ETV Bharat / state

ಬಿಜೆಪಿಯ ಸೈಲೆನ್ಸರ್​ನ ಹೊಗೆಯಲ್ಲಿ ವಿಷ ತುಂಬಿಕೊಂಡಿದೆ: ಕಟೀಲ್​ ಹೇಳಿಕೆಗೆ ಖಾದರ್ ತಿರುಗೇಟು

author img

By

Published : Jan 4, 2023, 12:29 PM IST

ut khader
ಯು ಟಿ ಖಾದರ್

ಲವ್ ಜಿಹಾದ್ ವಿಷಯದ ವಿರುದ್ಧ ಹೋರಾಡಬೇಕೇ ಹೊರತು ರಸ್ತೆ ಮತ್ತು ಚರಂಡಿ ಸಮಸ್ಯೆಗಳ ಬಗ್ಗೆ ಅಲ್ಲ ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ವಿಪಕ್ಷ ಉಪನಾಯಕ ಯು.ಟಿ.ಖಾದರ್ ವಾಗ್ದಾಳಿ ನಡೆಸಿದ್ದಾರೆ.

ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಯು.ಟಿ.ಖಾದರ್

ಮಂಗಳೂರು: 'ಡಬಲ್ ಇಂಜಿನ್ ಸರ್ಕಾರದ ಫ್ಯೂಲ್‌ನಲ್ಲಿ(ಇಂಧನ) ಕಮ್ಯುನಲ್ ಫ್ಯೂಲ್‌ ತುಂಬಿಕೊಂಡಿದೆ. ಸೈಲೆನ್ಸರ್​ನ ಹೊಗೆಯಲ್ಲಿ ವಿಷವಿದೆ. ಇಂಜಿನ್ ಮತ್ತು ಬಾಡಿಯಲ್ಲಿ ಜನಸಾಮಾನ್ಯರ ರಕ್ತ ತುಂಬಿಕೊಂಡಿದೆ' ಎಂದು ವಿಪಕ್ಷ ಉಪನಾಯಕ ಯು.ಟಿ.ಖಾದರ್ ಅವರು ಬಿಜೆಪಿ‌ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಕಟೀಲ್ ಹೇಳಿದ್ದೇನು?: ರಸ್ತೆ ಕಾಮಗಾರಿ, ಚರಂಡಿ ಅಭಿವೃದ್ಧಿ ಎಂಬ ಸಣ್ಣ ವಿಷಯದ ಬಗ್ಗೆ ಮಾತನಾಡಬೇಡಿ, ನಿಮ್ಮ ಮಕ್ಕಳ ಬದುಕಿನ ಪ್ರಶ್ನೆಯಾಗಿರುವ ಲವ್ ಜಿಹಾದ್ ತಡೆಯಲು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಮಾತನಾಡಿ ಎನ್ನುವ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ, 'ಈ ಡಬಲ್ ಇಂಜಿನ್ ಸರ್ಕಾರವನ್ನು ಕಾಲ ಬಂದಾಗ ಜನರು ಗುಜರಿಗೆ ಹಾಕುತ್ತಾರೆ' ಎಂದು ವಾಗ್ದಾಳಿ ನಡೆಸಿದರು.

'ರಸ್ತೆ ಹಾಗೂ ಚರಂಡಿ ಅಭಿವೃದ್ಧಿ, ಗುಂಡಿ ಮುಚ್ಚುವಂತಹ ಅಭಿವೃದ್ಧಿ ಕೆಲಸ ಮಾಡುವ ಅರ್ಹತೆ ಮತ್ತು ಯೋಗ್ಯತೆ ಬಿಜೆಪಿ ಸರ್ಕಾರಕ್ಕೆ ಇಲ್ಲ. ಇಷ್ಟು ವರ್ಷದಲ್ಲಿ ಅವರು ಅಭಿವೃದ್ಧಿ ಕೆಲಸ ಮಾಡಿಲ್ಲ. ಕುಚ್ಚಲಕ್ಕಿ ತರಲು ಸಿಎಂಗೆ ಮನವಿ ಕೊಟ್ಟದ್ದೇ ಬಂತು. ಜನರಿಗೆ ರೇಷನ್ ಕಾರ್ಡ್ ಕೊಡುವ ಯೋಗ್ಯತೆ ಇಲ್ಲ. ಅಭಿವೃದ್ಧಿ ಕೆಲಸ ಮಾಡುವ ಸ್ವಭಾವವಿಲ್ಲ. ಇವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಜನರಿಗೆ ಇದೀಗ ಎಲ್ಲಾ ಅರ್ಥವಾಗಿದೆ' ಎಂದರು.

'ಗೋವುಗಳ ಬಗ್ಗೆ ಭಾರಿ ಮಾತನಾಡಿದವರು ಗೋವುಗಳ ಅಭಿವೃದ್ಧಿಗೆ ಶ್ರಮಿಸಿಲ್ಲ. ಸೇವೆ ಕೊಡುವ ಹೆಸರಿನಲ್ಲಿ ಲೂಟಿ ಹೊಡೆದಿದ್ದಾರೆ. ಪಶು ವೈದ್ಯರುಗಳು ನಿವೃತ್ತಿಯಾದರೂ ಹೊಸ ನೇಮಕಾತಿ ಮಾಡಿಲ್ಲ. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದೆ 21 ಸಾವಿರ ಹಸುಗಳು ಸಾವನ್ನಪ್ಪಿದೆ. ಈಗ 14 ಲಕ್ಷ ಹಸುಗಳು ಕಡಿಮೆಯಾಗಿದೆ. ಅವರು ಉತ್ತರ ಕೊಡುವ ಪರಿಸ್ಥಿತಿಯಲ್ಲಿ ಇಲ್ಲ. ಹೈನುಗಾರಿಕೆ ಕಡಿಮೆಯಾಗುತ್ತಿದೆ. ಈ ಹಿಂದೆ 8 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದರೆ, ಈಗ 7 ಲಕ್ಷದ 20 ಸಾವಿರಕ್ಕೆ ಇಳಿದಿದೆ. ಗೋ ಸಂತತಿ ಜಾಸ್ತಿ ಮಾಡಲು ಏನು ಕ್ರಮ ಕೈಗೊಂಡಿಲ್ಲ. ಕೇವಲ ಭಾವನಾತ್ಮಕ ವಿಚಾರದ ಬಗ್ಗೆ ಮಾತನಾಡುತ್ತಾರೆ' ಎಂದು ಆರೋಪಿಸಿದರು.

ಇದನ್ನೂ ಓದಿ: ರಸ್ತೆ, ಚರಂಡಿ ಸಣ್ಣಪುಟ್ಟ ವಿಷಯ ಬಿಟ್ಟು ಲವ್ ಜಿಹಾದ್ ವಿರುದ್ಧ ಹೋರಾಡಿ: ಕಟೀಲ್

ವೀರರಾಣಿ ಅಬ್ಬಕ್ಕ ಉತ್ಸವಕ್ಕೆ ಹಿಂದಿನ ಸರ್ಕಾರಗಳು ಉತ್ತಮ ಅನುದಾನ ನೀಡಿದ್ದವು.‌ 2008ರಲ್ಲಿ 25 ಲಕ್ಷ ರೂ ಅನುದಾನ ನೀಡಲಾಗಿತ್ತು. ಆ ಬಳಿಕ ಪ್ರತಿ ವರ್ಷ 5 ಲಕ್ಷ ರೂ.ಕ್ಕೂ ಹೆಚ್ಚು ಮಾಡಲಾಗುತ್ತಿತ್ತು. ಸಿದ್ದರಾಮಯ್ಯ ಸರ್ಕಾರದಲ್ಲಿ 50 ಲಕ್ಷ ರೂ ಅನುದಾನ ನೀಡಲಾಗಿತ್ತು. ಆದರೆ, ಈ ಬಾರಿ ಕನ್ನಡ ಮತ್ತು ಸಂಸ್ಕೃತಿ ಸಚಿವರು ಜಿಲ್ಲೆಯವರೇ ಆಗಿದ್ದರೂ ಕೇವಲ 10 ಲಕ್ಷ ರೂ ಅನುದಾನ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರ ವೀರರಾಣಿ ಅಬ್ಬಕ್ಕ ಮತ್ತು ಹೋರಾಟಗಾರರಿಗೆ ಅವಮಾನ ಮಾಡಿದೆ. ಇದು ಸರ್ಕಾರದ ಆರ್ಥಿಕ ದಾರಿದ್ರ್ಯವನ್ನು ತೋರಿಸುತ್ತದೆ ಎಂದರು.

ಇದನ್ನೂ ಓದಿ: ಮುಂದಿನ ಚುನಾವಣೆಗೂ ಮುಂಚೆ ಸಿದ್ದರಾಮಯ್ಯ ಜೈಲಿಗೆ ಹೋಗಲಿದ್ದಾರೆ: ನಳಿನ್​ ಕುಮಾರ್​ ಕಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.