ETV Bharat / state

ಕೇಸರಿ ಶಾಲಿಗೆ ರಾಜ್ಯದಲ್ಲಿ ನಿಷೇಧವಿಲ್ಲ, ಅಧಿಕಾರಿಗಳ ವಿರುದ್ಧ ಕಾಂಗ್ರೆಸ್​ ದ್ವೇಷ ಸಾಧಿಸಲು ಹೊರಟಿದೆ: ಕೋಟ ಶ್ರೀನಿವಾಸ ಪೂಜಾರಿ

author img

By

Published : May 24, 2023, 1:12 PM IST

kota srinivas poojary
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಪೊಲೀಸರು ಕೇಸರಿ ಶಾಲು ಧರಿಸಿದ್ದ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ವಾಗ್ದಾಳಿ ನಡೆಸಿದ್ದಕ್ಕೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು : ಪೊಲೀಸ್ ಅಧಿಕಾರಿಗಳು ಕೇಸರಿ ಶಾಲು ಧರಿಸಿದ್ದ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಹರಿಹಾಯ್ದ ವಿಚಾರದ ಕುರಿತು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ. " ಕೇಸರಿ ಶಾಲು ಧರಿಸಲು ನಮ್ಮ ರಾಜ್ಯದಲ್ಲಿ ನಿಷೇಧವಿಲ್ಲ. ಕರ್ತವ್ಯದಲ್ಲಿರುವಾಗ ಅಂತಹ ‌ಪ್ರಯೋಗ ಯಾರೂ ಮಾಡಿಲ್ಲ. ಖಾಸಗಿ ಜೀವನದಲ್ಲಿ ಅವರು ಯಾವ ಉಡುಪನ್ನು ಬೇಕಾದರೂ ಹಾಕಿಕೊಳ್ಳಬಹುದು. ಡಿಕೆಶಿ ದ್ವೇಷ ತೀರಿಸಿಕೊಳ್ಳುವಂತಹ ಮಾತುಗಳನ್ನಾಡಿದ್ದು ಖಂಡಿತಾ ಸರಿಯಲ್ಲ" ಎಂದು ಹೇಳಿದರು.

ಡಿಕೆಶಿ ಹಾಗೂ ಸಿದ್ದರಾಮಯ್ಯನವರು ಹಿಂದಿನ ಸರ್ಕಾರದ ಸಂದರ್ಭದಲ್ಲಿದ್ದ ಅಧಿಕಾರಿಗಳ ಮೇಲೆ ಏನೇನು ದ್ವೇಷ ಸಾಧಿಸಲು ಸಾಧ್ಯವಿದೆಯೋ ಅದೆಲ್ಲವನ್ನೂ ಮಾಡುವ ವಾತಾವರಣ ಈಗ ಕಂಡು ಬರುತ್ತಿದೆ. ಇದು ನಿಜಕ್ಕೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರುವುದಿಲ್ಲ. ಅವರು ಆ ನಿಲುವನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.

ನೈತಿಕ ಪೊಲೀಸ್ ಗಿರಿಯನ್ನು ನಿಲ್ಲಿಸುತ್ತೇವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಸಚಿವರು, "ಮುಂದಿನ ದಿನಗಳಲ್ಲಿ ಹಿಂದುತ್ವಕ್ಕೆ ಹಾಗೂ ಹಿಂದೂಗಳಿಗೆ ಬಹಳ ಕಠಿಣವಾಗಲಿದೆ ಎಂಬುದು ಸಿದ್ದರಾಮಯ್ಯ ಹಾಗೂ ಡಿಕೆಶಿಯವರ ಭಾವನೆಗಳಿಂದ ಅರ್ಥವಾಗುತ್ತಿದೆ. ಓಲೈಕೆ ಮಾಡಬೇಕೆನ್ನುವ ಉದ್ದೇಶದಿಂದ ಹಿಂದುತ್ವದ ಚಟುವಟಿಕೆಗಳನ್ನು ನಿಷೇಧಿಸುತ್ತೇವೆ, ಪೊಲೀಸ್ ಗಿರಿ ಮಾಡಿದ್ದಾರೆಂದು ಆರೋಪಿಸಿ ಬಂಧನ ಮಾಡುವ ಪ್ರಕ್ರಿಯೆ ಮುಂದೆ ಆಗಬಹುದು ಎಂದು ನಮಗನಿಸುತ್ತದೆ‌. ಅಲ್ಲದೆ, ಬಿಜೆಪಿ ಸರ್ಕಾರ ತಂದಿರುವ ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸುವ ಕಾರ್ಯತಂತ್ರವನ್ನು ಸಿದ್ದರಾಮಯ್ಯ ರೂಪಿಸುತ್ತಾರೆ ಎಂದೆನಿಸುತ್ತದೆ. ಏನೇ ಆದರೂ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷವಾಗಿ ಇದೆಲ್ಲವನ್ನೂ ವಿರೋಧಿಸಿ ಜನಸಾಮಾನ್ಯರಿಗೆ ರಕ್ಷಣೆ ಕೊಡುವ ಕಾರ್ಯವನ್ನು ನಾವು ಮಾಡಲಿದ್ದೇವೆ ಎಂದರು.

ಇದನ್ನೂ ಓದಿ : ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಶಾಸಕ ಯು ಟಿ ಖಾದರ್​.. ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಸಾಥ್

40% ಕಮಿಷನ್ ವಿಚಾರದಲ್ಲಿ ತನಿಖೆ ನಡೆಸಲಾಗುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆಯ ಬಗ್ಗೆ ಮಾತನಾಡಿದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ತನಿಖೆಯನ್ನು ಮುಕ್ತಕಂಠದಿಂದ ಸ್ವಾಗತಿಸುತ್ತೇವೆ. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗದ ಮಂತ್ರಿಯಾಗಿದ್ದ ನನ್ನಿಂದಲೇ ತನಿಖೆ ಆರಂಭಿಸಲಿ. ಯಾವ ತನಿಖೆಯಿಂದ ಏನಾಗುತ್ತದೆ ಎಂಬುದನ್ನು ನೋಡೋಣ ಎಂದು ಹೇಳಿದರು.

ಇದನ್ನೂ ಓದಿ : ಪೊಲೀಸರನ್ನು ಕಾಂಗ್ರೆಸ್ಸೀಕರಣ ಮಾಡುವ ಪ್ರಯತ್ನ: ಆರಗ ಜ್ಞಾನೇಂದ್ರ

ಆರಗ ಜ್ಞಾನೇಂದ್ರ ಆರೋಪ : ಇನ್ನೊಂದೆಡೆ ಈ ಕುರಿತು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. "ಪೊಲೀಸರನ್ನು ಕಾಂಗ್ರೆಸ್ಸೀಕರಣ ಮಾಡುವ ಪ್ರಯತ್ನವನ್ನು ನಿನ್ನೆಯ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಮಾಡಿದ್ದಾರೆ. ಕರ್ನಾಟಕದ ಪೊಲೀಸ್ ವ್ಯವಸ್ಥೆ ತುಂಬಾ ಚೆನ್ನಾಗಿದೆ. ಧರ್ಮ, ಜಾತಿ ಆಧಾರದ ಮೇಲೆ ಯಾರೂ ಏನೂ ಮಾಡುವುದಿಲ್ಲ. ನಿನ್ನೆ ನೀವು ನಾವು ಹೇಳಿದಂತೆ ಮಾಡಬೇಕು ಎಂದು ಪೊಲೀಸರಿಗೆ ಒಂದು ತರಹ ಧಮ್ಕಿ ಹಾಕಿದ್ದೀರಿ" ಎಂದು ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.