ETV Bharat / state

ಚಿಕ್ಕಬಳ್ಳಾಪುರ ರಸ್ತೆ ಅಪಘಾತ: ಮೃತರ ಸಂಖ್ಯೆ 13ಕ್ಕೆ ಏರಿಕೆ.. 2 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ

author img

By ETV Bharat Karnataka Team

Published : Oct 26, 2023, 12:50 PM IST

chikkaballapura-road-accident-death-toll-raised-to-13-2-lakh-compensation-to-deceased
ಚಿಕ್ಕಬಳ್ಳಾಪುರ ರಸ್ತೆ ಅಪಘಾತ : ಮೃತರ ಸಂಖ್ಯೆ 13ಕ್ಕೆ ಏರಿಕೆ.. 2 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ

ಚಿಕ್ಕಬಳ್ಳಾಪುರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆ ಆಗಿದೆ. ಮೃತರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಅವರು 2 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.

ಚಿಕ್ಕಬಳ್ಳಾಪುರ ರಸ್ತೆ ಅಪಘಾತ : ಮೃತರ ಸಂಖ್ಯೆ 13ಕ್ಕೆ ಏರಿಕೆ.. 2 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆ ಆಗಿದೆ. ಇಂದು ಮುಂಜಾನೆ ತಾಲೂಕಿನ ಚಿತ್ರಾವತಿ ಬಳಿಯ ಆರ್​​ಟಿಒ ಕಚೇರಿ‌ ಸಮೀಪ ಹೆದ್ದಾರಿ ಬದಿ ನಿಂತಿದ್ದ ಸಿಮೆಂಟ್ ಬಲ್ಕರ್​ ಲಾರಿಗೆ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ತೆರಳುತ್ತಿದ್ದ ಟಾಟಾ ಸುಮೊ ಡಿಕ್ಕಿಯಾಗಿತ್ತು. ಅಪಘಾತದಲ್ಲಿ ಸ್ಥಳದಲ್ಲೇ 12 ಮಂದಿ ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಮೃತರಲ್ಲಿ 8 ಜನ ಪುರುಷರು, 4 ಮಹಿಳೆಯರು, ಒಂದು ಮಗು ಸಾವನ್ನಪ್ಪಿದೆ. ಮೃತರೆಲ್ಲರೂ ಆಂಧ್ರಪ್ರದೇಶದ ಶ್ರೀಸತ್ಯಸಾಯಿ ಜಿಲ್ಲೆಯ ಗೋರಂಟ್ಲ ಗ್ರಾಮದವರು ಎಂದು ಹೇಳಲಾಗಿದೆ.

ಮೃತರನ್ನು ಆಂಧ್ರಪ್ರದೇಶದ ಕೊತ್ತಚೆರವು ಗ್ರಾಮದ ಪೆರಿಮಿಲಿ ಹಾಗೂ‌ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಸುಬ್ಬಮ್ಮ, ದೊಡ್ಡಬಳ್ಳಾಪುರದ ಅರುಣಾ‌ ಎಂಬವರ ಗುರುತು ಪತ್ತೆ ಹಚ್ಚಲಾಗಿದೆ. ಉಳಿದವರ ಗುರುತು ಇನ್ನೂ ಕಲೆ ಹಾಕಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪಿ ಎನ್​ ರವೀಂದ್ರ ಅವರು, ಚಿಕ್ಕಬಳ್ಳಾಪುರ ಆರ್​ಟಿಓ ಕಚೇರಿ ಬಳಿ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 13 ಜನ ಸಾವನ್ನಪ್ಪಿದ್ದಾರೆ. 8 ಮಂದಿ ಗಂಡಸರು, 4 ಹೆಂಗಸರು ಮತ್ತು ಒಂದು ಮಗು ಮೃತಪಟ್ಟಿದೆ. ಮೃತರೆಲ್ಲರೂ ಆಂಧ್ರ ಪ್ರದೇಶದ ಗೊರಂಟ್ಲಪಲ್ಲಿಯವರು ಎಂದು ತಿಳಿದುಬಂದಿದೆ.

ಆಂಧ್ರಪ್ರದೇಶದ ಗೊರಂಟ್ಲಪಲ್ಲಿಯಿಂದ ಟಾಟಾ ಸುಮೊದಲ್ಲಿ ಪ್ರಯಾಣಿಕರು ಹೊರಟಿದ್ದರು. ಈ ವೇಳೆ, ಚಿಕ್ಕಬಳ್ಳಾಪುರದ ಚಿತ್ರಾವತಿ ಬಳಿ ಹೆದ್ದಾರಿ ಬದಿ ನಿಂತಿದ್ದ ಲಾರಿಗೆ ಟಾಟಾ ಸುಮೊ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಸ್ಥಳದಲ್ಲೇ ಹಲವರು ಮೃತಪಟ್ಟಿದ್ದಾರೆ. ನಾನು ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ ಖುದ್ದಾಗಿ ಪರಿಶೀಲನೆ ನಡೆಸಿದ್ದೇನೆ ಎಂದು ಹೇಳಿದರು.

ಎಸ್ಪಿ ಡಿಎನ್​ ನಾಗೇಶ್​ ಪ್ರತಿಕ್ರಿಯಿಸಿ, ಇಂದು ಬೆಳಗ್ಗೆ ಸುಮಾರು 7 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಟಾಟಾ ಸುಮೊ ಒಂದು ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. 13 ಮಂದಿ ಸಾವನ್ನಪ್ಪಿದ್ದಾರೆ. ಮೃತರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಮಂಜು ಕವಿದ ವಾತಾವರಣ ಇದ್ದಿದ್ದರಿಂದ ಅಪಘಾತ ಸಂಭವಿಸಿರಬಹುದು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದರು.

ಹೆದ್ದಾರಿ ಬದಿ ನಿಂತಿದ್ದ ಸಿಮೆಂಟ್​ ಬಲ್ಕರ್​ಗೆ ಟಾಟಾ ಸುಮೊ ಡಿಕ್ಕಿ ಹೊಡೆದ ರಭಸಕ್ಕೆ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಪಿಎನ್ ರವೀಂದ್ರ ಹಾಗೂ ಜಿಲ್ಲಾ ಎಸ್ಪಿ ಡಿಎಲ್‌ ನಾಗೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರ ಕುಟುಂಬಸ್ಥರಿಗೆ 2 ಲಕ್ಷ ಪರಿಹಾರ : ಚಿಕ್ಕಬಳ್ಳಾಪುರದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರದ ವತಿಯಿಂದ 2 ಲಕ್ಷ ರೂ ಪರಿಹಾರ ಘೋಷಿಸಲಾಗಿದೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಸಿಎಂ ಸಿದ್ದರಾಮಯ್ಯ, ಚಿಕ್ಕಬಳ್ಳಾಪುರದ ಚಿತ್ರಾವತಿ ಸಮೀಪ ಇಂದು ಸಂಭವಿಸಿದ ಭೀಕರ ಅಪಘಾತದಲ್ಲಿ 13 ಮಂದಿ ಮೃತಪಟ್ಟ ಸುದ್ದಿ ತಿಳಿದು ಅತೀವ ನೋವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಮೃತ ದುರ್ದೈವಿಗಳ ಕುಟುಂಬಗಳಿಗೆ ತಲಾ ರೂ. 2 ಲಕ್ಷ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ : ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: 12 ಮಂದಿ ದಾರುಣ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.