ETV Bharat / state

ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸುವಂತೆ ಕರೆ ನೀಡಿದ ಡಿಸಿ - ಎಸ್​​ಪಿ

author img

By

Published : Sep 23, 2020, 5:13 PM IST

Davanagere SP and DC
ದಾವಣಗೆರೆ ಎಸ್​​​​ಪಿ ಹಾಗೂ ಡಿಸಿ

ಜಿಲ್ಲೆಯಲ್ಲಿ ಕೊರೊನಾ ವೈರಸ್ ಹತೋಟಿಗೆ ತರುವ ದೃಷ್ಟಿಯಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಜನರಲ್ಲಿ ಅರಿವು ಮೂಡಿಸಲು ಮುಂದಾಗಿದೆ. ಇದಕ್ಕಾಗಿ ಜಿಲ್ಲಾಡಳಿತದಿಂದ ವಿಡಿಯೋ ಮಾಡಿ ಜಿಲ್ಲಾಧಿಕಾರಿ ಕೋವಿಡ್ ವಿರುದ್ಧ ಹೋರಾಡಲು ಕರೆ ನೀಡಿದ್ದಾರೆ. ಅಲ್ಲದೇ ಎಸ್​​​ಪಿ ಸಹ ಸಾರ್ವಜನಿಕರ ಸಹಕಾರ ಕೋರಿದ್ದಾರೆ.

ದಾವಣಗೆರೆ: ಮನೆಯಲ್ಲಿರುವ ಹಿರಿಯರಲ್ಲಿ‌ ಕೊರೊನಾ ಸೋಂಕಿನ ಲಕ್ಷಣಗಳಿದ್ದರೆ ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಯುವಕರಲ್ಲಿ ಮನವಿ ಮಾಡಿದ್ದಾರೆ.

ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಿರುವ ಅವರು, 60 ವರ್ಷ ಮೇಲ್ಪಟ್ಟ ಹಿರಿಯರು ಮನೆಯಲ್ಲಿ ಇದ್ದರೆ ಕಾಳಜಿ ವಹಿಸಿ. ರಕ್ತದೊತ್ತಡ, ಹೈಪರ್ ಟೆನ್ಶನ್, ಅಸ್ತಮಾ ಸೇರಿದಂತೆ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದರೆ ಔಷಧ ತಂದು‌ಕೊಡಿ. ಕಾಲಕಾಲಕ್ಕೆ ತಕ್ಕಂತೆ ಔಷಧ, ಮಾತ್ರೆ ತೆಗೆದುಕೊಳ್ಳುವಂತೆ ನೋಡಿಕೊಳ್ಳಿ.

ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

ಕೆಮ್ಮು, ಜ್ವರ, ನೆಗಡಿ ಸೇರಿದಂತೆ ಕೊರೊನಾ ಸೋಂಕಿನ ಲಕ್ಷಣ ಕಂಡುಬಂದ ತಕ್ಷಣ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿ. ಆಗ ಮಾತ್ರ ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪುವವರ ಸಂಖ್ಯೆ ಕಡಿಮೆ ಮಾಡಬಹುದು. ಇದಕ್ಕೆ ಯುವಕರು ಸಹಕರಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಡಿಸಿ ಹೇಳಿದ್ದಾರೆ.

ದಾವಣಗೆರೆ ಎಸ್​​​​ಪಿ ಹನುಮಂತರಾಯ

ಇನ್ನು ಈ ಕುರಿತು ಮಾತನಾಡಿರುವ ಎಸ್​ಪಿ ಹನುಮಂತರಾಯ, ನಾನೂ ಕೂಡ ಕೊರೊನಾ ಬಾಧಿತನಾಗಿ ಜಿಲ್ಲಾಸ್ಪತ್ರೆಯಲ್ಲಿ 8 ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಮುಖನಾದ ಬಳಿಕ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಯಾರೂ ಆತ್ಮಸ್ಥೈರ್ಯ ಹಾಗೂ ಧೈರ್ಯ ಕಳೆದುಕೊಳ್ಳಬೇಡಿ. ಸರ್ಕಾರ ನೀಡಿರುವ ಮಾರ್ಗಸೂಚಿ ಪಾಲಿಸಿ ಎಂದಿದ್ದಾರೆ.

ಕೋವಿಡ್ ಹೊಡೆದೋಡಿಸಲು ಸರ್ಕಾರಿ ಅಧಿಕಾರಿಗಳು, ವೈದ್ಯರು, ನರ್ಸ್, ಕೊರೊನಾ ವಾರಿಯರ್ಸ್ ಹಗಲಿರುಳು ಶ್ರಮಿಸುತ್ತಿದ್ದಾರೆ‌. ಸೋಂಕು ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ದಯವಿಟ್ಟು ನಮಗೆ ಸಹಕಾರ ನೀಡಿ ಎಂದು ಎಸ್​​​ಪಿ ಹನುಮಂತರಾಯ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.