ETV Bharat / state

ಮಂಗಳೂರಿನ ಸೋಮೇಶ್ವರ ಬೀಚ್​ನಲ್ಲಿ ನೈತಿಕ ಪೊಲೀಸ್‌ಗಿರಿ: 7 ಜನರ ಬಂಧನ

author img

By

Published : Jun 2, 2023, 10:31 AM IST

Updated : Jun 2, 2023, 9:12 PM IST

moral police
ಮಂಗಳೂರಿನ ಸೋಮೇಶ್ವರ ಬೀಚ್​ನಲ್ಲಿ ನೈತಿಕ ಪೊಲೀಸ್ ಗಿರಿ

ಮಂಗಳೂರಿನ ಸೋಮೇಶ್ವರ ಬೀಚ್​ನಲ್ಲಿ ಶುಕ್ರವಾರ ನಡೆದ ನೈತಿಕ ಪೊಲೀಸ್​ಗಿರಿ ಪ್ರಕರಣ ಸಂಬಂಧ 7 ಮಂದಿಯನ್ನು ಬಂಧಿಸಲಾಗಿದೆ.

ಉಳ್ಳಾಲ (ಮಂಗಳೂರು): ಇಲ್ಲಿನ ಸೋಮೇಶ್ವರ ಸಮುದ್ರ ತೀರದಲ್ಲಿ ಮೂವರು ವಿದ್ಯಾರ್ಥಿನಿಯರ ಜೊತೆ ವಿಹರಿಸುತ್ತಿದ್ದ ಮೂವರು ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿ ನೈತಿಕ ಪೊಲೀಸ್‌ಗಿರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು 7 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನುಳಿದವರ ಪತ್ತೆಯಾಗಿ ಪೊಲೀಸರು ತೀವ್ರ ಶೋಧಕಾರ್ಯದಲ್ಲಿ ತೊಡಗಿದ್ದಾರೆ.

ಉಳ್ಳಾಲ ಬಸ್ತಿಪಡ್ಪು ನಿವಾಸಿಗಳಾದ ಯತೀಶ್, ಭವಿಷ್, ತಲಪಾಡಿ ನಿವಾಸಿಗಳಾದ ಸಚಿನ್, ಸುಹಾನ್, ಅಖಿಲ್, ಜೀತು ಮತ್ತು ಓರ್ವ ಅಪ್ರಾಪ್ತ ಬಾಲಕ ಸೇರಿ 7 ಮಂದಿಯನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ನೈತಿಕ ಪೊಲೀಸ್‌ಗಿರಿ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಆರೋಪಿಗಳು ಸಂಘಟನೆಯೊಂದರ ಕಾರ್ಯಕರ್ತರು ಎಂದು ತಿಳಿದುಬಂದಿದೆ. ಸೋಮೇಶ್ವರ ಸಮುದ್ರ ತೀರದಲ್ಲಿ ಉಳ್ಳಾಲ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಏನಿದು ಘಟನೆ?: ಮಂಗಳೂರಿನ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶುಕ್ರವಾರ ಸಂಜೆ ಸೋಮೇಶ್ವರ ಸಮುದ್ರತೀರಕ್ಕೆ ವಾಯುವಿಹಾರಕ್ಕೆಂದು ಆಗಮಿಸಿದ್ದರು. ಇವರಲ್ಲಿ ಮೂವರು ಯುವಕರು ಅನ್ಯ ಸಮುದಾಯಕ್ಕೆ ಸೇರಿದವರೆಂದು ತಂಡವೊಂದು ಅವರನ್ನು ಹಿಂಬಾಲಿಸಿತ್ತು. ಬಳಿಕ ಬೀಚ್ ಬಳಿ ವಿದ್ಯಾರ್ಥಿಗಳ ಹೆಸರು, ವಿಳಾಸ ಕೇಳಿದ್ದರು. ನಂತರು ವಿದ್ಯಾರ್ಥಿಗಳ ಮೇಲೆ ಹಲ್ಲೆಗೈದು ನೈತಿಕ ಪೊಲೀಸ್ ಗಿರಿ ನಡೆಸಿದ್ದರು. ಘಟನೆಯಲ್ಲಿ ಹಲ್ಲೆಗೊಳಗಾದ ಮೂವರು ಯುವಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇನ್ನು ಘಟನೆ ಬಳಿಕ ವಿದ್ಯಾರ್ಥಿನಿಯರು ಕೆರಳಕ್ಕೆ ತೆರಳಿದ್ದಾರೆ. ಹಲ್ಲೆ ಕುರಿತು ಗಾಯಗೊಂಡವರು ನೀಡಿದ ದೂರು ಮೇರೆಗೆ ಉಳ್ಳಾಲ ಪೊಲೀಸರು ತನಿಖೆ ಕೈಗೊಂಡಿದ್ದರು. ಜೊತೆಗೆ ಪ್ರಕರಣ ಭೇದಿಸಲು ಮೂರು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ಇದೀಗ ಪೊಲೀಸ್ ತಂಡವು ಐವರನ್ನು ಬಂಧಿಸಿದೆ.

ಗುರುವಾರ ಸಂಜೆ 7:20ರ ಸುಮಾರಿಗೆ ಸೋಮೇಶ್ವರ ಸಮುದ್ರ ತೀರದಲ್ಲಿದ್ದ ನಡೆದ ಘಟನೆ ಕುರಿತು ಮಾಹಿತಿ ಸಿಕ್ಕ ತಕ್ಷಣ ಘಟನಾ ಸ್ಥಳಕ್ಕೆ 112 ಗಸ್ತು ವಾಹನ ತಲುಪಿತ್ತು. ಬಳಿಕ ಹಲ್ಲೆಗೊಳಗಾದ ಯುವಕರನ್ನು ಆಸ್ಪತ್ರೆಗೆ ದಾಖಲಿಸಿದೆ. ವಿದ್ಯಾರ್ಥಿಗಳ ದೂರು ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ನಿನ್ನೆ ತಿಳಿಸಿದ್ದರು.

ಇದನ್ನೂ ಓದಿ: ರಾಜ್ಯದಲ್ಲಿ ಇನ್ನು ಮುಂದೆ ನೈತಿಕ ಪೊಲೀಸ್​​​ಗಿರಿಗೆ ಅಂತ್ಯ ಹಾಡುತ್ತೇವೆ: ಸಿಎಂ ಸಿದ್ದರಾಮಯ್ಯ

ಎಚ್ಚರಿಕೆ ನೀಡಿದ್ದ ಸಿಎಂ: ಸಿಎಂ ಸಿದ್ದರಾಮಯ್ಯ ಇತ್ತೀಚೆಗಷ್ಟೇ ನೈತಿಕ ಪೊಲೀಸ್‌ಗಿರಿ ಮಾಡದಂತೆ ಎಚ್ಚರಿಕೆ ನೀಡಿದ್ದರು. ರಾಜ್ಯದಲ್ಲಿ ಇನ್ಮುಂದೆ ನೈತಿಕ ಪೊಲೀಸ್‌ಗಿರಿಗೆ ಅಂತ್ಯ ಹಾಡಲಿದ್ದೇವೆ. ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಸಿಎಂ ಖಡಕ್ ಸಂದೇಶ ರವಾನಿಸಿದ್ದರು. ಅಲ್ಲದೇ, ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮಗಳಿಗೆ ಪೊಲೀಸ್ ಇನ್ಸ್​​​​ಪೆಕ್ಟರ್​​ ಮಾತ್ರ ಅಲ್ಲ, ಆ ವ್ಯಾಪ್ತಿಯ ಡಿಸಿಪಿ ಕೂಡಾ ಹೊಣೆಯಾಗುತ್ತಾರೆ. ಧರ್ಮಾತೀತವಾಗಿ ಕಾನೂನು ಪಾಲನೆ ಮಾಡಬೇಕು ಎಂದು ಪೊಲೀಸ್​ ಅಧಿಕಾರಿಗಳಿಗೆ ಸಿಎಂ ಇತ್ತೀಚೆಗೆ ಸೂಚನೆ ನೀಡಿದ್ದರು.

ಇದನ್ನೂ ಓದಿ: ಬೆಳ್ತಂಗಡಿ ಯುವಕನ ಮೇಲೆ ನೈತಿಕ ಪೊಲೀಸ್​ಗಿರಿ; ನಾಲ್ಕು ಮಂದಿ ವಿರುದ್ಧ ಪ್ರಕರಣ ದಾಖಲು

Last Updated :Jun 2, 2023, 9:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.