ETV Bharat / state

ಕೆಡಕಾಗುವ ಭೀತಿ: ಚಾಮರಾಜನಗರದಲ್ಲಿ ಗಣೇಶ ಹಬ್ಬವನ್ನೇ ಆಚರಿಸದ ಉಪ್ಪಾರ ಸಮುದಾಯ

author img

By

Published : Aug 31, 2022, 7:42 PM IST

Chamarajanagar Uppara community does not celebrate Ganesha festival
ಚಾಮರಾಜನಗರದಲ್ಲಿ ಗಣೇಶ ಹಬ್ಬವನ್ನೇ ಆಚರಿಸದ ಉಪ್ಪಾರ ಸಮುದಾಯ

ಚಾಮರಾಜನಗರದಲ್ಲಿ ಗಣೇಶ ಹಬ್ಬ ಮಾಡಿದ್ರೆ, ಕೆಡುಕಾಗುತ್ತದೆ ಎಂಬ ಭಯದಿಂದ ಇಲ್ಲಿನ ಉಪ್ಪಾರ ಸಮುದಾಯದ ಹಬ್ಬವನ್ನೇ ಆಚರಿಸುವುದಿಲ್ಲ. ಹಬ್ಬದ ದಿನ ಹಬ್ಬದೂಟದ ಬದಲು, ಮುದ್ದೆ-ಸಾರನ್ನು ಮನೆಮಂದಿಯೆಲ್ಲಾ ಸವಿಯುತ್ತಾರೆ.

ಚಾಮರಾಜನಗರ: ಮೊದಲು ವಂದಿಪ ವಿನಾಯಕನಿಗೆ ಭಾರತ ಸೇರಿದಂತೆ ವಿಶ್ವದಾದ್ಯಂತ ಇರುವ ಭಾರತೀಯರು ಇಂದು ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಆದ್ರೆ ಇಲ್ಲೊಂದು ಸಮುದಾಯದವರು ಗಣೇಶ ಹಬ್ಬ ಆಚರಿಸಿದ್ರೆ, ಕೆಡಕಾಗುತ್ತದೆ ಎಂದು ಹಬ್ಬವನ್ನೇ ಆಚರಿಸುವುದಿಲ್ಲ. ನಗರದ ಉಪ್ಪಾರ ಸಮುದಾಯದ ಕೆಲ ಮನೆತನದವರು ಇಂದು ಗೌರಿ-ಗಣೇಶ ಹಬ್ಬವನ್ನು ಆಚರಣೆ ಮಾಡುವುದಿಲ್ಲ.

ಹೌದು, ಅಚ್ಚರಿ ಎನಿಸಿದರೂ ಇದು ಸತ್ಯ.. ಮನೆಯಲ್ಲಿ ಅನ್ನ, ಸ್ನಾನವನ್ನು ಮಾಡದ ಸಂಪ್ರದಾಯ ಶತಮಾನಗಳಿಂದ ನಡೆದುಕೊಂಡು ಬಂದಿದೆ. ವಿಘ್ನ ವಿನಾಯಕನನ್ನು ಇಡೀ ದೇಶವೇ ಬರಮಾಡಿಕೊಂಡು ಸಂಭ್ರಮಪಟ್ಟರೇ, ಇವರು ಮಾತ್ರ ಈ ಹಬ್ಬದಿಂದ ದೂರವೇ ಉಳಿಯುತ್ತಾರೆ. ಹಬ್ಬದ ಸಂಭ್ರಮದಿಂದ ಚಾಮರಾಜನಗರದ ಉಪ್ಪಾರ ಜನಾಂಗದ ಶೇ.70ಕ್ಕೂ ಹೆಚ್ಚು ಮಂದಿ ದೂರ ಉಳಿಯುತ್ತಾರೆ.

ಚಾಮರಾಜನಗರದಲ್ಲಿ ಗಣೇಶ ಹಬ್ಬವನ್ನೇ ಆಚರಿಸದ ಉಪ್ಪಾರ ಸಮುದಾಯ

ಗೌರಿ-ಗಣೇಶ ಹಬ್ಬ ಮಾಡುವುದಿರಲಿ, ರುಚಿಯಾದ ಊಟವನ್ನೂ ಸಹ ಈ ದಿನದಂದು ಸೇವಿಸುವುದಿಲ್ಲ. ಕೆಲವರು ಮುದ್ದೆ, ಉಪ್ಪುಸಾರು ಸೇವಿಸಿದರೆ, ಇನ್ನೂ ಕೆಲವರು ಉಪ್ಪುಸಾರಿಗೆ ಒಗ್ಗರಣೆಯನ್ನೂ ಹಾಕದೇ ಸಪ್ಪೆ ಸಾರಿನಲ್ಲೇ‌ ಮುದ್ದೆ ತಿನ್ನುತ್ತಾರೆ.

ಕಾರಣ ಏನು?: ಈ ಕುತೂಹಲಕ್ಕೆ ಉತ್ತರ ಏನಪ್ಪಾ ಅಂದ್ರೆ, ಗೌರಿ ಹಬ್ಬ ಆಚರಿಸಿದರೇ ಮಕ್ಕಳಿಗೆ ಕೆಡುಕಾಗುವ ಭಯ ಈ ಸಮುದಾಯದಲ್ಲಿ ರೂಢಿಗತವಾಗಿ ನಡೆದುಕೊಂಡು ಬಂದಿದೆ. ಹಬ್ಬ ಆಚರಣೆಗೆ ಮುಂದಾದಗೆಲೆಲ್ಲಾ ಮಕ್ಕಳ ಸಾವು, ಮನೆಯಲ್ಲಿ ಹಿರಿಯರ ಸಾವು ಸಂಭವಿಸುವುದರಿಂದ ಹಬ್ಬದ ಆಚರಣೆಯನ್ನೇ ಈ ಸಮುದಾಯ ಕೈ ಬಿಟ್ಟಿದೆ.

ಇದನ್ನೂ ಓದಿ: ಚಾಮರಾಜನಗರದ ಕುದೇರಿನಲ್ಲಿ ಅದ್ದೂರಿ ಗೌರಿ ಹಬ್ಬ

ಕೆಲವರು ಇದನ್ನು ಧಿಕ್ಕರಿಸಿ ಅನ್ನ- ಸಾರು ಮಾಡಿದ್ರೆ, ಅದನ್ನು ತಿನ್ನುವ ಮೊದಲೇ ಯಾರಾದರೂ ಮೃತಪಡುತ್ತಾರಂತೆ. ಆಹಾರದಲ್ಲಿ ಹುಳು ಕಾಣಿಸಿಕೊಂಡ ಪ್ರಸಂಗಗಳು ನಡೆದಿದ್ದರಿಂದ ಹಬ್ಬದ ಗೋಜಿಗೆ ಹೋಗದೇ ಮುದ್ದೆ- ಉಪ್ಪು ಸಾರಿಗಷ್ಟೇ ತೃಪ್ತಿ ಪಡುತ್ತಿದ್ದಾರೆ.

ಹಿರಿಯರ ಸಂಪ್ರದಾಯ ಇಂದೂ ಕೂಡ ಹಾಗೆ ಮುಂದುವರೆದಿದ್ದು, ಹಬ್ಬದ ಮಾರನೇ ದಿನ ಸ್ನಾನ ಮಾಡಿಕೊಂಡು ಗಣಪನಿಗೆ ಪೂಜೆ ಸಲ್ಲಿಸುತ್ತಾರೆ‌. ಇನ್ನೂ, ಕೆಲವರು ಮೂರು ದಿನ ಅನ್ನ ಮಾಡದೇ, ದೇಗುಲಕ್ಕೆ ಹೋಗದೆ, ಒಗ್ಗರಣೆ ಹಾಕುವುದನ್ನು ನಿಲ್ಲಿಸುತ್ತಾರೆ.

ಹಬ್ಬದಂದು ಸ್ನಾನವನ್ನೂ ಮಾಡದೇ ಅನ್ನವನ್ನೂ ತಿನ್ನದೇ ಹಿರಿಯರ ಮಾತಿನಂತೆ ಇಂದಿನ ಯುವ ಪೀಳಿಗೆ ಕೂಡ ಹಬ್ಬ ಆಚರಿಸದೇ ಬಂದಿರುವುದು ಒಂದು ಅಚ್ಚರಿಯೇ ಸರಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.