ETV Bharat / state

ಬೆಳಗಾವಿ ಕಪಿಲೇಶ್ವರ ಹೊಂಡದಲ್ಲಿ ಮುಳುಗಿದ್ದ ಎರಡು ಶವದ ಗುರುತು ಪತ್ತೆ, ತನಿಖೆ ಮುಂದುವರಿಕೆ

author img

By

Published : Aug 16, 2023, 11:01 AM IST

Updated : Aug 16, 2023, 6:53 PM IST

ಬೆಳಗಾವಿ ಕಪಿಲೇಶ್ವರ ಮಂದಿರದ ಹೊಂಡದಲ್ಲಿ ಬೆಳಗ್ಗೆ ಜೋಡಿ ಶವಗಳು ಪತ್ತೆಯಾಗಿದೆ. ಮೃತರು ಬೇರೆ ಬೇರೆ ಕಾರಣಕ್ಕೆ ಪ್ರತ್ಯೇಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಖಡೇಬಜಾರ್ ಪೊಲೀಸರು ಮಾಹಿತಿ ನೀಡಿದ್ದಾರೆ.

Unidentified Dead Bodies found
ಬೆಳಗಾವಿ ಕಪಿಲೇಶ್ವರ ಹೊಂಡದಲ್ಲಿ ಮುಳುಗಿದ್ದ ಎರಡು ಶವ ಹೊರತೆಗೆಯುತ್ತಿರುವ ಪೊಲೀಸರು.

ಬೆಳಗಾವಿ: ಪತ್ನಿ ಮೃತಪಟ್ಟಿದ್ದರಿಂದ ಮನನೊಂದ ಪತಿ ಮತ್ತು ತಾಯಿ ಇಲ್ಲದ ನೆನಪಿನಲ್ಲಿ ಕೊರಗಿ ಮಗಳು ನೀರಿನ ಹೊಂಡಕ್ಕೆ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಪ್ರತ್ಯೇಕ ಘಟನೆ ಬೆಳಗಾವಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

ಕಪಿಲೇಶ್ವರ ಮಂದಿರದ ನೀರಿನ ಹೊಂಡದಲ್ಲಿ ಇಂದು ಬೆಳಗ್ಗೆ ತೇಲಾಡುತ್ತಿದ್ದ ಎರಡು ಶವಗಳ ಗುರುತು ಪತ್ತೆಯಾಗಿದ್ದು, ಬೆಳಗಾವಿಯ ಕಾಂಗಲೆ ಗಲ್ಲಿಯ ನಿವಾಸಿ ವಿಜಯ್ ಪವಾರ್ (58), ಶಹಾಪುರದ ದಾನೆ ಗಲ್ಲಿಯ ಚಿತ್ರಲೇಖಾ ಶ್ರೀಕಾಂತ ಸಫಾರ್‌ (70) ಎಂದು ಗುರುತಿಸಲಾಗಿದೆ. ಕಪಿಲೇಶ್ವರ ಮಂದಿರದ ನೀರಿನ ಹೊಂಡದಲ್ಲಿ ಜೋಡಿ ಶವಗಳು ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದ ಖಡೇಬಜಾರ್ ಪೊಲೀಸರು ಎರಡು ಶವಗಳನ್ನು ಹೊಂಡದಿಂದ ಹೊರತೆಗೆದು ತನಿಖೆಗೆ ಒಳಪಡಿಸಿದ್ದರು.

ಜೋಡಿ ಶವಗಳು ಪತ್ತೆಯಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಆದರೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮೃತರು ಬೇರೆ ಬೇರೆ ಕಾರಣಕ್ಕೆ ಪ್ರತ್ಯೇಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ಗೊತ್ತಾಗಿದೆ. ತಾಯಿ ನಿಧನದಿಂದ ಏಕಾಂಗಿಯಾಗಿ, ಖಿನ್ನತೆಗೆ ಒಳಗಾಗಿದ್ದ ಚಿತ್ರಲೇಖಾ ಸಫಾರ್ ಮಾನಸಿಕವಾಗಿ ಅಸ್ವಸ್ಥವಾಗಿದ್ದರು. ತಾಯಿ ನೆನಪಿನಲ್ಲಿ ಕೊರಗಿ ಕೊನೆಗೆ ಚಿತ್ರಲೇಖಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ, ಮೃತ ವ್ಯಕ್ತಿ ವಿಜಯ್ ಪವಾರ್ ತಮ್ಮ‌ ಪತ್ನಿ ತೀರಿ ಹೋಗಿದ್ದರಿಂದ ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ನಿನ್ನೆ ರಾತ್ರಿ ಮನೆ ಬಿಟ್ಟು ಹೋಗಿದ್ದ ವಿಜಯ ಇಂದು ಬೆಳಗ್ಗೆ ಕಪಿಲೇಶ್ವರ ಹೊಂಡದಲ್ಲಿ ಹೆಣವಾಗಿ ಪತ್ತೆಯಾಗಿದ್ದರು.

ಮೃತ ವಿಜಯ್ ಪವಾರಗೆ ಒಬ್ಬ ಪುತ್ರ ಮತ್ತು ಪುತ್ರಿ ಇದ್ದಾರೆ. ಮೃತದೇಹಗಳು ಪತ್ತೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಖಡೇಬಜಾರ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕುಡಿದ ಆಮಲಿನಲ್ಲಿ ಸ್ನೇಹಿತನ ಹತ್ಯೆ- ಆರೋಪಿ ಬಂಧನ: ರಾಯಚೂರು: ಕುಡಿದ ಅಮಲಿನಲ್ಲಿ ಯುವಕ ತನ್ನ ಸ್ನೇಹಿತನನ್ನೇ ಹತ್ಯೆ ಮಾಡಿರುವ ಘಟನೆ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನಾಗರಾಳ ಗ್ರಾಮದಲ್ಲಿ ಮಂಗಳವಾರ ರಾತ್ರಿ ಜರುಗಿದೆ. ರವಿಕುಮಾರ (33) ಕೊಲೆಯಾದ ಯುವಕ. ಕೊಲೆ ಮಾಡಿರುವ ಆರೋಪಿ ಹುಬ್ಬಳ್ಳಿ ಮೂಲದ ಪವನ ಕುಮಾರ ಎಂದು ಗುರುತಿಸಲಾಗಿದೆ.

ನಿನ್ನೆ ರಾತ್ರಿ ಮೃತನ ಮನೆಯ ಮಾಳಿಗೆಯ ಮೇಲೆ ಇಬ್ಬರು ಸ್ನೇಹಿತರು ಮದ್ಯಪಾನ ಮಾಡುತ್ತಿದ್ದರು. ಕುಡಿದ ಮತ್ತಲ್ಲಿ ಇಬ್ಬರು ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಈ ವೇಳೆ, ಹುಬ್ಬಳ್ಳಿ ಮೂಲದ ಪವನ ಕುಮಾರ ತನ್ನ ಸ್ನೇಹಿತ ರವಿಕುಮಾರನನ್ನು ಕೊಲೆ ಮಾಡಿದ್ದಾನೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂಓದಿ:ಮಂಡ್ಯ: ಶೀಲ ಶಂಕಿಸಿ ಮನೆಯಲ್ಲಿಯೇ ಪತ್ನಿ ಕೊಂದು ಪತಿ ಪರಾರಿ

Last Updated :Aug 16, 2023, 6:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.