ETV Bharat / state

ನಾಳೆಯಿಂದ ಬಳ್ಳಾರಿಯಲ್ಲಿ ಭಾರತ್​ ಜೋಡೋ ಪಾದಯಾತ್ರೆ: ಸಂಚಾರ ಮಾರ್ಗದಲ್ಲಿ ಬದಲಾವಣೆ

author img

By

Published : Oct 13, 2022, 3:28 PM IST

Updated : Oct 13, 2022, 3:45 PM IST

ಬಳ್ಳಾರಿಯಲ್ಲಿ ನಾಳೆಯಿಂದ ಎರಡು ದಿನ ಕಾಂಗ್ರೆಸ್​ ರಾಷ್ಟ್ರೀಯ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ಭಾರತ್​ ಜೋಡೋ ಯಾತ್ರೆ ನಡೆಯಲಿದ್ದು, ಈ ಸಂಬಂಧ ಬಳ್ಳಾರಿಯಲ್ಲಿ ಬಿಗಿ ಬಂದೋಬಸ್ತ್​ ಕೈಗೊಳ್ಳಲಾಗಿದೆ. ಜೊತೆಗೆ ಕಾರ್ಯಕ್ರಮದ ಹಿನ್ನೆಲೆ ನಗರದಲ್ಲಿನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಬಳ್ಳಾರಿ ಎಸ್ಪಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.

bharat-jodo-padayathra-in-bellary-from-tomorrow
ನಾಳೆಯಿಂದ ಬಳ್ಳಾರಿಯಲ್ಲಿ ಭಾರತ್​ ಜೋಡೋ ಪಾದಯಾತ್ರೆ : ಸಂಚಾರ ಮಾರ್ಗದಲ್ಲಿ ಬದಲಾವಣೆ

ಬಳ್ಳಾರಿ : ಅ.14 ರಿಂದ 16 ರವರೆಗೆ ಜಿಲ್ಲೆಯಲ್ಲಿ ನಡೆಯಲಿರುವ ಭಾರತ್ ಜೋಡೋ ಪಾದಯಾತ್ರೆ ಮಾರ್ಗ ಮತ್ತು ಬಹಿರಂಗ ಸಭೆ ನಡೆಯುವ ಸ್ಥಳಗಳಲ್ಲಿ ಡ್ರೋನ್ ಹಾರಾಟ ನಡೆಸದಂತೆ ತಾತ್ಕಾಲಿಕ ಕೆಂಪು ವಲಯ ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದೆ ಎಂದು ಬಳ್ಳಾರಿ ಎಸ್ಪಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.

ಬಳ್ಳಾರಿಯಲ್ಲಿ ಭಾರತ್​ ಜೋಡೋ ಯಾತ್ರೆ : ಭಾರತ್ ಜೋಡೊ ಯಾತ್ರೆ ಮತು ಬಹಿರಂಗ ಸಮಾವೇಶ ಹಿನ್ನೆಲೆ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರ ನೇತೃತ್ವದಲ್ಲಿ ಭಾರತ್ ಜೋಡೋ ಪಾದ ಯಾತ್ರೆ ಮಾಡಲಿದ್ದು, ಅ.14 ರಿಂದ 15 ರವರೆಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸಾರ್ವಜನಿಕರ ವಾಹನಗಳ ಪಾರ್ಕಿಂಗ್‌ಗಾಗಿ ಹಾಗೂ ಸಂಚಾರಕ್ಕೆ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಅವರು ತಿಳಿಸಿದರು.

ನಾಳೆಯಿಂದ ಬಳ್ಳಾರಿಯಲ್ಲಿ ಭಾರತ್​ ಜೋಡೋ ಪಾದಯಾತ್ರೆ : ಸಂಚಾರ ಮಾರ್ಗದಲ್ಲಿ ಬದಲಾವಣೆ

3 ರಿಂದ 5 ಲಕ್ಷ ಜನರು ಸೇರುವ ನಿರೀಕ್ಷೆ: ರಾಹುಲ್ ಗಾಂಧಿ 14ರಂದು ರಾತ್ರಿ ಹಲಕುಂದಿಗೆ ಆಗಮಿಸಿ ಅಂದು ರಾತ್ರಿ ಅಲ್ಲೇ ವಾಸ್ತವ್ಯ ಮಾಡಿ, 15ರಂದು ಬೆಳಗ್ಗೆ 06 ಗಂಟೆಗೆ ಕಾರ್ಯಕರ್ತರೊಂದಿಗೆ ಹಲಕುಂದಿಯಿಂದ ಪಾದಯಾತ್ರೆ ಮುಖಾಂತರ ಬಳ್ಳಾರಿ ನಗರಕ್ಕೆ ಆಗಮಿಸಿ ನಗರದ ಮುನಿಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಲಿದ್ದಾರೆ. ಸದರಿ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದು, ಸುಮಾರು 3 ರಿಂದ 5 ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

ನಗರ ಸಂಚಾರ ಮಾರ್ಗದಲ್ಲಿ ಬದಲಾವಣೆ : ಈ ಹಿನ್ನೆಲೆ ನಗರ ವ್ಯಾಪ್ತಿಯ ಹಲವು ರಸ್ತೆಗಳನ್ನು ಒನ್ ವೇ ಮತ್ತು ನಿರ್ಬಂಧ ಹೇರಿ ಮಾರ್ಗ ಬದಲಾವಣೆ ಮಾಡಲಾಗಿದ್ದು, 14 ರಂದು ಮಧ್ಯಾಹ್ನ 4 ಗಂಟೆಯಿಂದ ರಾತ್ರಿ ಹೊಸಪೇಟೆ ಬೈ ಪಾಸ್ ಹಾಗೂ ಬಳ್ಳಾರಿ ಮುಖಾಂತರ ಬೆಂಗಳೂರು ಕಡೆಗೆ ಸಂಚರಿಸುವ ವಾಹನಗಳು ಅನಂತಪುರ ರಸ್ತೆಯ ಜೈ ಪಾಸ್ ಮುಖಾಂತರ ಸಂಚರಿಸಬೇಕು ಎಂದು ಹೇಳಿದರು.

ಅ.15ರಂದು ಮುನ್ಸಿಪಾಲ್ ಕಾಲೇಜ್‌ನಲ್ಲಿ ನಡೆಯುವ ಬಹಿರಂಗ ಸಭೆಯ ಹಿನ್ನೆಲೆ ಮೋತಿ ಸರ್ಕಲ್, ರಾಯಲ್ ಸರ್ಕಲ್, ಯು.ಬಿ ಸರ್ಕಲ್, ಮುರ್ಗಮ ಗುಡಿ ಸರ್ಕಲ್, ಕೆ.ಬಿ ಸರ್ಕಲ್, ಕೂಲ್ ಕಾರ್ನರ್ ಸರ್ಕಲ್, ಅನಂತಪುರ ರಸ್ತೆ ಗೇಸ್ ಹೌಸ್ ಸರ್ಕಲ್​, ರಾಘವೇಂದ್ರ ಟಾಕೀಸ್ ಸರ್ಕಲ್ ನಿಂದ ಮುನ್ಸಿಪಾಲ್ ಕಾಲೇಜ್‌ಗೆ ಬರುವ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.

ಅ.15ರಂದು ಸಿರುಗುಪ್ಪ ಕಡೆಯಿಂದ ಬೆಂಗಳೂರು ಕಡೆಗೆ ಸಂಚರಿಸುವ ವಾಹನಗಳು ಎಸ್.ಪಿ ಸರ್ಕಲ್, ಇನ್ ಫ್ಯಾಂಟರಿ ರಸ್ತೆ, ಸುಧಾ ಕ್ರಾಸ್, ಹೊಸಪೇಟೆ ಬೈ ಪಾಸ್ ರಸ್ತೆ ಮುಖಾಂತರ ಸಂಚರಿಸಬೇಕು ಹಾಗೂ ಹೊಸಪೇಟೆ, ಅನಂತಪುರ ಹಾಗೂ ಬೆಂಗಳೂರು ಕಡೆಗೆ ಸಂಚರಿಸುವ ವಾಹನಗಳು ನಗರದ ಹೊರವಲಯದಲ್ಲಿರುವ ಅನಂತಪುರ - ಹೊಸಪೇಟೆ ರಿಂಗ್ ರಸ್ತೆಯ ಮುಖಾಂತರ ಸಂಚರಿಸುವುದು, ಸಭೆಗೆ ಬರುವ ಸಾರ್ವಜನಿಕರಿಗೆ ನಿಗದಿಪಡಿಸಿದ ಸ್ಥಳಗಳಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ರಂಜಿತ್ ಕುಮಾರ್ ಬಂಡಾರು ತಿಳಿಸಿದರು.

ಕಾರ್ಯಕ್ರಮದ ಹಿನ್ನೆಲೆ ಬಿಗಿ ಬಂದೋಬಸ್ತ್​​ : ಕಾರ್ಯಕ್ರಮದ ಬಂದೋಬಸ್ತ್​ಗಾಗಿ ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, 3 ಜನ ಹೆಚ್ಚುವರಿ ಎಸ್‌ಪಿ, 9 ಡಿವೈಎಸ್‌ಪಿ 32 ಸಿಪಿಐ, 73 ಜನ ಪಿಎಸ್‌ಐ, 1012 ಜನ ಹೆಡ್ ಕಾನ್ಸ್​​​ಟೇಬಲ್ ಮತ್ತು ಕಾನ್ಸ್​ಟೇಬಲ್‌ಗಳು, ಟ್ರಾಫಿಕ್ ನಿರ್ವಹಣೆಗಾಗಿ 1 ಡಿವೈಎಸ್‌ಪಿ, 5 ಇನ್ಸ್​ಪೆಕ್ಟರ್, 166 ಹೆಡ್ ಕಾನ್ಸ್​ಟೇಬಲ್ ಮತ್ತು ಕಾನ್ಸ್​ಟೇಬಲ್‌ಗಳು, 10 ಡಿಎಆರ್ ತುಕಡಿಗಳು, 450 ಜನ ಹೋಮ್‌ಗಾಡ್‌ರ್ಗಳನ್ನು ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದ ಎಸ್​ಪಿ ರಂಜಿತ್​ಕುಮಾರ್​, ಬಳ್ಳಾರಿ ಐಜಿಪಿ ವಲಯ ಸೇರಿದಂತೆ ಕಲಬುರಗಿ, ಗದಗ ಮೊದಲಾದ ಜಿಲ್ಲೆಗಳಿಂದಲೂ ಬಂದೋಬಸ್ತಿಗಾಗಿ ಸಿಬ್ಬಂದಿಯನ್ನು ಕರೆಸಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ : ಉದ್ಯೋಗಾಂಕ್ಷಿಗಳಿಗೆ ಸಿಹಿ ಸುದ್ದಿ.. ಪೊಲೀಸ್​ ಕಾನ್ಸ್​ಟೇಬಲ್​ ಹುದ್ದೆಗೆ ಅರ್ಜಿ ಆಹ್ವಾನ

Last Updated :Oct 13, 2022, 3:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.