ETV Bharat / state

ವರ್ಷದ ಮೆಲುಕು: ರಾಜ್ಯದ ಕರಾವಳಿಯಲ್ಲಿ ನಡೆದ ಪ್ರಮುಖ ವಿದ್ಯಮಾನಗಳು

author img

By ETV Bharat Karnataka Team

Published : Dec 29, 2023, 2:57 PM IST

Updated : Dec 29, 2023, 4:18 PM IST

Look back at key incidents of Coastal Districts in 2023
ಕರಾವಳಿ ಜಿಲ್ಲೆಗಳ ವರ್ಷದ ಮೆಲುಕು

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗು ಉತ್ತರ ಕನ್ನಡ ಜಿಲ್ಲೆಗಳಲ್ಲಿ 2023ರಲ್ಲಿ ನಡೆದ ಪ್ರಮುಖ ವಿದ್ಯಮಾನಗಳ ಕುರಿತ ಹಿನ್ನೋಟ.

ಮಂಗಳೂರು: ಹೊಸ ವರ್ಷ 2024 ಅನ್ನು ಎದುರುಗೊಳ್ಳುವ ಸಮಯವಿದು. ಇದರ ನಡುವೆ 2023ರಲ್ಲಿ ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಹಲವು ಪ್ರಮುಖ ಘಟನೆಗಳು ನಡೆದಿವೆ. ಅವುಗಳಲ್ಲಿ ಮುಖ್ಯವಾದವು ಹೀಗಿವೆ.

ಮಂಗಳೂರು ಕ್ಷೇತ್ರಕ್ಕೆ ಸ್ವೀಕರ್ ಭಾಗ್ಯ: ರಾಜ್ಯ ವಿಧಾನಸಭೆಗೆ ಮೇ 10ರಂದು ನಡೆದ ಚುನಾವಣೆಯಲ್ಲಿ ದ.ಕ.ಜಿಲ್ಲೆಯ 8 ಕ್ಷೇತ್ರಗಳ ಪೈಕಿ ಬಿಜೆಪಿ 6 ಮತ್ತು ಕಾಂಗ್ರೆಸ್ 2 ಕ್ಷೇತ್ರದಲ್ಲಿ ಜಯ ಸಾಧಿಸಿತ್ತು. ಪುತ್ತೂರಿನಲ್ಲಿ ಪುತ್ತಿಲ ಪರಿವಾರವು ಬಿಜೆಪಿಗೆ ಬಂಡಾಯ ಸಾರಿದ್ದರಿಂದ ಕಾಂಗ್ರೆಸ್ ಅಲ್ಲಿ ಮತ್ತೆ ತನ್ನ ಖಾತೆ ತೆರೆಯಲು ಸಾಧ್ಯವಾಯಿತು. ಮಂಗಳೂರು ಕ್ಷೇತ್ರದಿಂದ ಸತತ 5 ಬಾರಿ ಗೆದ್ದ ಯು.ಟಿ.ಖಾದರ್ ನೂತನವಾಗಿ ಅಸ್ತಿತ್ವಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಮತ್ತೆ ಸಚಿವರಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ವಿಧಾನಸಭೆಯ ಸ್ಪೀಕರ್ ಆಗಿ ನಿಯುಕ್ತಿಗೊಂಡರು.

ಹತ್ಯೆ ಪ್ರಕರಣದಲ್ಲಿ ಪರಿಹಾರ: 2022ರಲ್ಲಿ ಕೊಲೆಯಾದ ಸುರತ್ಕಲ್‌ನ ಫಾಝಿಲ್ ಮತ್ತು ಬೆಳ್ಳಾರೆಯ ಮಸೂದ್ ಕುಟುಂಬಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಪರಿಹಾರ ವಿತರಿಸಿತು. ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಪರಿಹಾರ ನೀಡಲಾಗಿತ್ತು.

ಮೂಡುಬಿದಿರೆಯ ಅಬ್ದುಲ್ ನಝೀರ್ ಆಂಧ್ರ ರಾಜ್ಯಪಾಲ: ದ.ಕ.ಜಿಲ್ಲೆಯ ಮೂಡುಬಿದಿರೆಯವರಾದ ನ್ಯಾಯಾಧೀಶ ಅಬ್ದುಲ್ ನಝೀರ್ ಅವರು ಆಂಧ್ರಪ್ರದೇಶದ ರಾಜ್ಯಪಾಲರಾಗಿ ಫೆ.12ರಂದು ನೇಮಕಗೊಂಡರು. ಅವರು ಸುಪ್ರಿಂ ಕೋರ್ಟ್ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದರು.

'ಮಾಸ್ಟರ್ ಶೆಫ್ ಇಂಡಿಯಾ' ಸಾಧಕ: ಸೋನಿ ಲೈವ್ ಒಟಿಟಿ ಪ್ಲಾಟ್ ಫಾರ್ಮ್ ಮುಂಬೈಯಲ್ಲಿ ಆಯೋಜಿಸಿದ್ದ 'ಮಾಸ್ಟರ್ ಶೆಫ್ ಇಂಡಿಯಾ' ಸ್ಪರ್ಧೆಯಲ್ಲಿ ಮಂಗಳೂರಿನ ಯುವಕ ಮಹಮ್ಮದ್ ಆಶಿಕ್ ಟಾಪ್ ವಿಜೇತರಾಗಿದ್ದರು.

ನಿಧನರಾದ ಪ್ರಮುಖರು: ನಾಡಿನ ಖ್ಯಾತ ಸಾಹಿತಿ, ಹಿರಿಯ ಲೇಖಕಿ, ಮಹಿಳಾ ಧ್ವನಿ, ಪ್ರಗತಿಪರ ಚಿಂತಕಿ, ನೃಪತುಂಗ ಪ್ರಶಸ್ತಿ ಪುರಸ್ಕೃತೆ ಡಾ.ಸಾರಾ ಅಬೂಬಕರ್ ಜ.10ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ತೆಂಕುತಿಟ್ಟಿನ ಹೆಸರಾಂತ ಭಾಗವತ, ಬಲಿಪ ಶೈಲಿಯ ಹಾಡುಗಾರಿಕೆಗೆ ಖ್ಯಾತರಾಗಿದ್ದ ಬಲಿಪ ನಾರಾಯಣ ಭಾಗವತ ಫೆ.16ರಂದು ಸ್ವಗೃಹದಲ್ಲಿ ನಿಧನರಾಗಿದ್ದರು.

ಲೇಖಕ, ಚಿಂತಕ, ನಿವೃತ್ತ ಪ್ರಾಧ್ಯಾಪಕ, ಸಾಮಾಜಿಕ ಹೋರಾಟಗಾರ ಪ್ರೊ.ಎಚ್.ಪಟ್ಟಾಭಿರಾಮ ಸೋಮಯಾಜಿ ಜು. 1ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು.

ಉಡುಪಿ ಜಿಲ್ಲೆಯಲ್ಲಿ ನಡೆದ ಪ್ರಮುಖ ವಿದ್ಯಮಾನಗಳು: ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ: ನ.12ರಂದು ನೇಜಾರುವಿನ ಮನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ತನ್ನ ಸಹೋದ್ಯೋಗಿ, ಆಕೆಯ ತಾಯಿ, ಅಕ್ಕ ಹಾಗೂ ತಮ್ಮನನ್ನು ಭೀಕರವಾಗಿ ಹತ್ಯೆಗೈದಿದ್ದ ಆರೋಪಿ ಪ್ರವೀಣ್ ಚೌಗುಲೆಯನ್ನು ನ.14ರಂದು ಪೊಲೀಸರು ಬಂಧಿಸಿದ್ದರು.

ಪರಶುರಾಮ ಥೀಮ್ ಪಾರ್ಕ್​ ವಿವಾದ: ಕೋಟ್ಯಂತರ ರೂ. ವ್ಯಯಿಸಿ ಜ.27ರಂದು ಉದ್ಘಾಟನೆಗೊಂಡಿದ್ದ ಕಾರ್ಕಳದ ಬೈಲೂರು ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಸ್ಥಾಪಿಸಲಾದ ಪರಶುರಾಮ ಪ್ರತಿಮೆಯಲ್ಲಿ ಬಿರುಕು ಕಂಡುಬಂದಿತ್ತು. ಪ್ರತಿಮೆ ನಕಲಿ ಎಂದು ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತ ತನಿಖೆಗೆ ಆಗ್ರಹಿಸಿ ಸಾಕಷ್ಟು ಪ್ರತಿಭಟನೆಗಳು ನಡೆದವು. ಬಳಿಕ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿತ್ತು.

ಪದ್ಮಪ್ರಿಯ ಸಾವು ಪ್ರಕರಣ-ಅತುಲ್ ರಾವ್​ಗೆ 1 ವರ್ಷ ಶಿಕ್ಷೆ: ನ.10ರಂದು ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್ ಪತ್ನಿ ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೋಸ, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿಸಿರುವ ಆರೋಪದಲ್ಲಿ ಆರೋಪಿ ಅತುಲ್ ರಾವ್​ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು.

ಬಿಜೆಪಿ ಟಿಕೆಟ್ ಆರೋಪ ಪ್ರಕರಣ: ಸೆ.12ರಂದು ಉದ್ಯಮಿ ಹಾಗೂ ಬಿಜೆಪಿ ಮುಖಂಡ ಗೋವಿಂದ ಬಾಬು ಪೂಜಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂ. ವಂಚಿಸಿದ ಆರೋಪದಲ್ಲಿ ಚೈತ್ರಾ ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಉಡುಪಿಯಲ್ಲಿ ಬಂಧಿಸಿದ್ದರು.

ಉತ್ತರ ಕನ್ನಡದಲ್ಲಿ ನಡೆದ ಪ್ರಮುಖ ಘಟನೆಗಳು- ಅಂಕೋಲಾದ ಬಾಳೆಗುಳಿ ಬಳಿ ಕಾರು-ಬಸ್ ಅಪಘಾತ: ಗೋವಾದಲ್ಲಿ ಪಾರ್ಟಿ ಮುಗಿಸಿ ವಾಪಸಾಗುತ್ತಿದ್ದವರು ಹೊಸ ವರ್ಷದ ದಿನವೇ ಕಾರು ಹಾಗೂ ಬಸ್ ನಡುವೆ ನಡೆದ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದರು. ತಮಿಳುನಾಡು ಮೂಲದ ಒಟ್ಟು ಐದು ಮಂದಿ ಗೋವಾದಿಂದ ಹೊಸ ವರ್ಷಾಚರಣೆ ಮುಗಿಸಿಕೊಂಡು ಪುನಃ ಕಾರಿನಲ್ಲಿ ತಮಿಳುನಾಡಿಗೆ ಪ್ರಯಾಣಿಸುತ್ತಿದ್ದರು. ಆದರೆ ಈ ವೇಳೆ ಚಾಲಕನ ನಿರ್ಲಕ್ಷ್ಯತನದಿಂದ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಎದುರಿನಿಂದ ಬರುತ್ತಿದ್ದ ಬಸ್‌ಗೆ ಡಿಕ್ಕಿಯಾಗಿ ಘಟನೆ ಸಂಭವಿಸಿತ್ತು.

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಹಾಲಕ್ಕಿ ಸುಗ್ಗಿ: ದೆಹಲಿಯಲ್ಲಿ ನಡೆದ 74ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ನಾರಿಶಕ್ತಿ ಟ್ಯಾಬ್ಲೋ ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಹಾಲಕ್ಕಿ ಸುಗ್ಗಿ ಕುಣಿತದ ಪ್ರದರ್ಶನಕ್ಕೂ ಕೂಡ ಅವಕಾಶ ನೀಡಲಾಗಿತ್ತು. ವಿದ್ಯಾಭ್ಯಾಸ ಇಲ್ಲದೇ ಇದ್ದರೂ ನಾಡಿಗೆ ಅಪ್ರತಿಮ ಕೊಡುಗೆ ನೀಡಿ ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರರಾಗಿರುವ ಸಾಲುಮರದ ತಿಮ್ಮಕ್ಕ, ವೃಕ್ಷಮಾತೆ ತುಳಸಿ ಗೌಡ ಹಾಗೂ ಸೂಲಗಿತ್ತಿ ನರಸಮ್ಮ ಅವರ ಟ್ಯಾಬ್ಲೋ ಪ್ರದರ್ಶನ ನಡೆದಿತ್ತು.

ಠಾಣೆ ಮೆಟ್ಟಿಲೇರಿದ್ದ ಹಾಲಿ-ಮಾಜಿ ಶಾಸಕರು: ಪಿಡಿಒ ವರ್ಗಾವಣೆ ಸಂಬಂಧ ಅಂದು ಶಾಸಕರಾಗಿದ್ದ ಸತೀಶ್ ಸೈಲ್ ಹಾಗೂ ಹಾಲಿ ಶಾಸಕಿಯಾಗಿದ್ದ ರೂಪಾಲಿ ನಾಯ್ಕ್​ ನಡುವೆ ಜಿಲ್ಲಾ ಪಂಚಾಯಿತಿಯಲ್ಲಿ ವಾಗ್ವಾದ ನಡೆದು, ಕೊನೆಗೆ ಇಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿ ಪರಸ್ಪರ ದೂರು ದಾಖಲಿಸಿದ್ದರು.

ಸದನದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೂಗು: ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವಂತೆ ಜಿಲ್ಲೆಯ ಜನತೆ ಹಲವು ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಆಡಳಿತ ಪಕ್ಷ ಬಿಜೆಪಿಗೂ ಇದು ಆತಂಕ ತಂದೊಡ್ಡಿತ್ತು. ಕೊನೆಗೆ ಜಿಲ್ಲೆಯ ಶಾಸಕರು ಸದನದಲ್ಲಿ ಧ್ವನಿ ಎತ್ತಿ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಗೆ ಬೇಡಿಕೆ ಇಟ್ಟಿದ್ದರು. ಕುಮಟಾದಲ್ಲಿ ಜಾಗ ಗುರುತಿಸಿದ್ದು ಮುಖ್ಯಮಂತ್ರಿಯೇ ಬಂದು ಭೂಮಿ ಪೂಜೆ ಮಾಡುತ್ತಾರೆ ಎಂದು ಹೇಳಲಾಗಿತ್ತು. ಇವರೆಗೂ ಅದು ಭರವಸೆಯಾಗಿಯೆ ಉಳಿಯುವಂತಾಗಿದೆ.

ಚುನಾವಣೆಯಲ್ಲಿ ಬಿಜೆಪಿಗೆ ಸೋಲು: ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಹಾರಿದ್ದ ಶಾಸಕ ಶಿವರಾಮ್ ಹೆಬ್ಬಾರ್ ಒಳಗೊಂಡು ಐದು ಶಾಸಕರೊಂದಿಗೆ ಜಿಲ್ಲೆಯಲ್ಲಿ ಆಡಳಿತ ನಡೆಸುತ್ತಿದ್ದ ಬಿಜೆಪಿ ಕಳೆದ ಬಾರಿ ಚುನಾವಣೆಯಲ್ಲಿ ಕೇವಲ ಎರಡು ಸ್ಥಾನಗಳಿಗೆ ಮಾತ್ರ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಸೋಲೇ ಕಾಣದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭೀಮಣ್ಣ ನಾಯ್ಕ ವಿರುದ್ಧ ಸೋಲು ಕಂಡಿದ್ದರು. ಕೇವಲ ಒಂದು ಸ್ಥಾನದಲ್ಲಿದ್ದ ಕಾಂಗ್ರೆಸ್ ಇದೀಗ ನಾಲ್ಕು ಸ್ಥಾನಗಳನ್ನು ಗೆದ್ದುಕೊಂಡಿತ್ತು.

ದೇಶಪಾಂಡೆಗೆ ಶಾಕ್ ನೀಡಿದ ಹೈಕಮಾಂಡ್: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದ್ದರಿಂದ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ.ದೇಶಪಾಂಡೆಗೆ ಶಾಕ್ ನೀಡಿತ್ತು. ಆರ್.ವಿ.ದೇಶಪಾಂಡೆ ಬದಲಿಗೆ ಜಿಲ್ಲೆಯಲ್ಲಿ ಮೀನುಗಾರ ಮುಖಂಡ ಮಂಕಾಳ ವೈದ್ಯರಿಗೆ ಮೀನುಗಾರಿಕಾ ಖಾತೆ ನೀಡಿದೆ.

ಇದನ್ನೂ ಓದಿ: ಹಿನ್ನೋಟ: ದೇಶವನ್ನೇ ಬೆಚ್ಚಿ ಬೀಳಿಸಿದ 2023ರ ಮಣಿಪುರ ಜನಾಂಗೀಯ ಹಿಂಸೆ

Last Updated :Dec 29, 2023, 4:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.