ETV Bharat / state

ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಜಾಮೀನು ನೀಡದಂತೆ ಸಿಬಿಐ ಆಕ್ಷೇಪಣೆ

author img

By

Published : Apr 9, 2021, 9:26 PM IST

cbi-objection-to-bail-for-vinay-kulkarni
ವಿನಯ್ ಕುಲಕರ್ಣಿ

ಜಾಮೀನು ಕೋರಿ ವಿನಯ್ ಕುಲಕರ್ಣಿ ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಕೆ. ನಟರಾಜನ್ ಅವರಿದ್ದ ಏಕ ಸದಸ್ಯ ಪೀಠ ಇಂದು ವಿಚಾರಣೆ ನಡೆಸಿತು. ಈ ವೇಳೆ ಸಿಬಿಐ ಪರ ವಕೀಲ ಪಿ. ಪ್ರಸನ್ನ ಕುಮಾರ್, ಅರ್ಜಿಗೆ 42 ಪುಟಗಳ ಆಕ್ಷೇಪಣೆ ಸಲ್ಲಿಸಿದರು. ಲಿಖಿತ ಆಕ್ಷೇಪಣೆ ದಾಖಲಿಸಿಕೊಂಡ ಪೀಠ ವಿಚಾರಣೆಯನ್ನು ಏ. 15ಕ್ಕೆ ಮುಂದೂಡಿದೆ.

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಪಾತ್ರವಿರುವ ಬಗ್ಗೆ ಸಾಕಷ್ಟು ಸಾಕ್ಷಾಧಾರಗಳಿದ್ದು, ಅವರಿಗೆ ಜಾಮೀನು ನೀಡಬಾರದು ಎಂದು ಹೈಕೋರ್ಟ್​ಗೆ ಸಿಬಿಐ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಮನವಿ ಮಾಡಿದೆ.

ಜಾಮೀನು ಕೋರಿ ವಿನಯ್ ಕುಲಕರ್ಣಿ ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಕೆ. ನಟರಾಜನ್ ಅವರಿದ್ದ ಏಕ ಸದಸ್ಯ ಪೀಠ ಇಂದು ವಿಚಾರಣೆ ನಡೆಸಿತು. ಈ ವೇಳೆ ಸಿಬಿಐ ಪರ ವಕೀಲ ಪಿ. ಪ್ರಸನ್ನ ಕುಮಾರ್, ಅರ್ಜಿಗೆ 42 ಪುಟಗಳ ಆಕ್ಷೇಪಣೆ ಸಲ್ಲಿಸಿದರು. ಲಿಖಿತ ಆಕ್ಷೇಪಣೆ ದಾಖಲಿಸಿಕೊಂಡ ಪೀಠ ವಿಚಾರಣೆಯನ್ನು ಏ. 15ಕ್ಕೆ ಮುಂದೂಡಿತು.

ಸಿಬಿಐ ಆಕ್ಷೇಪಣೆ :

ವಿನಯ್ ಕುಲಕರ್ಣಿ ಮತ್ತು ಯೋಗೇಶ್ ಗೌಡ ನಡುವೆ ವೈಯಕ್ತಿಕ ಹಾಗೂ ರಾಜಕೀಯ ದ್ವೇಷವಿತ್ತು. ಇದರಿಂದಲೇ ಯೋಗೇಶ್ ಗೌಡ ಅವರನ್ನು ವಿನಯ್ ಕುಲಕರ್ಣಿ ಹತ್ಯೆ ಮಾಡಿಸಿದ್ದಾರೆ. ಪ್ರಕರಣದ ಮೊದಲ ಆರೋಪಿ ಬಸವರಾಜ್ ಮುತ್ತಗಿ ಮತ್ತು 16ನೇ ಆರೋಪಿ ಚಂದ್ರಶೇಖರ್ ಇಂಗಿ ಜೊತೆಗೆ ವಿನಯ್ ಕುಲಕರ್ಣಿ ಹತ್ಯೆಗೆ ಒಳಸಂಚು ರೂಪಿಸಿದ್ದರು. ವಿನಯ್ ಕುಲಕರ್ಣಿ ತನ್ನ ಸಹಚರನ ಮೂಲಕ ಬಸವರಾಜ್ ಮುತ್ತಗಿಗೆ 6 ಲಕ್ಷ ರೂ. ಹಣ ನೀಡಿದ್ದರು ಮತ್ತು ಪ್ರಕರಣದ ಆರೋಪಿಗಳಿಗೆ ಬೆಂಗಳೂರಿನ ಹೋಟೆಲ್‌ನಲ್ಲಿ ರೂಮ್ ಗಳನ್ನು ಬುಕ್ ಮಾಡಿದ್ದರು. 2016ರ ಜೂನ್ 15ರಂದು ಹತ್ಯೆ ನಡೆದ ನಂತರ ಆರೋಪಿಗಳು ಪೊಲೀಸರ ಮುಂದೆ ಶರಣಾಗಲು ವ್ಯವಸ್ಥೆ ಮಾಡಿದ್ದರು.

ಹತ್ಯೆಗೆ ಮುನ್ನ 2016ರ ಜನವರಿಯಿಂದ ಜೂನ್‌ವರೆಗೆ ಬಸವರಾಜ್ ಮುತ್ತಗಿ, ವಿನಯ್ ಕುಲಕರ್ಣಿಗೆ 57 ಬಾರಿ ಕರೆ ಮಾಡಿದ್ದಾರೆ. ಕುಲಕರ್ಣಿ ಪತ್ನಿಯ ಹೆಸರಿನಲ್ಲಿದ್ದ ಸಂಖ್ಯೆಗೂ ಪದೇ ಪದೆ ಕರೆ ಮಾಡಿದ್ದಾರೆ. 2016 ಏ.23ರಿಂದ ಮೇ 31ವರೆಗೆ ಕುಲಕರ್ಣಿ ಮತ್ತು ಬಸವರಾಜ್ ಮುತ್ತಗಿ ಆರು ಬಾರಿ ಒಂದೆಡೆ ಭೇಟಿಯಾಗಿ ಯೋಗೇಶ್ ಗೌಡರನ್ನು ಕೊಲೆ ಮಾಡುವ ಬಗ್ಗೆ ಚರ್ಚಿಸಿದ್ದಾರೆ. ಆದ್ದರಿಂದ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಪ್ರಮುಖ ಪಾತ್ರವಿದೆ. ಆ ಸಂಬಂಧ ಅನೇಕ ಸಾಕ್ಷ್ಯಾಧಾರಗಳು ತನಿಖೆ ವೇಳೆ ಲಭ್ಯವಾಗಿದ್ದು, ಅವರಿಗೆ ಜಾಮೀನು ನೀಡಬಾರದು ಎಂದು ಸಿಬಿಐ ಆಕ್ಷೇಪಣೆಯಲ್ಲಿ ನ್ಯಾಯಾಲಯವನ್ನು ಕೋರಿದೆ.

ಇದನ್ನೂ ಓದಿ: ಹೊಸಪೇಟೆಯಲ್ಲಿ ಸಿಲಿಂಡರ್ ಸ್ಫೋಟ.. ತಂದೆ-ಮಗಳು ಸಜೀವ ದಹನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.