ETV Bharat / state

ಮಂಗಳೂರಿನಲ್ಲಿ ನೀಗಿದ ಲಿವರ್ ಕಸಿ ಕೊರತೆ: ಕೆಎಂಸಿ ಆಸ್ಪತ್ರೆಯಿಂದ ಚಿಕಿತ್ಸೆ ಆರಂಭ

author img

By

Published : Nov 4, 2022, 1:09 PM IST

ಈವರೆಗೆ ಕರಾವಳಿ ಭಾಗದವರು ಯಕೃತ್ ಕಸಿ ಮಾಡಲು ಬೆಂಗಳೂರು, ಚೆನ್ನೈಗೆ ಹೋಗಬೇಕಿತ್ತು. ಆದರೆ ಇದೀಗ ಮಂಗಳೂರಿನ ಜ್ಯೋತಿಯಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ಯಕೃತ್ ಕಸಿ ಚಿಕಿತ್ಸೆ ಆರಂಭಿಸಲಾಗಿದೆ.

Mangalore KMC Hospital
ಮಂಗಳೂರು ಕೆಎಂಸಿ ಆಸ್ಪತ್ರೆ

ಮಂಗಳೂರು: ಬಂದರು ನಗರಿ ಮಂಗಳೂರು ಆಸ್ಪತ್ರೆಗಳ ನಗರವೂ ಹೌದು. ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಕಾರಣಕ್ಕಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಗಳಿಸಿದೆ. ಆದರೆ ಲಿವರ್ ಕಸಿ ಚಿಕಿತ್ಸೆಯ ಕೊರತೆ ನಗರದಲ್ಲಿ ಈವರೆಗೆ ಕಾಡುತ್ತಿದ್ದು ಇದೀಗ ನಿವಾರಣೆಯಾಗಿದೆ.

ಮನುಷ್ಯನಿಗೆ ದೇಹದ ಎಲ್ಲಾ ಅಂಗಗಳು ಅತ್ಯಮೂಲ್ಯ. ಆದರೆ ಮನುಷ್ಯನ ದೇಹದಲ್ಲಿ ಎಂಜಿನ್​ನಂತೆ ಕೆಲಸ ಮಾಡುವುದು ಯಕೃತ್ (ಲಿವರ್). ಯಕೃತ್​ಗೆ ಆಗುವ ಆರೋಗ್ಯ ಸಮಸ್ಯೆಗೆ ನಾನಾ ಬಗೆಯ ಚಿಕಿತ್ಸೆಗಳು ಲಭ್ಯವಿದೆ. ಆದರೆ ಯಾವ ಚಿಕಿತ್ಸೆಯಲ್ಲಿಯೂ ಯಕೃತ್​ನ ಖಾಯಿಲೆ ಗುಣವಾಗದಿದ್ದರೆ ಕೊನೆಗೆ ಇರುವ ಪರಿಹಾರ ಯಕೃತ್ ಕಸಿ ಮಾಡುವುದು.

ಯಕೃತ್ ಕಸಿ ಮಾಡುವ ಚಿಕಿತ್ಸೆ ಮಂಗಳೂರಿನಲ್ಲಿ ಈವರೆಗೆ ಇರಲಿಲ್ಲ. ಮಂಗಳೂರಿನಲ್ಲಿ ಹಲವು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು, ಹಲವು ಖಾಸಗಿ ವೈದ್ಯಕೀಯ ಕಾಲೇಜುಗಳಿದ್ದರೂ ಯಕೃತ್ ಕಸಿ ಮಾಡುವ ಚಿಕಿತ್ಸೆ ಇಲ್ಲಿರಲಿಲ್ಲ. ಇದೀಗ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಯಕೃತ್ ಕಸಿ ಚಿಕಿತ್ಸೆಯನ್ನು ಮಾಡಲಾಗುತ್ತಿದೆ. ಈಗಾಗಲೇ ಎರಡು ಮಂದಿಗೆ ಯಕೃತ್ ಕಸಿ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ.

ಮಂಗಳೂರು ಕೆಎಂಚಿ ಆಸ್ಪತ್ರೆಯಲ್ಲಿ ಲಿವರ್​ ಕಸಿ ಚಿಕಿತ್ಸೆ

ಯಕೃತ್ ಕಸಿ ಚಿಕಿತ್ಸೆ ಹೇಗೆ ನಡೆಯುತ್ತದೆ?: ಯಕೃತ್ ಕಸಿ ಚಿಕಿತ್ಸೆ ಸುಲಭವಾಗಿ ನಡೆಯುವ ಸರ್ಜರಿ ಅಲ್ಲ. ಮೊದಲಿಗೆ ಮೆದುಳು ನಿಷ್ಕ್ರೀಯವಾಗಿ ಸಾವಿನ ಅಂಚಿನಲ್ಲಿರುವ ರೋಗಿಯ ಸಂಬಂಧಿಕರು ಅಂಗಾಂಗ ದಾನ ಮಾಡಲು ಒಪ್ಪಿಗೆ ನೀಡಿದ್ದಲ್ಲಿ ನಿಯಮಾನುಸಾರವಾಗಿ ಅಂಗಾಂಗ ಕಸಿ ಮಾಡಲಾಗುತ್ತದೆ. ಇದರಲ್ಲಿ ಯಕೃತ್ ಅಂಗಾಂಗ ತೆಗೆದು ಆ ಸಂದರ್ಭದಲ್ಲಿ ಯಾರಿಗೆ ಯಕೃತ್ ಕಸಿ ಮಾಡುವುದು ಅಗತ್ಯವಿದೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಇದರಲ್ಲಿ ಆಯ್ಕೆ ಮಾಡಿದ ಓರ್ವ ರೋಗಿಗೆ ಯಕೃತ್ ಅಂಗವನ್ನು ಜೋಡಿಸಲಾಗುತ್ತದೆ. ಹತ್ತು ಹಲವು ವೈದರು ಹನ್ನೆರಡು ಗಂಟೆಗೂ ಅಧಿಕ ಸಮಯ ತೆಗೆದುಕೊಂಡು ನಡೆಸುವ ಚಿಕಿತ್ಸೆ ಇದಾಗಿದೆ.

ಈವರೆಗೆ ಕರಾವಳಿ ಭಾಗದವರು ಯಕೃತ್ ಕಸಿ ಮಾಡಲು ಬೆಂಗಳೂರು, ಚೆನ್ನೈಗೆ ಹೋಗಬೇಕಿತ್ತು. ಆದರೆ ಇದೀಗ ಮಂಗಳೂರಿನ ಜ್ಯೋತಿಯಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ಯಕೃತ್ ಕಸಿ ಚಿಕಿತ್ಸೆಯನ್ನು ಆರಂಭಿಸಲಾಗಿದೆ. ಇದರಿಂದ ಯಕೃತ್ ಚಿಕಿತ್ಸೆ ಮಾಡಲು ಕಾಯುತ್ತಿರುವ ಕರಾವಳಿಯ ರೋಗಿಗಳಿಗೆ ಅನುಕೂಲವಾಗಲಿದೆ. ಜೊತೆಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಕಾರಣಕ್ಕಾಗಿ ಮಂಗಳೂರಿಗೆ ಬರುತ್ತಿರುವ ರೋಗಿಗಳಿಗೂ ಅನುಕೂಲವಾಗಲಿದೆ.

ಮಣಿಪಾಲ್ ಆಸ್ಪತ್ರೆಗಳ ಮುಖ್ಯ ಯಕೃತ್ ಕಸಿ ಶಸ್ತ್ರಚಿಕಿತ್ಸಕ ಡಾ ರಾಜೀವ್ ಲೋಚನ್ ಮಾತನಾಡಿ, ಮಂಗಳೂರಿನಲ್ಲಿ ಇಬ್ಬರಿಗೆ ಯಶಸ್ವಿ ಲಿವರ್ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಒಂದು ಲಿವರ್ ಕಸಿ ಶಸ್ತ್ರಚಿಕಿತ್ಸೆ ನಡೆಸಬೇಕಾದರೆ ಸುಮಾರು 40 ಮಂದಿಯ ತಂಡದ ಕೆಲಸ ಬೇಕಾಗುತ್ತದೆ. ಲಿವರ್ ಎಂಬುದು ನಮ್ಮ ದೇಹದ ಇಂಜಿನ್. ಅದನ್ನು ಇನ್ನೊಂದಕ್ಕೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ದೇಹದಲ್ಲಿ ಕೂದಲ ಬೆಳವಣಿಗೆ ಹಿಡಿದು, ದೇಹದ ಕೆಟ್ಟ ವಸ್ತುಗಳನ್ನು ನಾಶಪಡಿಸಲು ಲಿವರ್ ಕಾರ್ಯನಿರ್ವಹಿಸುತ್ತದೆ. ಈ ಸಂಕೀರ್ಣ ಶಸ್ತ್ರಚಿಕಿತ್ಸೆ ಮಂಗಳೂರಿನಲ್ಲಿ ಬಂದಿದ್ದು, ಇಲ್ಲಿನವರಿಗೆ ಪ್ರಯೋಜನವಾಗಲಿದೆ ಎಂದರು.

ಯಕೃತ್ ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಉಡುಪಿಯ ವಕೀಲರಾದ ಗಿರೀಶ್ ಐತಾಳ್ ಮಾತನಾಡಿ, ಲಿವರ್ ಸಮಸ್ಯೆಯಿಂದ ಜೀವನವೇ ಮುಗಿಯಿತು ಅಂದುಕೊಂಡಿದ್ದೆ. ನನ್ನ ಬದುಕು ಕೊನೆಯಾಯಿತು ಅಂದುಕೊಂಡಿದ್ದೆ. ಕೆಎಂಸಿ ಆಸ್ಪತ್ರೆಯ ವೈದ್ಯರು ದೇವರಂತೆ ಬಂದು ನನಗೆ ಎರಡನೇ ಬದುಕು ನೀಡಿದ್ದಾರೆ. ಚಿಕಿತ್ಸೆ ಬಳಿಕ ನಾನು ಈಗ ಆರೋಗ್ಯವಾಗಿದ್ದೇನೆ. ಹನ್ನೆರಡು ಗಂಟೆ ಶಸ್ತ್ರಚಿಕಿತ್ಸೆ ನಡೆದಿದ್ದರೂ ನನಗೆ ಅದು ಗೊತ್ತಾಗಲೇ ಇಲ್ಲ. ಮಂಗಳೂರಿನ ಆಸ್ಪತ್ರೆ ವೈದ್ಯರ ಸಿಬ್ಬಂದಿ ಆರೈಕೆ ಖುಷಿ ಕೊಟ್ಟಿದೆ ಎಂದಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ನಡೆದ ಹೃದಯ ವಾಲ್ವ್ ಬದಲಿ ಜೋಡಣೆ: ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದವರಿಗೆ ವರದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.