಕೆಟ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯವುಳ್ಳ ಕ್ರೀಡಾ ಸಲಕರಣೆಗಳನ್ನ ಈ ಕ್ರೀಡಾಂಗಣದಲ್ಲಿ ಒದಗಿಸಲು ಮುಂದಾಗಿತ್ತು. ಆದರೆ, ಈಗ ಮತ್ತೆ ಐದು ಕೋಟಿ ಹೆಚ್ಚುವರಿ ಹಣ ಬೇಕಿರುವ ಹಿನ್ನೆಲೆಯಲ್ಲಿ ಸಿಂಥೆಟಿಕ್ ಮೈದಾನವನ್ನಾಗಿ ಮಾಡುವ ನಿರ್ಧಾರವನ್ನು ಕೈ ಬಿಟ್ಟಿದೆ.‌ ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ಶಾಸಕ ಅರವಿಂದ ‌ಬೆಲ್ಲದ್​ ಮಾತನಾಡಿ, "ನೆಹರು ಕ್ರೀಡಾಂಗಣ ಕ್ರೀಡಾ ಸಂಕೀರ್ಣ ಮಾಡಬೇಕು ಎಂಬ ಬೇಡಿಕೆಯನ್ನು ಆಗಿನ ಸ್ಮಾರ್ಟ್ ಸಿಟಿ ಸಭೆಯಲ್ಲಿ ‌ನಾನು ಒತ್ತಾಯ ಮಾಡಿದ್ದೆ. ಆದರೆ, ನನ್ನ ಬೇಡಿಕೆಗೆ ಆಗಿನ ಶಾಸಕರಾಗಿದ್ದ ಜಗದೀಶ್ ಶೆಟ್ಟರ್ ಪರಿಗಣನೆ ಮಾಡಲಿಲ್ಲ. ಇದರ ಪರಿಣಾಮವೇ ನೆಹರು ಕ್ರೀಡಾಂಗಣ ಕಾಮಗಾರಿ ನೆನೆಗುದಿಗೆ ಬೀಳಲು ಕಾರಣವಾಗಿದೆ.‌ ಲೋಹಿಯಾ ನಗರದ ಸ್ಟೋರ್ಟ್ ಕಾಂಪ್ಲೆಕ್ಸ್​ನಲ್ಲಿ 21 ಆಟಗಳಿಗೆ ಕ್ರೀಡಾ ಸಂಕೀರ್ಣಕ್ಕೆ ಹಣ ವಿನಿಯೋಗಿಸಲಾಗಿದೆ. ಆದರೆ, ನೆಹರು ಕ್ರೀಡಾಂಗಣದ ಹೊರಗಡೆ ಶೃಂಗಾರ ಮಾಡಲು ಹಣ ಖರ್ಚು ಮಾಡುವ ಪ್ರೋಜೆಕ್ಟ್​ಗೆ ನನ್ನ ಒಪ್ಪಿಗೆ ಇರಲಿಲ್ಲ. ಇದರ ಹಣ ಅನಾವಶ್ಯಕ ಖರ್ಚಾಗಲು ಯಾರು‌ ಕಾರಣ ಅವರನ್ನು ‌ಕೇಳಿ" ಎಂದು ಪರೋಕ್ಷವಾಗಿ ಜಗದೀಶ್ ಶೆಟ್ಟರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ವಾಯವ್ಯ ಸಾರಿಗೆ ಸಂಸ್ಥೆಯ ಎಲ್ಲಾ ಬಸ್​ಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆ ವಿಸ್ತರಣೆ: ಭರತ್ ಎಸ್

Last Updated :Nov 17, 2023, 5:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.