ETV Bharat / state

Karnataka Bandh: ಚಾಮರಾಜನಗರದಲ್ಲಿ ರಸ್ತೆಗಿಳಿಯದ ಬಸ್​ಗಳು... ಆ್ಯಂಬುಲೆನ್ಸ್​ನಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು ಕಾಲೇಜಿಗೆ!

author img

By ETV Bharat Karnataka Team

Published : Sep 29, 2023, 6:49 AM IST

Updated : Sep 29, 2023, 1:33 PM IST

Karnataka Bandh: ಕರ್ನಾಟಕ ಬಂದ್​ ಹಿನ್ನೆಲೆ ಚಾಮರಾಜನಗರದಲ್ಲಿ ಪ್ರತಿಭಟನಾಕಾರರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.

ಚಾಮರಾಜನಗರದಲ್ಲಿ ಪ್ರತಿಭಟನೆ
ಚಾಮರಾಜನಗರದಲ್ಲಿ ಪ್ರತಿಭಟನೆ

ಚಾಮರಾಜನಗರ: ಕರ್ನಾಟಕ ಬಂದ್ ಹಿನ್ನೆಲೆ ಚಾಮರಾಜನಗರದಲ್ಲಿ ಬೆಳಗ್ಗೆಯಿಂದ ಪ್ರತಿಭಟನೆ ಜೋರಾಗಿದ್ದು ಸಾರಿಗೆ ಬಸ್​ಗಳು ರಸ್ತೆಗಿಳಿದಿಲ್ಲ. ಚಾಮರಾಜನಗರ ಮೆಡಿಕಲ್ ಕಾಲೇಜಿಗೆ ತೆರಳಲು ಬಸ್​ಗಳಿಲ್ಲದೇ ವಿದ್ಯಾರ್ಥಿಗಳು ಪರದಾಡಿದರು. ಬಂದ್ ಇದ್ದರೂ ಕೂಡ ರಜೆ ನೀಡದಿದ್ದರಿಂದ ಎರಡು ತಾಸಿಗೂ ಅಧಿಕ ಕಾಲ ಬಸ್​ಗಾಗಿ ಕಾದು ಬಳಿಕ ಆ್ಯಂಬುಲೆನ್ಸ್ ನಲ್ಲಿ ನರ್ಸಿಂಗ್ ವಿದ್ಯಾರ್ಥಿಗಳ ಕಾಲೇಜಿಗೆ ತೆರಳಿದರು.

ಕರ್ನಾಟಕ ಬಂದ್ ಹಿನ್ನೆಲೆ ಚಾಮರಾಜನಗರದಲ್ಲಿ ಇಂದು ಬೆಳಗ್ಗೆ 6 ರಿಂದಲೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಭುವನೇಶ್ವರಿ ವೃತ್ತದಲ್ಲಿ ಕಬ್ಬು ಬೆಳೆಗಾರರ ಸಂಘ, ಕನ್ನಡಪರ ಸಂಘಟನೆಗಳು ರಸ್ತೆ ತಡೆ ನಡೆಸಿ ತಮಿಳುನಾಡು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತಮಟೆ ಬಾರಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ರೈತರ ಪ್ರತಿಭಟನೆ
ರೈತರ ಪ್ರತಿಭಟನೆ

ನಂತರ, ರಸ್ತೆ ಮಧ್ಯದಲ್ಲಿ ಅರೆಬೆತ್ತಲೆಯಾಗಿ ಉರುಳುಸೇವೆ ನಡೆಸಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಕರ್ನಾಟಕ ಬಂದ್ ಎಂದು ತಮಟೆ ಬಾರಿಸಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಪ್ರತಿಭಟನಾಕಾರರು ಧರಣಿ ನಡೆಸುತ್ತಿದ್ದಾರೆ. ಬಳಿಕ ಭುವನೇಶ್ವರಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ, ಷರೀಫ್ ವೃತ್ತ, ಗುಂಡ್ಲುಪೇಟೆ ವೃತ್ತ, ಸಂತೇಮರಹಳ್ಳಿ ವೃತ್ತ, ಅಂಗಡಿ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದಾರೆ. ಗುಂಡ್ಲುಪೇಟೆ ವೃತ್ತದಲ್ಲಿ ಎಂಪಿಗಳು, ಶಾಸಕರು, ಸಚಿವರ ವಿರುದ್ಧ ಧಿಕ್ಕಾರ ಕೂಗಿ ನೃತ್ಯ ಮಾಡಿದರು. ಸಂತೇಮರಹಳ್ಳಿ ವೃತ್ತದಲ್ಲಿ ಕಿವಿ ಮೇಲೆ ಗುಲಾಬಿ ಹೂಗಳನ್ನು ಇಟ್ಟುಕೊಂಡು ರೈತರ ಕಿವಿ ಮೇಲೆ ಹೂವಿಡುವ ಸರ್ಕಾರ ಎಂದು ಆಕ್ರೋಶ ಹೊರಹಾಕಿದರು.

ರಸ್ತೆ ತಡೆದು ಪ್ರತಿಭಟನೆ
ರಸ್ತೆ ತಡೆದು ಪ್ರತಿಭಟನೆ

ಭುವನೇಶ್ವರಿ ವೃತ್ತದಲ್ಲಿ ತಮಗೆ ಕುಡಿಯಲು ನೀರಿಲ್ಲ ತಮಿಳುನಾಡು ಬೆಳೆಗೆ ನೀರು ಹರಿಸಲಾಗುತ್ತಿದೆ ಎಂದು ಬಿಸ್ಲೆರಿ ನೀರನ್ನು ಕುಡಿದು ಸರ್ಕಾರದ ವಿರುದ್ಧ ಕಿಡಿಕಾರಿದರು. ರೈತರಿಗೆ ಸರ್ಕಾರ ಬೆತ್ತದ ಏಟು ಕೊಡುತ್ತಿದೆ ಎಂಬುದರ ಸೂಚಕವಾಗಿ ಬೆತ್ತದ ಮೂಲಕ ಸಾಂಕೇತಿಕ ರೀತಿಯಲ್ಲಿ ಹೊಡೆಯುವ ರೀತಿ ಸರ್ಕಾರಗಳ ವಿರುದ್ದ ಆಕ್ರೋಶ ಹೊರಹಾಕಿದರು. ಬೆಳಗ್ಗೆ 6 ರಿಂದಲೇ ಚಾಮರಾಜನಗರದಲ್ಲಿ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್​ಗಳು, ಆಟೋಗಳು, ಲಾರಿಗಳು ರಸ್ತೆಗಿಳಿದಿಲ್ಲ, ಬಹುತೇಕ ಎಲ್ಲಾ ಅಂಗಡಿಗಳು ಕೂಡ ಮುಚ್ಚಿದ್ದು ಹಾಲಿನ ಕೇಂದ್ರಗಳು ಮಾತ್ರ ತೆರೆದಿವೆ.

ಇದನ್ನೂ ಓದಿ: ಕಾವೇರಿ ಸಮಸ್ಯೆಯನ್ನು ಮಾನವೀಯ ನೆಲೆಯಲ್ಲಿ ನೋಡಿ: ತಮಿಳುನಾಡು ಸಿಎಂಗೆ ಲೆಹರ್ ಸಿಂಗ್ ಮನವಿ

ಬಸ್ ಇಲ್ಲದೆ ಆ್ಯಂಬುಲೆನ್ಸ್​​ನಲ್ಲಿ ಕಾಲೇಜಿಗೆ ತೆರಳಿದ ನರ್ಸಿಂಗ್ ವಿದ್ಯಾರ್ಥಿಗಳು: ಬಂದ್ ಹಿನ್ನೆಲೆ ಸಾರಿಗೆ ಸಂಸ್ಥೆ ಬಸ್​​ಗಳು ರಸ್ತೆಗಿಳಿದಿಲ್ಲ. ಚಾಮರಾಜನಗರ ಮೆಡಿಕಲ್ ಕಾಲೇಜಿಗೆ ತೆರಳಲು ಬಸ್​​ಗಳಿಲ್ಲದೇ ವಿದ್ಯಾರ್ಥಿಗಳು ಪರದಾಡಿದರು. ಬಂದ್ ಇದ್ದರೂ ಕೂಡ ರಜೆ ನೀಡದ ಕಾರಣ ಎರಡು ತಾಸಿಗೂ ಅಧಿಕ ಕಾಲ ಬಸ್​​ಗಾಗಿ ಕಾದು ಕಾದು ಸುಸ್ತಾದರು‌. ಎರಡು ತಾಸಿನ ಬಳಿಕ ಸಿಮ್ಸ್ ಕಳಿಸಿದ್ದು, ಅದರಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು ತೆರಳಿದರು.

ಪೋಸ್ಟರ್​ ಹರಿದು ಆಕ್ರೋಶ
ಪೋಸ್ಟರ್​ ಹರಿದು ಆಕ್ರೋಶ

ಚಿತ್ರದ ಪೋಸ್ಟರ್​ ಹರಿದು ಆಕ್ರೋಶ: ಸತ್ಯಮಂಗಲಂ ರಸ್ತೆಯಲ್ಲಿರುವ ಸಿದ್ಧಾರ್ಥ ಚಿತ್ರಮಂದಿರಕ್ಕೆ ನುಗ್ಗಿದ ಕಬ್ಬು ಬೆಳೆಗಾರರು, ರಾಘವ ಲಾರೆನ್ಸ್ ಅಭಿನಯದ "ಚಂದ್ರಮುಖಿ-2" ಚಿತ್ರದ ಪೋಸ್ಟರ್ ಹರಿದು ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಕಾವೇರಿ ಕ್ಯಾತೆ ನಿಲ್ಲಿಸದಿದ್ದರೇ ತಮಿಳು ಚಿತ್ರಗಳು ಪ್ರದರ್ಶನ ಮಾಡುವಂತಿಲ್ಲ ಎಂದು ಆಕ್ರೋಶಗೊಂಡು ತಮಿಳು ಚಿತ್ರದ ಪೋಸ್ಟರ್​ಗಳನ್ನು ಹರಿದು ಹಾಕಿ ತಮಿಳುನಾಡು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇನ್ನು, ಸತ್ಯಮಂಗಲಂ ರಸ್ತೆಯಲ್ಲಿ ಪ್ರತಿಭಟಿಸುತ್ತಿದ್ದ ಉಡಿಗಾಲ ಮಂಜುನಾಥ್ ಎಂಬುವರು ಹಸಿರು ಟವೆಲ್​​ನಿಂದ ನೇಣು ಬಿಗಿದುಕೊಳ್ಳಲು ಯತ್ನಿಸಿ ಅಸ್ವಸ್ಥರಾಗಿದ್ದಾರೆ. ಪೊಲೀಸ್ ವಾಹನದಲ್ಲೇ ಅವರನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಇದನ್ನೂ ಓದಿ: 'ಕಾವೇರಿ'ದ ಬಂದ್: ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ

Last Updated : Sep 29, 2023, 1:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.