ETV Bharat / state

ಕಾಫಿನಾಡಿನ ಗಿರಿ ಭಾಗದ ಪ್ರವಾಸಿ ತಾಣಗಳಲ್ಲಿಲ್ಲ ಮೂಲಭೂತ ಸೌಲಭ್ಯ: ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆ

author img

By

Published : Jun 8, 2023, 11:00 PM IST

no-basic-facilities-in-the-tourist-spots-of-chikkamagalur-women-wrote-letter-to-indian-president
ಕಾಫಿನಾಡಿನ ಗಿರಿ ಭಾಗದ ಪ್ರವಾಸಿ ತಾಣಗಳಲ್ಲಿಲ್ಲ ಮೂಲಭೂತ ಸೌಲಭ್ಯ : ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆ

ಚಿಕ್ಕಮಗಳೂರು ಜಿಲ್ಲೆಯ ಗಿರಿ ಭಾಗದ ಪ್ರವಾಸಿ ತಾಣಗಳಲ್ಲಿ ಸೂಕ್ತವಾದ ಮೂಲ ಸೌಕರ್ಯ ಇಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮಹಿಳೆಯೊಬ್ಬರು ಪತ್ರ ಬರೆದಿದ್ದಾರೆ.

ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರು ಪ್ರವಾಸಿಗರ ನೆಚ್ಚಿನ ಜಿಲ್ಲೆಗಳಲ್ಲಿ ಒಂದು. ಅದ್ರಲ್ಲೂ ಕಾಫಿನಾಡಿನ ಮುಳ್ಳಯ್ಯನಗಿರಿ ಪ್ರವಾಸಿಗರ ಹಾಟ್ ಸ್ಪಾಟ್. ಇಲ್ಲಿನ ಪ್ರವಾಸಿ ತಾಣಗಳು ಪ್ರತಿ ನಿತ್ಯ ಸಾವಿರಾರು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದು, ರಾಜ್ಯದ ಮೂಲೆ ಮೂಲೆಯಿಂದ ಈ ಭಾಗಕ್ಕೆ ಪ್ರವಾಸಿಗರು ಆಗಮಿಸಿ ಇಲ್ಲಿಂದ ನೈಸರ್ಗಿಕ ಸೌಂದರ್ಯ ಸವಿಯುತ್ತಿದ್ದಾರೆ. ಆದರೆ ಕಾಫಿನಾಡಿನ ಆಗಮಿಸುವ ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಮರೀಚಿಕೆಯಾಗಿದೆ.

ರಾಜ್ಯದಲ್ಲಿ ಅತ್ಯಂತ ಎತ್ತರದ ಪ್ರದೇಶ ಎಂದು ಪ್ರಸಿದ್ಧಿ ಪಡೆದಿರುವ ಪ್ರವಾಸಿ ತಾಣ ಮುಳ್ಳಯ್ಯನ ಗಿರಿ ಇರುವುದು ಚಿಕ್ಕಮಗಳೂರು ಜಿಲ್ಲೆಯಲ್ಲಿ. ಇದು ಚಿಕ್ಕಮಗಳೂರು ಜಿಲ್ಲೆಯ ಮುಕುಟ. ಕಳೆದ ಕೆಲವು ವರ್ಷಗಳಿಂದ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಳಗೊಳ್ಳುತ್ತಿದೆ. ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಇಲ್ಲಿನ ತಣ್ಣನೆ ಗಾಳಿ, ಸ್ವಚ್ಛಂದ ಪರಿಸರ, ರಸ್ತೆ ಉದ್ದಕ್ಕೂ ಸಿಗುವ ಜಲಪಾತಗಳು ಬರುವಂತಹ ಇಲ್ಲಿಗೆ ಬರುವ ಪ್ರವಾಸಿಗರನ್ನು ಮಂತ್ರ ಮುಗ್ಧರನ್ನಾಗಿಸುತ್ತಿದೆ.

ಆದರೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸಂಪೂರ್ಣ ವಿಫಲವಾಗಿದೆ. ಮೂಲಭೂತ ಸೌಲಭ್ಯವಿಲ್ಲದೆ ಪ್ರವಾಸಿಗರು ಕಿರಿಕಿರಿ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿ, ಸೀತಾಳಯ್ಯನಗಿರಿ, ದತ್ತಪೀಠಗೆ ಬರುವ ಪ್ರವಾಸಿಗರಿಗೆ ಸೂಕ್ತವಾದ ಮೂಲಭೂತ ಸೌಕರ್ಯ ಸಿಗುತ್ತಿಲ್ಲ. ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿದ್ದು ಪ್ರವಾಸಿಗರ ಜಿಲ್ಲಾಡಳಿತ ವಿರುದ್ಧ ಪ್ರವಾಸಿಗರು ಕಿಡಿ ಕಾರಿದ್ದಾರೆ. ಇನ್ನು ಕೆಲವೆಡೆ ಇರುವ ಶೌಚಾಲಯಕ್ಕೆ ನಿರ್ವಹಣೆಗೆ ಸಿಬ್ಬಂದಿ ನಿಯೋಜಿಸದೇ ನಿರ್ಲಕ್ಷ್ಯ ತೋರಲಾಗಿದೆ.

ಮೂಲಸೌಕರ್ಯ ಕಲ್ಪಿಸುವಂತೆ ರಾಷ್ಟ್ರಪತಿಗೆ ಪತ್ರ : ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಇಲ್ಲಿನ ಜಿಲ್ಲಾಡಳಿತ ವಿಫಲವಾಗಿದೆ ಎಂದು ಮಹಿಳೆಯೊಬ್ಬರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಎಲ್ಲರ ಗಮನ ಸೆಳೆದಿದೆ. ಪತ್ರದ ಕೊನೆಯಲ್ಲಿ ಸಾಮಾನ್ಯ ಮಹಿಳೆ ಎಂದು ಅವರು ಉಲ್ಲೇಖಿಸಿದ್ದಾರೆ.

ಈ ಪತ್ರದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಗಿರಿ ಪ್ರದೇಶದ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಬೇರೆ ಜಿಲ್ಲೆಗಳಿಂದ ಬರುವ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸಲು ಜಿಲ್ಲಾಡಳಿತ ವಿಫಲವಾಗಿದೆ. ಇದರಿಂದ ಪ್ರವಾಸಿಗರಿಗೆ ಕಿರಿಕಿರಿ ಉಂಟಾಗುತ್ತಿದೆ ಎಂದಿದ್ದಾರೆ. ದೇಶದ ಪ್ರಥಮ ಪ್ರಜೆಯಾಗಿರುವ ತಾವು ಬುಡಕಟ್ಟು ಸಮುದಾಯದಿಂದ ಬಂದವರು. ಅತ್ಯುನ್ನತ ಸ್ಥಾನಕ್ಕೆ ಏರಿರುವುದು ನಮ್ಮಂತಹ ಸಾಮಾನ್ಯ ಮಹಿಳೆಯರಿಗೆ ಸ್ಫೂರ್ತಿಯಾಗಿದೆ ಎಂದು ಹೇಳಿರುವ ಮಹಿಳೆ, ಕೆಲವು ದಿನಗಳ ಹಿಂದೆ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠಕ್ಕೆ ಕುಟುಂಬ ಸಮೇತರಾಗಿ ತೆರಳಿದ್ದೆವು. ಈ ಪ್ರದೇಶದಲ್ಲಿ ಶೌಚಾಲಯ ವ್ಯವಸ್ಥೆಯಿಲ್ಲದೆ ಪರದಾಡಬೇಕಾಯಿತು ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ, ರಾಜ್ಯದಲ್ಲೇ ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿರುವ ಜಿಲ್ಲೆ ಎಂದರೆ ಅದು ಚಿಕ್ಕಮಗಳೂರು. ರಾಜ್ಯ ಸೇರಿದಂತೆ ದೇಶದ ವಿವಿದೆಡೆಯಿಂದ ಇಲ್ಲಿನ ಪರಿಸರ ಹಾಗೂ ಪ್ರವಾಸಿ ಸ್ಥಳದ ಸೌಂದರ್ಯ ಸವಿಯಲು ಪ್ರವಾಸಿಗರು ಆಗಮಿಸುತ್ತಾರೆ. ಅದರೆ ಇಲ್ಲಿ ಮೂಲಭೂತದ ಸೌಕರ್ಯದ ಕೊರತೆ ಇದ್ದು, ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮುಂದಾದರೆ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಇದನ್ನೂ ಓದಿ : Water levels in reservoirs: ಮುಂಗಾರು ಮಳೆ ವಿಳಂಬ; ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.