ETV Bharat / state

ಕಾಡೇ ಊರು.. ಪ್ರೀಮಿಯರ್​ ಪದ್ಮಿನಿ ಕಾರೇ ಸೂರು... ಚಂದ್ರನ ಬಾಳಲ್ಲಿ ಕಗ್ಗತ್ತಲು..!

author img

By

Published : Oct 7, 2021, 8:23 PM IST

Updated : Oct 9, 2021, 4:14 PM IST

ಚಂದ್ರಶೇಖರ್

ದಕ್ಷಿಣ ಕನ್ನಡದ ಸುಳ್ಯದಲ್ಲಿ ವೃದ್ಧನೊಬ್ಬ ಬ್ಯಾಂಕ್​ನವರು ಮೋಸ ಮಾಡಿದರು ಎಂದು ಮನನೊಂದು ನಾಡು ತೊರೆದು ಕಾಡಲ್ಲಿ ವಾಸಿಸುತ್ತಿದ್ದಾರೆ.

ದಕ್ಷಿಣ ಕನ್ನಡ: ಸರಿ ಸುಮಾರು 17 ವರ್ಷಗಳ ಹಿಂದೆ ತಾನು ಸಾಲ ತೆಗೆದುಕೊಂಡ ಸಹಕಾರಿ ಬ್ಯಾಂಕ್​ನವರು ಮೋಸ ಮಾಡಿದರು ಎಂಬ ಕಾರಣಕ್ಕಾಗಿ ಬೇಸರದಿಂದ ನಾಡನ್ನೇ ತೊರೆದು ಕಾಡು ಸೇರಿದ ಈ ವ್ಯಕ್ತಿ ಇಂದಿಗೂ ದಟ್ಟರಾಣ್ಯದಲ್ಲಿ ತನ್ನ ನೆಚ್ಚಿನ ಕಾರಿನೊಂದಿಗೆ ವಾಸಿಸುತ್ತಿರುವ ಘಟನೆ ಸುಳ್ಯದಲ್ಲಿ ಬೆಳಕಿಗೆ ಬಂದಿದೆ.

ಕಾಡೇ ಊರು.. ಕಾರೇ ಮನೆ:

ಸುಳ್ಯ ತಾಲೂಕಿನಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಅರಂತೋಡು ಗ್ರಾಮದ ಅಡ್ತಲೆ - ನೆಕ್ಕರೆ ಪ್ರದೇಶದ ದಟ್ಟ ಅರಣ್ಯದ ನಡುವೆ ಸಾಗಿದರೆ ನಮಗೆ ಒಂದು ಸಣ್ಣ ಪ್ಲಾಸ್ಟಿಕ್ ಹೊದಿಕೆಯುಳ್ಳ ಗುಡಿಸಲು ಕಾಣ ಸಿಗುತ್ತದೆ. ಈ ಗುಡಿಸಲಿನ ಒಳಗಡೆ ಹಳೆಯ ಮಾಡೆಲ್​ನ ಪ್ರೀಮಿಯರ್​ ಪದ್ಮಿನಿ ಕಾರು ಹಾಗೂ ಕಾರಿನ ಮೇಲೊಂದು ಹಳೇ ರೇಡಿಯೋ ಇದೆ. ಕಾರಿನ ಎದುರಲ್ಲಿ ಹಳೆಯ ಸೈಕಲ್, ಆಗ ತಾನೇ ಮಾಡಿದ ಕಾಡುಬಳ್ಳಿಯಿಂದ ತಯಾರಾದ ಒಂದೆರಡು ಬುಟ್ಟಿಗಳು. ಈ ಹೊಗೆಯ ನಡುವೆ ಕುರುಚಲು ಗಡ್ಡ, ಹರಿದ ಅಂಗಿ, ಹವಾಯಿ ಚಪ್ಪಲಿ ಧರಿಸಿರುವ ವೃದ್ಧಾಪ್ಯದ ಕಡೆಗೆ ಮುಖ ಮಾಡಿ ಜೀವನ ನಡೆಸುತ್ತಿರುವ ವ್ಯಕ್ತಿಯ ಹೆಸರು ಚಂದ್ರಶೇಖರ್.

ಕಾಡಿನಲ್ಲಿ ವಾಸಿಸುತ್ತಿರುವ ಚಂದ್ರಶೇಖರ್
ಕಾಡಿನಲ್ಲಿ ವಾಸಿಸುತ್ತಿರುವ ಚಂದ್ರಶೇಖರ್

‘ಜೀವ’ನಕ್ಕೆ ಮುಳುವಾದ ಬ್ಯಾಂಕ್​ ಸಾಲ:

ಅಂದ ಹಾಗೇ ಈ ಚಂದ್ರಶೇಖರ್ ಕಾಡಿನಲ್ಲಿ ತನ್ನ ಹಳೆಯ ಪ್ರೀಮಿಯರ್​ ಪದ್ಮಿನಿ ಕಾರಿನಲ್ಲಿ ಹೀಗೆ ವಾಸವಾಗಿರುವುದಕ್ಕೆ ಒಂದು ಕಾರಣವಿದೆ. ಇವರು ಮೂಲತಃ ಸುಳ್ಯ ತಾಲೂಕಿನ ನೆಕ್ರಾಲ್ ಕೆಮ್ರಾಜೆ ಗ್ರಾಮದವರು. 2003ರ ವರೆಗೆ ಚಂದ್ರಶೇಖರ್ ಜೀವನ ಸರಿಯಾದ ಹಾದಿಯಲ್ಲಿಯೇ ಇತ್ತು. ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಅಡಿಕೆ ಕೃಷಿ ಹೊಂದಿದ ಚಂದ್ರಶೇಖರ್ ಒಳ್ಳೆಯ ಜೀವನವನ್ನೂ ನಡೆಸುತ್ತಿದ್ದರು. ಇವರು ಎಲಿಮಲೆ ಸಹಕಾರಿ ಬ್ಯಾಂಕ್​ನಿಂದ 40 ಸಾವಿರ ಸಾಲ ಪಡೆದುಕೊಂಡಿರುವುದು ಇವರ ಈ ದುರಂತ ಜೀವನಕ್ಕೆ ಕಾರಣ ಎನ್ನಲಾಗಿದೆ.

ನೆಚ್ಚಿನ ಅಂಬಾಸಿಡರ್​ ಕಾರಿನೊಂದಿಗೆ ಕಾಡಲ್ಲಿ ವಾಸ
ನೆಚ್ಚಿನ ಅಂಬಾಸಿಡರ್​ ಕಾರಿನೊಂದಿಗೆ ಕಾಡಲ್ಲಿ ವಾಸ

ಕೇವಲ 40 ಸಾವಿರ ರೂ.ಗೆ ಆಸ್ತಿ ಹರಾಜಿಗಿಟ್ಟ ಬ್ಯಾಂಕ್:

ಸಾಲ ಕಟ್ಟಲಾಗದ ಸ್ಥಿತಿ ಬಂದಾಗ ಬ್ಯಾಂಕ್‌ನವರು ಚಂದ್ರಶೇಖರ್ ಅವರ ಆಸ್ತಿಯನ್ನು ಹರಾಜಿಗಿಟ್ಟರು. ಬ್ಯಾಂಕ್‌ನವರು ಸಣ್ಣ ಮೊತ್ತಕ್ಕೆ ಅವರ ಜಮೀನನ್ನು ಹರಾಜಿಗಿಟ್ಟಿದ್ದಕ್ಕೆ ಅವರು ಮಾನಸಿಕವಾಗಿ ಕುಗ್ಗಿ ಹೋದರು. ಈ ಸಮಯದಲ್ಲಿ ತನ್ನಲ್ಲಿ ಉಳಿದ ಏಕೈಕ ಆಸ್ತಿ ಪ್ರೀಮಿಯರ್​ ಪದ್ಮಿನಿ ಕಾರಿನೊಂದಿಗೆ ತನ್ನ ಅಕ್ಕನ ಮನೆಯಾದ ಅರಂತೋಡು ಗ್ರಾಮದ ಅಡ್ತಲೆಗೆ ಬಂದಿದ್ದಾರೆ. ಆದರೆ, ಕಾಲಕ್ರಮೇಣ ಅಕ್ಕನ ಮನೆಯಲ್ಲೂ ಮನಸ್ತಾಪ ಉಂಟಾಗಿ ಕೊನೆಗೆ ಚಂದ್ರಶೇಖರ್ ಒಬ್ಬಂಟಿಯಾಗಿ ಉಳಿಯುವ ನಿರ್ಧಾರಕ್ಕೆ ಬಂದಿದ್ದಾರೆ.

ಚಂದ್ರಶೇಖರ್
ಕಾರಿನೊಂದಿಗೆ ಚಂದ್ರಶೇಖರ್

ಹಳೆಯ ಪ್ರೀಮಿಯರ್​ ಪದ್ಮಿನಿ ಕಾರೇ ಪ್ರಪಂಚ:

ಕಾಡಿನ ಮಧ್ಯೆ ತನ್ನ ಪ್ರೀಮಿಯರ್​ ಪದ್ಮಿನಿ ಕಾರನ್ನು ಇರಿಸಿ, ಕಾರಿನ ಮೇಲ್ಭಾಗಕ್ಕೆ ಪ್ಲಾಸ್ಟಿಕ್‌ ಹೊದಿಕೆ ಹಾಕಿ ಚಂದ್ರಶೇಖರ್ ಜೀವನ ನಡೆಸಲು ಆರಂಭಿಸುವ ಮೂಲಕ ಕಾನೂನು ಹೋರಾಟಕ್ಕೂ ಮುಂದಾದರು. ಇದೀಗ ಚಂದ್ರಶೇಖರ್ ಕಾಡಿನಲ್ಲಿ ಯಾವುದೇ ಮೂಲಸೌಕರ್ಯಗಳಿಲ್ಲದೇ ಏಕಾಂಗಿಯಾಗಿ, ಯಾರ ಸಹಾಯವೂ ಇಲ್ಲದೇ ಏಕಾಂತ ಜೀವನ ನಡೆಸುತ್ತಿದ್ದಾರೆ.

ಚಂದ್ರಶೇಖರ್
ಚಂದ್ರಶೇಖರ್

ಬೆಳಗ್ಗೆ ಎದ್ದು ಕಾಡಿನಲ್ಲಿ ಹರಿಯುವ ಹೊಳೆಯಲ್ಲಿ ಸ್ನಾನ ನಿತ್ಯಕರ್ಮಗಳನ್ನು ಮುಗಿಸಿ, ಕಾಡಿನಲ್ಲಿ ಸಿಗುವ ಬಳ್ಳಿಗಳಿಂದ ಬುಟ್ಟಿಯನ್ನು ತಯಾರಿಸಿ ಅಂಗಡಿಗಳಲ್ಲಿ ಇದನ್ನು ಮಾರಿ ಆಹಾರ ಸಾಮಗ್ರಿಗಳನ್ನು ಖರೀದಿಸಿ ಜೀವನ ಸಾಗಿಸುತ್ತಿದ್ದಾರೆ. ಚಂದ್ರಶೇಖರ್‌ಗೆ ಕಾಡಿನ ಮಧ್ಯದಲ್ಲಿರುವ ತನ್ನ ಹಳೆಯ ಕಾರೇ ಪ್ರಪಂಚ. ತನ್ನ ಜಮೀನನ್ನು ಮೋಸದಿಂದ ಹರಾಜು ಮಾಡಿದವರಿಗೆ ಶಿಕ್ಷೆಯಾಗಿ ಮತ್ತೆ ಆ ಜಮೀನು ತನಗೆ ಸಿಗಬೇಕು ಅನ್ನೋದೇ ಚಂದ್ರಶೇಖರ್ ಬದುಕಿನ ಆಸೆ.

ಅಂಬಾಸಿಡರ್ ಕಾರು
ಅಂಬಾಸಿಡರ್ ಕಾರು

ಕೂಗಳತೆ ದೂರದಲ್ಲೇ ಪ್ರಾಣಿಗಳ ವಾಸ:

ಹೀಗೆ ಚಂದ್ರಶೇಖರ್ ಕಾರಿನಲ್ಲಿ, ದಟ್ಟಾರಣ್ಯದಲ್ಲಿರುವ ಬಗ್ಗೆ ಮಾಹಿತಿ ತಿಳಿದ, ಹಿಂದಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಎ.ಬಿ ಇಬ್ರಾಹಿಂ, ಚಂದ್ರಶೇಖರನ್ನು ಭೇಟಿಯಾಗಿ ಬೇರೊಂದು ಕಡೆ ಜಾಗ ಗುರುತಿಸಿ ಮನೆ ನಿರ್ಮಿಸಿಕೊಡುವ ಬಗ್ಗೆ ಭರವಸೆ ನೀಡಿದರು.

ಜಿಲ್ಲಾಧಿಕಾರಿಗಳು ತನ್ನ ಮಾತಿನಂತೇ ನಡೆದರೂ, ಅಧಿಕಾರಿಗಳು ಚಂದ್ರಶೇಖರ್‌ಗೆ ನೀಡಿದ ಜಾಗ ರಬ್ಬರ್ ಕಾಡಾಗಿದ್ದ ಕಾರಣ ಜಾಗ ಹಿಡಿಸದ ಚಂದ್ರಶೇಖರ್ ಮತ್ತೆ ಕಾಡಿಗೆ ಮರಳಿದ್ದಾರೆ. ಚಂದ್ರಶೇಖರ್ ಇರುವ ಕಡೆ ಕಾಡಾನೆಗಳು, ಕಡವೆ, ಚಿರತೆ, ಕಾಡು ಹಂದಿ, ಕಾಡುಕೋಣಗಳೂ ಕಣ್ಣಳತೆ ದೂರದಲ್ಲೇ ಹಾದು ಹೋಗುತ್ತವೆ. ವಿಷಜಂತುಗಳೂ ಇವೆ. ಆದರೂ, ಕಾಡು ಬಿಡಲು ಚಂದ್ರಶೇಖರ್ ಮುಂದಾಗುತ್ತಿಲ್ಲ.

ಕಾಡೇ ಊರು.. ಪ್ರೀಮಿಯರ್​ ಪದ್ಮಿನಿ ಕಾರೇ ಸೂರು... ಚಂದ್ರನ ಬಾಳಲ್ಲಿ ಕಗ್ಗತ್ತಲು..!

ಬುಟ್ಟಿ ಹೆಣೆಯುವುದೇ ಕಾಯಕ:

ಇಷ್ಟೂ ವರ್ಷಗಳಿಂದ ಚಂದ್ರಶೇಖರ್ ಕಾಡಿನೊಳಗೆ ಇದ್ದರೂ ಪೃಕೃತಿಗೆ ಈ ತನಕ ತೊಂದರೆ ನೀಡಿಲ್ಲ. ಕಾಡಿನ‌ ಒಂದು ಗಿಡವನ್ನಾಗಲಿ, ಮರವಾಗಲೀ ಇವರು ಕಡಿದಿಲ್ಲ. ಕಾಡು ಬಳ್ಳಿಯನ್ನು ಬಳಸಿ ಬುಟ್ಟಿ ತಯಾರಿಸಿ ಅದನ್ನು ಮಾರಿ ಬಂದ ಹಣದಿಂದ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಕಾಡಿನಲ್ಲಿರುವ ಯಾವುದೇ ಅರಣ್ಯ ಉತ್ಪನ್ನಗಳನ್ನು ಮುಟ್ಟದ ಕಾರಣದಿಂದಾಗಿ ಅರಣ್ಯ ಇಲಾಖೆಯೂ ಇವರಿಗೆ ತೊಂದರೆ ನೀಡಿಲ್ಲ.

ಅಂಬಾಸಿಡರ್ ಕಾರಿನ ಜತೆ ಸೈಕಲ್​ಅನ್ನೂ ಹೊಂದಿರುವ ವೃದ್ಧ
ಅಂಬಾಸಿಡರ್ ಕಾರಿನ ಜತೆ ಸೈಕಲ್​ಅನ್ನೂ ಹೊಂದಿರುವ ವೃದ್ಧ

ಕೋವಿಡ್ ಸಮಯದಲ್ಲೂ ಕುಗ್ಗದ ‘ಚಂದ್ರ’:

ಆಧಾರ್ ಕಾರ್ಡ್ ಇಲ್ಲದಿದ್ದರೂ, ಅರಂತೋಡು ಗ್ರಾಮ ಪಂಚಾಯಿತಿ ಅಧಿಕಾರಿಗಳು ಇವರಿಗೆ ಕೊರೊನಾ ಲಸಿಕೆ‌ ನೀಡಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಆಹಾರಕ್ಕೆ ತುಂಬಾ ಕಷ್ಟವಾದ ಸಮಯದಲ್ಲಿ ನದಿ ನೀರು ಹಾಗೂ ಕಾಡಿನಲ್ಲಿ ಸಿಗುವ ಹಣ್ಣುಗಳನ್ನು ತಿಂದು ಇವರು ಬದುಕಿದ್ದಾರೆ. ಮಾನಸಿಕವಾಗಿ ಆಘಾತಕ್ಕೊಳಗಾಗಿರುವ ಚಂದ್ರಶೇಖರ್ ತಾನಾಯಿತು ತನ್ನ ಬದುಕಾಯಿತು ಎಂದು ಬದುಕುತ್ತಿದ್ದಾರೆ. ಇಂದಲ್ಲ, ನಾಳೆ ತಾನು ಕಳೆದುಕೊಂಡಿರುವ ಭೂಮಿ ಮರಳಿ ಸಿಗುವ ವಿಶ್ವಾಸದಿಂದ ಎಲ್ಲಾ ದಾಖಲೆಗಳನ್ನೂ ಭದ್ರವಾಗಿ ಕಾಪಾಡಿಕೊಂಡಿದ್ದಾರೆ.

ಇವರಿಗೆ ಸದ್ಯ ಬೇಕಾಗಿರೋದು ಇರುವುದಕ್ಕೊಂದು ಮನೆ ಹಾಗೂ ಘಾಸಿಯಾದ ಮನಸ್ಸಿಗೊಂದು ಚಿಕಿತ್ಸೆ. ಅದು ದೊರಕುವ ಮೂಲಕ ಇವರೂ ಮಾನವ ಸಮಾಜದೊಳಗೆ ಸದಾ ನೆಮ್ಮದಿಯಿಂದ ಬದುಕಲಿ ಎಂಬುದೇ ನಮ್ಮ ಆಶಯ.

Last Updated :Oct 9, 2021, 4:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.