ETV Bharat / state

ಹೆಸ್ಕಾಂ ಟೆಂಡರ್​ನಲ್ಲಿ ಅವ್ಯವಹಾರ ಆರೋಪ: ಲೋಕಾಯುಕ್ತಕ್ಕೆ ದೂರು‌ ನೀಡಿದ ಗುತ್ತಿಗೆದಾರರು

author img

By

Published : Nov 24, 2022, 5:17 PM IST

ಹೆಸ್ಕಾಂ ಟೆಂಡರ್​ನಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಹ ನೀಡಲಾಗಿದೆ. ಆಪ್ತ ಗುತ್ತಿಗೆದಾರರಿಂದ ಲಂಚ ಪಡೆದು ಕೋಟ್ಯಂತರ ರೂಪಾಯಿ ಕಾಮಗಾರಿ ಮಂಜೂರು ಮಾಡಲಾಗಿದೆ ಎಂದು ರುದ್ರೇಶ್ ಆರೋಪಿಸಿದ್ದಾರೆ.
ಲೋಕಾಯುಕ್ತಕ್ಕೆ ದೂರು‌ ನೀಡಿದ ಗುತ್ತಿಗೆದಾರರು
ಲೋಕಾಯುಕ್ತಕ್ಕೆ ದೂರು‌ ನೀಡಿದ ಗುತ್ತಿಗೆದಾರರು

ಹುಬ್ಬಳ್ಳಿ: ರಾಜ್ಯ ಸರ್ಕಾರ ಮತ್ತು ಹೆಸ್ಕಾಂ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ‌ ಕೇಳಿ ಬಂದಿದೆ. ನೂರಾರು ಕೋಟಿ ರೂಪಾಯಿ ಗುತ್ತಿಗೆ ಕಾಮಗಾರಿಯಲ್ಲಿ ಶೇ 25ರಷ್ಟು ಕಮಿಷನ್ ದಂಧೆ ನಡೆದಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಮಾಡಲಾಗಿದೆ ಎಂದು ಅನುಮತಿ ಪಡೆದ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಜಿ ರುದ್ರೇಶ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ‌ ಮಾತನಾಡಿದ ಅವರು, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿ ವಿವಿಧ ಕಾಮಗಾರಿಗಳಿಗೆ 472 ಕೋಟಿ ರೂಪಾಯಿ ಟೆಂಡರ್ ಕರೆಯಲಾಗಿದೆ. ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಹೆಚ್‌ಟಿ ಲೈನ್ ಮತ್ತು ಎಲ್‌ಟಿ ಲೈನ್ ನಿರ್ಮಿಸುವುದು ಹಾಗೂ ಲಿಂಕ್‌ಲೈನ್ ಕಾಮಗಾರಿಗೆ 34 ಲಾಟ್‌ಗಳಲ್ಲಿ ಟೆಂಡರ್ ನೀಡಲಾಗಿದೆ. ಆದರೆ, ಲಂಚ ನೀಡುವವರಿಗೆ ಅನುಕೂಲ ಮಾಡಲು ತರಾತುರಿಯಲ್ಲಿ ಅವೈಜ್ಞಾನಿಕವಾಗಿ ಟೆಂಡರ್ ರೂಪಿಸಿ ಭ್ರಷ್ಟಾಚಾರ ಮಾಡಲಾಗಿದೆ ಎಂದು ಆರೋಪಿಸಿದರು.

ಲೋಕಾಯುಕ್ತಕ್ಕೆ ದೂರು‌ ನೀಡಿದ ಗುತ್ತಿಗೆದಾರರು

ಹೆಸ್ಕಾಂ ಎಂಡಿ. ಡಿ. ಭಾರತಿ ಮತ್ತು ತಾಂತ್ರಿಕ ನಿರ್ದೇಶಕ ಶ್ರೀಕಾಂತ ಸಸಾಲೊಟ್ಟಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಆಪ್ತ ಗುತ್ತಿಗೆದಾರರಿಂದ ಲಂಚ ಪಡೆದು ಕೋಟ್ಯಂತರ ರೂಪಾಯಿ ಕಾಮಗಾರಿ ಮಂಜೂರು ಮಾಡಲಾಗಿದೆ ಎಂದು ದೂರಲಾಗಿದೆ.

ಹೊರ ರಾಜ್ಯದ ಗುತ್ತಿಗೆದಾರರಿಗೆ ಟೆಂಡರ್​​: ಹೆಸ್ಕಾಂ ಅಧಿಕಾರಿಗಳು ಆಪ್ತ ಗುತ್ತಿಗೆದಾರರ ಸಲಹೆ ಪಡೆದು ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಟೆಂಡರ್‌ಗಳನ್ನು ವ್ಯವಸ್ಥಿತವಾಗಿ ಲಾಟುಗಳಾಗಿ ವಿಂಗಡಿಸಿದ್ದಾರೆ. ಪರ್ಸೆಂಟೇಜ್ ಆಸೆಗೆ ಹೊರ ರಾಜ್ಯದ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದೆ. ಇದೇ ಟೆಂಡರ್​ನನ್ನು ರಾಜ್ಯದ ಗುತ್ತಿಗೆದಾರರಿಗೆ ನೀಡಿದ್ದರೆ, ಸುಮಾರು 3000 ಗುತ್ತಿಗೆದಾರರಿಗೆ ಕೆಲಸ ಸಿಗುತ್ತಿತ್ತು. ರಾಜ್ಯ ಸರ್ಕಾರಕ್ಕೆ ಸುಮಾರು ಐವತ್ತು ಕೋಟಿ ರೂಪಾಯಿ ಲಾಭ ಆಗುತ್ತಿತ್ತು.

ಇದನ್ನೂ ಓದಿ: ಕಾಲಮಿತಿಯೊಳಗೆ ಮುಗಿಯದ ಸ್ಮಾರ್ಟ್ ಸಿಟಿ ಕೆಲಸ: ಆಮೆಗತಿ ಕಾಮಗಾರಿಗೆ ಬೇಸತ್ತ ಅವಳಿನಗರದ ಜನ

ಆದರೆ, ಕಮಿಷನ್ ಆಸೆಗೆ ಕೇವಲ 39 ಗುತ್ತಿಗೆದಾರರಿಗೆ ಮಾತ್ರ ಟೆಂಡರ್ ನೀಡಲಾಗಿದೆ. ಅವೈಜ್ಞಾನಿಕ ಡಿಪಿಆರ್ ಸಿದ್ಧಪಡಿಸಿ ಅವಸರದಲ್ಲಿ ಗುತ್ತಿಗೆ ನೀಡಿರುವುದರ ಹಿಂದೆ ವ್ಯವಸ್ಥಿತ ಪಿತೂರಿ ಇದೆ. ಈ ಕುರಿತು ಇಂಧನ ಸಚಿವರು, ಸಿಎಂಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ರಾಜ್ಯ ಸರ್ಕಾರ ಕೂಡಲೇ ಅನಧಿಕೃತ ಟೆಂಡರ್ ಹಿಂಪಡೆಯಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಪ್ರಧಾನಿಗಳ ಕಚೇರಿ ಹಾಗೂ ರಾಷ್ಟ್ರಪತಿಗಳಿಗೂ ಪತ್ರ ಬರೆಯುವುದಾಗಿ ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.