ETV Bharat / state

ಮಹದಾಯಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಬದ್ಧ: ಪ್ರಹ್ಲಾದ್ ಜೋಶಿ

author img

By

Published : Aug 19, 2023, 6:37 PM IST

Updated : Aug 19, 2023, 8:00 PM IST

Union Minister Prahlad Joshi spoke to reporters
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗಾರರೊಂದಿಗೆ ಮಾತನಾಡಿದರು.

Mahadayi project: ಮಹದಾಯಿ ಕಾಮಗಾರಿ ಶೀಘ್ರವೇ ಆರಂಭಿಸಬೇಕೆಂದು ಆಗ್ರಹಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸದ ಮುಂದೆ ಮಹದಾಯಿ‌ ಹೋರಾಟಗಾರರಿಂದ ಪ್ರತಿಭಟನೆ.

ಮಹದಾಯಿ ಜಾರಿಗೆ ಆಗ್ರಹಿಸಿ ಹೋರಾಟಗಾರರ ಪ್ರತಿಭಟನೆ

ಹುಬ್ಬಳ್ಳಿ: ಮಹದಾಯಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಯಾವುದೇ ಮೀನಮೇಷ ಮಾಡುತ್ತಿಲ್ಲ. ಮಹದಾಯಿ ಯೋಜನೆಯ ಜಾರಿಗೆ ನಾವು ಬದ್ಧರಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಟೈಗರ್ ಕಾರಿಡಾರ್ ಇಕೋ ಸೆನ್ಸಿಟಿವ್ ಝೋನ್​ಕ್ಕಾಗಿ ವಿಳಂಬ: ಮಹದಾಯಿ ಕಾಮಗಾರಿಯನ್ನು ಶೀಘ್ರವೇ ಆರಂಭಿಸಿ ಎಂದು ಆಗ್ರಹಿಸಿ ತಮ್ಮ ನಿವಾಸದ ಬಳಿ ಧರಣಿ ನಡೆಸುತ್ತಿದ್ದ ಮಹದಾಯಿ‌ ಹೋರಾಟಗಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಡಿಪಿಆರ್​ಗೆ ಅನುಮತಿ ನೀಡಿದೆ. ಮಹದಾಯಿ ನೋಟಿಫಿಕೇಶನ್ ನಾವೇ ಮಾಡಿಸಿದ್ದೇವೆ. ಪರಿಸರ ವಿನಾಯಿತಿಯನ್ನು ಕೊಡಿಸಿದ್ದೇವೆ. ಗೆಜೆಟ್ ನೋಟಿಫಿಕೇಶನ್ ಜೊತೆಗೆ ಡಿಪಿಆರ್ ಒಪ್ಪಿಗೆ ಮಾಡಿದ್ದೇವೆ. ಆದರೇ ಟೈಗರ್ ಕಾರಿಡಾರ್ ಮತ್ತು ಇಕೋ ಸೆನ್ಸಿಟಿವ್ ಝೋನ್ ಕಾರಣಕ್ಕಾಗಿ ಮಹದಾಯಿ ವಿಳಂಬವಾಗಿದೆ ಎಂದು ತಿಳಿಸಿದರು.

ಹಸಿರು ನ್ಯಾಯಾಧೀಕರಣದ ಅನುಮತಿ ಸಿಗಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆ ಕೆಲ ಸ್ಪಷ್ಟೀಕರಣ ಕೇಳಿದೆ. ರಾಜ್ಯಮಟ್ಟದಲ್ಲಿ ವೈಲ್ಡ್ ಲೈಫ್​​ಗೆ ಅನುಮತಿ ಕೊಟ್ಟು ಕೇಂದ್ರಕ್ಕೆ ಕಳಿಸಬೇಕಿದೆ. ರಾಜ್ಯ ಸರ್ಕಾರ ಅನುಮತಿ ಕೊಡುವುದು ಬಾಕಿ ಇದ್ದು, ಮಹದಾಯಿ ಯೋಜನೆ ವಿಚಾರದಲ್ಲಿ ಕೇಂದ್ರ ಸರ್ಕಾರ ಸ್ಪಷ್ಟವಾದ ನಿಲುವು ಹೊಂದಿದೆ ಎಂದು ವಿವರಣೆ ನೀಡಿದರು.

ಮಹದಾಯಿ ಟ್ರಿಬ್ಯುನಲ್ ಆದೇಶದ ವಿರುದ್ಧ ಕರ್ನಾಟಕ ಸರ್ಕಾರದ ಜೊತೆಗೆ ಗೋವಾ ಸರ್ಕಾರವು ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ನಾವು ಡಿಪಿಆರ್ ಅನುಮತಿ ನೀಡಿದ್ದನ್ನು ಗೋವಾ ಸರ್ಕಾರ ಆಕ್ಷೇಪಿಸಿದೆ. ಸುಪ್ರೀಂ ಕೋರ್ಟ್​​ನಲ್ಲಿ ಸಮರ್ಥವಾಗಿ ವಾದ ಮಂಡಿಸಲು ರಾಜ್ಯ ಸರ್ಕಾರಕ್ಕೆ ವಿನಂತಿಸಿದ್ದೇನೆ. ಕರ್ನಾಟಕ ವೈಲ್ಡ್ ಲೈಫ್ ಬೋರ್ಡ್​ನಲ್ಲಿ ಶಿಫಾರಸ್ಸು ಮಾಡಬೇಕು. ಇದನ್ನು ಕಳಿಸಿದರೇ ನಾವು ಖಂಡಿತ ಅನುಮತಿ ನೀಡುತ್ತೇವೆ ಎಂದು ಭರವಸೆ ನೀಡಿದರು.

ಈ ವೇಳೆ ರೈತ ಮುಖಂಡರಾದ ಶಂಕರ್ ಅಂಬಲಿ, ಲಕ್ಷ್ಮಣ ಬಕ್ಕಾಯಿ, ಶಂಕರಗೌಡ ಪಾಟೀಲ್, ರಾಮದುರ್ಗದ ಪೂರ್ಣಾನಂದ ಮಠದ ಕೃಷ್ಣಾನಂದ ಸ್ವಾಮಿಗಳು, ಕಲ್ಲಪ್ಪ ಲಿಗಾಡಿ, ಬಸವರಾಜ್ ಗುಮ್ಮಗೋಳ ಉಪಸ್ಥಿತರಿದ್ದರು.

ಪ್ರಹ್ಲಾದ್ ಜೋಶಿ ನಿವಾಸಕ್ಕೆ ಹೋರಾಟಗಾರರು ಮುತ್ತಿಗೆ: ಇದಕ್ಕೂ ಮುನ್ನ ಮಹದಾಯಿ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿ ಕಳಸಾ ಬಂಡೂರಿ ಹೋರಾಟಗಾರರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನೆ ಎದುರು ಪ್ರತಿಭಟನೆ ನಡೆಸಿದರು.

ಸಚಿವ ಪ್ರಹ್ಲಾದ್ ಜೋಶಿ ಅವರ ಹುಬ್ಬಳಿ ನಿವಾಸಕ್ಕೆ ಮುತ್ತಿಗೆ ಹಾಕಿದ ಮಹದಾಯಿ ಹೋರಾಟಗಾರರು, ಮಹದಾಯಿ ವಿಚಾರವಾಗಿ ಕೇಂದ್ರ ಸರ್ಕಾರ ನ್ಯಾಯ ಒದಗಿಸಬೇಕು.‌ ಮಹದಾಯಿ ಯೋಜನೆಯ ಡಿಪಿಆರ್ ತಯಾರಾಗಿದ್ದರೂ ಇನ್ನೂ ಯೋಜನೆ ಆರಂಭವಾಗಿಲ್ಲ.‌ ಮಹದಾಯಿ ತೊಡಕುಗಳನ್ನ ಸರಿಪಡಿಸಿ ಯೋಜನೆ ಆರಂಭಿಸಬೇಕು. ರೈತರು ಶೀಘ್ರ ಮಹಾದಾಯಿ ಕಾಮಗಾರಿ ಆರಂಭಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು. ಧಾರವಾಡ, ಬೆಳಗಾವಿ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ನೂರಾರು ಹೋರಾಟಗಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಇದನ್ನೂಓದಿ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮುದ್ರದ ಮೇಲೆ ಕಲ್ಲೆಸೆಯುವ ಕೆಲಸ ಮಾಡ್ತಿದಾರೆ : ಸಂಸದ ಡಿವಿ ಸದಾನಂದಗೌಡ

Last Updated :Aug 19, 2023, 8:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.