ETV Bharat / state

ಜೆಪಿ ನಡ್ಡಾಗೆ ಬಿಗ್​ ರಿಲೀಫ್.. ಎಫ್ಐಆರ್ ರದ್ದುಗೊಳಿಸಿದ ಧಾರವಾಡ ಹೈಕೋರ್ಟ್

author img

By

Published : Aug 7, 2023, 4:32 PM IST

Updated : Aug 7, 2023, 6:41 PM IST

BJP National President JP Nadda
ಜೆಪಿ ನಡ್ಡಾಗೆ ರಿಲೀಫ್

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ವಿರುದ್ಧ ದಾಖಲಾಗಿದ್ದ ಎಫ್​ಐಆರ್​ ರದ್ದುಗೊಳಿಸಿ ಧಾರವಾಡ ಹೈಕೋರ್ಟ್ ತೀರ್ಪು ನೀಡಿದೆ.

ಬೆಂಗಳೂರು/ಧಾರವಾಡ : ಕಳೆದ ವಿಧಾನಸಭೆ ಚುನಾವಣೆ ವೇಳೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಪಟ್ಟಣದಲ್ಲಿ ನಡೆದಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಮತದಾರರಿಗೆ ಆಮಿಷ ಒಡ್ಡುವ ರೀತಿಯಲ್ಲಿ ಭಾಷಣ ಮಾಡಿದ್ದ ಆರೋಪ ಸಂಬಂಧ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ವಿರುದ್ಧ ದಾಖಲಾಗಿದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

ತಮ್ಮ ವಿರುದ್ಧ ಹರಪ್ಪನಹಳ್ಳಿ ಠಾಣಾ ಪೊಲೀಸರು ದಾಖಲಿಸಿದ್ದ ಪ್ರಕರಣ ಮತ್ತು ಅದರ ತನಿಖೆಯನ್ನು ರದ್ದುಪಡಿಸುವಂತೆ ಕೋರಿ ಜೆ.ಪಿ. ನಡ್ಡಾ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಹೈಕೋರ್ಟ್ ಪೀಠದಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಈ ಆದೇಶ ಮಾಡಿದೆ.

ನಡ್ಡಾ ಅವರು ಭಾಷಣದ ಮೂಲಕ ಮತದಾರರಿಗೆ ಆಮಿಷ ಮತ್ತು ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ಅದನ್ನು ಋಜುವಾತುಪಡಿಸುವ ಅಂಶಗಳು ದೂರುದಾರರ ಬಳಿ ಇಲ್ಲ. ನಡ್ಡಾ ಅವರ ಭಾಷಣ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿದ್ದರ ಬಗ್ಗೆಯೂ ಪುರಾವೆಗಳಿಲ್ಲ. ಅಲ್ಲದೇ ಪ್ರಕರಣ ಸಂಬಂಧ ಮ್ಯಾಜಿಸ್ಟ್ರೇಟ್ ಅವರಿಂದ ಅನುಮತಿ ಪಡೆದುಕೊಳ್ಳುವಾಗ ಕಾನೂನು ನಿಯಮಗಳನ್ನು ಪಾಲಿಸಿಲ್ಲ. ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿದ ಕ್ರಮವೂ ದೋಷಪೂರಿತವಾಗಿದೆ ಎಂದು ನಡ್ಡಾ ಪರ ವಕೀಲರು ವಾದಿಸಿದ್ದರು. ಇದನ್ನು ಮಾನ್ಯ ಮಾಡಿರುವ ನ್ಯಾಯಾಲಯ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ. ಜೆಪಿ ನಡ್ಡಾ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡಿಸಿದರು. ವಕೀಲ ಎಂ ವಿನೋದ್ ಕುಮಾರ್ ವಕಾಲತ್ತು ವಹಿಸಿದ್ದರು.

ಪ್ರಕರಣದ ಹಿನ್ನೆಲೆ : ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 2023ರ ಮೇ 7ರಂದು ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಪಟ್ಟಣದ ಐ.ಬಿ. ವೃತ್ತದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ್ದ ಜೆಪಿ ನಡ್ಡಾ, ಡಬಲ್ ಇಂಜಿನ್ ಸರ್ಕಾರ ಬಂದ್ರೆ ಕೇಂದ್ರದ ಯೋಜನೆಗಳೆಲ್ಲ ರಾಜ್ಯದಲ್ಲಿ ಮಂದುವರಿಯುತ್ತವೆ. ಚುನಾವಣೆಯಲ್ಲಿ ಬಿಜೆಪಿ ಸೋತರೆ ಕೇಂದ್ರ ಸರ್ಕಾರದಿಂದ ಸಿಗುವ ಯೋಜನೆಗಳಿಂದ ಮತದಾರರು ವಂಚಿತರಾಗಲಿದ್ದೀರಿ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೇರಿದಂತೆ ಕೇಂದ್ರದ ಹಲವು ಯೋಜನೆಗಳು ಬಂದ್ ಆಗಲಿವೆ. ನಿಮಗೆ ಅಭಿವೃದ್ಧಿ ಬೇಕಾದಲ್ಲಿ ಬಿಜೆಪಿ ಗೆಲ್ಲಿಸಬೇಕು ಎಂದು ಹೇಳಿಕೆ ನೀಡಿದ್ದರು.

ಈ ಸಂಬಂಧ ಚುನಾವಣಾ ಅಧಿಕಾರಿಗಳು ಹರಪ್ಪನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ಸಂಬಂಧ ಪ್ರಕರಣ ರದ್ದುಪಡಿಸುವಂತೆ ಕೋರಿ ಜೆಪಿ ನಡ್ಡಾ ಹೈಕೋರ್ಟ್ ಮೊರೆ ಹೋಗಿದ್ದರು.

ಇದನ್ನೂ ಓದಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್​ ಪ್ರವೇಶ: ಲೋಕಸಭೆ ಸದಸ್ಯತ್ವ ಅನರ್ಹತೆ ವಾಪಸ್​​​

Last Updated :Aug 7, 2023, 6:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.