ETV Bharat / state

ಅವಕಾಶ ಇದ್ದಾಗಲೇ ಖರ್ಗೆಯನ್ನು ಸಿಎಂ ಮಾಡಲಿಲ್ಲ, ಇನ್ನು ಪಿಎಂ?: ಕೇಂದ್ರ ಸಚಿವ ನಾರಾಯಣಸ್ವಾಮಿ

author img

By ETV Bharat Karnataka Team

Published : Dec 21, 2023, 4:03 PM IST

Updated : Dec 21, 2023, 4:16 PM IST

Central Minister Narayanaswamy
ಕೇಂದ್ರ ಸಚಿವ ನಾರಾಯಣಸ್ವಾಮಿ

Minister Narayanaswamy statement on Congress PM candidate: ಉಪರಾಷ್ಟ್ರಪತಿಯನ್ನೇ ಯಾವ ರೀತಿ ಮಿಮಿಕ್ರಿ ಮಾಡಿದ್ದಾರೆ ಅನ್ನೋದನ್ನು ಜನ ನೋಡಿದ್ದಾರೆ. ಅವರನ್ನು ಹೇಗೆ ಸಂಭೋದಿಸಬೇಕು ಎನ್ನುವ ಪರಿಜ್ಞಾನ ಕಾಂಗ್ರೆಸ್​ನವರಿಗೆ ಇರಬೇಕಿತ್ತು ಎಂದು ನಾರಾಯಣಸ್ವಾಮಿ ಹೇಳಿದರು.

ಕೇಂದ್ರ ಸಚಿವ ನಾರಾಯಣಸ್ವಾಮಿ ಹೇಳಿಕೆ

ಚಾಮರಾಜನಗರ: ಕರ್ನಾಟಕದಲ್ಲಿ ಅವಕಾಶ ಇದ್ದಾಗಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಲಿಲ್ಲ, ಇನ್ನು ಪಿಎಂ ಮಾಡ್ತಾರಾ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ವ್ಯಂಗ್ಯವಾಡಿದರು. ಚಾಮರಾಜನಗರದಲ್ಲಿ ಇಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲಲ್ಲಿದೆ ಎಂಬುದು ಗ್ಯಾರಂಟಿ ಇಲ್ಲ. ಯಾವ ಸಂದರ್ಭದಲ್ಲಿ ನನ್ನನ್ನು ಪಿಎಂ ಅಭ್ಯರ್ಥಿ ಮಾಡ್ತಿದೀರಾ ಎಂದು ಸ್ವತಃ ಖರ್ಗೆ ಅವರೇ ಹೇಳಿದ್ದಾರೆ. ಇದರ ಬಗ್ಗೆ ಕಾಂಗ್ರೆಸಿಗರೇ ಚರ್ಚಿಸಲಿ ಎಂದರು.

ಸಂಸತ್​ ಆವರಣದಲ್ಲಿ ವಿಪಕ್ಷ ಉಪರಾಷ್ಟ್ರಪತಿಯನ್ನು ಮಿಮಿಕ್ರಿ ಮಾಡಿದ ವಿವಾದದ ಕುರಿತು ಮಾತನಾಡುತ್ತಾ, ನಾಗರಿಕರನ್ನು ಯಾರೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಯಾವ ರೀತಿ ಉಪ ರಾಷ್ಟ್ರಪತಿ ಜಗದೀಪ್​ ಧನ್​ಕರ್​ ಅವರನ್ನು ಮಿಮಿಕ್ರಿ ಮಾಡಿದ್ರು ಅನ್ನೋದನ್ನು ಜನ ನೋಡಿದ್ದಾರೆ. ಅದನ್ನು ಯಾವ ರೀತಿ ರಾಹುಲ್ ಗಾಂಧಿ ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿದ್ದಾರೆ ಎಂಬುದನ್ನೂ ನೋಡಿದ್ದಾರೆ. ಸಂಸದರು, ಶಾಸಕರನ್ನು ಸಂಭೋದಿಸುವುದು ಒಂದು ಭಾಗ. ಆದರೆ ರಾಷ್ಟ್ರಪತಿ, ಉಪರಾಷ್ಟ್ರಪತಿ ಅವರನ್ನು ಯಾವ ರೀತಿ ಸಂಭೋದಿಸಬೇಕು ಎಂಬ ಪರಿಜ್ಞಾನ ಕಾಂಗ್ರೆಸ್​ಗೆ ಇರಬೇಕಿತ್ತು ಎಂದು ಹೇಳಿದರು.

ಒಳ‌ ಮೀಸಲಾತಿ ಕುರಿತು ಮಾತನಾಡಿ, ಜ.17 ರಂದು ಸುಪ್ರೀಂ ಕೋರ್ಟ್​ನಲ್ಲಿ ಒಳ ಮೀಸಲಾತಿ ಸಂಬಂಧ ವಿಚಾರಣೆ ನಡೆಯಲಿದೆ. ಫೆಬ್ರವರಿಯಲ್ಲಿ ಮಾದಿಗರ ಪರವಾಗಿ ಆದೇಶ ಹೊರಬೀಳುವ ವಿಶ್ವಾಸವಿದೆ. ದಕ್ಷಿಣ ಭಾರತದ ಮಾದಿಗರ ಒಳ‌ ಮೀಸಲಾತಿ ಪರವಾಗಿ ಕೇಂದ್ರ ಸರ್ಕಾರ ಇದೆ ಎಂದರು.

2024ರ ಲೋಕಸಭಾ ಚುನಾವಣೆ ಸಂಬಂಧ ಮಾತನಾಡಿ, ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಭಾರತವನ್ನು ವಿಶ್ವದಲ್ಲೇ ನಂ 1 ಮಾಡಲು ಬಿಜೆಪಿ ರಾಷ್ಟ್ರ ನಾಯಕರಿಂದ ಹಿಡಿದು, ಪ್ರತಿಯೊಬ್ಬ ಕಾರ್ಯಕರ್ತರೂ ಶೇಕಡಾ ನೂರರಷ್ಟು ಕೆಲಸ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಮಮಂದಿರ ಉದ್ಘಾಟನೆಗೆ ಹಿರಿಯ ನಾಯಕರ ಕಡೆಗಣನೆ ಆರೋಪಕ್ಕೆ, ಎಲ್​.ಕೆ.ಅಡ್ವಾನಿ ಹಾಗೂ ಮುರಳಿ ಮನೋಹರ ಜೋಶಿ ಅವರನ್ನು ಮಂದಿರ ಉದ್ಘಾಟನೆಗೆ ಆಹ್ವಾನಿಸಲು ನಮ್ಮವರೇ ಹೋಗಿದ್ದರು. ವಯಸ್ಸಿನ ಕಾರಣದಿಂದ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ. ಅವರನ್ನು ಮಂದಿರ ಉದ್ಘಾಟನೆಗೆ ಕರೆತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪ: ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸಂತಸ...

Last Updated :Dec 21, 2023, 4:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.