ETV Bharat / state

ಚಾಮರಾಜನಗರದ ಕುದೇರಿನಲ್ಲಿ ಅದ್ದೂರಿ ಗೌರಿ ಹಬ್ಬ

author img

By

Published : Aug 30, 2022, 7:11 PM IST

Updated : Aug 30, 2022, 10:51 PM IST

ಗೌರಿ
ಗೌರಿ

ಚಾಮರಾಜನಗರ ತಾಲೂಕಿನ ಕುದೇರು ಗ್ರಾಮದಲ್ಲಿ ಈ ಬಾರಿ ಸ್ವರ್ಣಗೌರಿ ದೇವಾಲಯದಲ್ಲಿ ಅದ್ದೂರಿಯಾಗಿ ಗೌರಿ ಹಬ್ಬವನ್ನು ಆಚರಿಸಲಾಗುತ್ತಿದೆ.

ಚಾಮರಾಜನಗರ: ತಾಲೂಕಿನ ಕುದೇರು ಗ್ರಾಮದಲ್ಲಿರುವ ಸ್ವರ್ಣಗೌರಿ ದೇವಾಲಯದಲ್ಲಿ ಗೌರಿ ಹಬ್ಬ ಆಚರಣೆಯನ್ನು ಮಾಡಲಾಗುತ್ತಿದೆ. ಕಳೆದ ವರ್ಷ ಹಬ್ಬದ ಸಡಗರಕ್ಕೆ ಕೊರೊನಾ ಅಡ್ಡಿಯಾಗಿತ್ತು‌. ಈ ಬಾರಿ ಕೊರೊನಾ ಆತಂಕ ಇಲ್ಲದಿರುವುದರಿಂದ ಹಬ್ಬವನ್ನು ವಿಜೃಂಭಣೆಯಿಂದ ಮಾಡಲಾಗುತ್ತಿದೆ.

ಅದ್ದೂರಿ ಗೌರಿ ಹಬ್ಬ
ಅದ್ದೂರಿ ಗೌರಿ ಹಬ್ಬ

ಗೌರಮ್ಮನಿಗೆಂದೇ ಇರುವಂಥ ಇನ್ನೊಂದು ದೇಗುಲ ರಾಷ್ಟ್ರದಲ್ಲೂ ಕಾಣಸಿಗುವುದಿಲ್ಲ ಎಂಬ ಮಾತಿದೆ. 1913 ರಲ್ಲಿ ಗೌರಿ ದೇವಸ್ಥಾನ ನಿರ್ಮಾಣ ಮಾಡಲಾಗಿದ್ದು, ಸುಮಾರು 24 ವರ್ಷಗಳ ಹಿಂದೆ ನಾಡಹೆಂಚಿನ ಮನೆಯಂತಿದ್ದ ಗೌರಿ ದೇವಸ್ಥಾನವನ್ನು ಹೊಸದಾಗಿ ನಿರ್ಮಾಣ ಮಾಡಲಾಗಿದೆ.

ಗೌರಿ ಹಬ್ಬದ ಸಂಭ್ರಮದಲ್ಲಿ ಭಕ್ತರು
ಗೌರಿ ಹಬ್ಬದ ಸಂಭ್ರಮದಲ್ಲಿ ಭಕ್ತರು

ಎಲ್ಲೆಡೆ ಒಂದು ದಿನ ಮಾತ್ರ ಗೌರಿ ಹಬ್ಬ ನಡೆದರೆ, ಇಲ್ಲಿ 12 ದಿನಗಳ ಕಾಲ ಗೌರಿಯನ್ನು ಕೂರಿಸಿ, ಪ್ರತಿನಿತ್ಯ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಬಾಗಿನ ಅರ್ಪಿಸುತ್ತಾರೆ. ಮಕ್ಕಳಿಲ್ಲದವರು ಸಂತಾನ ಭಾಗ್ಯಕ್ಕಾಗಿ ಬಾಗಿನ ಅರ್ಪಿಸುತ್ತಾರೆ. ಯುವಕ/ಯುವತಿಯರು ಕಂಕಣ ಭಾಗ್ಯಕ್ಕಾಗಿ ಸೇವೆ ಅರ್ಪಿಸುತ್ತಾರೆ. ಈ ಸಂದರ್ಭದಲ್ಲಿ 33 ಹಳ್ಳಿಯ ಭಕ್ತರು ಭಾಗವಹಿಸುತ್ತಾರೆ ಎನ್ನುತ್ತಾರೆ ಸ್ವರ್ಣ ಗೌರಿ ದೇವಸ್ಥಾನದ ಅರ್ಚಕರು.

ಸ್ವರ್ಣ ಗೌರಮ್ಮ ದೇವಸ್ಥಾನ
ಸ್ವರ್ಣ ಗೌರಮ್ಮ ದೇವಸ್ಥಾನ

ಮರಳಿನ ಗೌರಿ ಪ್ರತಿಷ್ಠಾಪನೆ: ನಾಡಿನ ಎಲ್ಲೆಡೆ ಹಬ್ಬದ ದಿನ ಗೌರಮ್ಮನ ವಿಗ್ರಹ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಆದರೆ, ಇಲ್ಲಿ ಹಬ್ಬದ ಹಿಂದಿನ ದಿನವೇ ದೊಡ್ಡ ಕೆರೆಯ ತಡದಲ್ಲಿ ಮರಳಿನ ಗೌರಿ ವಿಗ್ರಹವನ್ನು ಸಿದ್ಧಪಡಿಸಲಾಗುತ್ತದೆ. ಗೌರಿ ಹಬ್ಬದಂದು ವಿಶೇಷ ಪೂಜೆಯೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತಂದು ಮರಳಿನ ಗೌರಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.

ದೇವಾಲಯದಲ್ಲಿ ಐದನೇ ದಿನಕ್ಕೆ ಮರಳಿನ ಗೌರಿಯನ್ನು ಬದಲಿಸಿ ಕಡಲೆ ಹಿಟ್ಟಿನ ಗೌರಿಯನ್ನು ಪ್ರತಿಷ್ಠಾಪಿಸಿ ಅದಕ್ಕೆ ಚಿನ್ನದ ಕವಚ, ಆಭರಣಗಳನ್ನು ತೊಡಿಸಲಾಗುತ್ತದೆ. ಅಂದಿನಿಂದ ಹನ್ನೆರಡನೆ ದಿನದವರೆಗೂ ಆ ವಿಗ್ರಹವನ್ನು ಸ್ವರ್ಣ ಗೌರಿ ಎಂದು ವಿಶಿಷ್ಟವಾಗಿ ಪೂಜಿಸುವ ವಾಡಿಕೆ ಇದೆ.

12 ದಿನಗಳವರೆಗೆ ವಿಶೇಷ ಪೂಜೆ: ಇಷ್ಟಾರ್ಥ ಸ್ವರ್ಣ ಗೌರಿ ಎಂದು ಕರೆಸಿಕೊಳ್ಳುವ ಈ ಗೌರಮ್ಮನಿಗೆ 12 ದಿನಗಳವರಗೆ ವಿಶೇಷ ಪೂಜೆ ನಡೆಯುತ್ತದೆ. ಈ ಸಂದರ್ಭದಲ್ಲಿ ಸುಮಂಗಲಿಯರು ಬಾಗಿನ ಅರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಳ್ಳುತ್ತಾರೆ. ರಾಜ್ಯದ ವಿವಿಧೆಡೆಗಳಿಂದ ಭಕ್ತರು ಊರಿಗೆ ಆಗಮಿಸುತ್ತಾರೆ.

ಇದನ್ನೂ ಓದಿ: ಮೈಸೂರು ದಸರಾ 2022: ಫಿರಂಗಿ ಪೂಜೆಯ ಮಹತ್ವವೇನು? ಇಲ್ಲಿದೆ ಮಾಹಿತಿ

Last Updated :Aug 30, 2022, 10:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.