ETV Bharat / state

ಕರ್ನಾಟಕದಲ್ಲಿ ಭಾರಿ ಮಳೆ ಮುನ್ಸೂಚನೆ: 11 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

author img

By

Published : Nov 18, 2021, 5:49 PM IST

Updated : Nov 18, 2021, 7:28 PM IST

climatologist-dr-r-h-patil
ಹವಾಮಾನ ತಜ್ಞ ಡಾ. ಆರ್. ಹೆಚ್ ಪಾಟೀಲ್​

ನವೆಂಬರ್‌ 19 ಮತ್ತು 20ರಂದು ಸಾಕಷ್ಟು ಮಳೆಯಾಗಲಿದೆ. ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಎರಡೂ ಕಡೆ ಮಳೆ (Rain) ಆಗಲಿದೆ ಎಂದು ಹವಾಮಾನ ತಜ್ಞ ಡಾ.ಆರ್.ಹೆಚ್.ಪಾಟೀಲ್ (Climatologist Dr.R.H.Patil) ತಿಳಿಸಿದ್ದಾರೆ.

ಬೆಂಗಳೂರು/ಧಾರವಾಡ: ರಾಜ್ಯಾದ್ಯಂತ ನವೆಂಬರ್ 22 ರವರೆಗೆ ಭಾರಿ ಮಳೆಯ ಮುನ್ಸೂಚನೆ (Heavy Rainfall to continue in Karnataka) ಹಿನ್ನೆಲೆಯಲ್ಲಿ ರಾಜ್ಯದ 11 ಜಿಲ್ಲೆಗಳಲ್ಲಿ ನೀಡಲಾಗಿದ್ದ ಯೆಲ್ಲೋ ಅಲರ್ಟ್‌ ಅನ್ನು ಅತಿ ಭಾರಿ ಮಳೆಯ ಆರೆಂಜ್‌ ಅಲರ್ಟ್‌ ಆಗಿ ಪರಿವರ್ತಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ರಾಮನಗರ, ತುಮಕೂರು, ಶಿವಮೊಗ್ಗ, ಮಂಡ್ಯ, ಕೋಲಾರ ಜಿಲ್ಲೆಯಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಿಗೆ ಸೀಮಿತವಾಗಿದ್ದ ಯೆಲ್ಲೋ ಅಲರ್ಟ್‌ ಅನ್ನು ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಇನ್ನೆರಡು ದಿನ ಸಾಧಾರಣ ಮಳೆಯಾಗಲಿದ್ದು, ನವೆಂಬರ್ 20ರಂದು ಅಧಿಕ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದಕ್ಷಿಣದ ಎರಡೂ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ:

ಅರಬ್ಬಿ ಸಮುದ್ರದಲ್ಲಿನ ಮೇಲ್ಮೈ ಸುಳಿಗಾಳಿ, ಟ್ರಫ್‌ ಮತ್ತು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕರಾವಳಿ ಮತ್ತು ಒಳನಾಡಿನಲ್ಲಿ ಮಳೆ ಅಬ್ಬರಿಸುತ್ತಿದೆ ಎಂದು ಮಾಹಿತಿ ನೀಡಿದೆ.

ಮೀನುಗಾರರಿಗೆ ಎಚ್ಚರಿಕೆ:

ಕರಾವಳಿಯಲ್ಲಿ ಗಂಟೆಗೆ 40 ರಿಂದ 60 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.


ಕೆಲವು ಕಡೆಗಳಲ್ಲಿ ಜಿಟಿಜಿಟಿ ಮಳೆ, ಸಾಧಾರಣ ಮಳೆಯಾದರೆ ಇನ್ನೂ ಕೆಲವೆಡೆ ಭಾರಿ ಮಳೆ ಆಗುತ್ತಿದೆ. ಮಳೆ ಚೆನ್ನಾಗಿ ಆಗುತ್ತಿರುವುದು ಮತ್ತು ಶೀತಗಾಳಿಯಿಂದ ರಾಜ್ಯದ ತಾಪಮಾನದಲ್ಲಿ ಇಳಿಕೆ ದಾಖಲಾಗಿದೆ ಎಂದು ಹೇಳಿದೆ.
ಉತ್ತರ ಕರ್ನಾಟಕದಲ್ಲಿ ಇನ್ನೂ ಎರಡು ದಿನ ಮಳೆ ಆಗಲಿದೆ ಎಂದು ಧಾರವಾಡ ಕೃಷಿ ವಿವಿ ಹವಾಮಾನ ಕೇಂದ್ರದ ಮುಖ್ಯಸ್ಥ ಡಾ.ಆರ್.ಹೆಚ್. ಪಾಟೀಲ್​ ತಿಳಿಸಿದ್ದಾರೆ. ಮುಂದಿನ 48 ಗಂಟೆಗಳ ಅವಧಿಯಲ್ಲಿ ಜೋರು ಮಳೆಯಾಗಲಿದೆ. ವಾಯುಭಾರ ಕುಸಿತದ ಪರಿಣಾಮ ಮಳೆ ದಕ್ಷಿಣದಿಂದ ಈಗ ಉತ್ತರಕ್ಕೆ ಬಂದಿದೆ. ನಮ್ಮ ರಾಜ್ಯದ ದಕ್ಷಿಣ ಭಾಗದಂತೆ ಈಗ ಉತ್ತರ ಭಾಗದಲ್ಲಿಯೂ ಮಳೆಯಾಗಲಿದೆ ಎಂದರು.
ನವೆಂಬರ್‌ 19 ಮತ್ತು 20ರಂದು ಸಾಕಷ್ಟು ಮಳೆಯಾಗಲಿದೆ. ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಎರಡೂ ಕಡೆ ಮಳೆ ಆಗುತ್ತದೆ. ಇದರಿಂದ ಮುಂಗಾರು ಮತ್ತು ಹಿಂಗಾರು ಎರಡು ಬೆಳೆಗೆ ಹಾನಿಯಾಗಲಿದೆ. ಹಿಂಗಾರು ಬೆಳೆಯಲ್ಲಿ‌ ನೀರು ನಿಲ್ಲದಂತೆ ಮಾಡಬೇಕು. ಗದ್ದೆಗಳಲ್ಲಿ ರೈತರು ಬಸಿಗಾಲುವೆ ಮಾಡಬೇಕು ಎಂದು ತಿಳಿಸಿದ್ದಾರೆ.
ಮೋಡ ಕವಿದ ವಾತಾವರಣ ನವೆಂಬರ್‌ 24ರವರೆಗೂ ಇರುತ್ತೆ. ಇದನ್ನು ನೋಡಿಕೊಂಡು ಕೃಷಿ ಚಟುವಟಿಕೆ ಮಾಡಬೇಕು ಎಂದು ರೈತರಿಗೆ ಮಾಹಿತಿ ನೀಡಿದರು.
Last Updated :Nov 18, 2021, 7:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.