ETV Bharat / state

ಗ್ರಾಪಂ ಚುನಾವಣೆ ಮೀಸಲು ಪಟ್ಟಿಯಲ್ಲಿ ಸರ್ಕಾರದ ಹಸ್ತಕ್ಷೇಪ: ರಮಾನಾಥ ರೈ ಆರೋಪ

author img

By

Published : Dec 16, 2020, 1:55 PM IST

Updated : Dec 16, 2020, 3:08 PM IST

ರಮಾನಾಥ ರೈ
ರಮಾನಾಥ ರೈ

ಗ್ಯಾಸ್ ಸಬ್ಸಿಡಿ ದೊರಕುತ್ತಿಲ್ಲ. ವಿದ್ಯುತ್ ದರ ಹೆಚ್ಚಳವಾಗಿದೆ. ಮನೆ ಕಳೆದುಕೊಂಡವರಿಗೆ ರಾಜ್ಯ ಸರ್ಕಾರ ಘೋಷಿಸಿರುವ ಐದು ಲಕ್ಷ ರೂ. ಪರಿಹಾರ ಯಾರಿಗೂ ದೊರಕಿಲ್ಲ. ಕಚ್ಚಾತೈಲದ ಬೆಲೆ, ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಕೊರೊನಾ ಬಂದ ಬಳಿಕ ದೇಶದ ಶೇ.27ರಷ್ಟು ಜನರು ಪೌಷ್ಟಿಕಾಹಾರದ ಕೊರತೆಯಿಂದ ಬಳಲುತ್ತಿದ್ದಾರೆ..

ಮಂಗಳೂರು : ಗ್ರಾಮ ಪಂಚಾಯತ್‌ ಚುನಾವಣೆ ಪಕ್ಷರಹಿತವಾಗಿ ನಡೆಯುವ ಚುನಾವಣೆಯಾದ್ರೂ, ಪ್ರಾರಂಭದಲ್ಲಿಯೇ ಮೀಸಲಾತಿ ಪಟ್ಟಿಯಲ್ಲಿ ಸರ್ಕಾರದ ಹಸ್ತಕ್ಷೇಪ ದೊಡ್ಡ ಪ್ರಮಾಣದಲ್ಲಿ ನಡೆದಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಹಿಂದೆ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್​ನ ಏಳು ಶಾಸಕರಿದ್ದರೂ ಗ್ರಾಪಂ ಚುನಾವಣೆಯ ಮೀಸಲಾತಿ ಪಟ್ಟಿಯಲ್ಲಿ ಪ್ರವೇಶ ಮಾಡಿಲ್ಲ. ಆದರೆ, ಇದೀಗ ಬಿಜೆಪಿ ಶಾಸಕರು ಮೀಸಲಾತಿ ಪಟ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 1992ರಂದು ಅಂದಿನ ಕಾಂಗ್ರೆಸ್ ಸರ್ಕಾರ ಗ್ರಾಪಂ ವಿಕೇಂದ್ರೀಕರಣ ಮಾಡಿ ನೇರವಾಗಿ ಜಿಪಂ ಮೂಲಕ ಹಣವನ್ನು ಒದಗಿಸಿ ಗ್ರಾಮದ ಅಭಿವೃದ್ಧಿ ಮಾಡುವ ಆಶೋತ್ತರ ಹೊಂದಿತ್ತು.

ಮಾಜಿ ಸಚಿವ ರಮಾನಾಥ ರೈ

ಅಂದು ಬಿಜೆಪಿಯವರು ಅದನ್ನೂ ವಿರೋಧಿಸಿದ್ದರು. ಆದರೆ, ಕಾಂಗ್ರೆಸ್ ಅದನ್ನು ಅನುಷ್ಠಾನಗೊಳಿಸಿದ ಪರಿಣಾಮ ಕೋಟ್ಯಂತರ ರೂ. ಹಣ ಜಿಪಂಗೆ ಬರುವಂತಾಯಿತು‌. ಈ ಮೂಲಕ ಇಂದು ಅನೇಕ ಕಾರ್ಯಕ್ರಮಗಳು ನಡೆದು ಗ್ರಾಪಂ ಅಭಿವೃದ್ಧಿ ಹೊಂದುವಂತಾಯಿತು ಎಂದರು. ಇದೀಗ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅನೇಕ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ.

ಮಾಸಾಶನ ದೊರಕುತ್ತಿಲ್ಲ, ಹೊಸ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ, ಬಿಪಿಎಲ್ ಕಾರ್ಡ್​ದಾರರ ಕಾರ್ಡ್​ ರದ್ದುಗೊಳಿಸಿ, ದಂಡ ಹಾಕಲಾಗುತ್ತಿದೆ. ಗ್ಯಾಸ್ ಸಬ್ಸಿಡಿ ದೊರಕುತ್ತಿಲ್ಲ. ವಿದ್ಯುತ್ ದರ ಹೆಚ್ಚಳವಾಗಿದೆ. ಮನೆ ಕಳೆದುಕೊಂಡವರಿಗೆ ರಾಜ್ಯ ಸರ್ಕಾರ ಘೋಷಿಸಿರುವ ಐದು ಲಕ್ಷ ರೂ. ಪರಿಹಾರ ಯಾರಿಗೂ ದೊರಕಿಲ್ಲ. ಕಚ್ಚಾತೈಲದ ಬೆಲೆ, ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಕೊರೊನಾ ಬಂದ ಬಳಿಕ ದೇಶದ ಶೇ.27ರಷ್ಟು ಜನರು ಪೌಷ್ಟಿಕಾಹಾರದ ಕೊರತೆಯಿಂದ ಬಳಲುತ್ತಿದ್ದಾರೆ.

ಅಲ್ಲದೆ ಏಷ್ಯಾದಲ್ಲಿಯೇ ಭಾರತ ಅತೀ ದೊಡ್ಡ ಭ್ರಷ್ಟತೆ ಇರುವ ದೇಶವೆಂದು ಇತ್ತೀಚೆಗೆ ವರದಿಯೊಂದು ಹೇಳಿದೆ. ಇದಲ್ಲದೆ ಮೃತಪಟ್ಟವರಿಗೆ ಅಂತ್ಯಸಂಸ್ಕಾರ ನಡೆಸಲು ಸರ್ಕಾರದಿಂದ ಐದು ಸಾವಿರ ರೂ. ನೀಡುವ ಯೋಜನೆ ಇದೆ. ಆದರೆ, ಕಳೆದ ಮೂರು ವರ್ಷಗಳಲ್ಲಿ ಇದು ಯಾರಿಗೂ ದೊರಕಿಲ್ಲ. ಆದ್ದರಿಂದ ಬಿಜೆಪಿ ಸರ್ಕಾರ ಅತ್ಯಂತ ದರಿದ್ರ ಸರ್ಕಾರ ಎಂದು ರಮಾನಾಥ ರೈ ಲೇವಡಿ ಮಾಡಿದರು.

ಓದಿ:ಮೈಸೂರು ಜಿಲ್ಲೆಯಲ್ಲಿ ಗ್ರಾ.ಪಂ. ಚುನಾವಣೆ: 123 ಮಂದಿ ಅವಿರೋಧ ಆಯ್ಕೆ, ಕಣದಲ್ಲಿ 6,165 ಅಭ್ಯರ್ಥಿಗಳು

ನಿನ್ನೆ ವಿಧಾನ ಪರಿಷತ್​ನಲ್ಲಿ ನಡೆದ ದಾಂಧಲೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮಾನಾಥ ರೈ ಅವರು, ಎರಡೂ ಕಡೆಯಿಂದಲೂ ಗಲಾಟೆಗಳಾಗಿವೆ. ಆದರೆ, ಇದಕ್ಕೆ ಮೂಲ ಕಾರಣ ಯಾರು ಎಂಬುದು ಇಲ್ಲಿನ ಪ್ರಶ್ನೆ. ಸಭಾಪತಿಯವರನ್ನು ಸದನಕ್ಕೆ ಪ್ರವೇಶ ಮಾಡಲು ಅನುವು ಮಾಡಿಕೊಡದೆ ಬಾಗಿಲು ಮುಚ್ಚಿರುವ ಬಿಜೆಪಿಗರು ಉಪಸಭಾಪತಿಯವರನ್ನು ಕೂರಿಸಿದ್ದಾರೆ.

ವಿಧಾನಪರಿಷತ್ ಸಭೆಗೆ ಅದರದ್ದೇ ಆದ ನಿಯಮಗಳಿವೆ. ಬೆಲ್ ಹಾಕಲಾಗುತ್ತದೆ, ಆ ಬಳಿಕ ಅಧ್ಯಕ್ಷರು ಬಂದು ಅವರ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾರೆ. ಅದರ ಮೊದಲೇ ಉಪಸಭಾಪತಿಯವರನ್ನು ಕೂರಿಸಿದ್ದು, ಬಿಜೆಪಿಗರು ಮಾಡಿರುವ ತಪ್ಪು. ಆದರೆ, ಆ ಬಳಿಕ ತಪ್ಪು ಮಾಡಿರೋದು ಮಾತ್ರ ಕಾಂಗ್ರೆಸ್ಸಿಗರು ಎಂದು ಹೇಳಲಾಗುತ್ತದೆ ಎಂದು ಹೇಳಿದರು.

Last Updated :Dec 16, 2020, 3:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.