ETV Bharat / state

ಬಿಜೆಪಿಗೆ ರಾಜ್ಯದ ಕೋರ್ಟ್‌ಗಳ ಮೇಲೆ ನಂಬಿಕೆ ಇಲ್ಲ: ಬಿ‌.ಕೆ.ಹರಿಪ್ರಸಾದ್ ವ್ಯಂಗ್ಯ

author img

By

Published : Nov 11, 2020, 4:29 PM IST

B.K.Hariprasad
ಬಿ‌.ಕೆ.ಹರಿಪ್ರಸಾದ್ ಹೇಳಿಕೆ

ಯೋಗೇಶ್​ ಗೌಡ ಕೊಲೆ ಪ್ರಕರಣದಲ್ಲಿ ವಿನಯ್​ ಕುಲಕರ್ಣಿಯನ್ನು ಸಿಬಿಐ ಬಂಧಿಸಿರುವುದು ಬಿಜೆಪಿಯ ಕುತಂತ್ರ ರಾಜಕಾರಣವನ್ನು ತೋರಿಸುತ್ತದೆ. ಈ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥ ಆಗುವ ಮೊದಲೇ ಬಿಜೆಪಿ ಸರ್ಕಾರ ಸಿಬಿಐಗೆ ವಹಿಸಿರುವುದು ದ್ವೇಷದ ರಾಜಕಾರಣಕ್ಕೆ ಸಾಕ್ಷಿಯಾಗಿದೆ ಎಂದು ರಾಜ್ಯಸಭೆ ಸದಸ್ಯ ಬಿ.ಕೆ.ಹರಿಪ್ರಸಾದ್​ ಹೇಳಿದ್ದಾರೆ.

ಹುಬ್ಬಳ್ಳಿ: ಬಿಜೆಪಿಯವರು ರಾಜಕೀಯ ಸೇಡು ತೀರಿಸಿಕೊಳ್ಳಲು ವಿನಯ್ ಕುಲಕರ್ಣಿ ಮೇಲೆ ಕೇಸ್ ಹಾಕಿಸಿದ್ದಾರೆ. ಕುಲಕರ್ಣಿ ಪ್ರಕರಣ ಸೆಷನ್ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ತೀರ್ಪು ಬರುವ ಮೊದಲೇ ಯಡಿಯೂರಪ್ಪ ಸರ್ಕಾರ ಈ ಕೇಸನ್ನು ಸಿಬಿಐಗೆ ವಹಿಸಿದೆ‌. ಈ ಸರ್ಕಾರಕ್ಕೆ ಕರ್ನಾಟಕದಲ್ಲಿರುವ ಕೋರ್ಟ್‌ಗಳ ಮೇಲೆ ನಂಬಿಕೆ ಇಲ್ಲ ಎಂದು ರಾಜ್ಯಸಭೆ ಸದಸ್ಯ ಬಿ.ಕೆ.ಹರಿಪ್ರಸಾದ್​​ ವ್ಯಂಗ್ಯವಾಡಿದ್ದಾರೆ.

ಬಿ‌.ಕೆ.ಹರಿಪ್ರಸಾದ್ ಹೇಳಿಕೆ

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್​​ ಗೌಡ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವುದು ಬೇಡ ಎಂದು ಈಗಾಗಲೇ ಕೋರ್ಟ್ ಸಹ ಹೇಳಿತ್ತು. ಆದರೆ, ಬಿಜೆಪಿ ದ್ವೇಷದ ಭಾವನೆಯಿಂದ, ರಾಜಕೀಯ ದುರುದ್ದೇಶದಿಂದ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದೆ. ಈ ಭಾಗದ ಸಂಸದರು, ಕೇಂದ್ರ ಮಂತ್ರಿಗಳು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ರಾಜಕೀಯ ವೈರಿಗಳನ್ನ ಹತ್ತಿಕ್ಕಲು ಈ ಮಾರ್ಗವನ್ನು ಅನುಸರಿಸಿದ್ದಾರೆ, ಆದರೆ, ಇದು ಬಹಳ ದಿನ ನಡೆಯುವುದಿಲ್ಲ ಎಂದು ಕಿಡಿಕಾರಿದರು.

ಉಪ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಸಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಆರ್‌.ಆರ್. ನಗರ ಕ್ಷೇತ್ರದಲ್ಲಿ ಪಕ್ಷ ನೋಡಿ ಮತ ಹಾಕಿಲ್ಲ, ವ್ಯಕ್ತಿ ನೋಡಿ ಮತ ಹಾಕಿದ್ದಾರೆ. ಅದು ಬಿಜೆಪಿಯ ಗೆಲುವು ಖಂಡಿತವಾಗಿಯೂ ಅಲ್ಲ. ಶಿರಾದಲ್ಲಿ ನಮ್ಮ ಅಭ್ಯರ್ಥಿಗೆ ಒಳ್ಳೆಯ ಮತ ಸಿಕ್ಕಿವೆ. ಚುನಾವಣೆಯಲ್ಲಿ ಹಣ ಎಲ್ಲರೂ ಖರ್ಚು ಮಾಡುತ್ತಾರೆ, ಆದರೆ ಬಿಜೆಪಿಯವರು ಹಣದ ಸುರಿಮಳೆಯನ್ನೇ‌ ಸುರಿದಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಜೆಪಿಯಲ್ಲಿರುವ ಖಾಕಿ ಚಡ್ಡಿ, ಟೋಪಿಯವರು ಸುಳ್ಳು ವದಂತಿಗಳನ್ನ ಹಬ್ಬಿಸಲು ನಂಬರ್ ಒನ್. ಬಿಹಾರದಲ್ಲಿ ನಮಗೆ ಹತ್ತು‌ ಹನ್ನೆರಡು ಕ್ಷೇತ್ರದಿಂದ ಹಿನ್ನಡೆಯಾಗಿದೆ ಅಷ್ಟೆ, ಬಿಹಾರ ಚುನಾವಣೆಯ ನೇತೃತ್ವ ವಹಿಸಿದ್ದು ತೇಜಸ್ವಿ ಯಾದವ್​. ನಾವು ಅವರ ಜೊತೆ ಕೈ ಜೋಡಿಸಿದ್ದೇವೆ, ಅಲ್ಲಿ ನಮಗೆ ಹಿನ್ನೆಡೆಯಾಗಿಲ್ಲ ಎಂದು ಹರಿಪ್ರಸಾದ್ ಸಮರ್ಥಿಸಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.