ETV Bharat / state

ಬಿಜೆಪಿಯವರು ಗೋಡ್ಸೆ ಅನುಯಾಯಿಗಳು, ಅವರಿಂದ ಏನೂ ನಿರೀಕ್ಷಿಸಲಾಗದು: ಬಿ‌.ಕೆ‌.ಹರಿಪ್ರಸಾದ್

author img

By ETV Bharat Karnataka Team

Published : Dec 24, 2023, 6:40 PM IST

Updated : Dec 24, 2023, 7:47 PM IST

BK Hariprasad spoke to the media.
ವಿಧಾನ ಪರಿಷತ್ ‌ಸದಸ್ಯ ಬಿ‌ ಕೆ‌ ಹರಿಪ್ರಸಾದ್ ಮಾಧ್ಯಮದವರ ಜೊತೆ ಮಾತನಾಡಿದರು.

ಹಿಜಾಬ್, ಬುರ್ಖಾ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಶಾಲಾ ಕಾಂಪೌಂಡ್‌ವರೆಗೂ ಬುರ್ಖಾ, ಆ ನಂತರ ಹಿಜಾಬ್ ಧರಿಸಬೇಕು ಎಂಬುದು ನನ್ನ ಕಲ್ಪನೆ. ನಮ್ಮದು ಜಾತ್ಯಾತೀತ ರಾಷ್ಟ್ರ. ಎಲ್ಲ ಜಾತಿ, ಧರ್ಮಗಳನ್ನೂ ಕಾಪಾಡಬೇಕು ಎಂದು ವಿಧಾನ ಪರಿಷತ್ ‌ಸದಸ್ಯ ಬಿ‌.ಕೆ‌.ಹರಿಪ್ರಸಾದ್ ತಿಳಿಸಿದರು.

ಬಿ‌.ಕೆ‌.ಹರಿಪ್ರಸಾದ್ ಮಾಧ್ಯಮದವರ ಜೊತೆ ಮಾತನಾಡಿದರು.

ಹುಬ್ಬಳ್ಳಿ: ಬಿಜೆಪಿಯವರು ಗೋಡ್ಸೆ ಅನುಯಾಯಿಗಳು. ಅವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಕಾಂಗ್ರೆಸ್ ‌ಸದಸ್ಯ ಬಿ‌.ಕೆ‌.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಹಿಜಾಬ್ ಮತ್ತು ಬುರ್ಖಾ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಹಿಜಾಬ್ ತಲೆ ಮತ್ತೆ ಎದೆ ಮುಚ್ಚಿಕೊಳ್ಳೋಕೆ ಇರುವುದು. ಈಗಾಗಲೇ ಕೆಲವು ಶಾಲಾ ಕಾಲೇಜುಗಳಲ್ಲಿ ಇದು ಜಾರಿಯಲ್ಲಿದೆ. ಬುರ್ಖಾ ಸಂಪೂರ್ಣ ದೇಹ ಮುಚ್ಚಿಕೊಳ್ಳಲು ಬಳಸುತ್ತಾರೆ ಎಂದರು.

ಬಿಜೆಪಿಯವರು ಸಮಾನತೆಯ ವಿಚಾರ ಮಾತನಾಡುತ್ತಾರೆ. ಆಹಾರ, ಉಡುಪಿನ ಹಕ್ಕು ಎಲ್ಲರ ವೈಯಕ್ತಿಕವಾದದ್ದು. ಬಿಜೆಪಿಗೆ ರೈತರು, ಮಹಿಳೆಯರ ಶೋಷಣೆ ಬಗ್ಗೆ ಕಾಳಜಿ ಇಲ್ಲ. ನಮ್ಮದು ಜಾತ್ಯಾತೀತ ರಾಷ್ಟ್ರ, ಎಲ್ಲ ಜಾತಿ, ಧರ್ಮಗಳನ್ನೂ ಕಾಪಾಡಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ತುಷ್ಟೀಕರಣ ಮಾಡುತ್ತಿಲ್ಲ. ಬಹುಸಂಖ್ಯಾತರ ತುಷ್ಟೀಕರಣ ಮಾಡುತ್ತಿರುವುದು ಬಿಜೆಪಿ ಎಂದು ಆರೋಪಿಸಿದರು.

ನಾವು ಟಿಪ್ಪು ಸುಲ್ತಾನ್​ ಪಾರ್ಟಿ ಅಲ್ಲ. ನಾವು ಬ್ರಿಟೀಷರ ವಿರುದ್ದ ಹೋರಾಟ ಮಾಡಿದವರ ಪರ. ನಮಗೆ ಟಿಪ್ಪು ಸುಲ್ತಾನ್ ಪರ ಎನ್ನುವವರು ಬ್ರಿಟೀಷರ ಬೂಟು ನೆಕ್ಕೋರು. ಅವರು ನಾವು ಟಿಪ್ಪು ಸುಲ್ತಾನ್ ಫಾಲೋ ಮಾಡ್ತಿವೋ ಬಿಡ್ತಿವೋ ಅನ್ನೋದನ್ನು ಹೇಳೋದು ಬೇಡ ಎಂದು ಹರಿಹಾಯ್ದರು.

ನಾನು ಲೋಕಸಭೆ ಚುನಾವಣೆಯ ಆಕಾಂಕ್ಷಿ. ಈ ವಿಚಾರವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಕಾಯಕ ಸಮಾಜದ ಪರ ಹೋರಾಟ ನಮ್ಮೆಲ್ಲರ ಇಚ್ಛೆ. ಸಮಾಜದ ಕಟ್ಟಕಡೇಯ ವ್ಯಕ್ತಿಯ ಸಮಸ್ಯೆ ಬಗೆಹರಿಯಬೇಕು. ಇನ್ನು ಪ್ರಧಾನಿ ಹುದ್ದೆಗೆ ಮಲ್ಲಿಕಾರ್ಜುನ ಖರ್ಗೆ ಹೆಸರು ಬಂದಿರುವುದು ಸೂಕ್ತ. ಅದಕ್ಕೆ ಸಂತೋಷವಿದೆ ಎಂದರು.

ಇನ್ನು, ಈಡಿಗ ಸಮಾವೇಶದಿಂದ ನಾನು ದೂರ ಇದ್ದೆ. ಧ್ವನಿ ಇಲ್ಲದವರಿಗೆ ಧ್ವನಿ ಕೊಡಬೇಕು. ರಾಜಕಾರಣದಲ್ಲಿ ಯಾರನ್ನೂ ತುಳಿಯೋಕೆ ಆಗಲ್ಲ. ತುಳೀತೀನಿ ಅಂದಿದ್ರೆ ಅವರು ಭ್ರಮನಿರಸನದಲ್ಲಿ ಇರ್ತಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ದ ಹರಿಪ್ರಸಾದ್‌ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಧ್ಯಮದವರ ಜೊತೆ ಮಾತನಾಡಿದರು.

ಐದು ರಾಜ್ಯಗಳ ಸೋಲಿನಿಂದ ಕಾಂಗ್ರೆಸ್ ಹತಾಸೆ:

ಐದು ರಾಜ್ಯಗಳ ಸೋಲಿನಿಂದ ಕಾಂಗ್ರೆಸ್​ ತಲೆ ಕೆಟ್ಟವರಂತೆ ವರ್ತಿಸುತ್ತಿದೆ. ಲೋಕಸಭೆ, ವಿಧಾನಸಭೆ ಅಧಿವೇಶನ ನಡೆಸಲು ಬಿಡುವುದಿಲ್ಲ ಎಂಬ ಮನಸ್ಥಿತಿಯಲ್ಲಿದೆ ಕಾಂಗ್ರೆಸ್. ಸೋಲಿನ ಹತಾಶೆಯಿಂದ ಅತ್ಯಂತ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಜನ ಇದನ್ನು ಗಮನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಹುಬ್ಬಳ್ಳಿ ನಗರದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಂಸತ್ತಿನ ಘಟನೆಯ ನೆಪ ಮಾಡಿ, ಸೆಷನ್ ನಡೆಸಲು ಬಿಡಲ್ಲ ಎಂಬ ಮಾನಸಿಕತೆಗೆ ಬಂದಿದ್ದಾರೆ. ಸೋಲಿನ ಸಿಟ್ಟು ತೀರಿಸಿಕೊಳ್ತಿದ್ದಾರೆ. ಅಮಾನತು ಮಾಡಿ ಬಿಲ್ ಪಾಸ್ ಮಾಡಿದ್ದಾರೆಂದು ಪ್ರಚಾರ ಮಾಡುತ್ತಿದ್ದಾರೆ. ಹಿಂದೆಯೂ ಕೂಡಾ ಕೆಲವು ಘಟನೆಗಳು ನಡೆದಿವೆ. ಪಾಸ್ ಮೂಲಕ ಪಾರ್ಲಿಮೆಂಟ್‌ನಲ್ಲಿ ವೆಪನ್ಸ್ ತೆಗೆದುಕೊಂಡು‌ ಬಂದ ಉದಾಹರಣೆ ಇದೆ. ಯಾವ ಕ್ರಮ ಕೈಗೊಳ್ಳಬೇಕು ಅನ್ನೋದು ಸ್ಪೀಕರ್‌ಗೆ ಬಿಟ್ಟಿದ್ದು ಎಂದರು.

ಹರಿಪ್ರಸಾದ್ ವಿರುದ್ಧ ವಾಗ್ದಾಳಿ: ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಪಕ್ಷದಲ್ಲಿ ಹರಿಪ್ರಸಾದ್‌ ಅವರನ್ನು ಬೂಟಿಗಿಂತ​ ಕಡೆ ಮಾಡಿದ್ದಾರೆ. ನೀವೇನೂ ಮಾಡಿದ್ರೂ ಸಿದ್ದರಾಮಯ್ಯ ನಿಮ್ಮನ್ನು ಮಂತ್ರಿ ಮಾಡಲ್ಲ. ಡಿ.ಕೆ.ಶಿವಕುಮಾರ್ ಅವರೂ ಸಹ ನಿಮ್ಮ ಬಗ್ಗೆ ತಲೆ ಕೆಡಿಸ್ಕೊಳ್ಳಲ್ಲ ಎಂದು ಹೇಳಿದರು.

ಹಿಜಾಬ್ ವಿಚಾರ: ಹಿಜಾಬ್ ಆದೇಶ ಹಿಂಪಡೀತೀನಿ ಅಂತಾರೆ. ಸಿದ್ದರಾಮಯ್ಯ ಅವರ ಮುಟ್ಟಾಳತನ ಇದು. ಅವರ ವೈಫಲ್ಯ ಮುಚ್ಚಿಕೊಳ್ಳೋಕೆ ಹೀಗೆ ಮಾಡ್ತಿದ್ದಾರೆ. ನೀವು ಗೊತ್ತಿದ್ದೂ ಮಾಡ್ತಿದ್ರೆ ಸಮಾಜಕ್ಕೆ ಮಾಡುವ ಅನ್ಯಾಯ. ಗೊತ್ತಿಲ್ಲದೇ ಹೇಳಿದ್ರೆ ನೀವು ಸಿಎಂ ಖುರ್ಚಿಗೆ ಅನರ್ಹರು. ಎಲ್ಲಿ ಹಿಜಾಬ್ ಬ್ಯಾನ್ ಇದೆ?, ಹಿಜಾಬ್ ಬ್ಯಾನ್ ವಿಷಯದಲ್ಲಿ ಮೂರ್ಖರಂತೆ ಮಾತಾಡ್ತಿದ್ದೀರಿ. ರಾಹುಲ್ ಗಾಂಧಿ ಅವರ ಸಹವಾಸ ದೋಷ ಇದಕ್ಕೆ ಕಾರಣ ಇರಬಹುದು ಎಂದು ವ್ಯಂಗ್ಯವಾಡಿದರು.

ವೈಜ್ಞಾನಿಕವಾಗಿ ಜಾತಿಗಣತಿ ಆಗಲಿ-ಜಗದೀಶ್ ಶೆಟ್ಟರ್: ವೈಜ್ಞಾನಿಕ ಆಧಾರದಡಿ ಜಾತಿಗಣತಿ ಆಗಬೇಕು. ಕೇಂದ್ರ ಸರ್ಕಾರದ ಹಿಂದುಳಿದವರ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಒಳಪಂಗಡಗಳನ್ನು ಸೇರಿಸಬೇಕೆಂಬುದು ನನ್ನ ಆಗ್ರಹ. ಇದಕ್ಕೆ ಅಖಿಲ‌ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮುಖಾಂತರ ರಾಜ್ಯ ಸರ್ಕಾರದಿಂದ ಶಿಫಾರಸಾದ್ರೆ ಕೇಂದ್ರ ಸರ್ಕಾರ ಪುರಸ್ಕರಿಸಬೇಕು ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಜಗದೀಶ್ ಶೆಟ್ಟರ್ ಹೇಳಿದರು.

‌ದಾವಣಗೆರೆಯಲ್ಲಿ ನಡೆಯುತ್ತಿರುವ 24ನೇ ವೀರಶೈವ ಲಿಂಗಾಯತ ಅಧಿವೇಶನದಲ್ಲಿ ಮಾತನಾಡಿದ ಅವರು, ತೆಲಂಗಾಣದಲ್ಲಿ ನಮ್ಮ ಸಮಾಜವನ್ನು ಈಗಾಗಲೇ ಅಲ್ಲಿನ ಸರ್ಕಾರ ಕೇಂದ್ರ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಶಿಫಾರಸು ಮಾಡಿದೆ. ಅದರಂತೆ ನಮ್ಮ ರಾಜ್ಯ ಸರ್ಕಾರ ಕೂಡ ಶಿಫಾರಸು ಮಾಡಿದರೆ ಹೆಚ್ಚಿನ ಹೋರಾಟ ಮಾಡಲು ಸಾಧ್ಯವಾಗುತ್ತದೆ ಎಂದರು.

ಹಿಜಾಬ್ ಬಗ್ಗೆ ಸಿಎಂ ಸಿದ್ದರಾಮಯ್ಯ ಸಹಜವಾಗಿ ಹೇಳಿದ್ದಾರೆ. ಅವರು ಈಗಾಗಲೇ ಅದರ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಹಾಗಾಗಿ ಹೆಚ್ಚು ಚರ್ಚಿಸುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಇದೇ ವೇಳೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ತಿಳಿಸಿದರು.

ಇದನ್ನೂಓದಿ: ದಮ್​ ಇದ್ದರೆ ಹಿಂದೂ ರಾಷ್ಟ್ರವಾಗುವುದನ್ನು ಸಿದ್ದರಾಮಯ್ಯ ತಡೆಯಲಿ: ಅನಂತಕುಮಾರ ಹೆಗಡೆ

Last Updated :Dec 24, 2023, 7:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.