ETV Bharat / state

ಸ್ವಂತ ಸೂರಿಲ್ಲದ ಠಾಣೆಗೆ ಹಂಪಿ ಮಂಟಪವೇ ರಕ್ಷಣೆ; ಸಮಸ್ಯೆಯಲ್ಲೇ ಪೊಲೀಸರ ಕರ್ತವ್ಯ

author img

By

Published : Mar 24, 2021, 8:17 PM IST

2-police-stations-in-hospete-should-not-get-proper-buildings
ಸ್ವಂತ ಸೂರಿಲ್ಲದ ಠಾಣೆಗೆ ಹಂಪಿ ಮಂಟಪವೇ ರಕ್ಷಣೆ

ಅತ್ಯಂತ ಹಳೆಯ ಮಂಟಪದಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸುವ ದುಸ್ಥಿತಿ ಇದೆ. 2008ರಲ್ಲಿ ಆರಂಭಿಸಲಾದ ಎರಡು ಪೊಲೀಸ್ ಠಾಣೆಗಳು 13 ವರ್ಷಗಳಿಂದಲೂ ಇಲ್ಲೇ ಕೆಲಸ ಮಾಡುತ್ತಿವೆ. ಮಳೆ ಬಂದರೆ ಕಟ್ಟಡ ಸೋರುತ್ತದೆ. ಹಗಲು ಹೊತ್ತು ಬಿಸಿಲಲ್ಲೇ ಕೆಲಸ ಮಾಡಬೇಕು.

ಹೊಸಪೇಟೆ (ವಿಜಯನಗರ): ಹಂಪಿಯ ಎರಡು‌ ಪೊಲೀಸ್ ಠಾಣೆಗಳಿಗೆ ಸ್ವಂತ ಸೂರಿಲ್ಲದೆ, ಸಮಸ್ಯೆಗಳ ಗೂಡಾಗಿದೆ. ಇಲ್ಲಿಯೇ ಪ್ರವಾಸಿ ಹಾಗೂ ಸಂಚಾರಿ ಪೊಲೀಸ್ ಠಾಣೆಗಳಿದ್ದು, ಸ್ಮಾರಕದ ಮಂಟಪದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಸಾವಿರಾರು ವರ್ಷಗಳ ಹಳೆಯ ಮಂಟಪದಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 2008ರಲ್ಲಿ ಆರಂಭಿಸಲಾದ ಎರಡು ಪೊಲೀಸ್ ಠಾಣೆಗಳು 13 ವರ್ಷಗಳಿಂದಲೂ ಇದೇ ಮಂಟಪದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಮಳೆ ಬಂದರೆ ಕಟ್ಟಡ ಸೋರುತ್ತದೆ. ಬೆಳಗ್ಗೆಯ ಹೊತ್ತು ಬಿಸಿಲಿನಿಂದ ಕಂಗೆಟ್ಟು ಕೆಲಸ ಮಾಡಬೇಕಿದೆ.

ಸ್ವಂತ ಸೂರಿಲ್ಲದ ಠಾಣೆಗೆ ಹಂಪಿ ಮಂಟಪವೇ ರಕ್ಷಣೆ

ನೆಟ್ ವರ್ಕ್ ಸಮಸ್ಯೆ:

ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನೆಟ್​ವರ್ಕ್ ಸಮಸ್ಯೆ ಇದೆ. ಹೀಗಾಗಿ ಸಮೀಪದ ಕಮಲಾಪುರಕ್ಕೆ ತೆರಳಬೇಕು. ಇದು ಒಂದು ದಿನದ ಸಮಸ್ಯೆಯಲ್ಲ. ಪ್ರತಿದಿನ ನೆಟ್​​ವರ್ಕ್ ಸಮಸ್ಯೆಯಿಂದ ಸಿಬ್ಬಂದಿ ಬೇಸತ್ತಿದ್ದಾರೆ.

ಪ್ರಾಣಿಗಳ‌ ಕಾಟ:

ಪ್ರವಾಸಿ ಹಾಗೂ‌ ಸಂಚಾರಿ ಪೊಲೀಸ್ ಠಾಣೆಯು ಹಂಪಿ ಗುಡ್ಡದ ಕೆಳಗಡೆ ನಿರ್ಮಿಸಲಾಗಿದೆ.‌ ಹೀಗಾಗಿ ಚಿರತೆ ಸೇರಿದಂತೆ ಇನ್ನಿತರ ಕಾಡುಪ್ರಾಣಿಗಳ‌ ಭಯದಲ್ಲಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೇ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ.

ಶೌಚಾಲಯದ ಸೌಕರ್ಯವಿಲ್ಲ:

ಈ ಎರಡು ಠಾಣೆಗಳಲ್ಲಿ 6 ಮಂದಿ ಮಹಿಳಾ ಸಿಬ್ಬಂದಿ‌ ಇದ್ದಾರೆ.‌ ಅವರಿಗೆ ಶೌಚಾಲಯದ ಸೌಲಭ್ಯವಿಲ್ಲ. ಹಂಪಿಯಲ್ಲಿನ ಸಾರ್ವಜನಿಕ ಶೌಚಾಲಯವನ್ನು‌ ನೆಚ್ಚಿಕೊಳ್ಳಬೇಕಾಗಿದೆ. ಕನಿಷ್ಠ ಸೌಲಭ್ಯವನ್ನು‌ ನೀಡದಿದ್ದರೆ ಹೇಗೆ ಎಂದು ಪೊಲೀಸ್ ಸಿಬ್ಬಂದಿ ತಮ್ಮ ಅಳಲು ತೋಡಿಕೊಳ್ಳುತ್ತಾರೆ.

ಖಾಲಿ ಹುದ್ದೆಗಳು:

ಪ್ರವಾಸಿ ಪೊಲೀಸ್ ಠಾಣೆಗೆ ಸಿಪಿಐ ಸೇರಿ 84 ಸಿಬ್ಬಂದಿ ಪೈಕಿ 44 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.‌ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪಿಎಸ್​​ಐ ಸೇರಿ 45 ಸಿಬ್ಬಂದಿ ಇರಬೇಕು. ಆದರೆ, 24 ಜನ ಪೊಲೀಸರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಎರಡು ಠಾಣೆಯಲ್ಲಿ 61 ಹುದ್ದೆಗಳು ಖಾಲಿ ಇವೆ.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಮಾತನಾಡಿ, ಹಂಪಿಯ ಪೊಲೀಸ್ ಠಾಣೆಗೆ ಸ್ಥಳ ನೀಡಬೇಕು ಎಂದು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಹಂಪಿ ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ. ಸ್ಥಳಕ್ಕೆ ಸಮಸ್ಯೆ ಉಂಟಾಗಿದೆ. ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ ಕನಿಷ್ಠ ಎರಡು ಎಕರೆ ಜಾಗಬೇಕಾಗುತ್ತದೆ. ಈ ಸ್ಥಳ ಮಂಜೂರಾದ ನಂತರ ಪೊಲೀಸ್ ಠಾಣೆಗಳನ್ನು ನಿರ್ಮಾಣ ಮಾಡಲಾಗುವುದು ಎಂದಿದ್ದಾರೆ.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಆರ್.ಭಾಸ್ಕರ್ ರೆಡ್ಡಿ ಮಾತನಾಡಿ, ಹಂಪಿಯಲ್ಲಿ‌ ಪೊಲೀಸ್ ಸಿಬ್ಬಂದಿಗೆ ಭದ್ರತೆ ಇಲ್ಲ. ಜನರಿಗೆ ಭದ್ರತೆ ನೀಡಲು ಹೇಗೆ ಸಾಧ್ಯ?. ಕೂಡಲೇ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಟ್ರಾಮಾ ಕೇರ್ ಸೆಂಟರ್‌ ನಾನ್ ಕೋವಿಡ್ ಆಗಿ ಪರಿವರ್ತಿಸಲು ಚಿಂತನೆ : ಹೊರಗುತ್ತಿಗೆ ಆಧಾರಿತ ಸಿಬ್ಬಂದಿಗೆ ಸಂಕಷ್ಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.