ETV Bharat / state

ಮಂಗಳೂರಿನಲ್ಲಿ ನೈತಿಕ ಪೊಲೀಸ್​ಗಿರಿ ತಡೆಯಲು ಆ್ಯಂಟಿ ಕಮ್ಯೂನಲ್‌ ವಿಂಗ್ : ಗೃಹ ಸಚಿವ ಪರಮೇಶ್ವರ್ ಘೋಷಣೆ

author img

By

Published : Jun 6, 2023, 3:55 PM IST

ಮಂಗಳೂರು ನಗರ ಕಮಿಷನರೇಟ್​ ವ್ಯಾಪ್ತಿಯಲ್ಲಿ ನೈತಿಕ ಪೊಲೀಸ್​​ಗಿರಿ ತಡೆಯಲು ಆ್ಯಂಟಿ ಕಮ್ಯುನಲ್​​ ವಿಂಗ್​ ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.

hm g parameshwar
ಗೃಹ ಸಚಿವ ಪರಮೇಶ್ವರ್

ಮಂಗಳೂರಿನಲ್ಲಿ ನೈತಿಕ ಪೊಲೀಸ್​ಗಿರಿ ತಡೆಯಲು ಆ್ಯಂಟಿ ಕಮ್ಯೂನಲ್‌ ವಿಂಗ್ : ಗೃಹ ಸಚಿವ ಪರಮೇಶ್ವರ್ ಘೋಷಣೆ

ಮಂಗಳೂರು : ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಆರಂಭಿಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಘೋಷಿಸಿದ್ದಾರೆ. ನಗರದಲ್ಲಿ ‌ಇಂದು ಪಶ್ಚಿಮ ವಲಯ ಐಜಿಪಿ ವ್ಯಾಪ್ತಿಯ ಮತ್ತು ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ಇಂದು ಭಯದ ವಾತಾವರಣ ಇದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿಯನ್ನು ನಾವು ತಡೆಯಲಿದ್ದೇವೆ. ಕೋಮುಸೌಹಾರ್ದತೆಯನ್ನು ತರಲು ಪೊಲೀಸರಿಗೆ ಕಠಿಣ ಸೂಚನೆ ನೀಡಿದ್ದೇನೆ.‌ ನೈತಿಕ ಪೊಲೀಸ್​ಗಿರಿ ಇಲ್ಲಿ ತುಂಬಾ ನಡೆಯುತ್ತಿದೆ. ನೈತಿಕ ಪೊಲೀಸ್ ಗಿರಿಯನ್ನು ನಾವು ತಡೆಯದಿದ್ದರೆ ಇಲಾಖೆ, ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ. ನೈತಿಕ ಪೊಲೀಸ್​ಗಿರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಇದನ್ನು ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡುತ್ತಿದ್ದೇವೆ ಎಂದರು.

ಕರಾವಳಿ ಭಾಗದಲ್ಲಿ ಒಳ್ಳೆಯ ಜನ ಇದ್ದಾರೆ ಎಂಬ ನಂಬಿಕೆ‌ ಇದೆ. ಆದರೆ ಅದರ ಜೊತೆಗೆ ದ.ಕ ಜಿಲ್ಲೆಯಲ್ಲಿ ಶಾಂತಿ ಇಲ್ಲ, ಕೋಮು ಸಾಮರಸ್ಯ ಇಲ್ಲ ಎಂಬ ಮಾತೂ ಇದೆ. ಪ್ರಣಾಳಿಕೆ ಸಮಿತಿ ಅಧ್ಯಕ್ಷನಾದ ಸಂದರ್ಭದಲ್ಲೂ ಇಪ್ಪತ್ತು ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿಯಾಗಿದ್ದೆ. ಆಗ ಇಲ್ಲಿನ ಜನ ಶಾಂತಿ ನೆಲೆಸುವಂತೆ ಮಾಡಿ ಎಂಬ ಮಾತೂ ಹೇಳಿದ್ದಾರೆ. ಕೋಮು ಸೌಹಾರ್ದತೆಗೆ ಈ ಹಿಂದೆ ಪಾದಯಾತ್ರೆಯನ್ನೂ ಮಾಡಿದ್ದೆ ಎಂದು ಹೇಳಿದರು.

ಮಂಗಳೂರು ಕಮಿಷನರೇಟ್​​ ವ್ಯಾಪ್ತಿಯಲ್ಲಿ ಈ ವಿಂಗ್ ಪ್ರಾರಂಭ ಮಾಡುತ್ತಿದ್ದೇವೆ. ಈ ವಿಂಗ್ ನಲ್ಲಿ ಸಮರ್ಥವಾದ ಅಧಿಕಾರಿಗಳು ಇರಲಿದ್ದಾರೆ. ಇದರ ರೂಪುರೇಷೆಯನ್ನು ಮಂಗಳೂರು ನಗರ ಪೊಲೀಸ್ ‌ಕಮೀಷನರ್ ಕುಲದೀಪ್ ಕುಮಾರ್ ಜೈನ್ ಮಾಡಲಿದ್ದಾರೆ. ಆ್ಯಂಟಿ ಕಮ್ಯೂ‌ನಲ್ ವಿಂಗ್ ನ್ನು ಮುಂದೆ ಎಲ್ಲೆಲ್ಲಿ ಅವಶ್ಯಕತೆ ಬರುತ್ತದೆಯೊ ಪ್ರಾರಂಭಿಸುತ್ತೇವೆ. ಇರುವ ಪೊಲೀಸ್ ಬಲದಲ್ಲಿಯೆ ಈ ತಂಡವನ್ನು ಮಾಡಲಿದ್ದೇವೆ. ಈ ವಿಂಗ್ ಕಾನೂನಿನ ಚೌಕಟ್ಟು ಮೀರುವವರನ್ನು, ಸೈಬರ್ ಕ್ರೈಮ್ ಮೂಲಕ ಕೋಮು ದ್ವೇಷ ಹರಡುವವರನ್ನು, ನೈತಿಕ ಪೊಲೀಸ್​ಗಿರಿ ಮಾಡುವವರನ್ನು ಹತ್ತಿಕ್ಕಲಿದೆ. ಈ ವಿಂಗ್ ನ ಅಧಿಕಾರಿಗಳು ಕಾಲೇಜಿಗೆ ಹೋಗಿ ವಿದ್ಯಾರ್ಥಿಗಳ ಜೊತೆಗೆ ಮಾತನಾಡಿ ಜಾಗೃತಿ ಮೂಡಿಸಲಿದ್ದಾರೆ ಎಂದು ತಿಳಿಸಿದರು.

ಯಾರೇ ಆಗಲಿ ಎಷ್ಟು ದೊಡ್ಡ ಹುದ್ದೆಯಲ್ಲಿರಲಿ, ಕಾನೂನು ‌ಕೈಗೆತ್ತಿಕೊಂಡರೆ ಪೊಲೀಸ್ ‌ಇಲಾಖೆ ಬಿಡುವುದಿಲ್ಲ. ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಇಷ್ಟ ಬಂದ ಹಾಗೆ ಮಾತಾಡಿದ್ರೆ ಕಾನೂನು ಇದೆ. ಕಾನೂನು ನೋಡಿಕೊಳ್ಳುತ್ತದೆ. ಪ್ರಚೋದನೆ ಮಾಡುವವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ನೈತಿಕ ಪೊಲೀಸ್​ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿರಿಯೋಡಿಕಲ್ ರಿವ್ಯೂ ಮಾಡಿ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಪೊಲೀಸ್​ ಇಲಾಖೆಗೆ ಅನೇಕ ಸವಾಲುಗಳಿವೆ : ಇವತ್ತು ಪಶ್ಚಿಮ ವಲಯದ ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿ, ದ.ಕ ಮತ್ತು ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಪರಿಶೀಲನೆ ಮಾಡಿದ್ದೇನೆ. ಪೊಲೀಸ್ ‌ಇಲಾಖೆಯ ಸವಾಲುಗಳ ಬಗ್ಗೆ ಪರಿಶೀಲನೆ ‌ಮಾಡಿದ್ದೇನೆ. ನನಗೆ ಈ ಇಲಾಖೆ ಹೊಸತಲ್ಲ, ಮೂರನೇ ಬಾರಿ‌ ಈ ಇಲಾಖೆಗೆ ಬಂದಿದ್ದೇನೆ. ಈಗ ಹೊಸ ಸವಾಲು ಇದೆ. ಪೊಲೀಸ್ ಇಲಾಖೆಗೆ ಅನೇಕ ಸವಾಲು ಇವೆ ಎಂದು ಸಚಿವ ಜಿ ಪರಮೇಶ್ವರ್​ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ದಂಧೆ ಜಾಸ್ತಿಯಾಗಿದೆ. ಯುವಕರಲ್ಲಿ ಡ್ರಗ್ಸ್ ಚಟ ಜಾಸ್ತಿಯಾಗಿದೆ. ಅದನ್ನು ಯಾವುದೇ ಕಾರಣಕ್ಕೂ ನಡೆಯಲು‌ ಬಿಡುವುದಿಲ್ಲ. ಇದಕ್ಕಾಗಿ ವಿಶೇಷ ಅಭಿಯಾನ ಮಾಡುತ್ತೇವೆ. ಡ್ರಗ್ ಪೆಡ್ಲರ್, ಡ್ರಗ್ ಉಪಯೋಗ ಮಾಡುವವರನ್ನು ಹತ್ತಿಕ್ಕುವ ಕೆಲಸ ಮಾಡುತ್ತೇವೆ. ಆಗಸ್ಟ್​ 15ರೊಳಗೆ ಈ ಭಾಗದಲ್ಲಿ ಡ್ರಗ್ಸ್ ಚಟುವಟಿಕೆಗಳನ್ನು ಹತ್ತಿಕ್ಕುವಂತೆ ಸೂಚಿಸಿದ್ದೇನೆ ಎಂದರು.

ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗೃಹ ಸಚಿವನಾಗಿ ಒಂದು ಮನವಿ ಮಾಡುತ್ತಿದ್ದೇನೆ. ಯಾರು ಕೂಡ ಡ್ರಗ್ಸ್ ದಂಧೆ, ಬೇರೆ ಬೇರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಬೇಡಿ. ಇಂತಹುಗಳು ನಡೆಯದ ಹಾಗೇ ಸಹಕರಿಸಬೇಕು. ಗತಕಾಲದ ವೈಭವ ಮತ್ತೊಮ್ಮೆ ವಾಪಸ್​ ತರೋಣ. ಮಂಗಳೂರಿಗೆ ಎಲ್ಲರೂ ಬರುವಂತಹ ವಾತಾವರಣ ಸೃಷ್ಟಿಸಬೇಕು ಎಂದು ಸಲಹೆ ನೀಡಿದರು.

ಈ ಭಾಗದಲ್ಲಿ ನಡೆದ ಹತ್ಯೆಗೆ ಸಂಬಂಧಿಸಿದಂತೆ 6ರಿಂದ 7 ಕೊಲೆ ಪ್ರಕರಣಗಳಲ್ಲಿ ಪರಿಹಾರ ಕೊಡಲಿಲ್ಲ ಎಂಬ ವಿಚಾರ ಇದೆ. ಮಸೂದ್, ದೀಪಕ್ ರಾವ್, ಫೈಜಲ್ ಸೇರಿದಂತೆ ಹತ್ಯೆಗೊಳಗಾದವರ ಕುಟುಂಬಕ್ಕೆ ಪರಿಹಾರ ಕೊಡಲು ಪ್ರಸ್ತಾವನೆ ಕಳುಹಿಸಲು ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಗೃಹ ಸಚಿವರು ತಿಳಿಸಿದರು.

ಇದನ್ನೂ ಓದಿ : 13 ಮಂದಿ ಸಂಸದರ ತೇಜೋವಧೆಗೆ ಯತ್ನ: ಹೈಕಮಾಂಡ್ ಮಧ್ಯಪ್ರವೇಶಕ್ಕೆ ಡಿವಿಎಸ್ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.