ETV Bharat / state

'ಅಂತರ್​ಜಾತಿ ವಿವಾಹಕ್ಕೆ 3 ಲಕ್ಷ, ಪೊಲೀಸರಿಗೆ ದೂರು ಕೊಟ್ಟಿದ್ದಕ್ಕೆ 3 ಲಕ್ಷ ರೂಪಾಯಿ ದಂಡ ಹಾಕಿದ್ರು'

author img

By

Published : Mar 5, 2023, 11:03 AM IST

Updated : Mar 6, 2023, 10:56 AM IST

kollegala
ಕೊಳ್ಳೇಗಾಲ

ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ಅಂತರ್​ಜಾತಿ ವಿವಾಹ ಆಗಿದ್ದಕ್ಕೆ ಗ್ರಾಮಸ್ಥರು ಒಟ್ಟು 6 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ ಎಂದು ದಂಪತಿ ಆರೋಪಿಸಿದ್ದಾರೆ.

ಚಾಮರಾಜನಗರ: ಅಂತರ್​ಜಾತಿ ವಿವಾಹ ಆಗಿದ್ದಕ್ಕೆ ಗ್ರಾಮದ ಮುಖಂಡರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ದೂರಲಾದ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ನಡೆದಿದೆ. ಬೇರೆ ಜಾತಿಯ ಹುಡುಗಿಯನ್ನು ಮದುವೆಯಾಗಿದ್ದಕ್ಕೆ ಗ್ರಾಮದ ಹಿರಿಯರು 3 ಲಕ್ಷ ರೂ. ದಂಡ ಹಾಕಿ, ಗ್ರಾಮದಿಂದ ಹೊರಗುಳಿಯುವಂತೆ ಬಹಿಷ್ಕಾರ ಹಾಕಿದ್ದಾರೆ ಎಂದು ಕೊಳ್ಳೇಗಾಲ ಡಿ.ವೈ.ಎಸ್.ಪಿ ಕಚೇರಿಗೆ ದಂಪತಿ ದೂರು ನೀಡಿದ್ದಾರೆ.

ಕುಣಗಳ್ಳಿ ಗ್ರಾಮದ ಗೋವಿಂದರಾಜು ಎಂಬುವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹೂವಿನ ಕೊಪ್ಪಲು ಗ್ರಾಮದ ದಲಿತ ಜನಾಂಗಕ್ಕೆ ಸೇರಿದ ಪ್ರಕಾಶ್ ಎಂಬುವರ ಮಗಳಾದ ಶ್ವೇತಾಳನ್ನು ಪ್ರೀತಿಸಿ ಮನೆಯವರ ಸಮ್ಮುಖದಲ್ಲಿ ಕಳೆದ 5 ವರ್ಷಗಳ ಹಿಂದೆ ಮಳವಳ್ಳಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿಕೊಂಡಿದ್ದರು. ಗೋವಿಂದರಾಜು ಮಳವಳ್ಳಿಯಲ್ಲಿ ಮನೆ ಮಾಡಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ತಿಂಗಳಿಗೆ 2 ರಿಂದ 3 ಬಾರಿ ಕುಣಗಳ್ಳಿ ಗ್ರಾಮಕ್ಕೆ ದಂಪತಿ ಬಂದು ಹೋಗುತ್ತಿದ್ದರು. ಗೋವಿಂದ ಅವರ ಮನೆಯಲ್ಲಿ ಅಂತರ್‌ಜಾತಿ ವಿವಾಹ ಎಂದು ತಿಳಿದಿದ್ದರೂ ಸಹ ಯಾರೂ ತೊಂದರೆ ನೀಡಿಲ್ಲ.

ಆದ್ರೆ, ಅಕ್ಕಪಕ್ಕದ ನಿವಾಸಿಗಳು ಅಂತರ್‌ಜಾತಿ ವಿವಾಹದ ಬಗ್ಗೆ ಮಾಹಿತಿ ಪಡೆದು ಶ್ವೇತಾ ನಮ್ಮ ಜಾತಿಯವಳಲ್ಲ, ಅವಳು ದಲಿತ ಜನಾಂಗಕ್ಕೆ ಸೇರಿದವಳು ಎಂದು ನಿಂದಿಸಿದ್ದಾರೆ. ಪಕ್ಕದ ಮನೆಯ ಕೆಲವರು ಗ್ರಾಮದ ಯಜಮಾನರುಗಳಿಗೆ ಮಾಹಿತಿ ನೀಡಿ, ಎರಡರಿಂದ ಮೂರು ಬಾರಿ ಪಂಚಾಯಿತಿ ನಡೆಸಿ, ದಂಡ ಕಟ್ಟಬೇಕು ಎಂದು ನಮ್ಮ ಮಾವ ವೆಂಕಟಶೆಟ್ಟಿ ಮತ್ತು ಸಂಗಮ್ಮರಿಗೆ ಸೂಚಿಸಿ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಕುಟುಂಬಸ್ಥರಿಂದ ಪ್ರಾಣ ಬೆದರಿಕೆ, ರಕ್ಷಣೆ ನೀಡುವಂತೆ ಪ್ರೇಮಿಗಳ ಮನವಿ: ವಿಡಿಯೋ ವೈರಲ್​

ಗ್ರಾಮದಿಂದ ಬಹಿಷ್ಕಾರ: "ನೀವು ಗ್ರಾಮಸ್ಥರ ಜೊತೆ ಮಾತನಾಡುವಂತಿಲ್ಲ. ಅಂಗಡಿಗಳಲ್ಲಿ ಅಕ್ಕಿ, ತರಕಾರಿ, ಹಾಲು ನೀಡುವುದಿಲ್ಲ. ನೀರನ್ನೂ ಸಹ ತೆಗೆದುಕೊಳ್ಳುವಂತಿಲ್ಲ ಎಂದು ಗ್ರಾಮದ ಯಜಮಾನರು ತೀರ್ಪು ನೀಡಿದ್ದರು. ಪಂಚಾಯತ್​ ಮಾಡಿ ನೀವು ತಪ್ಪು ಮಾಡಿದ್ದೀರಾ, ಆ ಕಾರಣದಿಂದ 3 ಲಕ್ಷ ರೂ. ದಂಡ ಕಟ್ಟಬೇಕು ಎಂದು ಯಜಮಾನರು ಮಾರ್ಚ್ 1 ರಂದು ಕೊನೆಯ ದಿನಾಂಕ ನೀಡಿದ್ದರು. ಅಷ್ಟೇ ಅಲ್ಲದೇ, ನೀವು ದಂಡ ಕಟ್ಟಿದರೂ ಸಹ ನಿಮ್ಮ ಸೊಸೆ, ಮಗ ಗ್ರಾಮಕ್ಕೆ ಪ್ರವೇಶ ಮಾಡುವಂತಿಲ್ಲ, ನೀವು ಅವರ ಜೊತೆ ಮಾತನಾಡುವಂತಿಲ್ಲ. ಈಗ 3 ಲಕ್ಷ ಕಟ್ಟಿದರೆ ಗ್ರಾಮದವರು ಎಂದಿನಂತೆ ನಿಮ್ಮನ್ನು ಮಾತನಾಡಿಸುತ್ತಾರೆ ಎಂದು ಸೂಚಿಸಿದ್ದಾರೆ. ಆದ್ರೆ, ನಮ್ಮ ಮಾವನವರು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಅವರ ಬಳಿ 3 ಲಕ್ಷ ರೂ ಇಲ್ಲ. ನಮಗೆ ನ್ಯಾಯ ದೊರಕಿಸಿಕೊಡಬೇಕು" ಎಂದು ಡಿ.ವೈ.ಎಸ್.ಪಿ ಬಳಿ ದಂಪತಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಅಂತರ್ಜಾತಿ ವಿವಾಹ: ಪತಿ ಜೊತೆ ವಾಸವಿದ್ದ ಯುವತಿಯನ್ನ ಎಳೆದೊಯ್ದ ಕುಟುಂಬಸ್ಥರು!

ಇನ್ನು ಶ್ವೇತಾ ಹಾಗೂ ಗೋವಿಂದರಾಜು ದಂಪತಿ ದೂರು ನೀಡಿದ ವಿಷಯ ತಿಳಿದ ಗ್ರಾಮದ ಯಜಮಾನರು ಮತ್ತೆ 3 ಲಕ್ಷ ದಂಡ ಹಾಕಿದ್ದಾರೆ. ಒಟ್ಟು 6 ಲಕ್ಷ ದಂಡವನ್ನು ಕಟ್ಟಬೇಕು ಎಂದು ಆದೇಶ ನೀಡಿದ್ದಾಗಿ ಜೋಡಿ ಅಳಲು ತೋಡಿಕೊಂಡಿದೆ.

Last Updated :Mar 6, 2023, 10:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.