ETV Bharat / state

ಜನೋತ್ಸವ ರದ್ದಾಗಿದ್ದು ಪ್ರವೀಣ್ ಹತ್ಯೆಯ ಬೇಸರದಿಂದಲ್ಲ, ಜನಾಕ್ರೋಶಕ್ಕೆ ಹೆದರಿ: ಪ್ರಿಯಾಂಕ್ ಖರ್ಗೆ

author img

By

Published : Jul 28, 2022, 5:56 PM IST

MLA Priyank Kharge
ಶಾಸಕ ಪ್ರಿಯಾಂಕ್ ಖರ್ಗೆ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ- ಬಿಜೆಪಿ ಸರ್ಕಾರದ ಜನೋತ್ಸವ ರದ್ದಾಗಿದ್ದು ಜನರ ಆಕ್ರೋಶಕ್ಕೆ ಹೆದರಿ- ಕಾಂಗ್ರೆಸ್​ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಪ್ರವೀಣ್ ನೆಟ್ಟಾರು ಹತ್ಯೆಯ ಸಿಂಪಥಿ ಕಾರಣಕ್ಕಾಗಿ ರಾಜ್ಯ ಬಿಜೆಪಿ ಸರ್ಕಾರದ ಜನೋತ್ಸವ ಕಾರ್ಯಕ್ರಮ ರದ್ದಾಗಿಲ್ಲ. ಬದಲಾಗಿ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಹೆದರಿರುವ ಮುಖ್ಯಮಂತ್ರಿಗಳು ಮತ್ತು ಪಕ್ಷದ ನಾಯಕರು ಈ ರೀತಿ ದಿಢೀರ್​ ನಿರ್ಧಾರ ತೆಗೆದುಕೊಂಡಿದ್ದಾರೆ ಕಾಂಗ್ರೆಸ್​ ಪಕ್ಷದ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರವೀಣ್ ಹತ್ಯೆ ಕುರಿತು ಖಂಡನೆ ವ್ಯಕ್ತಪಡಿಸಿದರು. ಜು. 26ರಂದೇ ಪ್ರವೀಣ್ ಹತ್ಯೆಯಾಗಿದೆ. ಅಂದು ಸಂಜೆಯೇ ಜನೋತ್ಸವ ಕ್ಯಾನ್ಸಲ್ ಮಾಡಬೇಕಿತ್ತು. ಏಕೆ ರದ್ದು ಮಾಡಲಿಲ್ಲ? ಕಟೀಲ್ ಕಾರಿನ ಮೇಲೆ ಅಟ್ಯಾಕ್ ಆಯ್ತು. ಅದಕ್ಕೆ ಈ ನಿರ್ಧಾರ ಮಾಡಿದ್ರಾ? ಬಿಜೆಪಿ ಕಾರ್ಯಕರ್ತರು ರಾಜೀನಾಮೆ ನೀಡಿದ್ರು. ಇದಕ್ಕೆ ಹೆದರಿ ಸರ್ಕಾರ ರದ್ದುಪಡಿಸಿತಾ? ಜನಾಕ್ರೋಶಕ್ಕೆ ಹೆದರಿ ಜ್ಞಾನೋದಯವಾಗಿದೆ. ಸಿಎಂ ಅನುಕಂಪ ಅನ್ನೋದು ಸುಳ್ಳು. ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಕಿಡಿಕಾರಿದರು.

ಶಾಸಕ ಪ್ರಿಯಾಂಕ್ ಖರ್ಗೆ ಆರೋಪ

ಗೃಹ ಸಚಿವರು ಇಲಾಖೆಗೆ ಮರ್ಯಾದೆ ಕೊಡಲಿಲ್ಲ. ಎಂಜಲು ತಿನ್ನುತ್ತಾರೆ ಅಂತ ಪೊಲೀಸರಿಗೆ ಹೇಳಿದ್ರು. ಲಂಚ ಕೇಳ್ತಾರೆ ಅಂತ ಅಧಿಕಾರಿಗಳ ಮೇಲೆ ಹರಿಹಾಯ್ದಿದ್ರು. ಇದೇನಾ ಗೃಹ ಸಚಿವರು ಅವರ ಇಲಾಖೆಗೆ ಕೊಡುವ ಗೌರವ. ಇಂಥವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಪ್ರಿಯಾಂಕ್​ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು. ಹರ್ಷನಿಗೊಂದು ನ್ಯಾಯ, ಪ್ರವೀಣ್​ಗೊಂದು ನ್ಯಾಯವೇ? ಇಂದು ನಿಮ್ಮವರೇ ನಿಮ್ಮ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಸರ್ಕಾರವನ್ನು ಲೇವಡಿ ಮಾಡಿದರು.

ಎಸ್ಡಿಪಿಐ, ಪಿಎಫ್ಐ ಸಂಘಟನೆ ಬ್ಯಾನ್ ಅಂತೀರ. ಎರಡು ಕಡೆ ನಿಮ್ಮದೇ ಸರ್ಕಾರ ಇದೆ. ಇವೆರಡು ಬಿಜೆಪಿಯ ಬಿ ಟೀಂ ಅಂತೆ. ಎರಡಕ್ಕೂ ಬಿಜೆಪಿಯೇ ಫಂಡಿಂಗ್ ಮಾಡ್ತಿದೆ. ಇದನ್ನು ನಾನು ಹೇಳ್ತಿಲ್ಲ. ಆರ್​ಎಸ್ಎಸ್ ಮುಖಂಡ ಸತ್ಯಜಿತ್ ಸುರತ್ಕಲ್ ಹೇಳ್ತಾರೆ. ಇದಕ್ಕೆ ಏನು ಹೇಳ್ತೀರಾ? ಎಂದು ಖರ್ಗೆ ಪ್ರಶ್ನಿಸಿದರು.

ನಾವು ಮೃತ ಪ್ರವೀಣ್ ನಿವಾಸಕ್ಕೆ ಭೇಟಿ ಕೊಡಬೇಕು. ಪೊಲೀಸರೇ ಬೇಡ ಅಂದ್ರೆ ಹೋಗೋಕೆ ಸಾಧ್ಯವೇ? ನಾವು ಸಾವಿನಲ್ಲಿ ರಾಜಕಾರಣ ಮಾಡುವವರಲ್ಲ. ನಾವು ಈಗಲೇ ಹೋಗಲು ಸಿದ್ಧರಿದ್ದೇವೆ. ಅವರೇ ಬರಬೇಡಿ ಅಂದ್ರೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಪ್ರವೀಣ್ ಒಬ್ಬನೇ ಇದ್ದಾಗ ಹೇಡಿಗಳ ರೀತಿ ಹತ್ಯೆ ಮಾಡಿ ಓಡಿ ಹೋಗಿದ್ದಾರೆ: ಕೆ.ಎಸ್.ಈಶ್ವರಪ್ಪ

ತನಿಖೆ ಶೀಘ್ರವಾಗಿ ನಡೆಯಬೇಕು, ಪಾರದರ್ಶಕವಾಗಿರಬೇಕು. ಕೋಮು ಗಲಭೆಗಳ ಹತ್ಯೆ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಕೊಡಿ. ನಮ್ಮ ಅವಧಿಯಲ್ಲಿ ಆದ ಪ್ರಕರಣಗಳನ್ನೂ ಸೇರಿಸಿ ನ್ಯಾಯಾಂಗ ತನಿಖೆ ಮಾಡಿಸಿ. ಕೋಮು ಸೌಹಾರ್ದತೆಗೆ ಧಕ್ಕೆ ತರುವ ಸಂಘಟನೆ ಬ್ಯಾನ್ ಮಾಡಿ. ಯಾವುದೇ ಸಂಘಟನೆ ಇದ್ರೂ ನಿಷೇಧ ಮಾಡಿ. ಇದಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದರು. ಜೊತೆಗೆ ಸಿಎಂ, ಗೃಹ ಸಚಿವರು ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.