ETV Bharat / state

ಕೋವಿಡ್ ಅಷ್ಟೇ ಅಲ್ಲ, ಕಾಲುಬಾಯಿ ಜ್ವರಕ್ಕೂ ಕಾಡಿದೆ ಲಸಿಕೆ ಕೊರತೆ!

author img

By

Published : Jun 15, 2021, 10:16 AM IST

ಕಾಲುಬಾಯಿ ಜ್ವರಕ್ಕೆ ಲಸಿಕೆ ಕೊರತೆ ಎದುರಾಗಿದ್ದು, ಜಾನುವಾರುಗಳನ್ನು ಕಾಪಾಡಿಕೊಳ್ಳಲು ಹೈನುಗಾರರು ಪರದಾಡುತ್ತಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದಲ್ಲಿ 25ಕ್ಕೂ ಹೆಚ್ಚು ಜಾನುವಾರುಗಳು ಅಸುನೀಗಿದ್ದರೆ, ಯಡವನಹಳ್ಳಿಯಲ್ಲಿ- 7, ಬೇಗೂರು, ಹಸಗೂಲಿ ಸೇರಿದಂತೆ ಹಲವು ಗ್ರಾಮಗಳಲ್ಲಿ 2-3 ಹಸುಗಳು ಕಾಲುಬಾಯಿ ಜ್ವರದಿಂದ ಮೃತಪಟ್ಟಿವೆ ಎಂಬ ಮಾಹಿತಿ ಸಿಕ್ಕಿದೆ.

vaccine sacristy for Cattle fever
ಜಾನುವಾರುಗಳಿಗೂ ಕಾಡಿತು ಲಸಿಕೆ ಕೊರತೆ!

ಚಾಮರಾಜನಗರ: ಮಾನ್ಸೂನ್ ನಂತರ ಕಾಣಿಸಿಕೊಳ್ಳುತ್ತಿದ್ದ ಕಾಲುಬಾಯಿ ಜ್ವರ ಈಗ ಎರಡು ತಿಂಗಳ ಮುಂಚೆಯೇ ಗುಂಡ್ಲುಪೇಟೆ ತಾಲೂಕಿನ ಹಲವೆಡೆಗಳಲ್ಲಿ ಕಾಣಿಸಿಕೊಂಡಿದ್ದು, ಹತ್ತಾರು ಜಾನುವಾರುಗಳು ಅಸುನೀಗಿದೆ. ಇದರೊಟ್ಟಿಗೆ ಲಸಿಕೆ ಅಭಾವವೂ ತಲೆದೋರಿದೆ.

ಕೊರೊನಾ ಕಾಲದಲ್ಲಿ ಲಸಿಕೆಗಾಗಿ ಜನರು ಪರದಾಡುತ್ತಿರುವಂತೆ ಕಾಲುಬಾಯಿ ಜ್ವರದಿಂದ ಜಾನುವಾರುಗಳನ್ನು ಕಾಪಾಡಿಕೊಳ್ಳಲು ಹೈನುಗಾರರು ಪರದಾಡುತ್ತಿದ್ದಾರೆ. ಮುಂಗಾರು ಮಳೆ ಹೊತ್ತಿಗೆ ಕಾಲುಬಾಯಿ ಜ್ವರ ಲಸಿಕೆ ಅಭಿಯಾನ ನಡೆಸುತ್ತಿದ್ದ ಪಶು ಸಂಗೋಪನಾ ಇಲಾಖೆ ಈ ಬಾರಿ ಲಸಿಕೆ ಕೊಡಲು ಒದ್ದಾಡುತ್ತಿದೆ.

ಆದ್ಯತೆ ಮೇರೆಗೆ ಲಸಿಕೆ ಕೊಡುವ ತೀರ್ಮಾನವನ್ನು ಜಿಲ್ಲಾಡಳಿತ ಕೈಗೊಂಡಿರುವುದರಿಂದ ಕಾಲುಬಾಯಿ ಜ್ವರ ಬಂದವುಗಳಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜಾನುವಾರುಗಳಿಗಷ್ಟೇ ಲಸಿಕೆ ಪ್ರಾಪ್ತಿಯಾಗುತ್ತಿದೆ. ಅದು ಕೂಡ ಲಸಿಕೆ ಪೂರೈಕೆಯಾಗದಿದ್ದರಿಂದ ಇಲಾಖೆಯು ಲಸಿಕೆ ಖರೀದಿಸಿ ಕೊಡಬೇಕಾಗಿದೆ. ಜಿಲ್ಲೆಯಲ್ಲಿ 2.60 ಲಕ್ಷ ಜಾನುವಾರುಗಳಿದ್ದು, ಈಗ ಗುಂಡ್ಲುಪೇಟೆ ತಾಲೂಕಿನ ಕಾಲು ಬಾಯಿ ಜ್ವರ ಕಾಣಿಸಿಕೊಂಡ 4-5 ಗ್ರಾಮಗಳ 8 ಸಾವಿರ ರಾಸುಗಳಿಗಷ್ಟೇ ಲಸಿಕೆ ನೀಡಲಾಗಿದೆ.

ಕಾಲುಬಾಯಿ ಜ್ವರ ಸಾಂಕ್ರಾಮಿಕವಾಗಿದ್ದು, ತಿಂದುಳಿದ ಮೇವನ್ನು ಬೇರೆ ಹಸುವಿಗೆ ನೀಡುವುದು, ಒಂದೇ ಬಕೆಟ್​ನಲ್ಲಿ ನೀರು, ಕಲಗಚ್ಚು ನೀಡುವುದರಿಂದ ಒಂದು ಹಸಿವಿನಿಂದ ಮತ್ತೊಂದಕ್ಕೆ ಹರಡಲಿದೆ. ಹೈನುಗಾರಿಕೆ ನಂಬಿ ಬದುಕುವ ರೈತರಿಗೆ ಕೊರೊನಾ ಕಾಲದಲ್ಲಿ ಈ ರೋಗ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈಟಿವಿ ಭಾರತದೊಂದಿಗೆ ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಡಾ. ವೀರಭದ್ರಯ್ಯ ಮಾತನಾಡಿ, ಆದ್ಯತೆ ಮೇರೆಗೆ ಲಸಿಕೆ ಕೊಡಲಾಗುತ್ತಿದೆ. ಲಸಿಕೆ ಪೂರೈಕೆಯಾಗದಿರುವುದರಿಂದ ಅಭಿಯಾನ ನಡೆಸಿಲ್ಲ. ಲಸಿಕಾ ಅಭಿಯಾನಕ್ಕೆ ತಯಾರಿ ಮಾಡಿಕೊಳ್ಳುವಂತೆ ಮೇಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಮುಂದಿನ ತಿಂಗಳು ಲಸಿಕೆ ಅಭಿಯಾನ ನಡೆಸಲಾಗುವುದು ಎಂದರು.

ಈಟಿವಿ ಭಾರತಕ್ಕೆ ಲಭಿಸಿರುವ ಮಾಹಿತಿ ಪ್ರಕಾರ, ಗುಂಡ್ಲುಪೇಟೆ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದಲ್ಲಿ 25ಕ್ಕೂ ಹೆಚ್ಚು ಜಾನುವಾರುಗಳು ಅಸುನೀಗಿದ್ದರೆ, ಯಡವನಹಳ್ಳಿಯಲ್ಲಿ- 7, ಬೇಗೂರು, ಹಸಗೂಲಿ ಸೇರಿದಂತೆ ಹಲವು ಗ್ರಾಮಗಳಲ್ಲಿ 2-3 ಹಸುಗಳು ಕಾಲುಬಾಯಿ ಜ್ವರದಿಂದ ಮೃತಪಟ್ಟಿವೆ. ಕಾಲುಬಾಯಿ ಜ್ವರಕ್ಕೆ ಜಾನುವಾರು ಮೃತಪಟ್ಟರೆ ಪರಿಹಾರವೂ ಸಿಗದಿರುವುದರಿಂದ ಹೈನುಗಾರರು ಕಂಗಲಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಹೊಸದಾಗಿ 1,297 ಕೇಸ್ ಪತ್ತೆ: ಪಾಸಿಟಿವಿಟಿ ದರ ಶೇ. 3ಕ್ಕೆ ಇಳಿಕೆ

ಈಗಾಗಲೇ ಲಸಿಕೆ ನೀಡಬೇಕಿತ್ತು. ಕಾಲುಬಾಯಿ ಜ್ವರ ಸಾಂಕ್ರಾಮಿಕವಾಗಿರುವುದರಿಂದ ಒಂದು ಹಸುವಿಗೆ ಬಂದರೆ ಉಳಿದವಕ್ಕೂ ಹರಡುತ್ತದೆ. ಕೊರೊನಾ ಸಂಕಷ್ಟ ಕಾಲದಲ್ಲಿ ಈ ರೋಗಬಾಧೆಯಿಂದ ಹೈನುಗಾರರ ಸ್ಥಿತಿ ಶೋಚನೀಯವಾಗಿದೆ ಎಂದು ಕನ್ನೇಗಾಲದ ರೈತ ಸ್ವಾಮಿ ಅಳಲು ತೋಡಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.