ಹಾವೇರಿಯಲ್ಲಿ ಮಹಿಳೆಯರಿಂದಲೇ ನಡೆಯುತ್ತದೆ 'ಪಾರ್ವತಿ ರಥೋತ್ಸವ'

author img

By

Published : Jan 23, 2023, 12:05 PM IST

Haveri womens

ಸವಣೂರು ತಾಲೂಕಿನ ಮಂತ್ರೋಡಿ ಕ್ಷೇತ್ರದ ರೇವಣಸಿದ್ದೇಶ್ವರ ದೇವಾಲಯದಲ್ಲಿ ಪಾರ್ವತಿ ದೇವಿ ರಥೋತ್ಸವವನ್ನು ಶತಮಾನಗಳಿಂದಲೂ ಮಹಿಳೆಯರೇ ನಡೆಸಿಕೊಂಡು ಬರುತ್ತಿದ್ದಾರೆ.!

ರಥೋತ್ಸವ ಕುರಿತು ಸ್ವಾಮೀಜಿ ಹಾಗು ಸಾರ್ವಜನಿಕರ ಅಭಿಪ್ರಾಯ

ಹಾವೇರಿ : ಪ್ರಸ್ತುತ ದಿನಮಾನಗಳಲ್ಲಿ ಮಹಿಳೆ ಪುರುಷನಿಗೆ ಸಮನಾಗಿ ಆರ್ಥಿಕತೆಯ ಎಲ್ಲ ಕ್ಷೇತ್ರಗಳಲ್ಲಿಯೂ ತನ್ನ ಸಾಮರ್ಥ್ಯ ತೋರುತ್ತಲೇ ಬಂದಿದ್ದಾಳೆ. ಪುರುಷರಿಗೆ ಮೀಸಲಾಗಿರುವ ಸಕಲ ರಂಗಗಳಲ್ಲಿಯೂ ಮಹಿಳೆಯರು ಸೈ ಎನಿಸಿಕೊಂಡಿದ್ದಾರೆ. ಆದರೆ ಈ ಹಿಂದೆಲ್ಲ ಇಂಥ ಸ್ವಾತಂತ್ರ್ಯ ಹೆಣ್ಣು ಮಕ್ಕಳಿಗೆ ಇರಲಿಲ್ಲ. ಕೇವಲ ಮನೆಯ ನಾಲ್ಕು ಗೋಡೆಗಳ ಮಧ್ಯೆ ತನ್ನ ಜೀವನವನ್ನೇ ಆಕೆ ಕಳೆಯುತ್ತಿದ್ದಳು. ಒಮ್ಮೆ ಮನೆ ಬಿಟ್ಟು ಹೊರನಡೆಯಬೇಕಾದರೆ ಅದಕ್ಕೆ ಹಲವು ಕಟ್ಟುಪಾಡುಗಳಿದ್ದವು. ಆದರೀಗ ಸ್ತ್ರೀಯರೊಂದಿಗೆ ಇಡೀ ಸಮಾಜವೇ ಬದಲಾಗಿದೆ. ಮಹಿಳೆಯರನ್ನು ಮನೆಯಿಂದ ಹೊರಕಳುಹಿಸಲು ಹಿಂಜರಿಯುತ್ತಿದ್ದ ಕಾಲದಲ್ಲಿ ಪುರುಷರಷ್ಟೇ ಮಹಿಳೆಗೆ ಸಮಾನ ಅವಕಾಶ ನೀಡಿದ ಧಾರ್ಮಿಕ ಕ್ಷೇತ್ರವೊಂದು ಹಾವೇರಿ ಜಿಲ್ಲೆಯಲ್ಲಿದೆ.

ಇದು ಸವಣೂರು ತಾಲೂಕಿನ ಮಂತ್ರೋಡಿ ಕ್ಷೇತ್ರ. ಇಲ್ಲಿ ಶತಶತಮಾನಗಳ ಹಿಂದೆಯೇ ಪುರುಷರಿಗೆ ನೀಡಿದಷ್ಟೇ ಪ್ರಾಧಾನ್ಯತೆಯನ್ನು ಅಂದಿನ ರೇವಣ ಸಿದ್ದೇಶ್ವರ ಶ್ರೀಗಳು ನೀಡಿದ್ದಾರೆ. ಮಠದಲ್ಲಿ ಪ್ರತಿವರ್ಷ ಅಮಾವಾಸ್ಯೆಯಂದು ಶಿವನ ರಥೋತ್ಸವ ನಡೆದರೆ ಮರುದಿನ ಪಾರ್ವತಿಯ ರಥೋತ್ಸವ ನಡೆಯುತ್ತೆ. ಮೊದಲ ದಿನ ನಡೆಯುವ ರೇವಣ ಸಿದ್ದೇಶ್ವರ ಮೂರ್ತಿ ಪ್ರತಿಷ್ಠಾಪಿಸಿ ರಥೋತ್ಸವದಲ್ಲಿ ಪುರುಷರು ರಥ ಎಳೆದು ಸಂಭ್ರಮಿಸುತ್ತಾರೆ. ಮರುದಿನ ನಡೆಯುವ ಪಾರ್ವತಿ ದೇವಿ ರಥೋತ್ಸವದಲ್ಲಿ ಮಹಿಳೆಯರು ಮಾತ್ರ ರಥ ಎಳೆಯುತ್ತಾರೆ.

ಕೆಂಜಡೇಶ್ವರ ಮಠದಿಂದ ಪಾದಗಟ್ಟೆಯವರಿಗೆ ಮತ್ತು ಪಾದಗಟ್ಟಿಯಿಂದ ಮಠದವರೆಗೆ ಸುಮಾರು 800 ಮೀಟರ್ ದೂರದಷ್ಟು ಮಹಿಳೆಯರೇ ರಥ ಎಳೆದು ಸಂಭ್ರಮಿಸುತ್ತಾರೆ. ಪಾದಗಟ್ಟಿಯಿಂದ ಮಠಕ್ಕೆ ಹೋಗುವ ದಾರಿ ಬೆಟ್ಟದ ಮೇಲಿದ್ದರೂ ಸಹ ಮಹಿಳೆಯರು ರಥ ಎಳೆದು ಖುಷಿಪಡುತ್ತಾರೆ. ಹಾವೇರಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಈ ರೀತಿ ಮಹಿಳೆಯರು ಮಾತ್ರ ರಥ ಎಳೆಯುವ ಸಂಪ್ರದಾಯ ಪುರಾತನ ಕಾಲದಿಂದಲೂ ಇರುವುದು ಸವಣೂರು ತಾಲೂಕಿನ ಮಂತ್ರೋಡಿ ಗ್ರಾಮದಲ್ಲಿ ಮಾತ್ರವಂತೆ. ಶನಿವಾರ ಇಲ್ಲಿ ಜಾತ್ರಾ ಮಹೋತ್ಸವ ಪ್ರಾರಂಭವಾಗಿದೆ. ರವಿವಾರ ಮಹಿಳಾ ರಥೋತ್ಸವ ನಡೆದಿದೆ.

ಜಾತ್ರಾ ಮಹೋತ್ಸವದ ಅಂಗವಾಗಿ ರೇವಣಸಿದ್ದೇಶ್ವರರಿಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜೆ- ಪುನಸ್ಕಾರಗಳನ್ನು ನಡೆಸಲಾಗುತ್ತದೆ. ಪಲ್ಲಕ್ಕಿಯಲ್ಲಿ ಮೂರ್ತಿಯಿಟ್ಟು ಪ್ರದಕ್ಷಿಣೆ ಹಾಕಲಾಗುತ್ತದೆ. ಇದೇ ವೇಳೆ ಬೆಳ್ಳಿ ರಥೋತ್ಸವ ಪುಷ್ಪ ರಥೋತ್ಸವ ನಡೆಸಲಾಗುತ್ತದೆ. ನಂತರ ರೇವಣಸಿದ್ದೇಶ್ವರರಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತದೆ. ಮುಂಜಾನೆಯಿಂದಲೇ ಭಕ್ತರು ಮಠಕ್ಕೆ ಬಂದು ರೇವಣಸಿದ್ದೇಶ್ವರರ ದರ್ಶನ ಪಡೆದು ಆಶೀರ್ವಾದದೊಂದಿದೆ ಪುನೀತರಾಗುತ್ತಾರೆ.

ರೇವಣಸಿದ್ದೇಶ್ವರ ಮತ್ತು ಕೆಂಜಡೇಶ್ವರ ಸ್ವಾಮೀಜಿ ಭಕ್ತರ ಇಷ್ಟಾರ್ಥ ಈಡೇರಿಸುತ್ತಾರೆ ಎಂಬ ನಂಬಿಕೆ ಭಕ್ತರದ್ದು. ಮಹಿಳಾ ಭಕ್ತರು ಸರತಿಯಲ್ಲಿ ನಿಂತು ರಥ ಎಳೆಯುತ್ತಾರೆ. ರಥಕ್ಕೆ ಬಾಳೆಹಣ್ಣು ಉತ್ತತ್ತಿ ಎಸೆಯುವುದು ಸಾಮಾನ್ಯ. ಈ ರೀತಿ ಎಸೆದ ಉತ್ತತ್ತಿ ಬಾಳೆಹಣ್ಣು ಕಳಸಕ್ಕೆ ಬಡಿದರೆ ಕೇಳಿಕೊಳ್ಳುವಂತಹ ಬೇಡಿಕೆಗಳು ಸಿದ್ದಿಸುತ್ತವೆ ಎಂಬುದು ನಂಬಿಕೆ. ಈ ವರ್ಷ ಮಹಿಳಾ ಡೊಳ್ಳು ತಂಡ ಆಗಮಿಸಿದ್ದು ವಿಶೇಷವಾಗಿತ್ತು.

ಕಳೆದ ಎರಡು ವರ್ಷಗಳಿಂದ ಕೊರೊನಾ ಕರಿನೆರಳಿನಲ್ಲಿ ಜಾತ್ರೆ ವಿಜೃಂಭಣಿಯಿಂದ ನಡೆದಿರಲಿಲ್ಲ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಆಗಮಿಸಿದ್ದರು. ಇಲ್ಲಿಗೆ ಅಮವಾಸ್ಯೆ ಮತ್ತು ಹುಣ್ಣಿಮೆ ದಿನಗಳಂದು ಸಹ ಭಕ್ತರು ಆಗಮಿಸಿ ಶ್ರೀಗಳ ಆಶೀರ್ವಾದ ಪಡೆಯುತ್ತಾರೆ. ಇಲ್ಲಿ ಬಂದು ಪ್ರಾರ್ಥನೆ ಸಲ್ಲಿಸಿದರೆ ಬಯಕೆಗಳು ಈಡೇರುತ್ತವೆ ಎಂಬ ಅಚಲ ಭಕ್ತಿ ಭಕ್ತರದ್ದು. ಇನ್ನು ರಥೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ರೇವಣಸಿದ್ದೇಶ್ವರನ ಭಕ್ತರು ಆಗಮಿಸುತ್ತಾರೆ.

ಇದನ್ನೂ ಓದಿ: ಹಾವೇರಿಯ ಪ್ರಸಿದ್ದ ಏಲಕ್ಕಿ ಹಾರ: ಜಾಗತಿಕ ನಾಯಕರ ಕೊರಳೇರಿದ ಹೆಗ್ಗಳಿಕೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.