ETV Bharat / state

ಜೀವನ ಸಾಕ್ಷಾತ್ಕಾರಕ್ಕೆ ಕರ್ಮ, ಭಕ್ತಿ, ಜ್ಞಾನದ ದಾರಿ ತೋರಿದವರು ಬಾಲಗಂಗಾಧರನಾಥ ಶ್ರೀ: ನಿರ್ಮಲಾನಂದನಾಥ ಸ್ವಾಮೀಜಿ

author img

By

Published : Jan 23, 2023, 4:33 PM IST

ಪುತ್ತೂರಿನಲ್ಲಿ ಆದಿಚುಂಚನಗಿರಿ ಭೈರವೈಕ್ಯ ಜಗದ್ಗುರು ಡಾ ಬಾಲಗಂಗಾಧರನಾಥ ಮಹಾಸ್ವಾಮೀಜಿ 78ನೇ ಜಯಂತ್ಯುತ್ಸವ ಹಾಗೂ ಡಾ ನಿರ್ಮಲಾನಂದನಾಥ ಮಹಾಸ್ವಾಮೀಜಿ ಪಟ್ಟಾಭಿಷೇಕ ದಶಮಾನೋತ್ಸವ ಕಾರ್ಯಕ್ರಮ ಜರುಗಿತು.

78th birth anniversary of Bhairavaikya Jagadguru Dr Balagangadharnath Mahaswamiji
ಭೈರವೈಕ್ಯ ಜಗದ್ಗುರು ಡಾ ಬಾಲಗಂಗಾಧರನಾಥ ಮಹಾಸ್ವಾಮೀಜಿ 78ನೇ ಜಯಂತ್ಯೋತ್ಸವ

ಪುತ್ತೂರು(ದಕ್ಷಿಣ ಕನ್ನಡ): ಕರ್ಮ, ಭಕ್ತಿ ಮತ್ತು ಜ್ಞಾನವಿದ್ದಲ್ಲಿ ವ್ಯಕ್ತಿಯಾದವನು ಶಕ್ತಿಯಾಗಿ ಪರಿಣಮಿಸುತ್ತಾನೆ. ಜೀವನದ ಈ ತ್ರಿವಳಿ ಮಾರ್ಗಗಳನ್ನು ಅನುಸರಿಸಲು ಹೇಳಿ ಜೀವನ ಸಾಕ್ಷಾತ್ಕಾರ ಮಾಡಿಸಿದವರು ಭೈರವೈಕ್ಯ ಜಗದ್ಗುರು ಶ್ರೀ ಬಾಲಗಂಗಾಧರನಾಥ ಶ್ರೀಗಳು. ಅಂತಹ ನಮ್ಮ ಗುರುಗಳನ್ನು ಸ್ಮರಿಸುವುದು ನಮ್ಮ ಕಾರ್ಯ ಎಂದು ಶ್ರೀ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು.

ಜಯಂತ್ಯೋತ್ಸವ ಸಂಸ್ಮರಣಾ ಜಿಲ್ಲಾ ಸಮಿತಿ ಪುತ್ತೂರು ವತಿಯಿಂದ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ಚಾರಿತ್ರಿಕವಾಗಿ ಹಮ್ಮಿಕೊಳ್ಳಲಾದ ಆದಿಚುಂಚನಗಿರಿ ಪೀಠದ ಭೈರವೈಕ್ಯ ಜಗದ್ಗುರು ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78 ನೇ ಜಯಂತ್ಯುತ್ಸವ ಸಂಸ್ಮರಣೆ, ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಪಟ್ಟಾಭಿಷೇಕದ ದಶಮಾನೋತ್ಸವ, ಗುರುವಂದನೆ, ರಜತ ತುಲಾಭಾರದ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಮಕ್ಕಳಿಗೆ ಯಾವ ಶಿಕ್ಷಣ ನೀಡಬೇಕೆಂಬ ದೂರದೃಷ್ಟಿಯ ಕೊರತೆಯಿದ್ದ ಕಾಲದಲ್ಲಿ ಅನೇಕಾನೇಕ ಮಕ್ಕಳಿಗೆ ವಿಷನ್ ತೋರಿಸಿಕೊಟ್ಟವರು ಪೂಜ್ಯ ಬಾಲಗಂಗಾಧರನಾಥ ಶ್ರೀಗಳು. ಇಂದು ಮಠದ ಅಧೀನದಲ್ಲಿ 1 ಲಕ್ಷದ 52 ಸಾವಿರ ಮಂದಿ ವಸತಿಯೊಂದಿಗೆ ಅನ್ನ ಶಿಕ್ಷಣ ದಾಹ ಇಂಗಿಸಿಕೊಳ್ಳುತ್ತಿದ್ದಾರೆ. ಸಾವಿರಾರು ಮಂದಿ ಉತ್ತಮ ಪದವಿ ಪಡೆದು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ ಗುರುತಿಸಲ್ಪಡುತ್ತಿದ್ದಾರೆ. ಕರ್ಮದ ನಿಷ್ಠೆಯನ್ನು ಕಲಿಸಿಕೊಟ್ಟವರು ಗುರುಗಳು. ಸೋಮಾರಿತನ ಹೋಗದೇ ಇದ್ದರೆ ವಿದ್ಯೆ ಶ್ರೀಮಂತಿಕೆ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಅಂತಹ ಜಾಢ್ಯವನ್ನು ನಿವಾರಿಸಿ ಸದಾ ಚೈತನ್ಯ ಬರಲು ಕರ್ಮ ನಿಷ್ಠೆ ಹೇಳಿಕೊಟ್ಟವರು ಗುರುಗಳು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಯಂತ್ಯೋತ್ಸವ ಸಂಸ್ಮರಣಾ ಸಮಿತಿ ಗೌರವಾಧ್ಯಕ್ಷ, ಸಂಸದ ಡಿ.ವಿ. ಸದಾನಂದ ಗೌಡ ಮಾತನಾಡಿ, ಬಾಲಗಂಗಾಧರನಾಥ ಸ್ವಾಮೀಜಿಯವರ ಪಾದಸ್ಪರ್ಶ ಈ ಭಾಗದಲ್ಲಿ ಒಕ್ಕಲಿಗರ ಶಕ್ತಿಯಾಗಿ ಪರಿಣಮಿಸಿತು. ನಮ್ಮನ್ನು ಅಳೆದು ನೋಡಬೇಕಾದ ಕಾಲದಲ್ಲಿರುವ ನಾವುಗಳು ಅದಕ್ಕಾಗಿ ಪೂಜ್ಯ ಶ್ರೀಗಳ ರಜತ ತುಲಾಭಾರ ಸೇವೆ ಮಾಡುತ್ತಿದ್ದೇವೆ. ಇಂದು ಒಂದು ಸಮಾಜದ ಮಠ ಇಡೀ ಸಮಾಜದ ಮಠವಾಗಿ ಬೆಳೆಯುತ್ತಿದೆ. ಪೂಜ್ಯ ಬಾಲಗಂಗಾಧರನಾಥ ಶ್ರೀಗಳ ಸಂದೇಶಗಳು ಶಾಶ್ವತವಾಗಿ ನೆಲೆಯೂರಿವೆ’ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಭೂಮಿಯನ್ನು ಹಸನಾಗಿಸಿ ಸಮಾಜಕ್ಕೆ ಅನ್ನದಾತನಾಗುವ ಭಾಗ್ಯ ಸಿಕ್ಕಿರುವುದು ವಿಶೇಷ. ಒಕ್ಕಲಿಗರ ಜಾತಿ ವಿಶ್ವ ಜಾತಿ. ಒಂದು ಭಾಗಕ್ಕೆ ಸೀಮಿತವಾದುದಲ್ಲ. ಈ ಹೆಸರು ಯಾರೂ ಕೊಟ್ಟದ್ದಲ್ಲ. ನಮ್ಮ ಧರ್ಮ, ನೀತಿ, ಕೆಲಸ, ನಿಷ್ಠೆಯಿಂದಾಗಿ ಅನಾದಿಕಾಲದಿಂದ ಒಕ್ಕಲುತನದ ಜವಾಬ್ದಾರಿ ನಮಗೆ ಕೊಟ್ಟಿದ್ದಾರೆ. ಕರ್ಣನ ದಾನಶೂರತ್ವ, ಅರ್ಜುನನ ಗುರಿ, ವಿದುರನ ನೀತಿ, ಭೀಮನ ಬಲ, ಕೃಷ್ಣನ ತಂತ್ರ ಇದ್ದಾಗ ಯಶಸ್ಸು ಕಾಣಲು ಸಾಧ್ಯ. ನಮ್ಮ ಸಮಾಜವೂ ಈ ನೀತಿಯನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಶೇ. 12 ಮೀಸಲಾತಿ ಕಲ್ಪಿಸಬೇಕು: ಒಕ್ಕಲಿಗ ಸಮಾಜಕ್ಕೆ ಶೇ. 12 ಮೀಸಲಾತಿ ಕೊಡುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆರ್. ಅಶೋಕ್ ಮಾತು ಕೊಟ್ಟು ಹೋಗಿದ್ದಾರೆ. ನುಡಿದಂತೆ ನಡೆಯಬೇಕಾದದ್ದು ಈ ನಾಡಿನ ಗುಣ. ಇದು ರಾಜಕಾರಣದ ಸಭೆಯಲ್ಲ, ಸಮಾಜದ ಅನ್ನದಾತರ ಸಭೆ. ನಿಮ್ಮ ಧ್ವನಿಯಾಗಿ ಸೇವೆ ಮಾಡಲು ಡಿಕೆ ಶಿವಕುಮಾರ್ ಬದ್ಧನಾಗಿದ್ದೇನೆ. ಈ ದೇಶದಲ್ಲಿ ಹುಟ್ಟಿದ ಮಹಾತ್ಮರು ಅಧಿಕಾರ ವಹಿಸಿಕೊಂಡ ದಿವ್ಯ ಘಳಿಗೆಯಲ್ಲಿ ನಮ್ಮ ಸ್ವಾಮೀಜಿಯವರೂ ಸಮಾಜದ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಅವರಿಗೆ ನಾವೆಲ್ಲಾ ಬೆಂಬಲವಾಗಿ ನಿಲ್ಲೋಣ ಎಂದರು.

ಮುಖ್ಯ ಅತಿಥಿಗಳಾಗಿದ್ದ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಂಸದ ಡಿ.ವಿ.ಸದಾನಂದ ಗೌಡ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಪುತ್ತೂರು ಶಾಸಕ ಸಂಜೀವ ಮಠಂದೂರು ಅವರನ್ನು ಡಾ. ನಿರ್ಮಲಾನಂದನಾಥ ಶ್ರೀಗಳು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮಕ್ಕೆ ಪುತ್ತೂರು ಒಕ್ಕಲಿಗ ಗೌಡ ಸ್ವ-ಸಹಾಯ ಸಂಘದ ಟ್ರಸ್ಟ್ ವತಿಯಿಂದ ಸಂಗ್ರಹಿಸಲಾದ ರೂ. 5 ಲಕ್ಷ ದೇಣಿಗೆಯನ್ನು ಚೆಕ್ ಮುಖಾಂತರ ವೇದಿಕೆಯಲ್ಲಿ ಶ್ರೀಗಳಿಗೆ ಹಸ್ತಾಂತರಿಸಲಾಯಿತು. ಟ್ರಸ್ಟ್ ಸ್ಥಾಪಕಾಧ್ಯಕ್ಷ ಎ.ವಿ. ನಾರಾಯಣ ಗೌಡ, ಅಧ್ಯಕ್ಷ ಮನೋಹರ ಡಿ.ವಿ. ಮತ್ತಿತರರು ಚೆಕ್ ಹಸ್ತಾಂತರಿಸಿದರು.

ಎ.ವಿ. ನಾರಾಯಣ ಗೌಡರ ಸಂಯೋಜನೆಯಲ್ಲಿ ನಿರ್ಮಿಸಲಾದ 'ಒಕ್ಕಲಿಗರು' ಪ್ರಾರ್ಥನಾ ಗೀತೆಯನ್ನು ಬಿಡುಗಡೆಗೊಳಿಸಲಾಯಿತು. ಸಂಗೀತ ನಿರ್ದೇಶಕ ಪದ್ಮರಾಜ್ ಬಿ.ಸಿ. ಚಾರ್ವಕ ಉಪಸ್ಥಿತರಿದ್ದರು. ಮಂಗಳೂರು ಶಾಖಾ ಮಠದ ಡಾ. ಧರ್ಮಪಾಲನಾಥ ಶ್ರೀಗಳು ಬರೆದಿರುವ ಅಧ್ಯಯನ ಗ್ರಂಥವಾದ 'ಸಂಸ್ಕೃತ-ಸಂಸ್ಕೃತಿಗೆ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಕೊಡುಗೆ' ಕೃತಿಯನ್ನು ಡಾ. ನಿರ್ಮಲಾನಂದನಾಥ ಶ್ರೀಗಳು ಬಿಡುಗಡೆಗೊಳಿಸಿದರು. ಸಾಹಿತಿ ಡಾ. ಎಚ್.ಎಸ್. ಸತ್ಯನಾರಾಯಣ ಗ್ರಂಥ ಅವಲೋಕನ ಮಾಡಿದರು.

ಬೆಳ್ಳಿಯಿಂದ ಶ್ರೀಗಳಿಗೆ ತುಲಾಭಾರ: ಭೈರವೈಕ್ಯ ಡಾ. ಬಾಲಗಂಗಾಧರನಾಥ ಶ್ರೀಗಳ 78ನೇ ಜಯಂತ್ಯೋತ್ಸವವನ್ನು ಶ್ರೀಗಳ ಪುತ್ಥಳಿಗೆ ಪುಷ್ಪಾರ್ಚನೆ, ದೀಪಾರಾತಿ ಬೆಳಗುವ ಮೂಲಕ ಆಚರಿಸಲಾಯಿತು. ಡಾ. ನಿರ್ಮಲಾನಂದನಾಥ ಶ್ರೀಗಳಿಗೆ ಗುರುವಂದನೆ ಮತ್ತು ರಜತ ತುಲಾಭಾರ ಸೇವೆ ಒಕ್ಕಲಿಗ ಸಮಾಜದ ವತಿಯಿಂದ ನಡೆಯಿತು. ಸ್ವಾಮೀಜಿಯವರನ್ನು ಪುಷ್ಪಾಲಂಕೃತ ತಕ್ಕಡಿಯಲ್ಲಿ ಸುಮಾರು 75 ಕೆ.ಜಿ. ಬೆಳ್ಳಿಯ ಗಟ್ಟಿಯಿಂದ ತುಲಾಭಾರ ಮಾಡಲಾಯಿತು. ತುಲಾಭಾರಕ್ಕೆ ಬೆಳ್ಳಿ ದಾನ ಮಾಡಿದ ದಾನಿಗಳನ್ನು ಡಾ. ಧರ್ಮಪಾಲನಾಥ ಶ್ರೀಗಳು ಮತ್ತು ಶಾಖಾ ಮಠದ ಶ್ರೀಗಳು ಗೌರವಿಸಿದರು.

ವೈಭವದ ಶೋಭಯಾತ್ರೆ: ಕಾರ್ಯಕ್ರಮಕ್ಕೆ ಮುನ್ನ ಬೆಳಗ್ಗೆ ದರ್ಬೆ ವೃತ್ತದಿಂದ ವೈಭವದ ಶೋಭಾಯಾತ್ರೆ ನಡೆಯಿತು. ಶ್ರೀ ಚೌಡೇಶ್ವರಿ ದೇವಿಗೆ ಆರತಿ ಎತ್ತಿ ಶೋಭಾಯಾತ್ರೆಗೆ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ಚಾಲನೆ ನೀಡಿದರು. ಮಹಾಸಂಸ್ಥಾನದ ಶಾಖಾ ಮಠದ ಎಲ್ಲಾ ಸ್ವಾಮೀಜಿಯವರು ಉಪಸ್ಥಿತರಿದ್ದರು. ಶೋಭಾಯಾತ್ರೆಯಲ್ಲಿ ಭಾರತಮಾತೆಯ ಆಲಂಕೃತ ವಾಹನ, ಭಗವಾಧ್ವಜ, ಚಾರ್ವಾಕ ಭಜನಾ ತಂಡ, ಚೆಂಡೆ, ನಾದಸ್ವರ, ದೇವಿ ಚೌಡೇಶ್ವರಿಯ ರಥ, ಭೈರವೈಕ್ಯ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಕಂಚಿನ ಪುತ್ಹಳಿ ಇದ್ದ ರಥ, ಡಾ. ನಿರ್ಮಲಾನಂದನಾಥ ಮತ್ತು ಡಾ. ಧರ್ಮಪಾಲನಾಥ ಸ್ವಾಮೀಜಿಯವರು ಇದ್ದ ಬೆಳ್ಳಿಬಣ್ಣದ ರಥ, ಬಣ್ಣ ಬಣ್ಣದ ಕೊಡೆಗಳು, ಕೀಲುಕುದುರೆ, ಶಿಲ್ಪಾ ಗೊಂಬೆ ಬಳಗದ ಗೊಂಬೆನೃತ್ಯಗಳು, ಬ್ಯಾಂಡ್ ಸೆಟ್, 7 ವಲಯದ 7 ಬಣ್ಣದ ಸೀರೆಯೊಂದಿಗೆ ಒಕ್ಕಲಿಗ ಸ್ವಸಹಾಯ ಗುಂಪಿನ ಸುಮಾರು 5 ಸಾವಿರ ಮಹಿಳೆಯರು, ವಿವಿಧ ಸ್ತಬ್ಧಚಿತ್ರಗಳು, ವೀರಗಾಸೆ, ಕಂಸಾಳೆ, ಡೊಳ್ಳುಕುಣಿತ, ಕೊಡವ ನೃತ್ಯ ಸಹಿತ ಸಾಂಸ್ಕೃತಿಕ ನೃತ್ಯ ತಂಡಗಳು ಮೆರವಣಿಗೆಗೆ ಮೆರುಗು ನೀಡಿದ್ದವು. ಸುಮಾರು 35 ಸಾವಿರಕ್ಕೂ ಮಿಕ್ಕಿ ಮಂದಿಗೆ ಪ್ರಸಾದ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ವೇದಿಕೆಯಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಡಾ. ಧರ್ಮಪಾಲನಾಥ ಸ್ವಾಮೀಜಿ, ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ದಸರೀಘಟ್ಟ ಶಾಖಾ ಮಠದ ಚಂದ್ರಶೇಖರನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ, ಬಾಗಲಕೋಟೆ ಶಂಕರಾರೂಢ ಸ್ವಾಮೀಜಿ, ಕಬಳಿ ಶಾಖಾ ಮಠ ಶಿವಪುತ್ರ ಸ್ವಾಮೀಜಿ, ನವರಸ ನಾಯಕ ಜಗ್ಗೇಶ್, ಶಾಸಕ ಬಾಲಕೃಷ್ಣ ಸಿ.ಎನ್, ಜಯಂತ್ಯೋತ್ಸವ ಸಂಸ್ಮರಣಾ ಸಮಿತಿ ಜಿಲ್ಲಾ ಸಂಚಾಲಕ ಚಿದಾನಂದ ಬೈಲಾಡಿ, ವಿಧಾನಪರಿಷತ್ ಸದಸ್ಯರಾದ ಎಸ್.ಎಲ್. ಭೋಜೆಗೌಡ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ, ಮಾಜಿ ಸಚಿವ ಗಂಗಾಧರ ಗೌಡ ಬೆಳ್ತಂಗಡಿ, ಕೆವಿಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ಗೌಡ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ಕೆ.ವಿ. ರೇಣುಕಾ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಹಾವೇರಿಯಲ್ಲಿ ಮಹಿಳೆಯರಿಂದಲೇ ನಡೆಯುತ್ತದೆ 'ಪಾರ್ವತಿ ರಥೋತ್ಸವ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.