ETV Bharat / state

ಖಾಸಗಿ ಬಸ್ ಓಡಿಸುವುದು, ಏಸ್ಮಾ ಜಾರಿ ಮಾಡೋದ್ರಿಂದ ಸಮಸ್ಯೆ ಬಗೆಹರಿಯಲ್ಲ: ಸಿದ್ದರಾಮಯ್ಯ

author img

By

Published : Apr 8, 2021, 8:38 PM IST

Siddaramaih
ಸಿದ್ದರಾಮಯ್ಯ

ಬಸವಕಲ್ಯಾಣ ಉಪಚುನಾವಣೆ ಕಣದಲ್ಲಿ ಬಿರುಸಿನ ಪ್ರಚಾರ ಆರಂಭಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಾರಿಗೆ ನೌಕರರ ಮುಷ್ಕರ ಸೇರಿದಂತೆ ಹಲವು ವೈಫಲ್ಯಗಳ ಕುರಿತು ಕಿಡಿಕಾರಿದ್ದಾರೆ.

ಬಸವಕಲ್ಯಾಣ (ಬೀದರ್​): ಸಾರಿಗೆ ನೌಕರರ ಸಮಸ್ಯೆ ಬಗೆಹರಿಯಬೇಕಾದರೆ ನೌಕರರ ಜೊತೆ ಮಾತುಕತೆ ನಡೆಸಬೇಕು. ಇದಲ್ಲದೆ ಖಾಸಗಿ ಬಸ್ ಓಡಿಸುವುದು, ಏಸ್ಮಾ ಜಾರಿ ಮಾಡುವುದು ಸಮಸ್ಯೆಗೆ ಪರಿಹಾರವಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ, ಮಾಜಿ ಸಿಎಂ

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಾರಿಗೆ ನೌಕರರು ಹಮ್ಮಿಕೊಂಡ ಚಳವಳಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಅವರ ನ್ಯಾಯ ಸಮ್ಮತವಾದ ಬೇಡಿಕೆ ಈಡೇರಿಸಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸಾರಿಗೆ ನೌಕರರನ್ನು ಕರೆದು ಮಾತನಾಡಿಸಿ ಬೇಡಿಕೆಗಳನ್ನು ಈಡೇರಿಸಬೇಕು. ಇವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಜೊತೆಗೆ ಎಷ್ಟು ದಿನ ಖಾಸಗಿ ಬಸ್ ಓಡಿಸಲು ಸಾಧ್ಯ.?

ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ನೌಕರರ ಸಮಸ್ಯೆ ಆಲಿಸುವುದನ್ನು ಬಿಟ್ಟು ಉಪಚುನಾವಣೆಯ ಪ್ರಚಾರದಲ್ಲಿ ಮಗ್ನರಾಗಿ ಬೇರೆ ಪಕ್ಷದವರನ್ನು ಬಿಜೆಪಿಗೆ ಸೇರಿಕೊಳ್ಳುವಲ್ಲಿ ಮಗ್ನರಾಗಿದ್ದಾರೆ ಎಂದರು.

ಎಲ್ಲಾ ಉಚುನಾವಣೆಯಲ್ಲೂ ಗೆಲುವು ನಮ್ಮದೇ

ಎಲ್ಲಾ ಉಚುನಾವಣೆಯಲ್ಲೂ ನಾವು ಗೆದ್ದೇ ಗೆಲ್ಲುತ್ತೇವೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಚುನಾವಣೆಯಲ್ಲಿ ಪ್ರಚಾರಕ್ಕೆ ಹೋದಲ್ಲೆಲ್ಲ ಮತದಾರರಿಂದ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಈ ಭ್ರಷ್ಟ ಬಿಜೆಪಿ ಸರ್ಕಾರ ತೆಗೆಯಲು ಜನ ನಿರ್ಧರಿಸಿದ್ದಾರೆ ಎಂದರು.

ಹಿಂದೆ ಹೋರಾಟದ ಮೂಲಕ ಶಾಸಕರಾಗಿ ಆಯ್ಕೆಯಾಗಿದ್ದ ಬಿ.ನಾರಾಯಣರಾವ್​ ಅವರು ಕೊರೊನಾಗೆ ಬಲಿಯಾಗಬೇಕಾಯಿತು. ಅವರ ಸ್ಥಾನಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ಅವರ ಪತ್ನಿ ಮಾಲಾ ಬಿ. ನಾರಾಯಣರಾವ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಲಾಗಿದೆ. ನಾರಾಯಣರಾವ್ ಅವರು ಕ್ಷೇತ್ರದ ಮತದಾರರ ಜೊತೆಗೆ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದಾರೆ. ಮಾಲಾ ಅವರ ಮೇಲೆ ಅನುಕಂಪ ಇದ್ದು, ಮತ ಹಾಕಿ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಮೀಷನ್ ಕೈತಪ್ಪಲಿದೆ ಎಂದು ಪತ್ರ ಬರೆದ ಈಶ್ವರಪ್ಪ

ಮುಖ್ಯಮಂತ್ರಿ ಬಿಎಸ್‌ವೈ ವಿರುದ್ಧ ಸಚಿವ ಈಶ್ವರಪ್ಪ ಅವರು ರಾಜ್ಯಪಾಲರಿಗೆ ಪತ್ರ ಬರೆಯುತ್ತಾರೆ. ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸಿಎಂ ವಿರುದ್ಧ ಮಾತಾಡ್ತಾರೆ. ಶಿಸ್ತಿನ ಪಕ್ಷ ಎಂದು ಕರೆಯಿಸಿಕೊಳ್ಳುವ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​​ ಕಟೀಲ್ ಯಾವ ಕ್ರಮ ಕೈಗೊಂಡಿದ್ದಾರೆ.? ಅವರೊಬ್ಬ ಅಸಮರ್ಥ ಅಧ್ಯಕ್ಷ ಎಂದು ಕಟೀಲ್​ ವಿರುದ್ಧ ಕಿಡಿಕಾರಿದರು.

ಮುಖ್ಯಮಂತ್ರಿ ನೇರವಾಗಿ ಶಾಸಕರಿಗೆ ಅನುದಾನ ನೀಡಿದ್ದಾರೆ. ಆದರೆ ಈಶ್ವರಪ್ಪ ಮೂಲಕ ಅನುದಾನ ನೀಡಿದರೆ ಈಶ್ವರಪ್ಪಗೆ ಕಮೀಷನ್ ಬರುತ್ತಿತ್ತು. ಕಮೀಷನ್ ತಪ್ಪುತ್ತಿದೆ ಎಂದು ತಿಳಿದ ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಇಂತಹ ಕಮೀಷನ್ ಸರ್ಕಾರಕ್ಕೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.