ETV Bharat / state

ಶಕ್ತಿ ಯೋಜನೆಗೆ ಉತ್ತಮ‌ ಸ್ಪಂದನೆ: ವಾಯವ್ಯ ಸಾರಿಗೆಯಲ್ಲಿ ಜೂ.13ರಂದು ಪ್ರಯಾಣಿಸಿದ ಮಹಿಳೆಯರೆಷ್ಟು ಗೊತ್ತೇ?

author img

By

Published : Jun 14, 2023, 9:56 PM IST

NWKRTC
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಸರ್ಕಾರದ ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ ಸಿಗುತ್ತಿದೆ.

ಹುಬ್ಬಳ್ಳಿ: ರಾಜ್ಯಾದ್ಯಂತ ಆರಂಭವಾಗಿರುವ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆಯಡಿ ಜೂನ್ 13ರಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಬಸ್ಸುಗಳಲ್ಲಿ 11.09 ಲಕ್ಷ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೌಲ್ಯ ರೂ.2.72 ಕೋಟಿಗಳಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆಗೆ ಸಾರ್ವಜನಿಕರಿಂದ ನಿರೀಕ್ಷೆಗೆ ಮೀರಿದ ಸ್ಪಂದನೆ ವ್ಯಕ್ತವಾಗಿದೆ. ಮೂರನೇ ದಿನ ಜೂನ್ 13 ಮಂಗಳವಾರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಸಂಸ್ಥೆಯ ವ್ಯಾಪ್ತಿಯ ಧಾರವಾಡ ಬೆಳಗಾವಿ ಬಾಗಲಕೋಟೆ ಗದಗ ಹಾವೇರಿ ಮತ್ತು ಉತ್ತರಕನ್ನಡ ಆರು ಜಿಲ್ಲೆಗಳ 9 ಸಾರಿಗೆ ವಿಭಾಗಗಳ ಬಸ್ಸುಗಳಲ್ಲಿ ಒಟ್ಟು 11,08,930 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಪ್ರಯಾಣ ಮಾಡಿದ ಟಿಕೆಟ್ ಮೌಲ್ಯ ರೂ. 2,72,19,029 ಗಳಾಗಿದೆ.

ಸಾರಿಗೆ ಸಂಸ್ಥೆ ವಿಭಾಗವಾರು ಮಾಹಿತಿ:
ಸಾರಿಗೆ ವಿಭಾಗ / ಮಹಿಳೆಯರು/ ಟಿಕೆಟ್ ಮೌಲ್ಯ
ಹುಬ್ಬಳ್ಳಿ- ಧಾರವಾಡ ನಗರ ಸಾರಿಗೆ- 1,59,989 /19,77,657
ಹುಬ್ಬಳ್ಳಿ ಗ್ರಾಮಾಂತರ- 77,414 / 26,13,854
ಧಾರವಾಡ ಗ್ರಾಮಾಂತರ- 95,303 / 25,19,868
ಬೆಳಗಾವಿ- 1,73,981 / 35,53,483
ಚಿಕ್ಕೋಡಿ- 1,31,530 / 32,45,830
ಬಾಗಲಕೋಟೆ- 1,26,379 / 39,37,000
ಗದಗ- 1,21,532 / 35,40,671
ಹಾವೇರಿ- 1,31,537 / 34,66,149
ಉತ್ತರ ಕನ್ನಡ- 91,265 / 23,64,517

ಸಂಸ್ಥೆಯ ವ್ಯಾಪ್ತಿಯ ಬಸ್​​ಗಳಲ್ಲಿ ಜೂನ್ 12, ಸೋಮವಾರ ಒಟ್ಟು 8,31,840 ಮಹಿಳೆಯರು ಪ್ರಯಾಣ ಮಾಡಿದ್ದರು. ಪ್ರಯಾಣದ ಟಿಕೆಟ್ ಮೌಲ್ಯ ರೂ.2,10,66,638 ಗಳಾಗಿತ್ತು. ಯೋಜನೆ ಜಾರಿ ಎರಡನೇ ದಿನಕ್ಕೆ ಹೋಲಿಸಿದಾಗ ಮೂರನೇ ದಿನ ಪ್ರಯಾಣ ಮಾಡಿದ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ 2,77,090 ಹೆಚ್ಚಳವಾಗಿದೆ. ಪ್ರಯಾಣ ಮಾಡಿದ ಟಿಕೆಟ್ ಮೌಲ್ಯದಲ್ಲಿ ರೂ.61,52,391 ಹೆಚ್ಚಳವಾಗಿದೆ ಎಂದು ವಾಕರಸಾ ಸಂಸ್ಥೆ ಮಾಹಿತಿ ನೀಡಿದೆ.

ಸ್ಮಾರ್ಟ್ ಕಾರ್ಡ್ ಬಸ್ ಪಾಸ್ ವಿತರಣೆ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ಸೇವಾಸಿಂಧು ತಂತ್ರಾಂಶದ ಮೂಲಕ ಸ್ಮಾರ್ಟ್ ಕಾರ್ಡ್ ಬಸ್ ಪಾಸ್ ವಿತರಣೆ ಮಾಡಲಾಗುತ್ತಿದ್ದು, ಪಾಸ್ ಪಡೆಯಲು ಕಾಲಾವಕಾಶ ನೀಡುವ ಸಲುವಾಗಿ 2023-24 ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶ ಪಡೆದ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಾರಿಗೆ ಸಂಸ್ಥೆಯ ಬಸ್​​ಗಳಲ್ಲಿ ಜೂನ್ 30 ರವರೆಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ತಿಳಿಸಿದ್ದಾರೆ.

ಪ್ರಸಕ್ತ ವರ್ಷದಲ್ಲಿ, 2023-24 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳಿಗೆ ಸೇವಾಸಿಂಧು ತಂತ್ರಾಂಶದ ಮುಖಾಂತರ ಸ್ಮಾರ್ಟ್ ಕಾರ್ಡ್ ಬಸ್ ಪಾಸ್ ವಿತರಣೆ ಮಾಡಲಾಗುತ್ತಿದೆ. ಪಾಸ್​​​ಗಾಗಿ ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿಗಳಿಗೆ ಆನ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಪಾಸ್​ ಪಡೆಯಲು ಕಾಲಾವಕಾಶ ನೀಡಬೇಕಿದೆ. ಅದ್ದರಿಂದ ಈ ಅವಧಿಯಲ್ಲಿ ತರಗತಿಗಳಿಗೆ ಹಾಜರಾಗಲು ಹಾಗೂ ಅವರ ಶೈಕ್ಷಣಿಕ ಚಟುವಟಿಕೆಗಳಿಗೆ ಅನನುಕೂಲವಾಗದಂತೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ತಮ್ಮ ವಾಸಸ್ಥಳದಿಂದ ಶಿಕ್ಷಣ ಸಂಸ್ಥೆಗೆ ಹೋಗಿ ಬರಲು ಜೂ.30 ರವರೆಗೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.

1ನೇ ತರಗತಿಯಿಂದ 12ನೇ (ಪಿಯುಸಿ)ತರಗತಿಯವರೆಗಿನ ವಿದ್ಯಾರ್ಥಿಗಳು ತಮ್ಮ ಗುರುತಿನ ಚೀಟಿ ಹಾಗೂ 2023-24 ನೇ ಸಾಲಿನಲ್ಲಿ ಶಾಲೆ, ಕಾಲೇಜುಗಳಿಗೆ ಪ್ರವೇಶ ಪಡೆದ ಬಗ್ಗೆ ಶುಲ್ಕ ಪಾವತಿ ರಸೀದಿ ಅಥವಾ 2022-23 ನೇ ಸಾಲಿನ ವಿದ್ಯಾರ್ಥಿ ಬಸ್ ಪಾಸ್ ತೋರಿಸಿ ಉಚಿತ ಪ್ರಯಾಣ ಮಾಡಬಹುದು. ನಗರ ಸಾರಿಗೆ, ಉಪನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಬಸ್​ಗಳಲ್ಲಿ ಈ ಸೌಲಭ್ಯವಿರುತ್ತದೆ.

ಶಕ್ತಿ ಯೋಜನೆಯಡಿ ವಿದ್ಯಾರ್ಥಿನಿಯರು ರಾಜ್ಯದೊಳಗೆ ಪ್ರಯಾಣಿಸುವಾಗ ಸರ್ಕಾರದಿಂದ ವಿತರಿಸಿರುವ ಯಾವುದಾದರೂ ಗುರುತಿನ ಚೀಟಿಯನ್ನು ತೋರಿಸಿ ಶೂನ್ಯ ಟಿಕೆಟ್ ಪಡೆದು ಉಚಿತವಾಗಿ ಪ್ರಯಾಣಿಸಲು ಅನುಮತಿಸಿದೆ. ನೆರೆ ರಾಜ್ಯದಲ್ಲಿ ವಾಸವಿದ್ದು ಕರ್ನಾಟಕ ರಾಜ್ಯದ ಶಾಲೆ,ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಕರ್ನಾಟಕ ರಾಜ್ಯದಲ್ಲಿ ವಾಸವಿದ್ದು ನೆರೆ ರಾಜ್ಯದ ಶಾಲೆ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಗಡಿಭಾಗದ ಮಾರ್ಗಗಳಲ್ಲಿನ ವಿದ್ಯಾರ್ಥಿನಿಯರು ಬಸ್ ಪಾಸ್ ಪಡೆಯುವುದು ಅವಶ್ಯವಿರುತ್ತದೆ. ಇದು ಕೊನೆಯ ಅವಧಿ ವಿಸ್ತರಣೆಯಾಗಿದ್ದು ಎಲ್ಲಾ ಅರ್ಹ ವಿದ್ಯಾರ್ಥಿಗಳು ಕೂಡಲೇ ಸೇವಾಸಿಂದು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿ ಪಾಸ್ ಪಡೆಯುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ತಿಳಿಸಿದ್ದಾರೆ.

ಇದನ್ನೂಓದಿ: ದಕ್ಷಿಣ ಭಾರತ ಶೈಲಿಯ ಬಾಳೆಲೆ ಊಟ ಸವಿದು ಖುಷಿಪಟ್ಟ ಅಮೆರಿಕ ರಾಯಭಾರಿ: ವಿಡಿಯೋ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.