ETV Bharat / state

ಫಾಝಿಲ್ ಹತ್ಯೆ ಸಮರ್ಥಿಸಿದ ಶರಣ್ ಪಂಪ್‌ವೆಲ್ ಬಂಧಿಸಿ: ಎಸ್‌ಡಿಪಿಐ

author img

By

Published : Jan 31, 2023, 12:00 PM IST

SDPI State General Secretary Afsar Kudlipet
ಎಸ್ ಡಿ ಪಿ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೂಡ್ಲಿಪೇಟೆ

ಸುರತ್ಕಲ್‌ನಲ್ಲಿ ನಡೆದ ಫಾಝಿಲ್ ಕೊಲೆ ಪ್ರಕರಣವನ್ನು ಸಮರ್ಥಿಸಿಕೊಂಡ ವಿಎಚ್​ಪಿ ಮುಖಂಡ ಶರಣ್ ಪಂಪ್‌ವೆಲ್ ಬಂಧನಕ್ಕೆ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೂಡ್ಲಿಪೇಟೆ ಆಗ್ರಹಿಸಿದ್ದಾರೆ.

ಶರಣ್ ಪಂಪ್‌ವೆಲ್ ಬಂಧಿಸಲು ಆಗ್ರಹ

ಮಂಗಳೂರು (ದಕ್ಷಿಣ ಕನ್ನಡ) : ಸುರತ್ಕಲ್​ನಲ್ಲಿ ಕಳೆದ ಜುಲೈ 28ರಂದು ಮೊಹಮ್ಮದ್​ ಫಾಝಿಲ್​ಎಂಬಾತನನ್ನು ದುಷ್ಕರ್ಮಿಗಳು ಅಟ್ಟಾಡಿಸಿ ಹತ್ಯೆ ಮಾಡಿದ್ದರು. ಈ ಸಂಬಂಧ ಸುರತ್ಕಲ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿ 8 ಮಂದಿಯನ್ನು ಬಂಧಿಸಲಾಗಿತ್ತು. ಆರೋಪಿಗಳ ಮೇಲೆ ಚಾರ್ಜ್​ಶೀಟ್​ ಕೂಡ ಸಲ್ಲಿಕೆಯಾಗಿದೆ. ಇದೀಗ ಪ್ರಕರಣವನ್ನು ಸಮರ್ಥಿಸಿಕೊಂಡ ವಿಶ್ವ ಹಿಂದೂ ಪರಿಷತ್‌ ಮುಖಂಡ ಶರಣ್‌ ಪಂಪ್‌ವೆಲ್‌ ಅವರನ್ನು ಬಂಧಿಸುವಂತೆ ಎಸ್‌ಡಿಪಿಐ ಆಗ್ರಹಿಸಿದೆ.

"ಈ ಹತ್ಯೆಯನ್ನು ಬಹಿರಂಗವಾಗಿಯೇ ವಿಶ್ವ ಹಿಂದೂ ಪರಿಷತ್​ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಸಮರ್ಥಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಎಲ್ಲ ಕೊಲೆ ಪ್ರಕರಣಗಳಲ್ಲಿ ಅವರ ಕೈವಾಡವಿರುವ ಸಾಧ್ಯತೆ ಇದೆ. ತಕ್ಷಣ ಅವರನ್ನು ಬಂಧಿಸಬೇಕು" ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೂಡ್ಲಿಪೇಟೆ ಒತ್ತಾಯಿಸಿದರು.

ಸೋಮವಾರ ಮಂಗಳೂರಿನಲ್ಲಿ ಮಾತನಾಡಿದ ಅವರು, "ತುಮಕೂರು ಹಾಗೂ ಉಳ್ಳಾಲದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಶರಣ್ ಪಂಪ್‌ವೆಲ್ ಬಹಿರಂಗವಾಗಿ ಫಾಝಿಲ್ ಹತ್ಯೆಯನ್ನು ಸಮರ್ಥಿಸಿದ್ದಾರೆ. ಆದರೂ ಅವರ ಮೇಲೆ ಇದುವರೆಗೆ ಯಾವುದೇ ಪ್ರಕರಣ ದಾಖಲಿಸಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಇಲಾಖೆಗೆ ಪರಿಜ್ಞಾನ ಇಲ್ಲವೇ?. ಕೊಲೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದವರನ್ನು ಕಟಕಟೆಯಲ್ಲಿ ನಿಲ್ಲಿಸಬೇಕು" ಎಂದರು.

"ರಾಜ್ಯದಲ್ಲಿ ಎಸ್‌ಡಿಪಿಐ ಪಕ್ಷ ಈ ಬಾರಿ ರಾಜ್ಯದ ಜನತೆಯ ಮುಂದೆ ಪರ್ಯಾಯ ರಾಜಕಾರಣವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ. 100 ಮಂದಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಜ.7ರಂದು ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಬೆಂಗಳೂರಿನಲ್ಲಿ 54 ವಿಧಾನಸಭಾ ಕ್ಷೇತ್ರಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಈ ಪೈಕಿ 10 ಅಭ್ಯರ್ಥಿಗಳನ್ನು ಘೋಷಿಸಲಾಗಿದೆ" ಎಂದು ತಿಳಿಸಿದರು.

ದ.ಕ.ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ. ಪ್ರಥಮ ಪಟ್ಟಿಯಲ್ಲಿ 3 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ‌ಘೋಷಿಸಲಾಗಿದೆ. ಬಂಟ್ವಾಳ ಕ್ಷೇತ್ರದಲ್ಲಿ ಎಸ್ ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮಹಮ್ಮದ್ ತುಂಬೆ, ಬೆಳ್ತಂಗಡಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ಹಾಗೂ ಮೂಡುಬಿದಿರೆ ಕ್ಷೇತ್ರದಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಆಲ್ಫೊನ್ಸೊ ಫ್ರಾಂಕೊ ಚುನಾವಣಾ ಕಣಕ್ಕಿಳಿಯಲಿದ್ದಾರೆ ಎಂದು ಮಾಹಿತಿ ನೀಡಿದರು.

ದ್ವಿತೀಯ ಪಟ್ಟಿ ಬಿಡುಗಡೆ: "ಮುಂದಿನ ದಿನಗಳಲ್ಲಿ ದ್ವಿತೀಯ ಪಟ್ಟಿಯನ್ನೂ ಬಿಡುಗಡೆ ಮಾಡಲಿದ್ದೇವೆ. ಅದರಲ್ಲಿ ಉಳಿದ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಹಿರಂಗಗೊಳಿಸಲಾಗುತ್ತದೆ. ಎಸ್‌ಡಿಪಿಐ ಸ್ಪರ್ಧೆಯಿಂದ ಯಾರಿಗಾದರೂ ಸೋಲಿನ ಭಯವಿದ್ದರೆ ತಾವು ಚುನಾವಣೆಗೆ ಖರ್ಚು ಮಾಡಿ ಸ್ಪರ್ಧಿಸುವುದು ಬೇಡ. ತಮ್ಮ ಮತವನ್ನು ಎಸ್‌ಡಿಪಿಐಗೆ ಬರುವಂತೆ ನೋಡಿ" ಎಂದರು.

ಇದನ್ನೂ ಓದಿ: ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್​​ ಘಟನೆ ನಡೆದಿದೆ​​ ಎಂದ ಶರಣ್​: ಪಂಪ್​ವೆಲ್ ವಿರುದ್ಧ ಪೊಲೀಸರಿಗೆ ದೂರು ನೀಡಿದ ಫಾಜಿಲ್ ತಂದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.