ETV Bharat / state

ಬಿಜೆಪಿಯ ಮಾಜಿ ಶಾಸಕರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ: ಬೊಮ್ಮಾಯಿ

author img

By ETV Bharat Karnataka Team

Published : Sep 28, 2023, 1:14 PM IST

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಮಾಜಿ ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ಗಾಳ‌ ಹಾಕುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ವರ್ಚಸ್ಸು ಕಳೆದುಕೊಂಡಿದೆ. ಹೀಗಾಗಿ ಮತ್ತೆ ಆಪರೇಶನ್​ಗೆ ಮುಂದಾಗಿದೆ. ಮಾಜಿ ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ಗಾಳ‌ ಹಾಕುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ‌ಬೊಮ್ಮಾಯಿ ಹೇಳಿದರು. ನಗರದಲ್ಲಿಂದು ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಕೆಲವರು ಟಿಕೆಟ್ ಸಿಗದೇ ಇದ್ದವರು ಕಾಂಗ್ರೆಸ್​ಗೆ ಹೋಗುತ್ತಾರೆ. ಅದರಿಂದ ಯಾವುದೇ ಲಾಭವಿಲ್ಲ. ಟಿಕೆಟ್ ಸಿಗದೇ ಇದ್ದವರು ಹೋಗೋದು ಸಹಜ ಅದರ ಬಗ್ಗೆ ನಾವೇನು ಹೆಚ್ಚು ತಲೆ ಕೆಡಿಸಿಕೊಳ್ಳಲ್ಲ. ಕಾಂಗ್ರೆಸ್​ನ‌ ಈ‌ ಆಪರೇಶನ್​​ನಿಂದ ರಾಜಕೀಯವಾಗಿ ಯಾವುದೇ ಲಾಭವಾಗುವುದಿಲ್ಲ ಎಂದರು.

ಕಾವೇರಿ ನೀರಿಗಾಗಿ ಸಿಎಂ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ. ಈಗ 3 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶ ಬಂದಿದೆ. 10 ಸಾವಿರ ಕ್ಯೂಸೆಕ್ ಆದೇಶ ಬಂದಾಗ ಸುಪ್ರೀಂ ಕೋರ್ಟ್​ನಲ್ಲಿ ವಾದ ಮಂಡನೆ ಮಾಡಿದ್ದರೆ, ಅಷ್ಟು ದೊಡ್ಡ ಪ್ರಮಾಣದ ನೀರು ಬಿಡುವ ಪ್ರಮೇಯ ಬರುತ್ತಿರಲಿಲ್ಲ. ತಡವಾಗಿಯಾದರೂ ಸರ್ಕಾರಕ್ಕೆ ಬುದ್ಧಿ ಬಂದಿದೆ. ಜನ‌ ಬೀದಿಗಿಳಿದು ಹೋರಾಟ ಮಾಡುವ ಸಂದರ್ಭ ಬಂದಿದೆ. ಸರ್ಕಾರ ಈಗ ಎಚ್ಚೆತ್ತುಕೊಂಡಿದೆ ಎಂದು ಹೇಳಿದರು.

ಈಗಾಗಲೇ ಸಾಕಷ್ಟು ನೀರು ಹರಿದು ಹೋಗಿದೆ. ತಮಿಳುನಾಡು‌ ಟ್ರಿಬ್ಯುನಲ್ ಆದೇಶವನ್ನ ಉಲ್ಲಂಘನೆ ಮಾಡಿದೆ. ಕುಡಿಯುವ ನೀರಿಗೆ ಬಹುದೊಡ್ಡ ಹಾಹಾಕಾರ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕು. ಕಾವೇರಿ ಅಷ್ಟೇ ಅಲ್ಲ ಕೃಷ್ಣೆಯ ಹಿತರಕ್ಷಣೆಗೂ ಸರ್ಕಾರ ಮುಂದಾಗಬೇಕು. ಈ‌ ವಿಚಾರದಲ್ಲಿ‌ ನಾವೆಲ್ಲ ಒಂದಾಗಿದ್ದೇವೆ. ಒಂದು ವೇಳೆ ಸರ್ಕಾರ ಎಡವಿದರೆ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಮಾಜಿ ಸಿಎಂ ಎಚ್ಚರಿಕೆ ನೀಡಿದರು.

ಇನ್ನು ನಾಳಿನ ಬಂದ್​ಗೆ ಸಂಘಟನೆಗಳ ಜೊತೆಗೆ ವಿಪಕ್ಷದ ಬೆಂಬಲವೂ ಇದೆ. ಕಾವೇರಿಗಾಗಿ ಎಲ್ಲಿಯವರೆಗೂ ಹೋರಾಟ ಇರುತ್ತೋ ಅಲ್ಲಿಯವರೆಗೂ ನಮ್ಮ ಹೋರಾಟ ಇದ್ದೇ ಇರುತ್ತೆ. ಉತ್ತರ ಕರ್ನಾಟಕ‌ ಭಾಗದಲ್ಲಿ ಸಾಕಷ್ಟು ಬರಗಾಲ‌ ಇದೆ. ಈಗಾಗಲೇ ಮುಂಗಾರು ಮುಗಿದಿದೆ. ಮುಂಗಾರು ಬೆಳೆ ನಾಶವಾಗಿದ್ದು ರೈತರು ಕಂಗಾಲಾಗಿದ್ದಾರೆ. ಆದರೆ ಬೆಳೆ ಪರಿಹಾರಕ್ಕೆ ಸರ್ಕಾರ ಮುಂದಾಗಿಲ್ಲ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ಹಿಂದೆ ಪ್ರವಾಹ ಬಂದಾಗ ರೈತರಿಗೆ ಎರಡು ಪಟ್ಟು ಪರಿಹಾರ ನೀಡಿದ್ದೇವೆ. ಬಹುತೇಕ‌ ಸಂದರ್ಭದಗಳಲ್ಲಿ‌ ರಾಜ್ಯದ ರೈತರಿಗೆ ನಾವು ಪರಿಹಾರ ಒದಗಿಸಿದ್ದೇವೆ. ರಾಜ್ಯ ಸರ್ಕಾರ ಈ‌ ನಿಟ್ಟಿನಲ್ಲಿ‌ ಕೆಲಸ‌ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ: ನಾಳೆ ಕರ್ನಾಟಕ ಬಂದ್: ಓಲಾ, ಊಬರ್, ಬೀದಿ ಬದಿ ವ್ಯಾಪಾರಿಗಳ ಬೆಂಬಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.